ಭರವಸೆಯ ಬಾಲ ಪ್ರತಿಭೆ ಭಾಸ್ವತಿ ಗೋಪಾಲಕಜೆ, ಕಿನ್ನರಿ ಧಾರಾವಾಹಿಯಲ್ಲೂ ನಟಿಸಿದ್ದ ನಟಿ

By Suvarna NewsFirst Published Sep 3, 2021, 6:02 PM IST
Highlights

ರಿಯಾಲಿಟಿ ಶೋಗಳ ಮೂಲಕ ಸಿನಿಮಾಗೆಂದೇ ಸಿದ್ಧವಾಗುವ ಬಾಲ ಕಲಾವಿದರ ನಡುವೆ ನಮ್ಮ ಮಣ್ಣಿನ ಸೊಗಡು ಕಾಣಿಸುವುದು ಕಷ್ಟ. ಆದರೆ ಸ್ಥಳೀಯ ಕಲೆಗಳಾದ ಯಕ್ಷಗಾನ, ಸುಗಮ ಸಂಗೀತದೊಂದಿಗೆ ಸಿನಿಮಾದಲ್ಲಿಯೂ ಗುರುತಿಸಿಕೊಳ್ಳುತ್ತಿರುವ ಅಪರೂಪದ ಬಾಲತಾರೆ ಭಾಸ್ವತಿ.

ಕನ್ನಡದ ಕಮರ್ಷಿಯಲ್ ಸಿನಿಮಾಗಳಲ್ಲಿ ಇತ್ತೀಚೆಗೆ ನಾಯಕರಿಗೆ ಸಿಗುವಷ್ಟು ಅವಕಾಶ ಬೇರೆ ಕಲಾವಿದರಿಗೆ ಸಿಗುವುದಿಲ್ಲ. ಬೇಬಿ ಶ್ಯಾಮಿಲಿಯಂಥ ನಟಿಯನ್ನು ಸ್ಟಾರ್ ಆಗಿಸಿದ ಸಿನಿಮಾ ನಮ್ಮದು ಎಂದು ಮರೆತಂಥ ವಾತಾವರಣ. ಮಾತ್ರವಲ್ಲ ಪುನೀತ್ ರಾಜ್ ಕುಮಾರ್, ವಿಜಯ ರಾಘವೇಂದ್ರ ಅವರಂಥ ನಟರಿಗೆ ರಾಷ್ಟ್ರ ಪ್ರಶಸ್ತಿ ದೊರಕಿದ್ದೇ ಬಾಲನಟರಾಗಿದ್ದಾಗ ಎನ್ನುವುದು ಕೂಡ ಯಾರಿಗೂ ನೆನಪಿದ್ದ ಹಾಗಿಲ್ಲ. ಮಕ್ಕಳ, ಮಹಿಳಾ ಪ್ರಧಾನ ಸಿನಿಮಾಗಳೆಂದರೆ ಪ್ರಶಸ್ತಿಯಷ್ಟೇ ಅಲ್ಲ, ಜನಪ್ರಿಯತೆಯನ್ನೂ ಮೂಡಿಸಬಲ್ಲವು ಎನ್ನುವ ಅಂದಿನ ಸತ್ಯ ಮತ್ತೆ ಸಾಬೀತಾಗಬೇಕಿದೆ. ಅಂಥ ಪಾತ್ರಗಳಿಗೆ ಜೀವ ತುಂಬಲೆಂದೇ ಇಲ್ಲೊಂದು ಬಾಲಪ್ರತಿಭೆ ಸಿದ್ಧವಾಗಿದೆ. ಅವಳೇ ಭಾಸ್ವತಿ ಗೋಪಾಲಕಜೆ ಎನ್ನುವ ಹೆಸರಿನಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಎಂಟ್ರಿ ನೀಡಿರುವ ಬಾಲನಟಿ.

