
ಬೈಕ್ ಆಕ್ಸಿಡೆಂಟ್‌ನಲ್ಲಿ ತಲೆಗೆ ಬಿದ್ದ ಏಟಿನಿಂದ ಕೋಮಾಗೆ ಜಾರಿದ ಗಂಡ. ಒಂದಲ್ಲ, ಎರಡದಲ್ಲ ಬರೋಬ್ಬರಿ 13 ವರ್ಷ ಕೋಮಾದಲ್ಲಿದ್ದ ಗಂಡನನ್ನು ಬದುಕಿಸಲು ಹೋರಾಟ. ಗಂಡನನ್ನೂ ಮಗುವೆಂದೇ ಭಾವಿಸಿ, ಚಿಕಿತ್ಸೆ ಕೊಡಿಸುತ್ತಾ, ಗಂಡ ಮತ್ತೆ ಮೊದಲಿನಂತಾಗುತ್ತಾನೆಂಬ ಭರವಸೆಯಲ್ಲಿ ಇಬ್ಬರು ಪುಟ್ಟ ಮಕ್ಕಳೊಂದಿಗೆ ಸಂಸಾರ ಸಾಗಿಸುತ್ತಾ ದಿನದೂಡುತ್ತಿದ್ದ ಆಕೆ. ಕೊನೆಗೂ ಆಕೆಯ ಪ್ರಾರ್ಥನೆ ಫಲಿಸಲಿಲ್ಲ. ತಾನು ಪ್ರೀತಿಸಿದವನ ಜತೆ, ಸಂಸಾರ ಕಟ್ಟಿಕೊಳ್ಳುವ ಆಸೆಗಾಗಿ ಖ್ಯಾತಿಯ ಉತ್ತುಂಗದಲ್ಲಿದ್ದಾಗಲೇ, ಚಿತ್ರರಂಗ ತೊರೆದು ಬಂದಿದ್ದ ಆಕೆ ಒಂಟಿಯಾಗಿಬಿಟ್ಟಿದ್ದಳು. ಗಂಡನ ಚಿಕಿತ್ಸೆಗಾಗಿ ಇದ್ದಬದ್ದ ದುಡ್ಡನ್ನೆಲ್ಲ ಸುರಿದು, ಖಾಲಿ ಕೈಯಲ್ಲಿ ನಿಂತಿದ್ದಳು. ಚಿತ್ರರಂಗದಲ್ಲಿ ಆಕೆಯ ಜಾಗದಲ್ಲಿ ಹೀರೋಯಿನ್‌ಗಳೇ ಸಾಲುಗಟ್ಟಿ ನಿಂತಿದ್ದರು. ಅವಳು ಒಂಟಿಯಾದಳು.
ಆಕೆ ಬೇರಾರೂ ಅಲ್ಲ ಕ್ಯಾಬರೆ ಡಾನ್ಸರ್ ಅನುರಾಧ. ಡಿಸ್ಕೋ ಶಾಂತಿ ಸಂದರ್ಶನ ನೋಡಿದ್ದರಿಂದಲೋ ಏನೋ, ಅನುರಾಧ ಅವರ ಇಂಟರ್‌ವ್ಯೂ ವಿಡಿಯೋ ತಂತಾನೇ ಬಿಚ್ಚಿಕೊಂಡಿತು. ಅಕ್ಕಿ ಪೇಟೆ ಲಕ್ಕಮ್ಮ ಅಂತ ರವಿಚಂದ್ರನ್ ಜತೆ ಸ್ವಿಮ್ ಸೂಟ್‌ನಲ್ಲಿ ಕುಣಿದು, ಕನ್ನಡಿಗರನ್ನೂ ಕುಣಿಸಿದವಳು ಅನುರಾಧ. ಡಿಸ್ಕೋಶಾಂತಿ, ಸ್ಕಿಲ್ ಸ್ಮಿತಾಗಿಂತಲೂ ಅತಿಹೆಚ್ಚು ಸಂಭಾವನೆ ಪಡೆಯುತ್ತಿದ್ದ ಅನುರಾಧ, ಚಿತ್ರರಂಗಕ್ಕೆ ಕಾಲಿಟ್ಟಾಗ ಕೇವಲ 13 ವರ್ಷ.
ಸುಲೋಚನಾ ದೇವಿ, ಅನುರಾಧ ಆಗಿ ಬದಲಾಗಿದ್ದು ಇತಿಹಾಸ. ಹೀರೋಯಿನ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ಅನುರಾಧ ಐಟಂ ಸಾಂಗ್‌ಗಳ ಕಡೆಗೆ ವಾಲಿದ್ದರು. ಸುಮಾರು 30 ಹೆಚ್ಚು ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, 700ಕ್ಕೂ ಅಧಿಕ ಸಿನಿಮಾಗಳಿಗೆ ಕ್ಯಾಬರೆ ಡಾನ್ಸರ್ ಆಗಿ ಕುಣಿದಿದ್ದಳು.
