
Darling Krishna Movie: ನಟ ಡಾರ್ಲಿಂಗ್ ಕೃಷ್ಣ ಹಾಗೂ ಪಿಸಿ ಶೇಖರ್ ಅಭಿನಯದಲ್ಲಿ ಹೊಸ ಸಿನಿಮಾ ಮೂಡಿ ಬರುತ್ತಿದೆ. "ಮಹಾನ್" ಸಿನಿಮಾ ನಿರ್ದೇಶಕ ಪಿ.ಸಿ.ಶೇಖರ್ ಅವರೇ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿದ್ದಾರೆ. ಶೇಷಾದ್ರಿಪರಂನ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸರಳ ಪೂಜಾ ಸಮಾರಂಭದೊಂದಿಗೆ ಈ ಸಿನಿಮಾಕ್ಕೆ ಚಾಲನೆ ನೀಡಲಾಯ್ತು. ನಿರ್ಮಾಪಕ ಪ್ರಕಾಶ್ ಬೂದೂರು, ನಿರ್ದೇಶಕ ಪಿಸಿ.ಶೇಖರ್, ನಾಯಕ ಡಾರ್ಲಿಂಗ್ ಕೃಷ್ಣ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಚಿತ್ರದ ಘೋಷಣೆಯನ್ನಷ್ಟೇ ಮಾಡಿದ್ದು, ಶೀರ್ಷಿಕೆ ಸೇರಿದಂತೆ ಉಳಿದ ಮಾಹಿತಿ ಮುಂದಿನ ದಿನಗಳಲ್ಲಿ ತಿಳಿಯಲಿದೆ.
ನಮ್ಮ ಮುಂದಿನ ಸಿನಿಮಾವನ್ನು ನಟ ‘ಡಾರ್ಲಿಂಗ್’ ಕೃಷ್ಣ ಹಾಗೂ ಖ್ಯಾತ ನಿರ್ದೇಶಕ ಪಿ.ಸಿ. ಶೇಖರ್ ಅವರೊಂದಿಗೆ ಘೋಷಿಸುತ್ತಿರುವುದು ನನಗೆ ಅಪಾರ ಸಂತೋಷ, ಹೆಮ್ಮೆಯ ವಿಷಯವಾಗಿದೆ. "ಮಹಾನ್" ಸಿನಿಮಾದ ನಿರ್ಮಾಣದ ಯಶಸ್ವಿ ಪಯಣದ ನಂತರ, ನಿರ್ದೇಶಕ ಪಿ.ಸಿ. ಶೇಖರ್ ಅವರೊಂದಿಗೆ ಇದು ನನ್ನ ಎರಡನೇ ಸಿನಿಮಾ. ಅವರೊಂದಿಗೆ ಕೆಲಸ ಮಾಡಿದ ಅನುಭವ ನನ್ನಲ್ಲಿ ಅವರ ಕಥೆ ಹೇಳುವ ಶೈಲಿ, ಚಲನಚಿತ್ರದ ಮೇಲಿನ ದೃಷ್ಟಿಕೋನ ಹಾಗೂ ಅತ್ಯುತ್ತಮ ಮನರಂಜನಾ ಚಿತ್ರಗಳನ್ನು ನೀಡುವ ಬದ್ಧತೆಯ ಮೇಲೆ ಇನ್ನಷ್ಟು ವಿಶ್ವಾಸವನ್ನು ಮೂಡಿಸಿದೆ. ಭಾವನೆಗಳು, ವಾಣಿಜ್ಯ ಅಂಶಗಳು ಹಾಗೂ ಪ್ರೇಕ್ಷಕರನ್ನು ತಟ್ಟುವ ಕಥನವನ್ನು ಸಮತೋಲನದಿಂದ ಕಟ್ಟಿಕೊಡುವ ಅವರ ಸಾಮರ್ಥ್ಯ ಅವರನ್ನು ವಿಶಿಷ್ಟ ನಿರ್ದೇಶಕರನ್ನಾಗಿ ಮಾಡುತ್ತದೆ ಎಂದು ನಿರ್ಮಾಪಕರು ಹೇಳಿದ್ದಾರೆ.