ಶಶಿಕರ ಪಾತೂರು

ಭಾಸ್ವತಿಗೆ ಬಾಲ್ಯದಿಂದಲೂ ನೃತ್ಯ ಪ್ರಕಾರಗಳಲ್ಲಿ ಆಸಕ್ತಿ. ಅದಕ್ಕೆ ತಕ್ಕಂತೆ ಬಲು ಬೇಗ ಯಕ್ಷಗಾನ ಕಲಿತು ನಾಲ್ಕನೇ ವಯಸ್ಸಿನಲ್ಲಿದ್ದಾಗಲೇ ವೇದಿಕೆ ಏರಿದ್ದು, ಇದುವರೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾಳೆ. ಬೇಗಾರ್ ಶಿವಕುಮಾರ್ ಅವರ ಬಳಿ ಯಕ್ಷಗಾನದ ಬಾಲಪಾಠಗಳನ್ನು ಕಲಿತ ಈಕೆ ಪ್ರಸ್ತುತ  ಸುಬ್ರಾಯ ಹೆಬ್ಬಾರ್ ಅವರ ವಿದ್ಯಾರ್ಥಿನಿ. ಭಾಸ್ವತಿ ಬಹುಮುಖ ಪ್ರತಿಭೆಯಾಗಿದ್ದು ಈಗಾಗಲೇ ಕರಾಟೆಯಲ್ಲಿ ಬ್ಲೂ ಬೆಲ್ಟ್ ಪಡೆದಿದ್ದಾಳೆ. ಸ್ಕೇಟಿಂಗ್ ಮಾಡುತ್ತಾಳೆ. ಗಾಯನ, ಚಿತ್ರಕಲೆ, ಕರಕುಶಲಕಲೆ, ನೃತ್ಯಗಳ ಮೂಲಕ ಗಮನ ಸೆಳೆದಿದ್ದಾಳೆ. ಕೃಷ್ಣ, ಅಭಿಮನ್ಯು, ಬಾಲಗೋಪಾಲ ಮೊದಲಾದ ಹಲವಾರು ಪಾತ್ರಗಳಿಗೆ ಜೀವ ತುಂಬಿದ್ದಾಳೆ.

ಮತ್ತೆ ಮನ್ವಂತರದಲ್ಲಿ ಬರಲಿದ್ದಾರೆ `ಮೇಧಾ ವಿದ್ಯಾಭೂಷಣ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ `ಕಿನ್ನರಿ’ ಧಾರಾವಾಹಿಯಲ್ಲಿ ಒಂದು ಪಾತ್ರ ನಿಭಾಯಿಸಿರುವ ಭಾಸ್ವತಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರವೊಂದು ಇತ್ತೀಚೆಗಷ್ಟೇ ತೆರೆಕಂಡಿತು. `ಕನ್ನಡತಿ’ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ನಾಯಕರಾಗಿದ್ದ `ಜೀವ್ನನೇ ನಾಟ್ಕ ಸಾಮಿ’ ಎನ್ನುವ ಆ ಸಿನಿಮಾ ಕೊರೊನ ಕಾರಣ ಜನ ಗುರುತಿಸದೇ ಹೋದರೂ ಚಿತ್ರ ನೋಡಿದವರು ಭಾಸ್ವತಿ ನಟಿಸಿದ ಪಾತ್ರವನ್ನು ಮರೆಯಲಾರರು. ಸಿನಿಮಾದೊಳಗಿನ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಮಗುವಾಗಿ ಆಕೆಯ ನಟನೆ ಗಮನಾರ್ಹವಾಗಿತ್ತು. ಯಲಹಂಕದ ಎಂ ಇ ಸಿ ಪಬ್ಲಿಕ್ ಶಾಲೆಯಲ್ಲಿ ಪ್ರಸ್ತುತ ಎಂಟನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ವಿದ್ಯಾಭ್ಯಾಸದಲ್ಲಿಯೂ ಎ ಪ್ಲಸ್ ಅಂಕಗಳೊಂದಿಗೆ ಮುಂಚೂಣಿಯಲ್ಲಿದ್ದಾಳೆ. ಮುಂದೊಮ್ಮೆ ಉತ್ತಮ ನಟಿಯಾಗಿ, ಗಾಯಕಿಯಾಗಿ ಗುರುತಿಸಿಕೊಳ್ಳಬೇಕು ಎನ್ನುವುದು ಆಕೆಯ ಕನಸು. ಅದಕ್ಕೆ ಪೂರಕವಾದ ಅವಕಾಶಗಳು ದೊರಕಬೇಕಿದೆ.

ನಿರ್ಮಾಪಕ ಉಮಾಪತಿ ಸಿನಿಮಾ ಸಿಟಿಯ ಕನಸು ಕಂಡಿದ್ದೇಕೆ?

