ಕೂದಲು ಬಿಟ್ಟುಕೊಂಡು ಓಡಾಡುವ ಹೆಣ್ಣುಮಕ್ಕಳಿಗೆ ನಟಿ ಭಾರತಿ ವಿಷ್ಣುವರ್ಧನ್ ಪಾಠ ಮಾಡಿದ್ದಾರೆ. ಹೀಗೆ ತಿರುಗಾಡುವುದು ಯಾವಾಗ ಎನ್ನುವುದನ್ನು ಅವರು ಹೇಳಿದ್ದಾರೆ.
ಹೆಣ್ಣಿನ ಸೌಂದರ್ಯ ಹೆಚ್ಚಿಸುವಲ್ಲಿ ಕೂದಲಿನ ಪಾತ್ರ ಬಹುದೊಡ್ಡದಿದೆ. ಇದೇ ಕಾರಣಕ್ಕಾಗಿಯೇ ಹಿಂದೆಲ್ಲಾ ಗಂಡ ಸತ್ತ ಬಳಿಕ, ಹೆಣ್ಣಿನ ಕೂದಲನ್ನು ಬೋಳಿಸುವ ಪದ್ಧತಿ ಇತ್ತು. ಈಗಲೂ ಕೆಲವು ಕಡೆಗಳಲ್ಲಿ ಈ ಅನಿಷ್ಠ ಪದ್ಧತಿ ಚಾಲ್ತಿಯಲ್ಲಿ ಇದೆ. ಗಂಡ ಸತ್ತ ಮೇಲೆ ಹೆಣ್ಣು ಚೆನ್ನಾಗಿ ಕಾಣಿಸಬಾರದು, ಬೇರೆಯವರು ಆಕೆಯ ಬಳಿ ಸೆಳೆಯಬಾರದು ಎನ್ನುವ ಕಾರಣದಿಂದ ಹೀಗೆ ಮಾಡುವುದು. ಇದರ ಅರ್ಥ ತಲೆಗೂದಲು ಸೌಂದರ್ಯದಲ್ಲಿ ಅಷ್ಟು ದೊಡ್ಡ ಕೊಡುಗೆಯನ್ನು ನೀಡುತ್ತದೆ. ಇದೇ ಕಾರಣಕ್ಕೆ ಕೂದಲಿನ ಅಲಂಕಾರಕ್ಕಾಗಿಯೇ ಈಗ ದೊಡ್ಡ ದೊಡ್ಡ ಷೋರೂಮ್ಗಳೇ ತೆರೆಯಲಾಗುತ್ತಿದೆ. ನೂರಾರು ಬಗೆಯ ಸ್ಟೈಲ್ಗಳೂ ಇವೆ. ಹಾಗೆಂದು ಇದು ಹೆಣ್ಣಿಗೆ ಮಾತ್ರವಲ್ಲ, ಗಂಡಸರೂ ಕೂದಲಿನ ಅಲಂಕಾರದಲ್ಲಿ ಒಂದು ಹೆಜ್ಜೆ ಮುಂದಕ್ಕೇ ಇದ್ದಾರೆ. ವಿಭಿನ್ನ ರೀತಿಯ ಹೇರ್ಸ್ಟೈಲ್ಗಳು ಈಗ ಕಾಣಸಿಗುತ್ತವೆ.
ಸೌಂದರ್ಯ ಸಾವಿನ ಬಳಿಕ 'ಆಪ್ತಮಿತ್ರ' ಎಡಿಟಿಂಗ್ ವೇಳೆ ರಾತ್ರಿ ನಡೆದದ್ದೇನು? ಭಯಾನಕ ಘಟನೆ ವಿವರಿಸಿದ ಗುರುಕಿರಣ್!
