ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಸೆಟ್ ನಿರ್ಮಾಣದಲ್ಲಿ ಅರಣ್ಯ ಭೂಮಿ ಒತ್ತುವರಿ ಮತ್ತು ಮರಗಳ ಅಕ್ರಮ ಕಡಿತದ ಆರೋಪದ ಮೇಲೆ ನಿರ್ಮಾಪಕರ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಕೆನರಾ ಬ್ಯಾಂಕ್‌ನಿಂದ ಲೀಸ್‌ಗೆ ಪಡೆದ ಜಾಗದಲ್ಲಿ ಸೆಟ್ ನಿರ್ಮಿಸಲಾಗಿದ್ದು, ಈ ಜಾಗವು ಅರಣ್ಯ ಇಲಾಖೆಗೆ ಸೇರಿದ್ದು ಎಂಬ ಆರೋಪ ಕೇಳಿಬಂದಿತ್ತು.
ಬೆಂಗಳೂರು (ಡಿ.05): ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಸೆಟ್ ನಿರ್ಮಾಣಕ್ಕಾಗಿ ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ ಎಂದು ಸ್ವತಃ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೇ ದೂರು ನೀಡುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದರು. ಈ ಬಗ್ಗೆ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿದಂತೆ ಟಾಕ್ಸಿಕ್ ಸಿನಿಮಾದ ನಿರ್ಮಾಪಕರು ಕೋರ್ಟ್ ಮೊರೆ ಹೋಗಿದ್ದು. ಈ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಟಾಕ್ಸಿಕ್ ಸಿನಿಮಾ ನಿರ್ಮಾಪಕರ ವಿರುದ್ಧ ಎಫ್‌ಐಆರ್ ದಾಖಲಿಸದಂತ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾ ಚಿತ್ರೀಕರಣಕ್ಕಾಗಿ ಕೆನರಾ ಬ್ಯಾಂಕ್‌ನಿಂದ ಪೀಣ್ಯದ ಬಳಿ ಲೀಸ್‌ಗೆ ಪಡೆದಿದ್ದ ಖಾಲಿ ಜಾಗದಲ್ಲಿ ದೊಡ್ಡದಾಗಿ ಸೆಟ್ ನಿರ್ಮಾಣ ಮಾಡಲಾಗಿತ್ತು. ಆದರೆ, ಈ ಜಾಗದ ಬಗ್ಗೆ ರಾಜಕೀಯ ಕೆಸರೆರಚಾಟ ಶುರುವಾಗಿದ್ದು, ಕೇಂದ್ರ ಮಂತ್ರಿ ಕುಮಾರಸ್ವಾಮಿ ಹಾಗೂ ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ ನಡುವಿನ ವೈಷಮ್ಯಕ್ಕೆ ಟಾಕ್ಸಿಕ್ ಚಿತ್ರತಂಡವನ್ನು ಬಲಿಪಶು ಮಾಡಲು ಹೊರಟಿದ್ದರು. ಹೀಗಾಗಿ, ಟಾಕ್ಸಿಕ್ ಚಿತ್ರತಂಡ ಸೆಟ್ ಹಾಕಿದ್ದ ಜಾಗವು ಅರಣ್ಯ ಇಲಾಖೆಗೆ ಸೇರಿದ್ದು, ಇಲ್ಲಿ ಮರಗಳನ್ನು ಕಡಿದು ಮಾರಣ ಹೋಮ ಮಾಡಲಾಗಿದೆ ಎಂದು ಎಫ್‌ಐಆರ್ ದಾಖಲಿಸಿ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಈ ಬಗ್ಗೆ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಟಾಕ್ಸಿಕ್ ಸಿನಿಮಾ ನಿರ್ಮಾಪಕರ ವಿರುದ್ಧ ಎಫ್‌ಐಆರ್ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಚಿತ್ರ ನಿರ್ಮಾಪಕ ಕೆವಿಎನ್ ಮಾನ್ ಸ್ಟರ್ ಮೈಂಡ್ ಕ್ರಿಯೇಷನ್ಸ್ ಅವರಿಂದ ಎಫ್‌ಐಆರ್‌ಗೆ ತಡೆ ನೀಡುವಂತೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಅರಣ್ಯ ಕಾಯ್ದೆ ಉಲ್ಲಂಘನೆ ಆರೋಪಿಸಿ ಕೇಸ್ ಹಾಕಲಾಗಿತ್ತು. ಟಾಕ್ಸಿಕ್ ಚಿತ್ರತಂಡ ಸೆಟ್ ಹಾಕಿದ ಜಾಗವನ್ನು 1963ರಲ್ಲೇ ರಾಜ್ಯ ಸರ್ಕಾರ ಹೆಚ್ ಎಂಟಿ ಸಂಸ್ಥೆಗೆ ನೀಡಿದೆ. ಆಗ ಒಟ್ಟು 400 ಎಕರೆ ಭೂಮಿಯನ್ನು ರಾಜ್ಯದಿಂದ ಹೆಚ್‌ಎಂಟಿ ಸಂಸ್ಥೆಗೆ ನೀಡಲಾಗಿತ್ತು. ಈ ಜಮೀನಿನ ಪೈಕಿ 18 ಎಕರೆಯನ್ನು ಕೆನರಾ ಬ್ಯಾಂಕ್ ಗೆ ಹೆಚ್ಎಂಟಿ ಸಂಸ್ಥೆಯು ಮಾರಾಟ ಮಾಡಿದೆ. ಕೆನರಾ ಬ್ಯಾಂಕ್‌ನಿಂದ ಲೀಸ್ ಪಡೆದು ಟಾಕ್ಸಿಕ್ ಸಿನಿಮಾ ತಂಡ ಇಲ್ಲಿ 30 ಕೋಟಿ ರೂ. ಹೂಡಿಕೆ ಮಾಡಿ ಸಿನಿಮಾ ಸೆಟ್ ಹಾಕಲಾಗಿದೆ ಎಂದು ಟಾಕ್ಸಿಕ್ ಸಿನಿಮಾ ನಿರ್ಮಾಪಕರ ಪರ ವಕೀಲರು ತಿಳಿಸಿದ್ದಾರೆ.