ಪಿಸಿ ಶೇಖರ್ ಈ ಸಿನಿಮಾದ ಕಥೆಯನ್ನು ಮೊದಲ ಬಾರಿ ನನಗೆ ವಿವರಿಸಿದ ಕ್ಷಣದಲ್ಲೇ ನಾನು ಅದರೊಳಗೆ ಸಂಪೂರ್ಣವಾಗಿ ತೊಡಗಿಸಿಕೊಂಡೆ. ಈ ಚಿತ್ರವನ್ನು ನಿರ್ಮಿಸಲು ನನ್ನನ್ನು ಹೆಚ್ಚು ಪ್ರೇರೇಪಿಸಿದ ಅಂಶವೆಂದರೆ ಇದರ ಪ್ರಮುಖ ಪಾತ್ರ. ಕಥೆ ಕೇಳುವ ಪ್ರತಿಯೊಂದು ಹಂತದಲ್ಲೂ ನನ್ನ ಮನಸ್ಸಿನಲ್ಲಿ ಮೂಡಿದ ಏಕೈಕ ಕಲಾವಿದ ಡಾರ್ಲಿಂಗ್ ಕೃಷ್ಣ. ಅವರ ಸಹಜ ಅಭಿನಯ, ಆಕರ್ಷಕ ವ್ಯಕ್ತಿತ್ವ, ಅತ್ಯುತ್ತಮ ಕಾಮಿಡಿ ಟೈಮಿಂಗ್, ಭಾವನಾತ್ಮಕ ಪಾತ್ರಗಳನ್ನು ಜೀವಂತಗೊಳಿಸುವ ಸಾಮರ್ಥ್ಯ ಈ ಪಾತ್ರಕ್ಕೆ ಅವರನ್ನು ಅತ್ಯಂತ ಸೂಕ್ತರನ್ನಾಗಿ ಮಾಡಿದೆ. ಈ ಸಿನಿಮಾ ಅವರ ನಟನಾ ಜೀವನದಲ್ಲಿ ಮತ್ತೊಂದು ವಿಭಿನ್ನ ಹಾಗೂ ಸ್ಮರಣೀಯ ಅಧ್ಯಾಯವಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ನಿರ್ಮಾಪಕ ಪ್ರಕಾಶ್ ಬೂದೂರು ತಿಳಿಸಿದ್ದಾರೆ.
ಪಿ.ಸಿ.ಶೇಖರ್ ಅವರು ಒಬ್ಬ ಉತ್ತಮ ನಿರ್ದೇಶಕ. "ಲವ್ ಬರ್ಡ್ಸ್" ಚಿತ್ರದ ನಂತರ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಇದೊಂದು ಹೊಸ ಜಾನರ್ ನ ಚಿತ್ರ. ಈ ಜಾನರ್ ನನಗೆ ಹಾಗೂ ನಿರ್ದೇಶಕರಿಗೆ ಇಬ್ಬರಿಗೂ ಹೊಸತು. ನಾನು ಈವರೆಗೂ ಮಾಡಿರದ ಪಾತ್ರ ಅಂತಲೂ ಹೇಳಬಹುದು. ಪ್ರೇಕ್ಷಕನಿಗೆ ಎರಡೂವರೆ ಗಂಟೆ ಕಾಲ ಪರಿಶುದ್ಧ ಮನೋರಂಜನೆ ನೀಡುವ ಚಿತ್ರವಿದು. ಇನ್ನೂ, ಪ್ರಕಾಶ್ ಬೂದೂರು ಅವರು ಸಹ ಕನ್ನಡ ಚಿತ್ರಗಳ ಮೇಲೆ ಅಪಾರ ಪ್ರೀತಿಯಿರುವ ನಿರ್ಮಾಪಕರು. ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಬಹಳ ಖುಷಿಯಾಗಿದೆ ಎಂದು ನಾಯಕ ಡಾರ್ಲಿಂಗ್ ಕೃಷ್ಣ ತಿಳಿಸಿದ್ದಾರೆ.
ಡಾರ್ಲಿಂಗ್ ಕೃಷ್ಣ ಅವರ ಜೊತೆಗೆ ಇದು ನನ್ನ ಎರಡನೇ ಸಿನಿಮಾ. "ಲವ್ ಬರ್ಡ್ಸ್" ನಂತರ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಚಿತ್ರವಿದು. ಕೃಷ್ಣ ಅವರು ನಿರ್ದೇಶಕರ ನಟ. ತಾವೇ ಒಬ್ಬ ನಿರ್ದೇಶಕರಾಗಿದರೂ ಸಹ ಅವರು ನಿರ್ದೇಶಕರ ನಟನಾಗಿಯೇ ನಟನೆ ಮಾಡುತ್ತಾರೆ. ಇದೊಂದು ಕಾಮಿಡಿ ಎಂಟರ್ಟೈನರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಒಂದು ಹೊಸ ಜಾನರ್ ನ ಚಿತ್ರವಿದು. ಈ ಜಾನರ್ ನನಗೆ ಹಾಗೂ ಕೃಷ್ಣ ಇಬ್ಬರಿಗೂ ಮೊದಲು. ನಿರ್ಮಾಪಕ ಪ್ರಕಾಶ್ ಬೂದೂರು ಅವರ ಜೊತೆಗೂ ಇದು ನನ್ನ ಎರಡನೇ ಸಿನಿಮಾ. ಅವರ ನಿರ್ಮಾಣ "ಮಹಾನ್" ಚಿತ್ರದ ನಂತರ ಈ ಸಿನಿಮಾವನ್ನು ನಿರ್ಮಿಸುತ್ತಿದ್ದೇನೆ. ಚಿತ್ರವನ್ನು ಬಹಳ ಪ್ರೀತಿಸುವ ನಿರ್ಮಾಪಕರು ಅವರು. ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಪ್ರಶಾಂತ್ ರಾಜಪ್ಪ ಅವರು ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ತಿಳಿಸುವುದಾಗಿ ನಿರ್ದೇಶಕ ಪಿ.ಸಿ.ಶೇಖರ್ ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.