ಇಂದು ಸಾಮಾನ್ಯವಾಗಿ ಗಂಡುಮಕ್ಕಳು ಉದ್ದ ಕೂದಲು ಬಿಟ್ಟು ಜುಟ್ಟು ಕಟ್ಟಿಕೊಂಡರೆ, ಬಹುತೇಕ ಹೆಣ್ಣುಮಕ್ಕಳು ಕೂದಲನ್ನು ಕಟ್ ಮಾಡಿಕೊಂಡು ಅದನ್ನು ಬಿಟ್ಟುಕೊಂಡು ತಿರುಗಾಡುವುದು ಇದೆ. ಜಡೆ ಕಟ್ಟುವುದು ಎನ್ನುವುದು ಈಗಿನವರಿಗೆ ಗೊತ್ತೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅದು ಮಾಯವಾಗಿದೆ. ನಗರ ಪ್ರದೇಶಗಳಲ್ಲಂತೂ ಇದು ಕಾಣುವುದೇ ಅಪರೂಪ. ಇನ್ನು ಅಲ್ಲೊಬ್ಬರು ಇಲ್ಲೊಬ್ಬರು ಜುಟ್ಟುಹಾಕಿಕೊಂಡೋ ಇಲ್ಲವೇ ರಬ್ಬರ್ ಬ್ಯಾಂಡ್ ಹಾಕಿಕೊಂಡು ತಿರುಗುವುದನ್ನು ನೋಡಬಹುದು. ಆದರೆ ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾಗಿ ಮಹಿಳೆಯರವರೆಗೂ ಸಂಪೂರ್ಣ ಕೂದಲು ಬಿಟ್ಟು ತಿರುಗುವವರೇ ಹೆಚ್ಚು. ಒಟ್ಟಾರೆ ಅಲಂಕಾರದ ಮಾತು ಬಂದಾಗ ಸಂಪೂರ್ಣ ಕೂದಲು ಬಿಟ್ಟು ತಿರುಗುವುದೂ ಮಹತ್ವ ಪಡೆದುಕೊಳ್ಳುತ್ತದೆ. ಸಿನಿಮಾಗಳಲ್ಲಿ, ಕಿರುತೆರೆಗಳಲ್ಲಿ ನಟಿಯರು ಹೀಗೆಯೇ ಮಾಡುವುದರಿಂದ ಇದು ಯುವತಿಯರ ಮೇಲೂ ಪ್ರಭಾವ ಬೀರುತ್ತಿರುವುದೂ ಸುಳ್ಳೇನಲ್ಲ ಬಿಡಿ.
ಅದೇನೇ ಇರಲಿ. ಕೂದಲು ಸಂಪೂರ್ಣ ಬಿಟ್ಟುಕೊಂಡು ತಿರುಗುವುದು ಸರಿಯಲ್ಲ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಯುವತಿಯರಿಗೆ ಕಿವಿಮಾತು ಹೇಳಿದ್ದಾರೆ. ಕೂದಲು ಬಿಟ್ಟುಕೊಂಡು ತಿರುಗುವ ನಿಜವಾದ ಅರ್ಥ ಕಷ್ಟದಲ್ಲಿದ್ದೇವೆ ಎಂದು ತೋರಿಸಲು, ಅದೇ ಮತ್ತೊಂದು ಬೇರೆಯವರನ್ನು ಅಟ್ರಾಕ್ಟ್ ಮಾಡಲು ಎಂದಿದ್ದಾರೆ. ದ್ರೌಪದಿ ತನ್ನ ಕಷ್ಟಕಾಲದಲ್ಲಿ ಇದ್ದ ಸಮಯದಲ್ಲಿ ಕೂದಲು ಬಿಟ್ಟಿದ್ದಳು. ದುಶ್ಯಾಸನನ ವಧೆ ಆಗುವವರೆಗೆ ಕೂದಲು ಕಟ್ಟಲ್ಲ ಎಂದು ಪ್ರತಿಜ್ಞೆ ಮಾಡಿದ್ದಳು. ಇದರ ಅರ್ಥ ಕಷ್ಟಕಾಲದಲ್ಲಿ ಹೆಣ್ಣುಮಕ್ಕಳು ಇದ್ದಾರೆ ಎನ್ನುವ ಅರ್ಥವನ್ನು ಕೂದಲು ಸಂಪೂರ್ಣ ಬಿಟ್ಟುಕೊಂಡು ತಿರುಗುವುದು ತೋರಿಸುತ್ತದೆ ಎಂದಿರುವ ನಟಿ, ನೀವು ಬೇರೆಯವರನ್ನು ಕೆಟ್ಟ ರೀತಿಯಲ್ಲಿ ಅಟ್ರಾಕ್ಟ್ ಮಾಡುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ನಿಮ್ಮನ್ನು ನೀವು ಮೊದಲು ಪ್ರೀತಿಸಿ, ಬೇರೆಯವರನ್ನು ಅಟ್ರಾಕ್ಟ್ ಮಾಡುವುದನ್ನು ನಿಲ್ಲಿಸಿ. ಇದು ಅಟ್ರಾಕ್ಟ್ ಮಾತ್ರವಲ್ಲದೇ ನಿಮ್ಮ ಮೇಲೆ ಅಟ್ಯಾಕ್ ಮಾಡಲೂ ನೀವು ಕಾರಣರಾಗುತ್ತೀರಿ ಎನ್ನುವುದು ನೆನಪಿನಲ್ಲಿ ಇರಲಿ ಎಂದಿದ್ದಾರೆ ನಟಿ ಭಾರತಿ ವಿಷ್ಣುವರ್ಧನ್. ಬೇರೆಯವರನ್ನು ಹೀಗೆ ಪ್ರವೋಕ್ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿರೋ ಭಾರತಿ, ಮೊದಲು ನಿಮ್ಮನ್ನು ನೀವು ಗೌರವಿಸುವುದನ್ನು ಕಲಿತುಕೊಳ್ಳಿ, ಆಮೇಲೆ ಬೇರೆಯವರು ನಿಮ್ಮನ್ನು ಗೌರವಿಸುತ್ತಾರೆ ಎಂದಿದ್ದಾರೆ.
