'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಬಳಿಕ ಎಲ್ಲೋಗಿದ್ರಿ? ಇಂಟ್ರಸ್ಟಿಂಗ್ ವಿಚಾರ ಬಿಚ್ಚಿಟ್ಟ 'ತನುಜಾ' ನಟಿ ಸಪ್ತಾ

By Kannadaprabha News  |  First Published Jan 30, 2023, 12:07 PM IST

ನೈಜ ಘಟನೆ ಆಧರಿಸಿದ ‘ತನುಜಾ’ ಫೆಬ್ರವರಿ 3ಕ್ಕೆ ತೆರೆಗೆ ಬರುತ್ತಿದೆ. ರಿಷಬ್‌ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ಪಲ್ಲವಿ ಪಾತ್ರದಲ್ಲಿ ನಟಿಸಿದ್ದ ಸಪ್ತಾ ಪಾವೂರ್‌ ಇಲ್ಲಿ ತನುಜಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ನಟಿಯ ಮಾತುಗಳು ಇಲ್ಲಿವೆ.


ತನುಜಾ ಚಿತ್ರದ ನಾಯಕಿ ಸಪ್ತಾ ಪಾವೂರ್‌ ಸಂದರ್ಶನ 

ನೈಜ ಘಟನೆ ಆಧರಿಸಿದ ‘ತನುಜಾ’ ಫೆಬ್ರವರಿ 3ಕ್ಕೆ ತೆರೆಗೆ ಬರುತ್ತಿದೆ. ರಿಷಬ್‌ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ಪಲ್ಲವಿ ಪಾತ್ರದಲ್ಲಿ ನಟಿಸಿದ್ದ ಸಪ್ತಾ ಪಾವೂರ್‌ ಇಲ್ಲಿ ತನುಜಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ನಟಿಯ ಮಾತುಗಳು ಇಲ್ಲಿವೆ.

Tap to resize

Latest Videos

undefined

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ನಂತರ ನಾಪತ್ತೆ ಆದ್ರಲ್ಲ?

ಈ ಚಿತ್ರದಲ್ಲಿ ನಟಿಸುವಾಗ ನಾನು 6ನೇ ತರಗತಿ ಓದುತ್ತಿದ್ದೆ. ಆಕಸ್ಮಿಕವಾಗಿ ರಿಷಬ್‌ ಶೆಟ್ಟಿಅವರ ಸಿನಿಮಾಗೆ ಕನೆಕ್ಟ್ ಆಗಿ ಪಲ್ಲವಿ ಪಾತ್ರದಲ್ಲಿ ನಟಿಸಿದೆ. ಆ ಮೇಲೆ ಸ್ಟಡಿಗಾಗಿ ಎರಡು ವರ್ಷ ಬ್ರೇಕ್‌ ತೆಗೆದುಕೊಳ್ಳಬೇಕಾಯಿತು.

ಎರಡು ವರ್ಷಗಳ ನಂತರ ಬಂದಾಗ ಮಾಡಿದ ಚಿತ್ರ ಯಾವುದು?

ಶಿವಣ್ಣ ನಟನೆಯ ‘ಬೈರಾಗಿ’ ಸಿನಿಮಾ. ನನ್ನ ಪಾತ್ರದ ಮೂಲಕವೇ ಕತೆಗೆ ಹೊಸ ತಿರುವು ಸಿಗುತ್ತದೆ. ಸ್ಟಾರ್‌ ಹೀರೋ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ‘ಬೈರಾಗಿ’ ಸಿನಿಮಾ ನಂತರ ಒಪ್ಪಿಕೊಂಡಿದ್ದೇ ‘ತನುಜಾ’ ಸಿನಿಮಾ.

ಸರ್ಕಾರಿ ಶಾಲೆಗೂ ಮೊದಲೇ ಬೇರೆ ಚಿತ್ರಗಳಲ್ಲಿ ನಟಿಸಿದ್ದೀರಲ್ಲವೇ?

ಹೌದು. ವಿಜಯ್‌ ರಾಘವೇಂದ್ರ ಅವರ ‘ಚೆಲ್ಲಾಪಿಲ್ಲಿ’ ಹಾಗೂ ತುಳು ಭಾಷೆಯ ‘ರಿಕ್ಷಾ ಡ್ರೈವರ್‌’, ‘ದ್ವೈತ’ ಚಿತ್ರಗಳಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದೆ. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದ ಪಲ್ಲವಿ ಪಾತ್ರ ನನಗೆ ಜನಪ್ರಿಯತೆ ತಂದು ಕೊಟ್ಟಿತು.

ನೀವು ‘ತನುಜಾ’ ಚಿತ್ರಕ್ಕೆ ಪ್ರಮುಖ್ಯ ಪಾತ್ರ ಆಗಿದ್ದು ಹೇಗೆ?

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ನಾನು ಮಾಡಿದ ಪಲ್ಲವಿ ಪಾತ್ರ ಇಷ್ಟವಾಗಿ ನಿರ್ದೇಶಕ ಹರೀಶ್‌ ಎಂ ಡಿ ಹಳ್ಳಿ ಅವರು ನನ್ನ ಭೇಟಿ ಮಾಡಿ ಕತೆ ಹೇಳಿದರು. ಕತೆ ಇಷ್ಟವಾಗಿ ನಾನು ಒಪ್ಪಿಕೊಂಡೆ.