ಕಲೆ ಎನ್ನುವುದು ರಕ್ತಗತವಾಗಿ ಬರುವುದು ನಿಜವೋ ಸುಳ್ಳೋ, ಆದರೆ ತಂದೆ ತಾಯಿ ಕಲೆಗೆ ಪ್ರೋತ್ಸಾಹ ನೀಡುವವರಾದರೆ ಮಕ್ಕಳು ಖಂಡಿತವಾಗಿ ಕಲಾವಿದರಾಗಬಲ್ಲರು. ಅದಕ್ಕೊಂದು ಉದಾಹರಣೆ ಭಾಸ್ವತಿಯ ಹೆತ್ತವರು ಎಂದು ಹೇಳಲೇಬೇಕು. ತಂದೆ ಶ್ಯಾಮ್ ಪ್ರಸಾದ್ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಯಲ್ಲಿದ್ದರೂ ಮಕ್ಕಳ ಜೊತೆಗೆ ಪತ್ನಿಗೂ ಪ್ರೋತ್ಸಾಹ ನೀಡಿದ್ದಾರೆ. ಇವರ ಪತ್ನಿ ಶುಭಾ ಕೊಂದಲಕಾಡು ಮೂಲತಃ ಕಾಸರಗೋಡು ಕರಾವಳಿಯವರು. ಮಂಗಳೂರಿನ ಮಹಾಲಸಾ ವಿದ್ಯಾಲಯದಲ್ಲಿ `ಮಾಸ್ಟರ್ ಆಫ್ ಫೈನ್ ಆರ್ಟ್ಸ್’ ಮಾಡಿರುವ ಶುಭಾ ಬಹುಮುಖ ಪ್ರತಿಭೆಯಾಗಿದ್ದು ವಿವಾಹದ ಬಳಿಕ ಎನ್ನುವುದು ವಿಶೇಷ! ತೆಂಕುತಿಟ್ಟು, ಬಡಗುತಿಟ್ಟು ಯಕ್ಷಗಾನವನ್ನು ಕಲಿತುಕೊಂಡ ಶುಭಾ ರಂಗಪ್ರದರ್ಶನಗಳನ್ನು ನೀಡುತ್ತಿರುವುದು ಮದುವೆಯ ನಂತರವೇ. ಇವರಿಗೆ ಭರತನಾಟ್ಯದಲ್ಲಿ ಜ್ಯೂನಿಯರ್ ಆಗಿದೆ. ಹಂಸಲೇಖ ಅವರ ದೇಸಿ ವಿದ್ಯಾಲಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ಥಾನಿ ಕಲಿತಿದ್ದು ಪ್ರಸ್ತುತ ಶಾಸ್ತ್ರೀಯ, ಹಾಗೂ ಸುಗಮ ಸಂಗೀತದ  ಶಿಕ್ಷಕಿಯೂ ಹೌದು. ಮಗಳು ಭಾಸ್ವತಿಗೂ ಇವರೇ ಸಂಗೀತದ ಗುರು.

ನಟಿ ಆರೋಹಿ ನಾರಾಯಣ್ ಹೇಳ್ಕೊಂಡ ಇಷ್ಟಗಳೇನು?

ಭಾಸ್ವತಿ ಜೊತೆಯಲ್ಲೇ ಹುಟ್ಟಿದ ಅವಳಿ ಸಹೋದರ ಭಾಸ್ವಾನ್ ಗೋಪಾಲಕಜೆ. ಅವಳಿ ಎಂದಮೇಲೆ ಆತ ಕೂಡ ಸಹೋದರಿಯಂತೆ ಕಲೆಗಾರ, ಕರಾಟೆ ಪಟು! ಪ್ರಸ್ತುತ ವಿಶ್ವನಾಥ್ ಕಲಬುರ್ಗಿಯವರ ಬಳಿ ಕೊಳಲು ಅಭ್ಯಾಸ ಮಾಡುತ್ತಿದ್ದಾನೆ. ವಿದ್ಯಾರ್ಥಿಯಾಗಿ ವಿಜ್ಞಾನದಲ್ಲಿ ಆಪಾರ ಆಸಕ್ತಿ ಹೊಂದಿರುವ ಭಾಸ್ವಾನ್‌ಗೆ ಪ್ರಯೋಗಗಳಲ್ಲಿ ತೊಡಗಿಕೊಳ್ಳುವುದು ಹವ್ಯಾಸ. ಒಟ್ಟಿನಲ್ಲಿ ಬಾಲನಟಿಯ ಜೊತೆಗೆ ಆಕೆಯ ಈ ಪ್ರತಿಭಾವಂತ ಕುಟುಂಬವನ್ನೂ ಮೆಚ್ಚಲೇಬೇಕು.

click me!