ಅಶೋಕ ಬ್ಲೇಡ್‌ ಸಿನಿಮಾಗೂ ನಿರ್ದೇಶಕರ ಆತ್ಮಹತ್ಯೆಗೂ ಸಂಬಂಧ ಇಲ್ಲ: ನಿರ್ಮಾಪಕ ವರ್ಧನ್

By Kannadaprabha News  |  First Published Jul 25, 2024, 11:47 AM IST

ಅಶೋಕ ಬ್ಲೇಡ್‌ ಸಿನಿಮಾ ವಿನೋದ್ ಧೋಂಡಾಳೆ ಅವರ ಕನಸಾಗಿತ್ತು. ಸಿನಿಮಾ ತುಂಬಾ ಚೆನ್ನಾಗಿ ಬಂದಿತ್ತು. ಹಣಕಾಸಿನಿಂದಾಗಿ ಶೂಟಿಂಗ್ ನಿಂತಿದ್ದು ನಿಜ. ಆದರೆ ಅವರು ತೀರಿಕೊಳ್ಳುವ ಹಿಂದಿನ ದಿನವೇ ನಮಗೆ ಒಳ್ಳೆಯ ಇನ್‌ವೆಸ್ಟರ್‌ ಸಿಕ್ಕಿದ್ದರು. 


ಸತೀಶ್‌ ನೀನಾಸಂ ನಾಯಕನಾಗಿ ನಟಿಸಿರುವ ‘ಅಶೋಕ ಬ್ಲೇಡ್’ ಚಿತ್ರದ ನಿರ್ದೇಶಕ ವಿನೋದ್‌ ಧೋಂಡಾಳೆ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಹತ್ಯೆಗೆ ಸಿನಿಮಾ ಕಾರಣ ಎಂಬ ಚರ್ಚೆ ಇತ್ತೀಚೆಗೆ ಅಲ್ಲಲ್ಲಿ ಕೇಳಿ ಬಂದಿತ್ತು. ಆದರೆ ‘ಅಶೋಕ ಬ್ಲೇಡ್’ ನಿರ್ಮಾಪಕ ವರ್ಧನ್ ಹರಿ ಆ ವಿಚಾರವನ್ನು ಅಲ್ಲಗಳೆದಿದ್ದಾರೆ. ‘ಅಶೋಕ ಬ್ಲೇಡ್‌ ಸಿನಿಮಾಗೂ ನಿರ್ದೇಶಕರ ಆತ್ಮಹತ್ಯೆಗೂ ಸಂಬಂಧ ಇಲ್ಲ’ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಅವರು ಆಡಿರುವ ಮಾತುಗಳು ಇಲ್ಲಿವೆ-
- ಅಶೋಕ ಬ್ಲೇಡ್‌ ಸಿನಿಮಾ ವಿನೋದ್ ಧೋಂಡಾಳೆ ಅವರ ಕನಸಾಗಿತ್ತು. ಸಿನಿಮಾ ತುಂಬಾ ಚೆನ್ನಾಗಿ ಬಂದಿತ್ತು. ಹಣಕಾಸಿನಿಂದಾಗಿ ಶೂಟಿಂಗ್ ನಿಂತಿದ್ದು ನಿಜ. ಆದರೆ ಅವರು ತೀರಿಕೊಳ್ಳುವ ಹಿಂದಿನ ದಿನವೇ ನಮಗೆ ಒಳ್ಳೆಯ ಇನ್‌ವೆಸ್ಟರ್‌ ಸಿಕ್ಕಿದ್ದರು. ಇನ್ನೂ 15-20 ದಿನ ಶೂಟಿಂಗ್ ಬಾಕಿ ಇತ್ತು. ಆದಷ್ಟು ಬೇಗ ಅದನ್ನು ಮುಗಿಸುವ ನಿರ್ಧಾರ ಮಾಡಿದ್ದೆವು. ಅವರು ಮೀಟಿಂಗ್‌ನಿಂದ ಖುಷಿಯಾಗಿಯೇ ಹೋಗಿದ್ದರು.