ಈ ಚಿತ್ರದ ಕತೆ ಇಷ್ಟವಾಗಿದ್ದು ಯಾಕೆ?

ನಾನೂ ಕೂಡ ವಿದ್ಯಾರ್ಥಿಯೇ. ಈಗ ಕಾಲೇಜಿಗೆ ಹೋಗುತ್ತಿದ್ದೇನೆ. ನೈಜ ಘಟನೆ ಆಗಿದ್ದರಿಂದ ಆ ಬಗ್ಗೆ ನನಗೆ ಮಾಹಿತಿ ಇತ್ತು. ಒಬ್ಬ ವಿದ್ಯಾರ್ಥಿನಿಯ ಸಂಕಷ್ಟವಿದ್ಯಾರ್ಥಿಯಾಗಿ ನನಗೇ ಬೇಗ ಹತ್ತಿರವಾಯಿತು. ಇಂಥ ಚಿತ್ರದಲ್ಲಿ ನಟಿಸಬೇಕು ಅನಿಸಿತು.

ತನುಜಾ ಪಾತ್ರಕ್ಕೆ ನೀವು ಏನೆಲ್ಲ ತಯಾರಿ ಮಾಡಿಕೊಂಡ್ರಿ?

ನಾನು ರಿಯಲ್‌ ತನುಜಾ ಅವರನ್ನು ಭೇಟಿ ಮಾಡಕ್ಕೆ ಹೋಗಿದ್ದೆ. ಆದರೆ, ಸಾಧ್ಯವಾಗಲಿಲ್ಲ. ಅವರ ತಾಯಿಯನ್ನು ಭೇಟಿ ತನುಜಾ ಬಗ್ಗೆ ಮಾಹಿತಿ ತಿಳಿದುಕೊಂಡೆ. ಓದಿನ ಜತೆಗೆ ಅವರ ಆಸಕ್ತಿಗಳೇನು, ಓದಿನಲ್ಲಿ ಹೇಗಿದ್ದರು ಎಂದು ಕೇಳಿ ತಿಳಿದುಕೊಂಡೆ. ಜತೆಗೆ ನಿರ್ದೇಶಕ ಹರೀಶ್‌ ಎಂ ಡಿ ಹಳ್ಳಿ ಅವರು ತರಬೇತಿ ನೀಡಿದರು.

ಯಾರಿಗೆ ಈ ಸಿನಿಮಾ ಬೇಗ ಕನೆಕ್ಟ್ ಆಗುತ್ತದೆ?

ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ತನುಜಾ ಸಿನಿಮಾ ಕತೆ ಬಹುಬೇಗ ಕನೆಕ್ಟ್ ಆಗುತ್ತದೆ. ಯಾಕೆಂದರೆ ಓದಿನ ಸಂಕಷ್ಟಗಳು, ಆಸಕ್ತಿಗಳು, ಮಕ್ಕಳನ್ನು ಓದಿಸುವ ಕಷ್ಟಗಳು ಯಾರಿಗೆಲ್ಲ ಗೊತ್ತಿದಿಯೋ ಅಷ್ಟೂಮಂದಿಗೆ ಈ ಸಿನಿಮಾ ಮೆಚ್ಚಿಗೆ ಆಗುತ್ತದೆ. ಫೆ.3ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಟ್ರೇಲರ್‌ ನೋಡಿ ಮೆಚ್ಚಿಕೊಂಡವರು, ಸಿನಿಮಾ ಕೂಡ ನೋಡಿ ಗೆಲ್ಲಿಸುತ್ತಾರೆಂಬ ನಂಬಿಕೆ ಇದೆ.

ಬೇರೆ ಚಿತ್ರಗಳನ್ನು ಒಪ್ಪಿಕೊಂಡಿದ್ದೀರಾ?

ಸದ್ಯಕ್ಕೆ ಯಾವುದೇ ಸಿನಿಮಾ ಮಾಡುತ್ತಿಲ್ಲ. ‘ತನುಜಾ’ ಬಿಡುಗಡೆ ಆದ ಮೇಲೆ ಮಾಡುತ್ತೇನೆ. ಜತೆಗೆ ನಾನು ಮಂಗಳೂರಿನ ಕಾಲೇಜಿನಲ್ಲಿ ಪಿಸಿಎಂಬಿ ಓದುತ್ತಿದ್ದೇನೆ. ಓದಿನ ಜತೆಗೆ ಸಿನಿಮಾ. ಹೀಗಾಗಿ ಹೆಚ್ಚು ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ.

ಯಾವ ರೀತಿಯ ಪಾತ್ರಗಳನ್ನು ನಿರೀಕ್ಷೆ ಮಾಡುತ್ತಿದ್ದೀರಿ?

ಅಂಥ ಷರತ್ತುಗಳೇನು ಇಲ್ಲ. ನನ್ನ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಚಿತ್ರರಂಗದಲ್ಲಿ ನಾನು ಮುಂದುವರಿಯಬೇಕು. ಆ ನಿಟ್ಟಿನಲ್ಲಿ ನನಗೆ ಸೂಕ್ತ ಎನಿಸುವ ಯಾವ ಪಾತ್ರ ಮಾಡುವುದಕ್ಕೂ ನಾನು ರೆಡಿ.

click me!