2020 ಪಡೆದುಕೊಂಡಿದ್ದು, ಕಳೆದುಕೊಂಡಿದ್ದು; ಕವಿರಾಜ್, ಅದಿತಿ ಮಾತು!

By Kannadaprabha NewsFirst Published Dec 27, 2020, 9:09 AM IST
Highlights

ಕೆಲವು ರಸ್ತೆಗಳೇ ಹಾಗೆ. ಒಂದಷ್ಟು ದೂರದ ತನಕ ಸೊಗಸಾಗಿರುತ್ತವೆ. ನಂತರ ಹಳ್ಳದಿಣ್ಣೆಗಳು ಶುರುವಾಗುತ್ತವೆ. 2020 ಕತೆಯೂ ಅದೇ. ಇಂಥ ಹೊತ್ತಲ್ಲಿ ಪಡೆಕೊಂಡದ್ದು ಎನು, ಕಳೆಕೊಂಡದ್ದು ಎಷ್ಟು ಅನ್ನುವುದನ್ನು ಹೇಳಿ ಅಂತ ಅನೇಕರನ್ನು ಕೇಳಿದಾಗ ಮೂಡಿಬಂದ ಅಭಿಮಗತಳಿವು.

ಬದುಕು ಬಂದ ಹಾಗೆ ಸ್ವೀಕಾರ ಮಾಡಬೇಕು

ಈ ವರ್ಷ ಲಾಕ್‌ಡೌನ್‌ ಕಾರಣದಿಂದ ಹೆಚ್ಚು ಸಮಯ ಸಿಕ್ಕಿತು. ಇದರಿಂದ ನನ್ನನ್ನು ನಾನು ಕಂಡುಕೊಳ್ಳುವುದಕ್ಕೆ ಅವಕಾಶ ದೊರೆಯಿತು. ಇದಕ್ಕಿಂತ ಹೆಚ್ಚಾಗಿ ನನ್ನೊಳಗೆ ಒಂದು ನಾನ್‌ ಸೀರಿಯಸ್‌ ಆಟಿಟ್ಯೂಡ್‌ ಬಿಲ್ಡ್‌ ಆಗುತ್ತಾ ಹೋಯಿತು. ಮುಂದಕ್ಕೆ ಏನು ಎನ್ನುವ ಆಲೋಚನೆಗೆ ಅರ್ಥವಿಲ್ಲ ಎನ್ನಿಸಿತು. ಈಗ ಇರುವುದಷ್ಟೇ ಸತ್ಯ. ಬದುಕು ಬಂದ ಹಾಗೆ ಸ್ವೀಕಾರ ಮಾಡುತ್ತಾ ಹೋಗಬೇಕು ಎನ್ನುವ ಪಾಠ ತುಂಬಾ ಪ್ರಾಕ್ಟಿಕಲ್‌ ಆಗಿ ಕಲಿತಂತಾಯ್ತು. ಇದರ ಜೊತೆಗೆ ತುಂಬಾ ಕಾಮ್‌ ಆಗಿ ಇರುವುದನ್ನು ಕಲಿತುಕೊಂಡೆ.

ಇನ್ನು ಏನು ಕಳೆದುಕೊಂಡೆ ಎಂದು ನೋಡಿದರೆ ಮೊದಲು ಕಳೆದುಕೊಂಡಿದ್ದು ಸ್ವತಂತ್ರವನ್ನು. ನಾನು ಅಂದುಕೊಂಡಲ್ಲಿಗೆ ಹೋಗಲಾಗುತ್ತಿರಲಿಲ್ಲ. ಇದನ್ನು ಪಡೆದುಕೊಳ್ಳಬೇಕು ಎಂದು ಅನ್ನಿಸಿದರೂ ಅದೆಲ್ಲವೂ ಸುಲಭಕ್ಕೆ ದೊರೆಯದ ಸ್ಥಿತಿ ಇತ್ತು. ಸಿನಿಮಾ ಕೆಲಸಗಳು ನಿಂತವು. ಈ ವರ್ಷ ಮಾಡಿ ಮುಗಿಸಬೇಕು ಎಂದು ಅಂದುಕೊಂಡಿದ್ದ ಕೆಲಸ ಕಾರ್ಯಗಳು ತಮ್ಮಷ್ಟಕ್ಕೇ ಅರ್ಥ ಕಳೆದುಕೊಂಡು ಅವ್ಯಾವುವೂ ನೆರವೇರಲೇ ಇಲ್ಲ.