Latest Videos

undefined

ಪ್ರಣಿತಾ ಸುಭಾಷ್ ಮತ್ತೆ​ ಪ್ರೆಗ್ನೆಂಟ್: ಸಾಮಾಜಿಕ ಜಾಲತಾಣದಲ್ಲಿ ಖುಷಿ ವಿಷಯವನ್ನು ಹಂಚಿಕೊಂಡ ಪೊರ್ಕಿ ನಟಿ

- ಸಿನಿಮಾದ ಆರ್ಥಿಕ ವಿಚಾರಗಳನ್ನು ನಾನು ನೋಡಿಕೊಳ್ಳುತ್ತಿದ್ದೆ. ಅವರು ಸೃಜನಶೀಲ ವಿಭಾಗ ನೋಡಿಕೊಳ್ಳುತ್ತಿದ್ದರು. ಆರಂಭದಲ್ಲಿ 45 ದಿನಗಳಲ್ಲಿ ಶೂಟಿಂಗ್‌ ಮುಗಿಸುವ ಪ್ಲಾನ್‌ ಇತ್ತು. ಆದರೆ ಸಿನಿಮಾ ಚೆನ್ನಾಗಿ ಬಂದಿದ್ದರಿಂದ ಶೂಟಿಂಗ್ ದಿನಗಳು ಹೆಚ್ಚಾದವು. ಈಗ 87 ದಿನ ಶೂಟಿಂಗ್ ಆಗಿದೆ. ಅದಕ್ಕಂತೆ ತಕ್ಕಂತೆ ಬಜೆಟ್‌ ಕೂಡ ವಿಸ್ತಾರವಾಯಿತು. ಆರಂಭದಲ್ಲಿ ಇಬ್ಬರು ಇನ್ವೆಸ್ಟರ್‌ ಇದ್ದರು. ನಂತರ ಒಬ್ಬರು ಹೊರಗೆ ಹೋಗಿದ್ದರಿಂದ ನಾವೇ ದುಡ್ಡು ಹಾಕಿದೆವು. ಆ ನಿಟ್ಟಿನಲ್ಲಿ ಒಂದೂವರೆ ಕೋಟಿಯಷ್ಟು ಸಿನಿಮಾ ಸಾಲ ಇದ್ದಿದ್ದು ಹೌದು. ಆದರೆ ಅದು ಹೂಡಿಕೆ. ಸಿನಿಮಾ ಗೆದ್ದರೆ ಅದು ವಾಪಸ್‌ ಬರಬಹುದಾಗಿತ್ತು.

- ಸತೀಶ್‌ ನೀನಾಸಂಗೂ ಈ ಸಿನಿಮಾ ಮೇಲೆ ಭರವಸೆ ಇತ್ತು. ಅವರು ಕತೆ ಇಷ್ಟವಾಗಿಯೇ ಈ ಪ್ರಾಜೆಕ್ಟ್ ಒಳಗೆ ಬಂದಿದ್ದರು. ಈ ಪ್ರಾಜೆಕ್ಟ್‌ ಚೆನ್ನಾಗಿ ಬರಬೇಕು ಎಂಬ ಕಾರಣಕ್ಕೆ ಅಗತ್ಯ ಬಿದ್ದಾಗ ಆರ್ಥಿಕ ನೆರವನ್ನೂ ಕೊಡಿಸಿದ್ದಾರೆ. ಜೊತೆಗೆ ಇನ್ವೆಸ್ಟರ್‌ ಬರುವುದಕ್ಕೂ ಅವರೇ ಕಾರಣ. ‘ಅಯೋಗ್ಯ 2’ ಸಿನಿಮಾ ಮುಂದಕ್ಕೆ ಹಾಕಿ ‘ಅಶೋಕ ಬ್ಲೇಡ್’ ಸಿನಿಮಾ ಶೂಟಿಂಗ್‌ ಮುಗಿಸಲು ಕಾಯುತ್ತಿದ್ದರು. ನಮ್ಮಿಂದ ಅವರು ಸಂಭಾವನೆಯನ್ನೂ ತೆಗೆದುಕೊಂಡಿಲ್ಲ. ಸಿನಿಮಾ ಮುಗಿದ ಮೇಲೆ ನೋಡೋಣ ಎಂದಿದ್ದರು.

