
ಅಂಬುಜ ಚಿತ್ರದಲ್ಲಿ ಅವರು ಅವರ ಪಾತ್ರದ ಔಟ್ ಲುಕ್ಕು ಹೇಗಿರುತ್ತದೆ ಎಂಬುದರ ಸ್ಯಾಂಪಲ್‌ಗಳು ಇಲ್ಲಿರುವ ಫೋಟೋಗಳು. ನಿರ್ದೇಶಕ ಶ್ರೀನಿ ಹನುಮಂತರಾಜು ಅವರು ಶುಭಾ ಪೂಂಜಾ ಪಾತ್ರದ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕೂಡ ನಟಿ ಶುಭಾ ಪೂಂಜಾ ಅವರೇ. ಇವರ ಜತೆಗೆ ಪದ್ಮಜಾರಾವ್, ಕಾಮಿಡಿಕಿಲಾಡಿ ಗೋವಿಂದೇಗೌಡ, ಕಾಮಿಡಿಕಿಲಾಡಿ ನಿರ್ದೇಶಕ ಶರಣಯ್ಯ, ಸಂದೇಶ್ ಶೆಟ್ಟಿ ಅಜ್ರಿ, ಮಜಾಭಾರತದ ಪ್ರಿಯಾಂಕ ಕಾಮತ್, ಬೇಬಿ ಆಕಾಂಕ್ಷ ಮುಂತಾದವರು ನಟಿಸುತ್ತಿದ್ದಾರೆ.
ಸಮಾಜದಲ್ಲಾಗುವ ಅವಘಡಗಳು ಹೇಗೆ ಸಾಮಾನ್ಯ ಜನರ ಬದುಕನ್ನ ಹಾಳು ಮಾಡುತ್ತವೆ. ಹಾಗೆ ಅವರು ಅನುಭವಿಸುವ ತೊಂದರೆಗಳೇನು, ಅವರ ಅಸಹಾಯಕತೆಯನ್ನು ಸಮಾಜ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಜ್ಞಾನ, ವಿಜ್ಞಾನ-ಅಜ್ಙಾನಗಳ ಒಟ್ಟು ಚಿತ್ರಣವೇ ‘ಅಂಬುಜ’ ಚಿತ್ರದ ಕತೆಯಂತೆ. ‘ಇದೊಂದು ಮಹಿಳಾ ಪ್ರಧಾನ ಹಾಗೂ ನೈಜ ಘಟನೆಯಾಧಾರಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ಬರುವ ಲಂಬಾಣಿ ಪಾತ್ರದ ವಸ್ತ್ರ ಹಾಗೂ ಆಭರಣಗಳನ್ನು ಗದಗ ಜಿಲ್ಲೆಯ ಒಂದು ಲಂಬಾಣಿ ತಾಂಡಾದಲ್ಲಿ ಸುಮಾರು 4ತಿಂಗಳು ಸಮಯ ತೆಗೆದುಕೊಂಡು ತಯಾರಿಸಲಾಗಿದೆ. ಇದರ ತೂಕ ಬರೋಬ್ಬರಿ 20 ಕೆಜಿ. ಇಷ್ಟನ್ನೂ ಧರಿಸಿ ಶುಭಾ ಪೂಂಜಾ ನಟಿಸಿದ್ದಾರೆ. ಇದು ಚಿತ್ರದ ಹೈಲೈಟ್. ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು ಅಕ್ಟೋಬರ್ ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಬೆಂಗಳೂರು, ಗದಗ, ಹಾಗೂ ಚಿಕ್ಕಮಂಗಳೂರಿನಲ್ಲಿ ಒಂದೇ ಹಂತದಲ್ಲಿ ನಡೆಯಲಿದೆ’ ಎನ್ನುತ್ತಾರೆ ನಿರ್ದೇಶಕ ಶ್ರೀನಿ ಹನುಮಂತರಾಜು ಅವರು.
ಈ ಹಿಂದೆ ‘ಕೆಲವು ದಿನಗಳ ನಂತರ’ ಎನ್ನುವ ಚಿತ್ರ ನಿರ್ದೇಶನ ಮಾಡಿ ಗಮನ ಸೆಳೆದ ಶ್ರೀನಿ, ಈ ಬಾರಿ ನೈಜ ಘಟನೆಯ ಮೊರೆ ಹೋಗಿದ್ದಾರೆ. ಚಿತ್ರಕ್ಕೆ ಕಾಶೀನಾಥ್ ಮಡಿವಾಳರ್ ಅವರು ಕಥೆಯನ್ನು ಬರೆಯುವ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಮುರಳೀಧರ್ ಕ್ಯಾಮೆರಾ ಹಾಗೂ ಸಂಗೀತವನ್ನು ಪ್ರಸನ್ನ ಕುಮಾರ್ ಸಂಯೋಜನೆ ಮಾಡಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.