- ರಾಜ್‌ ಬಿ. ಶೆಟ್ಟಿ, ನಟ, ನಿರ್ದೇಶಕ

----------

ವಿಡಿಯೋ: 2020ರ ಹಾಟ್ ಸೆಲೆಬ್ರಿಟಿಗಳಲ್ಲಿ ಪೂನಂ ಬೆತ್ತಲೆ ಓಡಾಟ ಫಸ್ಟ್ 

ಕಳೆದುಕೊಂಡಿದ್ದು ಕಡಿಮೆ, ಪಡೆದುಕೊಂಡಿದ್ದು ಹೆಚ್ಚು

ಭೂಮಿ ಮೇಲೆ ಯಾವುದೂ ಶಾಶ್ವತ ಅಲ್ಲ ಎನ್ನುವ ಮಾತನ್ನು ಸಾಮಾನ್ಯವಾಗಿ ಎಲ್ಲರೂ ಹೇಳಿರುತ್ತಾರೆ, ಕೇಳಿರುತ್ತಾರೆ. ಆದರೆ ನನಗೆ ನಿಜವಾಗಿಯೂ ಈ ಪದದ ನೈಜ ಅರ್ಥ ತಿಳಿದದ್ದು ಈ ವರ್ಷದಲ್ಲಿ. ಪ್ರಾರಂಭದ ಮೂರು ತಿಂಗಳು ಬಿಟ್ಟರೆ ಇಡೀ ವರ್ಷವನ್ನು ಆವರಿಸಿಕೊಂಡಿರುವುದು ಕೊರೋನಾ. ಮೊದ ಮೊದಲು ಏನು ಆಗುತ್ತಿದೆ ಎನ್ನುವುದೇ ಸರಿಯಾಗಿ ಗೊತ್ತಾಗುತ್ತಿರಲಿಲ್ಲ. ಭಯ, ಆತಂಕವೇ ತುಂಬಿತ್ತು. ಆದರೆ ನಿಧಾನವಾಗಿ ಕೊರೋನಾ ಕೂಡ ಶಾಶ್ವತ ಅಲ್ಲ ಎನ್ನಿಸಿತು.

ಲಾಕ್‌ಡೌನ್‌ ವೇಳೆಯಲ್ಲಿ ನನ್ನ ಆಲೋಚನೆಗಳು ಹೆಚ್ಚಾದವು. ನನ್ನ ಬಗ್ಗೆ ನನಗೇ ಒಂದು ರೀತಿಯಲ್ಲಿ ಧೈರ್ಯ ಬಂತು. ಬದುಕು ನಾವು ಅಂದುಕೊಂಡಷ್ಟುಕಷ್ಟಇಲ್ಲ ಎನ್ನಿಸಲು ಶುರುವಾಯಿತು. ಒಂಟಿಯಾಗಿ ಇದ್ದೂ ಬದುಕಬಹುದು ಎನ್ನಿಸಿತು. ಎಲ್ಲೆಲ್ಲೋ ಕಳೆದು ಹೋಗುತ್ತಿದ್ದ ನನ್ನನ್ನು ನಾನು ಈ ವೇಳೆಯಲ್ಲಿ ಪಡೆದುಕೊಂಡೆ.

