
ಬೆಂಗಳೂರು (ಆ.17) ನಟ ದರ್ಶನ್ ಮತ್ತೆ ಜೈಲು ಸೇರಿದ ಬಳಿಕ ಪರ ವಿರೋಧಗಳು, ಅಭಿಮಾನಿಗಳ ಆಕ್ರೋಶಗಳು ಸೋಶಿಯಲ್ ಮೀಡಿಯಾ ಮೂಲಕ ನಡೆಯುತ್ತಿದೆ.ಇದರ ನಡುವೆ ದರ್ಶನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿದ್ದ ನಟಿ ರಮ್ಯಾ, ಕಷ್ಟಪಟ್ಟು ಮೇಲೆ ಬಂದ ನಟನೊಬ್ಬ ಈ ರೀತಿ ಆಗಿರುವುದು ನೋವುಂಟು ಮಾಡಿದೆ ಎಂದಿದ್ದರು. ಇದೀಗ ನಟಿ ರಮ್ಯಾ ಮಹತ್ವದ ಹೇಳಿಕೆ ನೀಡಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡೆಯನ್ನು ನಟಿ ರಮ್ಯಾ ಸ್ವಾಗತಿಸಿದ್ದಾರೆ. ಪ್ರಮುಖವಾಗಿ ದರ್ಶನ್ ಸೋಶಿಯಲ್ ಮೀಡಿಯಾವನ್ನು ಪತ್ನಿ ವಿಜಯಲಕ್ಷ್ಮಿ ನಿರ್ವಹಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದಿದ್ದಾರೆ. ಇದೇ ವೇಳೆ ದರ್ಶನ್ ಅಭಿಮಾನಿಗಳಿಗೆ ಉತ್ತಮ ಸಂದೇಶ ನೀಡಬಹುದು ಎಂದಿದ್ದಾರೆ.
ನಟಿ ರಮ್ಯಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಪ್ರಕರಣ ಕುರಿತು ಇತ್ತೀಚೆಗೆ ಪೋಸ್ಟ್ ಮಾಡಿ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು. ಅಭಿಮಾನಿಗಳಿಂದ ಕೆಟ್ಟ ಕಮೆಂಟ್, ಬೆದರಿಕೆ ವ್ಯಕ್ತವಾದ ಹಿನ್ನಲೆಯಲ್ಲಿ ದೂರು ದಾಖಲಿಸಿದ್ದರು. ಈ ಎಲ್ಲಾ ಬೆಳವಣಿಗೆ ಬಳಿಕ ಇದೀಗ ದರ್ಶನ್ ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಉತ್ತಮ ಸಂದೇಶ ರವಾನಿಸಬಹುದು. ಓರ್ವ ಹೆಣ್ಣಾಗಿ ವಿಜಯಲಕ್ಷ್ಮಿ ಸೂಕ್ಷ್ಮತೆ ಅರಿತು ನಟ ದರ್ಶನ್ ಸೋಶಿಯಲ್ ಮೀಡಿಯಾವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬಹುದು ಎಂದು ನಟಿ ರಮ್ಯಾ ಹೇಳಿದ್ದಾರೆ. ಸದ್ಯ ದರ್ಶನ್ ಸೋಶಿಯಲ್ ಮೀಡಿಯಾವನ್ನು ಪತ್ನಿ ವಿಜಯಲಕ್ಷ್ಮಿ ಸಮಪರ್ಕ ರೀತಿಯಲ್ಲಿ ಬಳಸಿಕೊಂಡು ದರ್ಶನ್ ಅಭಿಮಾನಿಗಳ ಅತಿರೇಖದ ವರ್ತನೆಗೆ ಬ್ರೇಕ್ ಹಾಕಲು ಸಾಧ್ಯವಿದೆ ಎಂದು ನಟಿ ರಮ್ಯಾ ಪರೋಕ್ಷವಾಗಿ ಸೂಚನೆ ನೀಡಿದ್ದಾರೆ.
