ಜ.29ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ನಟ ಪ್ರಕಾಶ್‌ ರಾಜ್‌ ರಾಯಭಾರಿ

Published : Dec 24, 2025, 07:38 AM IST
BIFFES 2026

ಸಾರಾಂಶ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2026ರ ಜ.29ರಿಂದ ಫೆ.6ರ ವರೆಗೆ ನಡೆಯಲಿದ್ದು, ಚಲನಚಿತ್ರೋತ್ಸವಕ್ಕೆ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಅವರನ್ನು ರಾಯಭಾರಿನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

ಬೆಂಗಳೂರು (ಡಿ.24): 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2026ರ ಜ.29ರಿಂದ ಫೆ.6ರ ವರೆಗೆ ನಡೆಯಲಿದ್ದು, ಚಲನಚಿತ್ರೋತ್ಸವಕ್ಕೆ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಅವರನ್ನು ರಾಯಭಾರಿನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.

ವಿಧಾನಸೌಧದಲ್ಲಿ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕುರಿತು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಲನಚಿತ್ರ ಅಕಾಡೆಮಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 2026ರ ಜ.29ರಿಂದ ಫೆ.6ರವರೆಗೆ ಚಲನಚಿತ್ರೋತ್ಸವ ನಡೆಯಲಿದ್ದು, ಪ್ರಕಾಶ್‌ ರಾಜ್‌ ಅವರನ್ನು ರಾಯಭಾರಿಯಾಗಿ ನೇಮಿಸಲಾಗಿದೆ. ಜ.29ರಂದು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂದೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದರು.

ಈ ಬಾರಿಯ ಚಲನಚಿತ್ರೋತ್ಸವ ಮಹಿಳಾ ಸಬಲೀಕರಣ ಕುರಿತ ಉದ್ದೇಶದೊಂದಿಗೆ ನಡೆಯಲಿದೆ. ಸಂವೇದನೆ, ಸಮಾನತೆಯ ದನಿ ಆಶಯದೊಂದಿಗೆ ಸ್ತ್ರೀ ಎಂದರೆ ಅಷ್ಟೇ ಸಾಕೆ?... ಎಂಬ ಘೋಷವಾಕ್ಯದಡಿ ಚಲನಚಿತ್ರೋತ್ಸವ ಆಯೋಜಿಸಲಾಗುತ್ತಿದೆ. ರಾಜಾಜಿನಗರದ ಲುಲು ಮಾಲ್‌ನಲ್ಲಿನ ಸಿನಿ ಪೊಲೀಸ್‌ನ 11 ಸ್ಕ್ರೀನ್‌ಗಳಲ್ಲಿ ಚಿತ್ರೋತ್ಸವದ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅದರೊಂದಿಗೆ ಚಾಮರಾಜಪೇಟೆಯ ಕಲಾವಿದರ ಸಂಘ ಮತ್ತು ಬನಶಂಕರಿಯ ಸುಚಿತ್ರ ಫಿಲ್ಮ್‌ ಸೊಸೈಟಿಯಲ್ಲೂ ಚಿತ್ರ ಪ್ರದರ್ಶನಗೊಳ್ಳಲಿವೆ ಎಂದು ಹೇಳಿದರು.

ಕನ್ನಡ, ಭಾರತೀಯ, ಏಷ್ಯನ್‌ ಸೇರಿ ವಿಶ್ವದ ಹಲವು ದೇಶಗಳ ಚಲನಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಈಗಾಗಲೇ ಕನ್ನಡ, ಭಾರತೀಯ ಮತ್ತು ಏಷ್ಯನ್‌ ಸ್ಪರ್ಧಾತ್ಮಕ ವಿಭಾಗಗಳಿಗೆ ಚಲನಚಿತ್ರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈ ವಿಭಾಗಗಳಿಗೆ ಈಗಾಗಲೇ 110ಕ್ಕೂ ಹೆಚ್ಚಿನ ಚಲನಚಿತ್ರಗಳಿಂದ ಅರ್ಜಿ ಸಲ್ಲಿಕೆಯಾಗಿವೆ. ಡಿ. 31ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಒಟ್ಟಾರೆ ಚಲನಚಿತ್ರೋತ್ಸವದಲ್ಲಿ 60ಕ್ಕೂ ಹೆಚ್ಚಿನ ದೇಶಗಳ 200 ಚಲನಚಿತ್ರಗಳು 400ಕ್ಕೂ ಹೆಚ್ಚು ಬಾರಿ ಪ್ರದರ್ಶನಗೊಳ್ಳಲಿವೆ. ಕಾನ್ಸ್‌, ಬರ್ಲಿನ್‌, ಕಾರ್ಲೋವಿ ವೇರಿ, ರಾಟರ್‌ಡ್ಯಾಮ್‌, ಬೂಸಾನ್‌, ಟೊರಂಟೋ ಚಿತ್ರೋತ್ಸವಗಳಲ್ಲಿ ಭಾಗವಹಿಸಿದ ಹಾಗೂ ಆಸ್ಕರ್‌ ಪ್ರಶಸ್ತಿಯಲ್ಲಿ ಪಾಲ್ಗೊಂಡಿದ್ದ ಚಲನಚಿತ್ರಗಳೂ ಪ್ರದರ್ಶನಗೊಳ್ಳುತ್ತಿವೆ ಎಂದು ವಿವರಿಸಿದರು.