ಸಿನಿಮಾ ವಿಚಾರಕ್ಕೆ ಬಂದರೆ ಕೆಲವು ಅವಕಾಶಗಳು, ಸಿನಿಮಾಗಳನ್ನು ಕಳೆದುಕೊಂಡಿದ್ದೇನೆ. ಹಾಗೆಂದು ಅವೆಲ್ಲಾ ಬಿಟ್ಟೇ ಹೋಗಿವೆ ಎಂದಲ್ಲ. ಮುಂದೆ ಅದೇ ಅವಕಾಶಗಳು ಬರುತ್ತವೆ. ಇಡೀ ಕುಟುಂಬ ಒಟ್ಟಾಗಿ ಸೇರಿದ್ದೆವು. ಹಳೆಯ ಆಟಗಳನ್ನೆಲ್ಲಾ ಆಡಿದೆವು. ಇದೆಲ್ಲವನ್ನೂ ನೋಡುತ್ತಾ ಹೋದರೆ ನಾನು ಕಳೆದುಕೊಂಡದ್ದಕ್ಕಿಂತ ಪಡೆದುಕೊಂಡಿದ್ದೇ ಹೆಚ್ಚು.

- ಅದಿತಿ ಪ್ರಭುದೇವ, ನಟಿ

------

2020:75/365; ಥೇಟರುಗಳೇ ಗಟ್ಟಿ, ಓಟಿಟಿ ಬಿಟ್ಟಿ 

ಪ್ರಕೃತಿ ಮುಂದೆ ನಾವೇನೂ ಅಲ್ಲ

ನಾನು ಇಷ್ಟುಫ್ರೀಯಾಗಿ ಸಮಯವನ್ನು ಕಳೆದದ್ದು ಇದೇ ಮೊದಲು. ಇದೇ ವೇಳೆಯಲ್ಲಿ ತುಂಬಾ ಜನ ಸಿನಿಮಾದವರು, ಆಪ್ತರು ತೀರಿಕೊಂಡರು. ಇದೆಲ್ಲವೂ ನೋವಿನ ಸಂಗತಿಗಳು. ಸ್ವತಃ ನಾನೇ ಕೊರೋನಾ ಸೋಂಕಿಗೆ ತುತ್ತಾಗಿ 21 ದಿನಗಳ ಕಾಲ ಮನೆಯಲ್ಲಿಯೇ ಇದ್ದರೂ ಅವರಿಂದ ದೂರ ಇದ್ದೆ. ಇವೆಲ್ಲಾ ಕಳೆದುಕೊಂಡ ಅಂಶಗಳ ಪಟ್ಟಿಗೆ ಸೇರುತ್ತವೆ.

ಇಡೀ ವರ್ಷದಲ್ಲಿ ನಾನೇನು ಪಡೆದುಕೊಂಡೆ ಎಂದು ನೋಡಿದರೆ ಮುಖ್ಯವಾಗಿ ಕಾಣುವುದು ಜೀವನವನ್ನು ಹೊಸ ದೃಷ್ಟಿಯಿಂದ ನೋಡುವುದು. ಕೊರೋನಾ, ಲಾಕ್‌ಡೌನ್‌ಗೂ ಮೊದಲು ಯಾರಾದರೂ ಮುಂದೆ ಇಡೀ ವಿಶ್ವವೇ ಲಾಕ್‌ ಆಗುತ್ತದೆ, ಬದುಕು ಊಹೆ ಮಾಡದ ರೀತಿ ಬದಲಾಗುತ್ತದೆ ಎಂದಿದ್ದರೆ ನಾವು ಆ ವ್ಯಕ್ತಿಯನ್ನು ಹುಚ್ಚ ಎನ್ನುತ್ತಿದ್ದೆವು. ಆದರೆ ಅಂದುಕೊಳ್ಳಲು ಸಾಧ್ಯವೇ ಆಗದ ಘಟನೆಗಳು ನಡೆದವು. ಪ್ರಕೃತಿ ಮುಂದೆ ನಾವೇನೂ ಅಲ್ಲ ಎನ್ನುವುದು ಮತ್ತೊಮ್ಮೆ ಸಾಭೀತಾಯಿತು. ನಾಲ್ಕು ಮನೆ ಕಟ್ಟಿಸಿ ಬಾಡಿಗೆ ಬಿಟ್ಟರೆ ಮುಂದಿನ ಜೀವನಕ್ಕೆ ಭದ್ರತೆ ಇರುತ್ತದೆ, ಆಸ್ತಿ ಮಾಡು ಎಂದು ಹೇಳುವ ಮಾತುಗಳೆಲ್ಲಾ ಆಲೋಚನೆಗೆ ಒಡ್ಡುತ್ತಿದ್ದವು. ನಾವು ಅಂದುಕೊಳ್ಳುವುದೆಲ್ಲಾ ನಶ್ವರ ಎನ್ನಿಸಿದ ಕಾಲ ಇದು.

