
ಜೀ ಕನ್ನಡಕ್ಕೆ ರಕ್ಷಿತಾ ಪ್ರೇಮ್ ಬೈ ಬೈ ಹೇಳಿದ್ದೇಕೆ? ಮೌನ ಮುರಿದ 'ಕ್ರೇಜಿ ಕ್ವೀನ್': ಒಳಗಿನ ಗುಟ್ಟು ಬಿಚ್ಚಿಟ್ಟ ರಕ್ಷಿತಾ!
ಕನ್ನಡ ಕಿರುತೆರೆಯ ಇತಿಹಾಸದಲ್ಲಿ 'ಜೀ ಕನ್ನಡ' ವಾಹಿನಿ ಮತ್ತು ನಟಿ ರಕ್ಷಿತಾ ಪ್ರೇಮ್ (Rakshitha Prem) ನಡುವಿನ ನಂಟು ಬಹಳ ದೊಡ್ಡದು. ಕಳೆದ ಒಂಬತ್ತು ವರ್ಷಗಳಿಂದ 'ಕಾಮಿಡಿ ಕಿಲಾಡಿಗಳು' ಮತ್ತು 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಅಂತಹ ಸೂಪರ್ ಹಿಟ್ ರಿಯಾಲಿಟಿ ಶೋಗಳ ಜಡ್ಜ್ ಸೀಟಿನಲ್ಲಿ ಕುಳಿತು, ತಮ್ಮದೇ ಆದ ಮ್ಯಾನರಿಸಂ ಮೂಲಕ ಮನೆಮಾತಾಗಿದ್ದವರು ರಕ್ಷಿತಾ.
ಆದರೆ, ಕಳೆದ ವರ್ಷ ಅವರು ಇದ್ದಕ್ಕಿದ್ದಂತೆ ವಾಹಿನಿಯಿಂದ ಹೊರಬಂದಾಗ ಅಭಿಮಾನಿಗಳಿಗೆ ಅಕ್ಷರಶಃ ಶಾಕ್ ಆಗಿತ್ತು. "ನಮ್ಮ ನೆಚ್ಚಿನ ಜಡ್ಜ್ ರಕ್ಷಿತಾ ಮ್ಯಾಮ್ ಎಲ್ಲಿ ಹೋದ್ರು?" ಅನ್ನೋ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇತ್ತು. ಈಗ ಆ ಎಲ್ಲಾ ಕುತೂಹಲಗಳಿಗೆ ಸ್ವತಃ ರಕ್ಷಿತಾ ಅವರೇ ನೇರ ಹಾಗೂ ದಿಟ್ಟ ಉತ್ತರ ನೀಡಿದ್ದಾರೆ!
ಸೋಷಿಯಲ್ ಮೀಡಿಯಾದಲ್ಲಿ 'ಬಾಂಬ್' ಸಿಡಿಸಿದ ರಕ್ಷಿತಾ!
ಸದಾ ಸಕ್ರಿಯವಾಗಿರುವ ರಕ್ಷಿತಾ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳೊಂದಿಗೆ 'ಪ್ರಶ್ನೋತ್ತರ' (Ask Me Anything) ಸಂವಾದ ನಡೆಸಿದರು. ಈ ವೇಳೆ ಅಭಿಮಾನಿಯೊಬ್ಬರು ತಡೆಯಲಾರದೆ, "ನೀವು ಜೀ ಕನ್ನಡ ಯಾಕೆ ಬಿಟ್ಟಿರಿ? ನಿಮ್ಮನ್ನು ಅಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದೇವೆ" ಎಂದು ಕೇಳಿಯೇ ಬಿಟ್ಟರು. ಸದಾ ನೇರ ನುಡಿಗೆ ಹೆಸರಾದ ರಕ್ಷಿತಾ, ಈ ಬಾರಿ ಯಾವುದೇ ಮುಚ್ಚುಮರೆಯಿಲ್ಲದೆ ಅಸಲಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ರಕ್ಷಿತಾ, "ನನ್ನ ಉತ್ತರ ಯಾವಾಗಲೂ ಸತ್ಯವೇ ಆಗಿರುತ್ತದೆ. ಜೀ ಕನ್ನಡ ವಾಹಿನಿಯ ಆಂತರಿಕ ತಂಡದಲ್ಲಿ (Internal Team) ಕೆಲವು ಬದಲಾವಣೆಗಳಾದವು. ದುರದೃಷ್ಟವಶಾತ್ ಆ ಹೊಸ ತಂಡದ ಜೊತೆ ಕೆಲಸ ಮಾಡಲು ನನಗೆ ಅಷ್ಟಾಗಿ ಹೊಂದಾಣಿಕೆಯಾಗಲಿಲ್ಲ. ಹೊಸಬರ ಕಾರ್ಯವೈಖರಿ ನನಗೆ ಸಮಸ್ಯೆಯಾಗಿ ಪರಿಣಮಿಸಿತು, ಹಾಗಾಗಿ ನಾನು ಅಲ್ಲಿಂದ ಹೊರಬರಲು ನಿರ್ಧರಿಸಿದೆ" ಎಂದಿದ್ದಾರೆ.
