
ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಬೆನ್ನಿನ ಮೇಲೆ ಹಾಕಿಸಿಕೊಂಡಿರುವ ಗಣೇಶನ ಟ್ಯಾಟೂ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗಿದೆ. ದೇವರ ಚಿತ್ರವನ್ನು ಬೆನ್ನಿನ ಭಾಗದಲ್ಲಿ ಹಾಕಿಸಿಕೊಂಡಿರುವುದನ್ನು ಪ್ರಶ್ನಿಸಿ ಕೆಲವರು ಟೀಕೆ ಹಾಗೂ ಟ್ರೋಲ್ ಮಾಡುತ್ತಿದ್ದರೆ, ಮತ್ತೊಂದೆಡೆ ಹಲವರು ಸಾನ್ವಿ ಪರವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಈ ವಿವಾದದ ಬಗ್ಗೆ ಈಗ ಪತ್ರಕರ್ತ ಹಾಗೂ ಬರಹಗಾರ ಚಕ್ರವರ್ತಿ ಚಂದ್ರಚೂಡ್ ಪ್ರತಿಕ್ರಿಯಿಸಿದ್ದು, ಟ್ರೋಲರ್‌ಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾನ್ವಿ ಅವರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಟೀಕೆಗಳನ್ನು ಖಂಡಿಸಿದ ಅವರು, "ಇದು ಭಕ್ತಿಯ ಪ್ರಶ್ನೆಯಲ್ಲ. ಕಿಚ್ಚ ಸುದೀಪ್ ಅವರ ಮೇಲಿರುವ ಅಸಮಾಧಾನವನ್ನು ಅವರ ಮಗಳ ಮೇಲೆ ತೀರಿಸಿಕೊಳ್ಳುವ ಪ್ರಯತ್ನ ಅಷ್ಟೇ" ಎಂದು ಹೇಳಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಚಂದ್ರಚೂಡ್, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಉದ್ದೇಶಪೂರ್ವಕವಾಗಿಯೇ ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ಟ್ರೋಲ್ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ ಎಂದು ಆರೋಪಿಸಿದರು. "ಕೆಲವರಿಗೆ ಟ್ರೋಲ್ ಮಾಡುವುದೇ ಕೆಲಸವಾಗಿದೆ. ಯಾರಾದರೂ ಒಂದು ವಿಷಯ ಮಾಡಿದರೆ ಅದನ್ನು ದೊಡ್ಡ ವಿವಾದವನ್ನಾಗಿ ಮಾಡಿ ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಾರೆ. ಸಾನ್ವಿ ವಿಷಯದಲ್ಲೂ ಅದೇ ನಡೆಯುತ್ತಿದೆ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಭಕ್ತಿ ಎಂಬುದು ವ್ಯಕ್ತಿಯ ನಂಬಿಕೆ ಮತ್ತು ಭಾವನೆಗೆ ಸಂಬಂಧಿಸಿದ ವಿಷಯ ಎಂದು ಹೇಳಿದ ಚಂದ್ರಚೂಡ್, "ದೇವರನ್ನು ಎಲ್ಲೇ ಕಂಡರೂ ಗೌರವಿಸುವ ಸಂಸ್ಕಾರ ನಮ್ಮದು. ಒಬ್ಬರು ತಮ್ಮ ಭಕ್ತಿಯ ಸಂಕೇತವಾಗಿ ಗಣೇಶನ ಟ್ಯಾಟೂ ಹಾಕಿಸಿಕೊಂಡರೆ ಅದರಲ್ಲಿ ತಪ್ಪೇನಿದೆ? ಭಕ್ತಿ ಎನ್ನುವುದು ದೇಹದ ಯಾವ ಭಾಗದಲ್ಲಿದೆ ಎಂಬುದರಿಂದ ಅಳೆಯಲಾಗುವುದಿಲ್ಲ; ಅದು ಮನಸ್ಸಿನಲ್ಲಿರಬೇಕು" ಎಂದು ಅಭಿಪ್ರಾಯಪಟ್ಟರು.
ಟ್ರೋಲರ್‌ಗಳ ವಿರುದ್ಧ ಮತ್ತಷ್ಟು ಕಿಡಿಕಾರಿದ ಅವರು, "ಈ ರೀತಿ ಟೀಕೆ ಮಾಡುವವರಿಗೆ ಭಕ್ತಿಯ ನಿಜವಾದ ಅರ್ಥವೂ ಗೊತ್ತಿಲ್ಲ, ದೇವರ ಮಹತ್ವವೂ ತಿಳಿದಿಲ್ಲ. ಅವರ ಉದ್ದೇಶ ಭಕ್ತಿಯ ಬಗ್ಗೆ ಮಾತನಾಡುವುದಲ್ಲ, ವ್ಯಕ್ತಿಗಳನ್ನು ಗುರಿಯಾಗಿಸಿ ವಿವಾದ ಸೃಷ್ಟಿಸುವುದು" ಎಂದು ತಿರುಗೇಟು ನೀಡಿದರು. ಸದ್ಯ ಗಣೇಶ ಟ್ಯಾಟೂ ವಿವಾದದ ಬಗ್ಗೆ ಸಾನ್ವಿ ಸುದೀಪ್ ಈಗಾಗಲೇ ತಮ್ಮ ಸ್ಪಷ್ಟನೆ ನೀಡಿದ್ದರೂ, ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಚರ್ಚೆಯಾಗುತ್ತಲೇ ಇದೆ. ಇದೀಗ ಚಕ್ರವರ್ತಿ ಚಂದ್ರಚೂಡ್ ಅವರ ಹೇಳಿಕೆ ಈ ವಿವಾದಕ್ಕೆ ಮತ್ತಷ್ಟು ಹೊಸ ತಿರುವು ನೀಡಿದ್ದು, ನೆಟ್ಟಿಗರ ನಡುವೆ ಮತ್ತೆ ಚರ್ಚೆಗೆ ಕಾರಣವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.