ಪೋಲಿಷ್‌ ಕಲ್ಚರಲ್‌ ಸೆಂಟರ್‌ ಸಹಯೋಗದಲ್ಲಿ ಪೋಲೆಂಡ್‌ನ ಖ್ಯಾತ ನಿರ್ದೇಶಕ ಆಂದ್ರೆ ವಾಜ್ಞಾ ಅವರ ಶತಮಾನೋತ್ಸವದ ಸ್ಮರಣಾರ್ಥ ಅವರ ಆಯ್ದ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಹಾಗೆಯೇ ಬೆಂಗಳೂರಿನ ಅಲಿಯಾನ್ಸ್‌ ಫ್ರಾಂಸೇ ಹಾಗೂ ಫ್ರೆಂಚ್‌ ಇನ್ಸ್‌ಟಿಟ್ಯೂಟ್‌ ಇನ್‌ ಇಂಡಿಯಾ ಸಹಯೋಗದಲ್ಲಿ ಆಫ್ರಿಕಾ ಸಿನಿಮಾಗಳ ಇತಿಹಾಸ ದಾಖಲಿಸುವ ಚಲನಚಿತ್ರಗಳ ಸರಣಿಯನ್ನೂ ಚಿತ್ರೋತ್ಸವದಲ್ಲಿ ಸಿನಿ ಪ್ರೇಮಿಗಳು ವೀಕ್ಷಿಸಬಹುದಾಗಿದೆ ಎಂದರು.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕಾಗಿ ಸರ್ಕಾರದಿಂದ 7 ಕೋಟಿ ರು. ಅನುದಾನ ಒದಗಿಸಲಾಗಿದೆ. ಇನ್ನು, ಚಿತ್ರೋತ್ಸವದ ಸಮಾರೋಪ ಸಮಾರಂಭದಂದು ಅತ್ಯುತ್ತಮ ಚಲನಚಿತ್ರಗಳಿಗೆ ವಿವಿಧ ಪ್ರಶಸ್ತಿ, ಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್‌ ನಿಂಬಾಳ್ಕರ್‌, ಕಾರ್ಯದರ್ಶಿ ಬಿ.ಬಿ.ಕಾವೇರಿ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್‌, ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್‌ ಸಿಂಗ್‌, ಚಲನಚಿತ್ರ ನಿರ್ದೇಶಕ ತರುಣ್‌ ಸುಧೀರ್‌ ಸೇರಿ ಇತರರಿದ್ದರು.

ಕನ್ನಡ ಚಿತ್ರರಂಗ ಬೆಳೆದುಬಂದ ಹಾದಿ ಅನಾವರಣ

ಚಿತ್ರೋತ್ಸವ ನಡೆಯಲಿರುವ ಪ್ರಧಾನ ಕೇಂದ್ರದಲ್ಲಿ ವಿಶೇಷ ವೇದಿಕೆ ಸ್ಥಾಪಿಸಲಾಗುತ್ತಿದ್ದು, ಅದರಲ್ಲಿ ಕನ್ನಡ ಚಿತ್ರರಂಗದ 91 ವರ್ಷಗಳ ವರ್ಣರಂಜಿತ, ಸ್ಮರಣೀಯ ಇತಿಹಾಸ ಬಿಂಬಿಸುವ ವೈವಿಧ್ಯಮಯ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪೈರಸಿ ಯುದ್ಧದಿಂದ ನಿಲ್ಲಲ್ಲ, ಸರ್ಕಾರದ ನೆರವು ಅಗತ್ಯ: ಹಾಸ್ಯ ನಟ ಸಾಧು ಕೋಕಿಲ ಹೇಳಿದ್ದೇನು?
ದಿ ಡೆವಿಲ್‌ ಚಿತ್ರದಲ್ಲಿ ಪಾತ್ರ ಚೆನ್ನಾಗಿಲ್ಲ ಅಂತ ರಿಜೆಕ್ಟ್‌ ಮಾಡಿದೆ: ಕಣ್ಣೀರಿಟ್ಟ ರಾಗಿಣಿ ದ್ವಿವೇದಿ