ಕವಿರಾಜ್‌, ಚಿತ್ರ ಸಾಹಿತಿ

------------

ಗೂಗಲ್, ಮೈಕ್ರೋಸಾಫ್ಟ್‌ ಜತೆ ಸ್ಪರ್ಧೆ, ಝೂಮ್‌ನಿಂದಲೂ ಇ-ಮೇಲ್ ಸೇವೆ? 

ನಮ್ಮವರೊಂದಿಗೆ ಹಬ್ಬ ಮಾಡಲು ಆಗಲಿಲ್ಲ

ಪ್ರತಿ ವರ್ಷ ನಮ್ಮ ಪ್ರೊಡಕ್ಷನ್‌ನ ಪ್ರತಿಯೊಬ್ಬ ಕಲಾವಿದರನ್ನೂ ಮನೆಗೆ ಕರೆದು ಎಲ್ಲಾ ಹಬ್ಬಗಳನ್ನೂ ಆಚರಿಸುತ್ತಿದ್ದೆ. ಅದೆಲ್ಲಕ್ಕೂ ಈ ವರ್ಷ ಬ್ರೇಕ್‌ ಬಿತ್ತು. ಮುಖ್ಯವಾಗಿ ನನಗೆ ಮಿಸ್‌ ಮಾಡಿಕೊಂಡೆ ಎನ್ನುವ ಸಂಗತಿ ಇದು. ಪ್ರತಿಯೊಂದು ಹಬ್ಬಕ್ಕೂ ಎಲ್ಲಾ ಕಲಾವಿದರು ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋಗುತ್ತಿದ್ದರು. ಆಗ ನನಗೆ ಸಿಗುತ್ತಿದ್ದ ಸಂತೋಷವೇ ಬೇರೆ. ನಾವು ಏನೇ ಗಳಿಸಿದರೂ ಎಲ್ಲರೂ ಸೇರಿ ಊಟ ಮಾಡುವಾಗ ಸಿಗುವ ಸಂತೋಷದ ಮುಂದೆ ಬೇರೆ ಏನೂ ಇಲ್ಲ ಎಂದು ಭಾವಿಸಿರುವವಳು ನಾನು. ಹಾಗಾಗಿ ಇದು ನಾನು ಕಳೆದುಕೊಂಡ, ಮಿಸ್‌ ಮಾಡಿಕೊಂಡ ದೊಡ್ಡ ಸಂಗತಿ.