ಇಷ್ಟಕ್ಕೇ ನಿಲ್ಲಿಸದ ರಕ್ಷಿತಾ, "ಇಂದಿಗೂ ಅಲ್ಲಿರುವ ಹಲವರು ನನಗೆ ಆತ್ಮೀಯರು. ಒಂಬತ್ತು ವರ್ಷಗಳ ಸುಂದರ ನೆನಪುಗಳು ಸದಾ ನನ್ನ ಹೃದಯದಲ್ಲಿರುತ್ತವೆ. ಆದರೆ, ಕೆಲವು ವ್ಯಕ್ತಿಗಳು ಎಲ್ಲವನ್ನೂ ಹಾಳು ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ನಾವೇನೂ ಮಾಡಲು ಸಾಧ್ಯವಿಲ್ಲ. ಸದ್ಯ ನಾನು ಆ ನೆನಪುಗಳಿಂದ ಹೊರಬಂದು (Move on) ಮುಂದೆ ಸಾಗಿದ್ದೇನೆ" ಎಂದು ಹೇಳುವ ಮೂಲಕ ವಾಹಿನಿಯ ಒಳಗಿನ ಕಿರಿಕ್ ಬಗ್ಗೆ ಸುಳಿವು ನೀಡಿದ್ದಾರೆ.
ಇದಕ್ಕೂ ಮೊದಲು ರಕ್ಷಿತಾ ಮಾತನಾಡುತ್ತಾ, ಜೀವನದಲ್ಲಿ ಬದಲಾವಣೆ ಅನಿವಾರ್ಯ ಎಂದು ಹೇಳಿದ್ದರು. "ಒಂದೇ ಕಡೆ ಒಂಬತ್ತು ವರ್ಷ ಕೆಲಸ ಮಾಡಿದ್ದೆ. ಈಗ ಆ 'ಕಮ್ಫರ್ಟ್ ಝೋನ್'ನಿಂದ ಹೊರಬಂದು ಹೊಸತನ್ನು ಪ್ರಯತ್ನಿಸುವುದು ಅಗತ್ಯವಾಗಿದೆ" ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.
ಒಟ್ಟಾರೆಯಾಗಿ, ರಕ್ಷಿತಾ ಪ್ರೇಮ್ ಅವರ ಈ ಸ್ಫೋಟಕ ಹೇಳಿಕೆ ಈಗ ಸ್ಯಾಂಡಲ್‌ವುಡ್ ಮತ್ತು ಕಿರುತೆರೆ ಅಂಗಳದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಾಹಿನಿಯ ಆ ಹೊಸ ತಂಡದಲ್ಲಿ ಇದ್ದ ಆ 'ಕೆಲವು ವ್ಯಕ್ತಿಗಳು' ಯಾರು? ರಕ್ಷಿತಾ ಅವರಂತಹ ಸ್ಟಾರ್ ನಟಿಯನ್ನೇ ಹೊರಹೋಗುವಂತೆ ಮಾಡಿದ ಆ ಸಮಸ್ಯೆಗಳೇನು? ಎಂಬುದು ಈಗ ಗಾಂಧಿನಗರದ ಹಾಟ್ ಟಾಪಿಕ್. ಏನೇ ಆಗಲಿ, ರಕ್ಷಿತಾ ಅವರ 'ಅಯ್ಯೋ..' ಎನ್ನುವ ಆ ನಗು ಮತ್ತು ತೀರ್ಪನ್ನು ಜೀ ಕನ್ನಡದ ವೇದಿಕೆಯಲ್ಲಿ ಮಿಸ್ ಮಾಡಿಕೊಳ್ಳುತ್ತಿರುವುದು ಮಾತ್ರ ಸುಳ್ಳಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.