'ಸಿಕ್ಕಾಪಟ್ಟೆ ಇಷ್ಟಪಟ್ಟೆ ಐ ಲೈಕ್‌ ಇಟ್...' ಅಂತಾ ನಯನತಾರಾ ನಟಿಸಿದ ಏಕೈಕ ಕನ್ನಡ ಸಿನಿಮಾ ಇದು!

Published : Nov 25, 2026, 05:47 PM IST
Nayanthara Starred in Kannada Film Super

ಸಾರಾಂಶ

ಲೇಡಿ ಸೂಪರ್‌ಸ್ಟಾರ್ ನಯನತಾರಾ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಂದಾಗಿ ನಟಿಸಿದ್ದ ‘ಸೂಪರ್’ ಸಿನಿಮಾ ಇಂದಿಗೂ ವಿಶೇಷ. ನಯನತಾರಾ ಅವರ ಏಕೈಕ ಕನ್ನಡ ಚಿತ್ರದ ಕುತೂಹಲಕಾರಿ ಸಂಗತಿಗಳನ್ನು ತಿಳಿಯಿರಿ.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ‘ಲೇಡಿ ಸೂಪರ್‌ಸ್ಟಾರ್’ ಎಂದೇ ಗುರುತಿಸಿಕೊಂಡಿರುವ ನಯನತಾರಾ, ಕನ್ನಡ ಚಿತ್ರರಂಗದಲ್ಲೂ ಒಮ್ಮೆ ತಮ್ಮ ಅದೃಷ್ಟ ಪರೀಕ್ಷಿಸಿದ್ದರು. ಅದೂ ಸಾಮಾನ್ಯ ಸಿನಿಮಾದ ಮೂಲಕವಲ್ಲ; ಕನ್ನಡದ ವಿಭಿನ್ನ ಪ್ರಯೋಗಗಳ ಸರದಾರ, ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ತೆರೆ ಹಂಚಿಕೊಳ್ಳುವ ಮೂಲಕ! 2010ರ ಡಿಸೆಂಬರ್ 3ರಂದು ಬಿಡುಗಡೆಯಾದ ‘ಸೂಪರ್’ ಸಿನಿಮಾ ಇಂದಿಗೂ ನಯನತಾರಾ ಅವರ ಏಕೈಕ ಕನ್ನಡ ಚಿತ್ರವಾಗಿ ಗುರುತಿಸಿಕೊಂಡಿದೆ. ರಾಜಕೀಯ ವಿಡಂಬನೆ, ವಿಭಿನ್ನ ಕಥಾಹಂದರ ಹಾಗೂ ಉಪೇಂದ್ರ ಅವರ ವಿಶಿಷ್ಟ ಕಲ್ಪನೆಯಿಂದ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿತ್ತು.

ಶೀರ್ಷಿಕೆಯೇ ಇಲ್ಲದೆ ಪ್ರಚಾರ ಮಾಡಿದ್ದ ಚಿತ್ರತಂಡ!

‘ಸೂಪರ್’ ಸಿನಿಮಾ ಬಿಡುಗಡೆಯಾಗುವ ಮುನ್ನವೇ ತನ್ನ ವಿಭಿನ್ನ ಪ್ರಚಾರ ತಂತ್ರದಿಂದ ಸಾಕಷ್ಟು ಕುತೂಹಲ ಮೂಡಿಸಿತ್ತು. ಸುಮಾರು ಹತ್ತು ವರ್ಷಗಳ ವಿರಾಮದ ಬಳಿಕ ಉಪೇಂದ್ರ ನಿರ್ದೇಶನದ ಹೊಣೆ ಹೊತ್ತಿದ್ದ ಈ ಚಿತ್ರಕ್ಕೆ ಆರಂಭದಲ್ಲಿ ಸಾಂಪ್ರದಾಯಿಕ ಶೀರ್ಷಿಕೆಯನ್ನೇ ಬಳಸಿರಲಿಲ್ಲ. ಚಿತ್ರದ ಪೋಸ್ಟರ್‌ಗಳಲ್ಲಿ ಕೇವಲ ಕೈ ಸನ್ನೆಯೊಂದನ್ನು ಪ್ರದರ್ಶಿಸಿ, ಅದಕ್ಕೆ ಪ್ರೇಕ್ಷಕರೇ ಹೆಸರಿಡುವಂತೆ ಸವಾಲು ಹಾಕಲಾಗಿತ್ತು. ಈ ವಿಭಿನ್ನ ಪ್ರಯತ್ನವೇ ಚಿತ್ರದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿತ್ತು.