ಹೇಳಿ ಕೇಳಿ ನಾನು ಅಡುಗೆ ಪ್ರಿಯೆ. ಹೊಸ ಹೊಸ ರೆಸಿಪಿ ಮಾಡುವುದು. ಇದೇ ವೇಳೆಯಲ್ಲಿ ನಾನು ಹೊರ ರಾಜ್ಯ, ಹೊರ ದೇಶಗಳ ರೆಸಿಪಿಗಳನ್ನು ನೋಡಿದೆ, ಅವುಗಳನ್ನು ಮನೆಯಲ್ಲಿಯೇ ಮಾಡಲು ಕಲಿತುಕೊಂಡೆ. ಹೊಸ ಹೊಸ ರುಚಿಗಳು ನನ್ನ ಕೈಯಲ್ಲಿ ತಯಾರಾದವು. ನಾವು ಏನೋ ಮಾಡುತ್ತೇವೆ ಎಂದು ಹಾರಾಡುತ್ತಿರುತ್ತೇವೆ. ಆದರೆ ಅದು ನಮ್ಮೊಬ್ಬರಿಂದ ಮಾತ್ರ ಸಾಧ್ಯವಿಲ್ಲ, ಇಡೀ ಜಗತ್ತು ನಮ್ಮೊಂದಿಗೆ ನಿಲ್ಲಬೇಕು ಎನ್ನುವ ಸತ್ಯ ಗೊತ್ತಾಯಿತು. ಸಾಮ್ರಾಜ್ಯ ಕಟ್ಟುತ್ತೇವೆ, ಆಳ್ವಿಕೆ ಮಾಡುತ್ತೇವೆ ಎಂದುಕೊಳ್ಳುವುದಕ್ಕೆ ಅರ್ಥವೇ ಇಲ್ಲ ಎನ್ನಿಸಿತು. ತುಂಬಾ ಹೈಪರ್‌ ಆಗಿದ್ದ ನಾನು ಈ ವೇಳೆಯಲ್ಲಿ ಕಾಮ್‌ ಆಗಿ ಇರುವುದನ್ನು ಕಲಿತುಕೊಂಡೆ.

ಶ್ರುತಿ ನಾಯ್ಡು, ನಟಿ, ನಿರ್ಮಾಪಕಿ

------

ನಮ್ಮ ಸಿನಿಮಾ ಗೆದ್ದಿರುವುದೇ ದೊಡ್ಡ ಗಳಿಕೆ

ಲಾಕ್‌ಡೌನ್‌, ಕೊರೋನಾ ಕಾರಣಕ್ಕೆ ಇಡೀ ಚಿತ್ರರಂಗವೇ ನಿಂತು ಹೋಗಿದೆ. ಯಾವುದೇ ಹೊಸ ಸಿನಿಮಾಗಳು ತೆರೆಗೆ ಬರುತ್ತವೆ ಎನ್ನುವ ಭರವಸೆಯೇ ಇಲ್ಲದ ಈ ವೇಳೆಯಲ್ಲಿ ನಮ್ಮ ಸಿನಿಮಾ ‘ಆಕ್ಟ್ 1978’ ಬಂತು. ಇದಕ್ಕೆ ಸಿಕ್ಕ ಪ್ರತಿಕ್ರಿಯೆ. ಜನ ಮೆಚ್ಚಿಕೊಂಡ ರೀತಿ, ಪಡೆದುಕೊಂಡ ಗೆಲುವು ನನಗೆ ಈ ವರ್ಷ ಸಿಕ್ಕ ದೊಡ್ಡ ಗಳಿಕೆ.

ವರ್ಷಕ್ಕೆ ಒಂದೋ ಎರಡೋ ಸಿನಿಮಾ ಮಾಡುವ ನನಗೆ ಮಾಡಿದ ಒಂದು ಸಿನಿಮಾ ಇಂತಹ ಕಾಲದಲ್ಲಿ ಭದ್ರವಾಗಿ ನಿಂತುಕೊಂಡಿತು ಎಂದರೆ ಅದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ಪ್ರೊಫೆಷನಲ್‌ ಆಗಿಯೂ ಪಡೆದುಕೊಂಡಿದ್ದು ತುಂಬಾ ಇದೆ.

ವಯಕ್ತಿಕವಾಗಿ ಈ ವರ್ಷ ನನ್ನ ತಂದೆಯನ್ನು ಕಳೆದುಕೊಂಡೆ. ಇದು ದೊಡ್ಡ ಲಾಸ್‌. ಇದರಾಚೆಗೆ ಹೆಚ್ಚಾಗಿ ಕಳೆದುಕೊಂಡಿದ್ದು ಏನೂ ಇಲ್ಲ. ಮದುವೆ ಆಗಿರುವ ನಾನು ನನ್ನ ಕುಟುಂಬದೊಂದಿಗೆ ನೆಮ್ಮದಿಯಾಗಿ ಇದ್ದೇನೆ.