ಕನ್ನಡ, ತೆಲುಗು, ತಮಿಳು, ಮಲಯಾಳಂಗಳಲ್ಲಿ ವಿಪರೀತ ಬೇಡಿಕೆ ಇದ್ದಾಗಲೇ, 1987ರಲ್ಲಿ ಡ್ಯಾನ್ಸ್ ಮಾಸ್ಟರ್ ಸತೀಶ್ ಕುಮಾರ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿಬಿಟ್ಟರು. ಹನ್ನೊಂದು ವರ್ಷದ ತುಂಬು ದಾಂಪತ್ಯದಲ್ಲಿ ಇಬ್ಬರು ಮಕ್ಕಳೊಂದಿಗೆ ಅನುರಾಧ ಸಂತೃಪ್ತ ಜೀವನ ನಡೆಸುತ್ತಿರುವಾಗಲೇ, ಬರಸಿಡಿಲು ಬಡಿದಿತ್ತು. 1996ರಲ್ಲಿ ಸತೀಶ್ ಕುಮಾರ್‌ಗೆ ಬೈಕ್ ಅಪಘಾತವಾಗಿ ಕೋಮಾಗೆ ಜಾರಿದರು. ಅಲ್ಲಿಂದ ಅನುರಾಧ ಬದುಕು ಮಗ್ಗಲು ಬದಲಿಸಿತ್ತು. ಗಂಡನನ್ನು ಉಳಿಸಿಕೊಳ್ಳಲು ಟೊಂಕ ಕಟ್ಟಿ ನಿಂತರು. ಕೆಲವು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸಾದರೂ, ಸತೀಶ್ ನೆನಪಿನ ಶಕ್ತಿ ಕಳೆದುಕೊಂಡಿದ್ದರು. ಎದ್ದು ಓಡಾಡಲೂ ಆಗದಂತ ಪರಿಸ್ಥಿತಿ. ಎರಡು ಮಕ್ಕಳ ಜೊತೆಗೆ ಪತಿಯನ್ನು ಮೂರನೇ ಮಗುವಿನಂತೆ ಆರೈಕೆ ಮಾಡಿದರು ಅನುರಾಧ.
ಸತೀಶ್ ಕುಮಾರ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದುಕೊಳ್ಳುವಷ್ಟರಲ್ಲೇ 2007ರಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಪತಿಯೂ ಇಲ್ಲ, ಅನುರಾಧಾಗೆ ಬೆಂಬಲವಾಗಿ ನಿಂತಿದ್ದ ತಾಯಿಯ ಸಾವು, ಚಿತ್ರರಂಗದಲ್ಲಿ ಕೆಲಸವಿಲ್ಲ. ಇಬ್ಬರು ಮಕ್ಕಳೊಂದಿಗೆ ಏಕಾಂಗಿಯಾಗಿ ನಿಂತಿದ್ದ ಅನುರಾಧ, ಎದೆಗುಂದಲಿಲ್ಲ. ಜೀವನದ ಹೊಸ ಸವಾಲಿಗೆ ಎದೆಯೊಡ್ಡಿ ನಿಂತರು. ಚಿತ್ರರಂಗದಲ್ಲಿ ಅವಕಾಶಗಳಿಲ್ಲದೇ, ಕಿರುತೆರೆಯತ್ತ ಮುಖ ಮಾಡಿದ್ದರು. ತಮಿಳಿನ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಮಗಳು ಅಭಿನಯಶ್ರೀ ಸಹ ಅಮ್ಮನ ಹಾದಿಯಲ್ಲೇ ಟಾಲಿವುಡ್‌ಗೆ ಕಾಲಿಟ್ಟಳು. ಕನ್ನಡದಲ್ಲಿ ದರ್ಶನ ಜತೆ ಕರಿಯಾ ಚಿತ್ರದಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಂಡರೂ, ಆನಂತರ ಯಾಕೋ ಆಕೆಯ ಗ್ರಾಫ್ ಏರಲೇ ಇಲ್ಲ. ಮಗ ಕಾಳಿ ಚರಣ್ ಐಟಿ ಉದ್ಯೋಗಿಯಾಗಿ ನೆಲೆ ಕಂಡುಕೊಂಡಿದ್ದಾನೆ. ಮಕ್ಕಳೊಂದಿಗೆ, ಅಗಲಿದ ಪತಿಯ ನೆನಪಿನಲ್ಲಿ ಅನುರಾಧ ಜೀವನ ಸವೆಸುತ್ತಿದ್ದಾರೆ.
ತೆರೆಯ ಮೇಲೆ ರಂಗು ರಂಗಿನ ಬಟ್ಟೆ ತೊಟ್ಟು, ಮಾದಕತೆಯನ್ನೇ ಮೈಮೇಲೆಳೆದುಕೊಂಡು, ಚಿತ್ರರಸಿಕರನ್ನು ರಂಜಿಸುತ್ತಿದ್ದ ಅನುರಾಧ ಬದುಕು, ತೆರೆಯ ಹಿಂದೆ ಮಗುಚಿಬಿದ್ದರೂ, ಬಣ್ಣ ಮಾಸಿದರೂ, ಆಕೆಯ ಛಲ, ಜೀವನ ಪ್ರೀತಿ, ಹೋರಾಡುತ್ತಲೇ ಇರುವ ಶಕ್ತಿ, ಮಾದರಿ ತಾನೇ ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.