ಚಿತ್ರದ ಕಥೆಯೂ ಅಷ್ಟೇ ವಿಭಿನ್ನವಾಗಿತ್ತು. ಸುಭಾಷ್ ಚಂದ್ರ ಗಾಂಧಿ ಎಂಬ ಎನ್‌ಆರ್‌ಐ ಪಾತ್ರದಲ್ಲಿ ಉಪೇಂದ್ರ ಕಾಣಿಸಿಕೊಂಡರೆ, ಅವರ ಪ್ರೇಯಸಿ ಇಂದಿರಾ ಪಾತ್ರದಲ್ಲಿ ನಯನತಾರಾ ಮಿಂಚಿದ್ದರು. ದೇಶದಲ್ಲಿನ ಭ್ರಷ್ಟಾಚಾರ ಮತ್ತು ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸುವಂತೆ ಇಂದಿರಾ ಸವಾಲು ಹಾಕಿದಾಗ, ಸುಭಾಷ್ ಅದನ್ನು ಸ್ವೀಕರಿಸುತ್ತಾರೆ. 2030ರ ವೇಳೆಗೆ ಭಾರತವನ್ನು ವಿಶ್ವದ ಸೂಪರ್‌ಪವರ್ ರಾಷ್ಟ್ರವನ್ನಾಗಿ ರೂಪಿಸುವ ಕನಸು ಕಾಣುತ್ತಾರೆ. ರೂಪಾಯಿ ಮತ್ತು ಡಾಲರ್ ಮೌಲ್ಯ ಸಮಾನವಾಗುವುದು, ವಿದೇಶಿಗರು ಭಾರತೀಯ ವೀಸಾಕ್ಕಾಗಿ ಸಾಲುಗಟ್ಟಿ ನಿಲ್ಲುವುದು ಸೇರಿದಂತೆ ಹಲವು ಅಚ್ಚರಿಯ ಕಲ್ಪನೆಗಳನ್ನು ಉಪೇಂದ್ರ ತೆರೆಯ ಮೇಲೆ ಕಟ್ಟಿಕೊಟ್ಟಿದ್ದರು.

ನಯನತಾರಾ ಅಭಿನಯಕ್ಕೆ ಫಿಲ್ಮ್‌ಫೇರ್ ನಾಮನಿರ್ದೇಶನ!

ಇಂದಿರಾ ಪಾತ್ರದಲ್ಲಿ ನಯನತಾರಾ ತಮ್ಮ ಸಹಜ ಸೌಂದರ್ಯ ಮತ್ತು ಅಭಿನಯದ ಮೂಲಕ ಗಮನ ಸೆಳೆದಿದ್ದರು. ಚಿತ್ರದ ತಾತ್ವಿಕ ಸಂಘರ್ಷಕ್ಕೆ ತಮ್ಮ ಪಾತ್ರದ ಮೂಲಕ ಮತ್ತಷ್ಟು ಬಲ ತುಂಬಿದ್ದರು. ಈ ಅಭಿನಯಕ್ಕಾಗಿ ಅವರಿಗೆ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನವೂ ದೊರಕಿತ್ತು. ವಿ. ಹರಿಕೃಷ್ಣ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಜನಪ್ರಿಯವಾಗಿದ್ದವು. ಅಷ್ಟೇ ಅಲ್ಲ, ನೈಜ ರಾಜಕೀಯ ಹಗರಣಗಳು ಮತ್ತು ವ್ಯವಸ್ಥೆಯ ಭ್ರಷ್ಟಾಚಾರವನ್ನು ಗುರಿಯಾಗಿಸಿಕೊಂಡ ಚಿತ್ರದ ಖಾರವಾದ ವ್ಯಂಗ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇನ್ನು ವಿಭಿನ್ನ ಕಥೆ, ಉಪೇಂದ್ರ ಅವರ ನಿರ್ದೇಶನ ಮತ್ತು ನಯನತಾರಾ ಅವರ ತಾರಾಬಲದಿಂದ ‘ಸೂಪರ್’ ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಯಶಸ್ಸು ಕಂಡಿತ್ತು. ಬಿಡುಗಡೆಯಾಗಿ ಒಂದು ದಶಕಕ್ಕೂ ಹೆಚ್ಚು ಸಮಯ ಕಳೆದಿದ್ದರೂ ‘ಸೂಪರ್’ ಚಿತ್ರದ ಪ್ರಯೋಗಶೀಲತೆ ಇಂದಿಗೂ ಚರ್ಚೆಯಾಗುತ್ತದೆ. ನಯನತಾರಾ ಅವರ ಸ್ಟಾರ್‌ಡಮ್ ಮತ್ತು ಉಪೇಂದ್ರ ಅವರ ವಿಲಕ್ಷಣ ಕಲ್ಪನೆ ಒಂದಾದಾಗ ಸೃಷ್ಟಿಯಾದ ಈ ಅಪರೂಪದ ಸಿನಿಮಾ, ದಕ್ಷಿಣ ಭಾರತದ ಚಿತ್ರರಂಗದ ವಿಶಿಷ್ಟ ಪ್ರಯೋಗಗಳಲ್ಲಿ ಒಂದಾಗಿ ಉಳಿದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

KGF ಬ್ಯೂಟಿ ಶ್ರೀನಿಧಿ ಶೆಟ್ಟಿ ಡಯೆಟ್​ ಲಿಸ್ಟ್​ನಲ್ಲಿ 7 ಇಡ್ಲಿ, 4 ವಡಾ, 8 ಮೈಸೂರ್​ ಪಾಕ್‌! ಶಾಕಿಂಗ್​ ಫಿಟ್​ನೆಸ್​ ರಿವೀಲ್​
ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿ, ಒಟಿಟಿಯಲ್ಲಿ ಕಮಾಲ್ ಮಾಡಿದ ಸ್ಯಾಂಡಲ್‌ವುಡ್‌ನ ಟಾಪ್ ಸಿನಿಮಾಗಳು