
ನಟಿ ಭಾವನಾ ರಾಮಣ್ಣ ಅವರಿಗೆ ಇಂದು ಅವಳಿ ಮಕ್ಕಳು ಹುಟ್ಟಿದ್ದರೂ, ಒಂದು ಮಗು ಮಾತ್ರ ಬದುಕಿ ಉಳಿದಿದೆ. ಅದು ಹೆಣ್ಣುಮಗು. ಐವಿಎಫ್ ಮೂಲಕ ಅವಳಿ ಮಕ್ಕಳನ್ನು ಹೆರುವ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ನಟಿ ಭಾವನಾ ರಾಮಣ್ಣ (Bhavana Ramanna) ಸಕತ್ ಸುದ್ದಿಯಲ್ಲಿದ್ದರು. ಕಳೆದ ತಿಂಗಳು ನಟಿಗೆ ಅದ್ಧೂರಿಯ ಸೀಮಂತವೂ ನಡೆದಿತ್ತು. IVF ಮೂಲಕ ಹಲವಾರು ಮಂದಿ ಮಕ್ಕಳನ್ನು ಪಡೆಯುತ್ತಿದ್ದರೂ, ಭಾವನಾ ಸುದ್ದಿ ಮಾತ್ರ ಸಕತ್ ಸದ್ದು ಮಾಡಲು ಕಾರಣ, ಮೊದಲನೆಯದ್ದಾಗಿ ಆಕೆ ಸೆಲೆಬ್ರಿಟಿ, ಇನ್ನೊಂದು ಅವಿವಾಹಿತೆ ಎನ್ನುವುದಕ್ಕೆ. ನಟಿ ಭಾವನಾ ಆರು ತಿಂಗಳ ಗರ್ಭಿಣಿ ಎನ್ನುವ ಸುದ್ದಿ ತಿಳಿದಾಗಿನಿಂದಲೂ ಇದರ ಬಗ್ಗೆ ಪರ-ವಿರೋಧಗಳ ದೊಡ್ಡ ಚರ್ಚೆಯೇ ಶುರುವಾಗಿತ್ತು. In Vitro Fertilization (IVF) ಮೂಲಕ ಮಗು ಪಡೆಯುತ್ತಿರುವುದಕ್ಕೆ ಹಲವರು ಅಭಿನಂದನೆ ಸಲ್ಲಿಸಿದರೆ, ಮತ್ತಷ್ಟು ಮಂದಿ ಈ ಕ್ರಮ ಸರಿಯಲ್ಲ ಎನ್ನುತ್ತಲೇ ಇದ್ದರು.
ಇದರ ನಡುವೆಯೂ ಇದೀಗ 8ನೇ ತಿಂಗಳಿಗೆ ಭಾವನಾ ಅವರಿಗೆ ಪ್ರಸವ ಮಾಡಿಸಲಾಗಿದೆ. ಒಂದು ಮಗುವಿನಲ್ಲಿ ಏಳು ತಿಂಗಳಿನಲ್ಲಿ ಸಮಸ್ಯೆ ಕಾಣಿಸಿಕೊಂಡ ಕಾರಣ, 8 ತಿಂಗಳಿಗೆ ಹೆರಿಗೆ ಮಾಡಿಸಲಾಗಿದೆ. ಸದ್ಯ ಮಗಳು ಮತ್ತು ಅಮ್ಮ ಭಾವನಾ ಕ್ಷೇಮವಾಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇದರ ನಡುವೆಯೇ, ಇದೀಗ ನಟಿಗೆ ಈ ವಿಷಯ ಮೊದಲೇ ಗೊತ್ತಿತ್ತಾ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಇದಕ್ಕೆ ಕಾರಣ, ಕಳೆದ ತಿಂಗಳು ಭಾವನಾ ಅವರಿಗೆ ಸಂದರ್ಶನವೊಂದರಲ್ಲಿ ಅವಳಿ ಮಕ್ಕಳು ಹುಟ್ಟಿದರೆ ಹೆಸರು ಏನು ಇಡುತ್ತೀರಿ ಎಂದು ಪ್ರಶ್ನೆ ಕೇಳಲಾಗಿತ್ತು. ಸಾಮಾನ್ಯವಾಗಿ ಗರ್ಭಿಣಿಯಾದ ಬಳಿಕ ಅಪ್ಪ-ಅಮ್ಮ ಆಗುವವರು ತಮ್ಮ ಮಕ್ಕಳ ಹೆಸರು ಏನಿಡಬಹುದು ಎಂದು ಚರ್ಚಿಸುವುದು ಸರ್ವೇ ಸಾಮಾನ್ಯ. ಹುಟ್ಟುವ ಮಗು ಗಂಡೋ, ಹೆಣ್ಣೋ ಎಂದು ತಿಳಿದಿರದ ಕಾರಣ, ಎರಡೂ ಹೆಸರುಗಳನ್ನು ಹುಡುಕಿರುತ್ತಾರೆ. ಹೆಚ್ಚಿನವರು ನಕ್ಷತ್ರ, ರಾಶಿಗೆ ಅನುಗುಣವಾಗಿ ಹೆಸರನ್ನು ಇಟ್ಟರೂ ಕೊನೆಗೆ ಕರೆಯುವುದಕ್ಕಾಗಿ ಮುದ್ದಾದ ಹೆಸರುಗಳನ್ನು ಇಡಲು ಮೊದಲೇ ರೆಡಿಯಾಗಿರುತ್ತಾರೆ.