ನಟ ದರ್ಶನ್ ಕುರಿತು ನಟಿ ರಮ್ಯಾ ಮಾತನಾಡಿದ್ದಾರೆ. ದರ್ಶನ್ ಓರ್ವ ಲೈಟ್ ಬಾಯ್ ಆಗಿ ಬಂದು ಸಿನಿಮಾ ಕ್ಷೇತ್ರದಲ್ಲಿ ಬೆಳೆದಿದ್ದಾರೆ. ದರ್ಶನ್ ಸಿನಿ ಪಯಣ ಅತ್ಯಂತ ಕಠಿಣವಾಗಿತ್ತು. ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾರೆ. ಆದರೆ ಕೆಲ ನಿರ್ಧಾರಗಳಿಂದ ಜೀವನ ಹಾಳು ಮಾಡಿಕೊಂಡರು. ಹೀಗೆ ಆಗದಿದ್ದರೆ, ದರ್ಶನ್ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರು ಎಂದು ನಟಿ ರಮ್ಯಾ ಹೇಳಿದ್ದಾರೆ. ಇದೇ ವೇಳೆ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ನಟಿ ರಮ್ಯಾ ಹೇಳಿದ್ದಾರೆ.
ದರ್ಶನ್ ಅಭಿಮಾನಿಗಳಿಂದ ಬಂದ ಕೆಟ್ಟ ಕಮೆಂಟ್, ಬೆದರಿಕೆ ಕುರಿತು ದಾಖಲಾದ ದೂರಿನ ಬೆನ್ನಲ್ಲೇ ಹಲವರು ಅರೆಸ್ಟ್ ಆಗಿದ್ದಾರೆ. ಇನ್ನು ಕೆಲವರು ಫೋನ್ ಸ್ವಿಚ್ ಮಾಡಿದ್ದಾರೆ. ಒಂದಷ್ಟು ಮಂದಿ ಮನೆ, ಊರು ಬಿಟ್ಟಿದ್ದಾರೆ. ಹೀಗಾಗಿ ಸದ್ಯ ಕೆಟ್ಟ ಕಮೆಂಟ್, ಬೆದರಿಕೆಗಳು ಬರುತ್ತಿಲ್ಲ ಎಂದು ನಟಿ ರಮ್ಯಾ ಹೇಳಿದ್ದಾರೆ.
ನಟಿ ರಮ್ಯಾ ನೀಡಿದ್ದ ದೂರಿನ ಬಳಿಕ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ. ಕೆಟ್ಟ ಕಮೆಂಟ್ ಮಾಡುವುದು ಸೇರಿದಂತೆ ಹಲವು ನಿಯಮ ಉಲ್ಲಂಘನೆ ಮಾಡಿದವರ ವಿರುದ್ದ ಪೊಲೀಸರು ಹದ್ದಿನ ಕಣ್ಮಿಟ್ಟಿದ್ದಾರೆ. ಈಗಾಗಲೇ ಕೆಲವರನ್ನು ಬಂಧಿಸಿದ್ದಾರೆ. ಮತ್ತೆ ಕೆಲವರ ಲಿಸ್ಟ್ ರೆಡಿ ಮಾಡಿದ್ದಾರೆ. ಆದರೆ ಕೆಟ್ಟ ಕಮೆಂಟ್ ಮಾಡಿದ ಅಭಿಮಾನಿಗಳು ತಲೆಮರೆಸಿಕೊಂಡಿದ್ದಾರೆ.ಫೋನ್ ಸ್ವಿಚ್ ಆಫ್ ಮಾಡಿ, ಇದೀಗ ಕಮೆಂಟ್ ಮಾತ್ರವಲ್ಲ, ಸೋಶಿಯಲ್ ಮೀಡಿಯಾದಲ್ಲಿ ಏನಾಗುತ್ತಿದೆ ಅನ್ನೋದು ನೋಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.
ನಟ ದರ್ಶನ್ ಆರೋಗ್ಯ ಕಾರಣ ನೀಡಿದ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದರು. ದರ್ಶನ್ ಜಾಮೀನು ವಿರುದ್ಧ ತನಿಖಾಧಿಕಾರಿಗಳ ತಂಡ ಸುಪ್ರೀಂ ಕೋರ್ಟ್ ಮೆಟ್ಟೇಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ದರ್ಶನ್ , ಪವಿತ್ರಾ ಗೌಡ ಸೇರಿದಂತೆ ರೇಣುಕಾಸ್ವಾಮಿಕೊಲೆ ಆರೋಪಿಗಳ ಜಾಮೀನು ರದ್ದುಗೊಳಿಸಿತ್ತು. ಹೀಗಾಗಿ ಪೊಲೀಸರು ಮತ್ತೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.