ಅದೇ ಇನ್ನೊಂದೆಡೆ, ಜಡೆ ಮತ್ತು ಜ್ಞಾನದ ಬಗ್ಗೆ ಮಾತನಾಡಿರುವ ನಟಿ, ಕೂದಲಿನಲ್ಲಿ ಸರಸ್ವತಿ ಇದ್ದಾಳೆ. ಆಕೆಯನ್ನು ನೀವು ಕಟ್ಟಿಹಾಕಿಕೊಂಡರೆ ನಿಮ್ಮ ಜ್ಞಾನ ವರ್ಧಿಸುತ್ತದೆ. ಆದರೆ ಕೂದಲು ಬಿಟ್ಟು ಆಕೆಯನ್ನು ನೀವೇ ಹೊರಕ್ಕೆ ಕಳಿಸುತ್ತಿದ್ದೀರಿ ಎಂದಿದ್ದಾರೆ ಭಾರತಿ. ದೇಶದಲ್ಲಿ ಇಂದು ಎಷ್ಟೆಲ್ಲಾ ಸಮಸ್ಯೆ ಬರುತ್ತಿರುವುದಕ್ಕೆ ಕಾರಣ, ಇಂದು ತಾಯಂದಿರು ಕೂಡ ಕೂದಲು ಬಿಟ್ಟುಕೊಂಡು ತಿರುಗಾಡುವುದೇ ಆಗಿದೆ. ಜ್ಞಾನ ಎನ್ನುವುದು ಈಗ ದೂರವಾಗುತ್ತಿದೆ. ಯಾರು ನೋಡಿದರೂ ಕೂದಲು ಬಿಟ್ಟುಕೊಂಡು ಓಡಾಡುವವರೇ ಆಗಿದ್ದಾರೆ ಎಂದು ಭಾರತ ವಿಷಾದಿಸಿದ್ದಾರೆ. ಕೊನೆಯ ಪಕ್ಷ ಒಂದು ರಬ್ಬರ್ ಅನ್ನಾದರೂ ಕಟ್ಟಿಕೊಳ್ಳಿ. ಸಂಪೂರ್ಣವಾಗಿ ಕೂದಲು ಬಿಡಬೇಡಿ ಎನ್ನುತ್ತಲೇ ಹೇಳುವುದನ್ನು ಹೇಳಿದ್ದೇನೆ. ಕೊನೆಗೆ ನಿಮ್ಮಿಚ್ಛೆ ಎಂದಿದ್ದಾರೆ. ಇದೇ ವೇಳೆ ತಾಯಂದಿರು ಕೂಡ ತಮ್ಮ ಮಕ್ಕಳಿಗೆ ಬುದ್ಧಿಹೇಳುವುದನ್ನು ಬಿಟ್ಟು ಫ್ಯಾಷನ್ ಹೆಸರಿನಲ್ಲಿ ಏನೆಲ್ಲಾ ಮಾಡಲು ಅವಕಾಶ ಕಲ್ಪಿಸುತ್ತಿದ್ದಾರೆ ಎನ್ನುವುದಕ್ಕೆ ನಟಿ ಬೇಸರಿಸಿದ್ದಾರೆ. ವಿದೇಶಿಗರು ಭಾರತೀಯ ಸಂಪ್ರದಾಯವನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದರೆ ನಾವು ಅಲ್ಲಿನ ಸಂಸ್ಕೃತಿಯನ್ನು ರೂಢಿಸಿಕೊಳ್ಳುತ್ತಿರುವುದು ನೋವಿನ ಸಂಗತಿ ಎಂದಿದ್ದಾರೆ. ಭಾರತಿ ಅವರ ವಿಡಿಯೋ ಅನ್ನು ಸುದ್ದಿಮನೆ ಆಫೀಷಿಯಲ್ ಯೂಟ್ಯೂಬ್ ಚಾನೆಲ್ ಶೇರ್ ಮಾಡಿಕೊಂಡಿದೆ.