ಇದನ್ನೂ ಓದಿ: ಗರ್ಭದಲ್ಲಿ ವೀರ್ಯ ಇರಿಸಿ ಮಗು ಸೃಷ್ಟಿಸೋದು ಹೇಗೆ? ವಿಡಿಯೋ ಸಹಿತ ಹಂತ ಹಂತದ ಮಾಹಿತಿ ಕೊಟ್ಟ ವೈದ್ಯೆ
ಒಂದು ಹೆಣ್ಣುಮಗುವಿನ ಹೆಸರು ರಿವೀಲ್
ಇನ್ನು ಅವಳಿ ಮಕ್ಕಳು ಹುಟ್ಟುವುದು ಮೊದಲೇ ಗೊತ್ತಾಗುವ ಕಾರಣ, ಅದು ಗಂಡೋ-ಹೆಣ್ಣೋ ಎಂದು ತಿಳಿಯದೇ ಇರುವ ಕಾರಣದಿಂದಲೂ ಒಂದೇ ರೀತಿಯ ವಿಧವಿಧದ ಹೆಸರುಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಲಾಗುತ್ತದೆ. ಅದೇ ರೀತಿ ಭಾವನಾ ಅವರು ತಮ್ಮ ಅವಳಿ ಮಕ್ಕಳಿಗೆ ಏನು ಹೆಸರು ಇಡುತ್ತಾರೆ ಎಂದು ಪ್ರಶ್ನಿಸಲಾಗಿತ್ತು. ಅದಕ್ಕೆ ನಟಿ, ಸದ್ಯ ಒಂದು ಹೆಣ್ಣುಮಗುವಿನ ಹೆಸರನ್ನು ಮಾತ್ರ ಯೋಚನೆ ಮಾಡಿದ್ದೇನೆ. ಆಕೆಗೆ ನನ್ನ ಅಮ್ಮನ ಅಮ್ಮ ಅಂದ್ರೆ ಅಜ್ಜಿಯ ಹೆಸರಾಗಿರುವ ರುಕ್ಮಿಣಿ (Rukmini) ಇಡಬೇಕು ಎಂದುಕೊಂಡಿದ್ದೇನೆ ಎಂದಿದ್ದರು. ಅವರು ಏಕೆ ಹೀಗೆ ಹೇಳಿದ್ದರು. ಅವರಿಗೆ ಒಂದೇ ಒಂದು ಮಗು ಹುಟ್ಟುವುದು, ಅದರಲ್ಲಿಯೂ ಅದು ಹೆಣ್ಣುಮಗು ಎನ್ನುವುದು ಮೊದಲೇ ಗೊತ್ತಿತ್ತಾ ಎನ್ನುವ ಚರ್ಚೆಯೂ ನಡೆಯುತ್ತಿದೆ.
ಚರ್ಚೆ ಏನೇ ಇದ್ದರೂ, ಒಂದು ಮಗುವನ್ನು ಕಳೆದುಕೊಂಡಿರುವ ಭಾವನಾ ಅವರ ಸ್ಥಿತಿ ಯಾವ ರೀತಿದ್ದಾಗಿರಬಹುದು ಎಂದು ಊಹಿಸುವುದೂ ಕಷ್ಟವಾಗಿದೆ. ಇನ್ನು ಈ ಚಿಕಿತ್ಸೆ ಕುರಿತು ಹೇಳುವುದಾದರೆ, ಐವಿಎಫ್ ಪ್ರಕ್ರಿಯೆಯು ಸಾಮಾನ್ಯವಾಗಿ ಅಂಡಾಶಯದ ಪ್ರಚೋದನೆಯಿಂದ ಭ್ರೂಣ ವರ್ಗಾವಣೆಯವರೆಗೆ ಸುಮಾರು 4-6 ವಾರಗಳನ್ನು ತೆಗೆದುಕೊಳ್ಳುತ್ತದೆ. IVF ಪ್ರಕ್ರಿಯೆಯಲ್ಲಿ, ಮೊಟ್ಟೆಗಳನ್ನು ಉತ್ಪಾದಿಸಲು ಅಂಡಾಶಯಗಳನ್ನು ಉತ್ತೇಜಿಸಲು ಮಹಿಳೆಗೆ ಆರಂಭದಲ್ಲಿ ಕೆಲವಷ್ಟು ಔಷಧಿಗಳನ್ನು ನೀಡಲಾಗುತ್ತದೆ. ಮೊಟ್ಟೆಗಳು ಪಕ್ವವಾದ ನಂತರ, ಅವುಗಳನ್ನು ಅಂಡಾಶಯಗಳಿಂದ ಹೊರತೆಗೆಯಲಾಗುತ್ತದೆ. ಪ್ರಯೋಗಾಲಯದಲ್ಲಿ ವೀರ್ಯದೊಂದಿಗೆ ಮೊಟ್ಟೆಗಳನ್ನು ಫಲವತ್ತಾಗಿಸಲಾಗುತ್ತದೆ. ಫಲವತ್ತಾದ ಮೊಟ್ಟೆಗಳು ಭ್ರೂಣಗಳಾಗಿ ಬೆಳೆಯಲು ಅವಕಾಶ ನೀಡಲಾಗುತ್ತದೆ. ಉತ್ತಮ ಗುಣಮಟ್ಟದ ಭ್ರೂಣಗಳನ್ನು ಮಹಿಳೆಯ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಸುಮಾರು 10-14 ದಿನಗಳ ನಂತರ ಗರ್ಭಧಾರಣೆಯ ಪರೀಕ್ಷೆ ಮಾಡಲಾಗುತ್ತದೆ.
ಇದನ್ನೂ ಓದಿ: ಕನ್ನಡದ ನಟಿ ಭಾವನಾ ರಾಮಣ್ಣಗೆ ಮಗು; ಬಯಸಿದ್ದು ಎರಡು ದೊರಕಿದ್ದು ಒಂದು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.