- ಸಿನಿಮಾ ಚೆನ್ನಾಗಿ ಬರಬೇಕು ಎಂದರೆ ದುಡ್ಡು ಖರ್ಚು ಮಾಡಲೇಬೇಕು. ಅದಕ್ಕೆ ನಾವು ತಯಾರಾಗಿರಬೇಕು. ನಾನು ಅದನ್ನು ನೋಡಿಕೊಳ್ಳುತ್ತಿದ್ದೆ ಕೂಡ. ಆದರೆ ವಿನೋದ್ ತುಂಬಾ ಒಳ್ಳೆಯ ವ್ಯಕ್ತಿ. ಸೂಕ್ಷ್ಮ ಮನಸ್ಸಿನವರು. ಅವರಿಗೆ ತನ್ನಿಂದ ಇನ್ನೊಬ್ಬರಿಗೆ ತೊಂದರೆಯಾಗಬಾರದು ಅನ್ನುವ ಯೋಚನೆ ಇತ್ತು. ಅವರು ಡಿಸ್ಟರ್ಬ್ ಆಗಿದ್ದರು. ನಾವೆಲ್ಲಾ ಸಮಾಧಾನ ಮಾಡುತ್ತಿದ್ದೆವು. ಆದರೆ ಈ ರೀತಿ ಮಾಡುತ್ತಾರೆ ಅಂತ ಗೊತ್ತಾಗಿರಲಿಲ್ಲ. ಈಗ ಉಳಿದಿರುವುದು ಅವರು ಒಂದು ಮಾತು ಹೇಳಿದ್ದರೂ ಅವರನ್ನು ಉಳಿಸಿಕೊಳ್ಳಬಹುದಿತ್ತು ಅನ್ನುವ ವಿಷಾದ ಅಷ್ಟೇ. ಮನುಷ್ಯ ಇದ್ದರೆ ಏನಾದರೂ ಮಾಡಬಹುದಿತ್ತು, ಆದರೆ ಅವರು ನಮಗೆ ಆ ಅವಕಾಶ ಕೊಡಲಿಲ್ಲ.

- ಅಶೋಕ ಬ್ಲೇಡ್ ವಿನೋದ್ ಧೋಂಡಾಳೆ ಅವರ ಕನಸಾಗಿತ್ತು. ಈ ಸಿನಿಮಾದಿಂದ ನಿಮಗೆ ದೊಡ್ಡ ಹೆಸರು ಬರುತ್ತದೆ ಅಂತ ಹೇ‍ಳುತ್ತಿದ್ದೆ. ಅದೇ ಪ್ರಕಾರ ಈ ಸಿನಿಮಾ ಮುಗಿಸುತ್ತೇವೆ. ವಿನೋದ್ ಧೋಂಡಾಳೆ ಹೆಸರಿನಲ್ಲಿಯೇ ಈ ಸಿನಿಮಾ ಬಿಡುಗಡೆ ಆಗುತ್ತದೆ.

ತಮ್ಮ ಮಗನಿಗೆ ಶಾಲೆಯಲ್ಲಿ ಸೀಟು ಕೇಳಲು ವಿಜಯಲಕ್ಷ್ಮಿ ದರ್ಶನ್ ಭೇಟಿ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ

ವಿನೋದ್ ಕುಟುಂಬದ ಜೊತೆ ನಾವು ನಿಲ್ಲುತ್ತೇವೆ: ಈ ಕುರಿತು ಸ್ಪಷ್ಟನೆ ನೀಡಿರುವ ನೀನಾಸಂ ಸತೀಶ್, ‘ಈ ಸಿನಿಮಾ ನನಗೆ ಇಷ್ಟವಾಗಿತ್ತು. ಚೆನ್ನಾಗಿ ಬಂದಿತ್ತು ಕೂಡ. ನಾನು ಈ ಸಿನಿಮಾಗೆ ಸಂಭಾವನೆ ತೆಗೆದುಕೊಂಡಿರಲಿಲ್ಲ. ಆಮೇಲೆ ನೋಡೋಣ ಎಂದಿದ್ದೆ. ವಿನೋದ್ ಧೋಂಡಾಳೆ ಒಬ್ಬ ಅದ್ಭುತ ನಿರ್ದೇಶಕ. ಒಳ್ಳೆಯ ವ್ಯಕ್ತಿ. ಅವರು ಹೀಗೆ ಮಾಡುತ್ತಾರೆ ಅಂದುಕೊಂಡಿರಲಿಲ್ಲ. ನಾವು ಅವರ ಕುಟುಂಬದ ನೋವಿನಲ್ಲಿ ಭಾಗಿಯಾಗುತ್ತೇವೆ. ಇಡೀ ತಂಡ ಆ ಕುಟುಂಬದ ಜೊತೆಗಿದೆ. ಈ ಸಿನಿಮಾವನ್ನು ನಾವು ಪೂರ್ಣಗೊಳಿಸುತ್ತೇವೆ. ವಿನೋದ್ ಕನಸನ್ನು ನನಸು ಮಾಡುತ್ತೇವೆ. ಅವರಿಗೆ ಈ ಸಿನಿಮಾ ಅರ್ಪಿಸುತ್ತೇವೆ’ ಎಂದು ಹೇಳಿದ್ದಾರೆ.

click me!