- ಯಜ್ಞಾ ಶೆಟ್ಟಿ

---------

ಡಾಕ್ಟರ್‌ ಆಗಿ ಹೆಮ್ಮೆ ಪಟ್ಟದಿನಗಳಿವು

ವೃತ್ತಿಯಲ್ಲಿ ನಾನೊಬ್ಬ ವೈದ್ಯ. ಪ್ರವೃತ್ತಿಯಲ್ಲಿ ಸಂಗೀತ ನಿರ್ದೇಶಕ. ಈ ವರ್ಷ ಬಿಡುಗಡೆಗೆ ಸಿದ್ಧವಿದ್ದ ಮೂರು ಸಿನಿಮಾಗಳು ಬಿಡುಗಡೆಯಾಗಲಿಲ್ಲ, ಬರುತ್ತಿದ್ದ ಸಂಬಳದಲ್ಲಿ ಶೇ. 30ರಷ್ಟುಕಡಿತ ಆಯಿತು, ಕೋವಿಡ್‌ ಡ್ಯೂಟಿಯಲ್ಲಿ ತೊಡಗಿದ್ದ ಕಾರಣ ನನ್ನ ಪುಟ್ಟಮಕ್ಕಳು ಫ್ಯಾಮಿಲಿಯಿಂದ ದೂರವಿರಬೇಕಾದ ಅನಿವಾರ್ಯತೆ ಬಂದಿತು. ಒಬ್ಬಂಟಿಯಾಗಿ ದಿನಗಳನ್ನು ಕಳೆದೆ. ಇವೆಲ್ಲವೂ ನಾನು ಕಳೆದುಕೊಂಡದರ ಲೆಕ್ಕ.

ಇನ್ನು ಒಂದು ಕೈ ಮೇಲಾಗಿಯೇ ಸಾಕಷ್ಟನ್ನು ಪಡೆದುಕೊಂಡಿದ್ದೇನೆ. ಸಾಕಷ್ಟುಸಮಯ ಸಿಕ್ಕಿದ್ದರಿಂದ ಹೊಸ ಹೊಸ ಟ್ಯೂನ್‌ಗಳನ್ನು ಕಂಪೋಸ್‌ ಮಾಡಿದೆ. ಸಿದ್ಧವಿದ್ದ ಹಾಡುಗಳನ್ನು ಮತ್ತಷ್ಟುಫೈನ್‌ ಟ್ಯೂನ್‌ ಮಾಡಿದೆ. ಇದಕ್ಕಿಂತ ಹೆಚ್ಚಾಗಿ ಒಬ್ಬ ವೈದ್ಯನಾಗಿ ಹೆಮ್ಮೆ ಪಟ್ಟುಕೊಂಡ ದಿನಗಳು ಇವು. ಕೋವಿಡ್‌ ಡ್ಯೂಟಿ ಮಾಡಿದ್ದು ನನ್ನ ಪಾಲಿನ ಭಾಗ್ಯ. ನನ್ನ ಮನಸ್ಸಿಗೆ ತೃಪ್ತಿ ಆಗುವ ಹಾಗೆ ಸೋಂಕಿತರ ಆರೈಕೆ ಮಾಡಿದ್ದೇನೆ. ಭಯಕ್ಕೆ ತುತ್ತಾಗಿದ್ದವರಿಗೆ ಧೈರ್ಯ ತುಂಬಿದ್ದೇನೆ. ಮಾನಸಿಕವಾಗಿ ಅವರನ್ನು ಗಟ್ಟಿಮಾಡುತ್ತಾ ಬಂದಿದ್ದೇನೆ. ಇದು ನನಗೆ ಸಿಕ್ಕ ದೊಡ್ಡ ಸಂತೋಷ. ಇನ್ನು ಜಾಗತಿಕವಾಗಿಯೂ ನಮ್ಮ ವೈದ್ಯ ವೃಂದ ದೊಡ್ಡ ಗೌರವ ಪಡೆದುಕೊಂಡಿದೆ.

- ಡಾ. ಕಿರಣ್‌, ವೈದ್ಯರು, ಸಂಗೀತ ನಿರ್ದೇಶಕ

click me!