HBD Kichcha Sudeep: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು 49ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನ ಸರ್ಕಾರದ ಮಹತ್ವಾಂಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ರಾಯಭಾರಿಯಾಗಿ ನೇಮಕ ಆಗಿದ್ದಾರೆ.
ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ಯೋಜನೆಯ ರಾಯಭಾರಿಯಾಗಿ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರನ್ನು ನೇಮಿಸಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ. ಈ ಕುರಿತು ಕಿಚ್ಚ ಸುದೀಪ್ ಅವರಿಗೆ ಪತ್ರ ಬರೆದಿರುವ ಪ್ರಭು ಚವ್ಹಾಣ್, ತಾವು ಈ ಸತ್ಕಾರ್ಯದಲ್ಲಿ ಭಾಗಿಯಾಗಿ ಗೋ ಸಂಪತ್ತಿನ ಸಂರಕ್ಷಣೆಗೆ ಸರ್ಕಾರ ತೊಟ್ಟಿರುವ ಸಂಕಲ್ಪಕ್ಕೆ ಕೈ ಜೋಡಿಸಿ, ಗೋಮಾತಾ ರಕ್ಷಣೆಯಲ್ಲಿ ನಾವೆಲ್ಲರೂ ಭಾಗಿಯಾಗೋಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಶು ಸಂಗೋಪನೆ ಇಲಾಖೆಯು ಜಾನುವಾರುಗಳ ರಕ್ಷಣೆಗಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚುರಪಡಿಸಿ, ಹೈನುಗಾರಿಕೆಗೆ ಉತ್ತೇಜನ ನೀಡಿ, ಜಾನುವಾರುಗಳ ಸಂರಕ್ಷಣೆ, ಪಾಲನೆ, ಪೋಷಣೆ ಮಾಡುತ್ತಿರುವ ಸರ್ಕಾರದೊಂದಿಗೆ ಕೈಜೋಡಿಸಿ, ಸಾರ್ವಜನಿಕರಲ್ಲಿ ಸ್ಫೂರ್ತಿ ತುಂಬಲು ತಮ್ಮನ್ನು ತಮ್ಮ ಜನ್ಮದಿನದ ಈ ಶುಭಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ದತ್ತು ಯೋಜನೆ ಯ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದು ಪತ್ರ ಬರೆದಿದ್ದಾರೆ.
ಪಶು ಸಂಗೋಪನೆ ಇಲಾಖೆಯ ಪುಣ್ಯಕೋಟಿ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಸುದೀಪ್ ಅವರು ಯಾವುದೇ ಸಂಭಾವನೆ ಇಲ್ಲದೆ ಈ ಕೆಲಸವನ್ನು ನಿರ್ವಹಿಸುವುದಾಗಿ ಒಪ್ಪಿಕೊಂಡಿದ್ದಾರೆ ಪ್ರಭು ಚವ್ಹಾಣ್ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮರಳು ಶಿಲ್ಪದ ತವರೂರು ಒರಿಸ್ಸಾದ ಪುರಿ ಬೀಚ್‌ನಲ್ಲಿ ಅರಳಿತು ಕಿಚ್ಚ ಸುದೀಪ್ ಮರಳು ಶಿಲ್ಪ
ಈ ಹಿಂದೆ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ನಟ ಸುದೀಪ್ ಅವರಿಗೆ ಪತ್ರ ಬರೆದು, ಪುಣ್ಯಕೋಟಿ ರಾಯಭಾರಿಯಾಗುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ನಟ ಸುದೀಪ್ ಪಶು ಸಂಗೋಪನೆ ಇಲಾಖೆಯ ರಾಯಭಾರಿ ಕೆಲಸ ನಿರ್ವಹಿಸಲು ಒಪ್ಪಿಕೊಂಡಿದ್ದಾರೆ. ಇಂದು ಅವರ ಜನ್ಮದಿನದ ಅಂಗವಾಗಿ ಪುಣ್ಯಕೋಟಿ ರಾಯಭಾರಿಯಾಗಿ ನೇಮಕ ಮಾಡಿರುವ ಕುರಿತು ಅಧಿಕೃತವಾಗಿ ಪತ್ರ ಬರೆಯಲಾಗಿದೆ. ಸುದೀಪ್ ಈ ಕೆಲಸಕ್ಕ ಯಾವುದೇ ಸಂಭಾವನೆ ಪಡೆಯದೇ ಗೋಸಂಪತ್ತಿನ ಸಂರಕ್ಷಣೆಗೆ ತಮ್ಮ ಸಣ್ಣದೊಂದು ಅಳಿಲು ಸೇವೆ ಸಲ್ಲಿಸುವುದಾಗಿ ತಿಳಿಸಿರುವುದಾಗಿ ಪ್ರಭು ಚವ್ಹಾಣ್ ವಿವರಿಸಿ, ಜನ್ಮದಿನಕ್ಕೆ ಶುಭ ಕೋರಿದ್ದಾರೆ.
ಇದನ್ನೂ ಓದಿ: Sudeep Birthday: ಹೊರ ರಾಜ್ಯದಿಂದ ಹರಿದು ಬಂದ ಅಭಿಮಾನಿಗಳು, ಕಿಚ್ಚ ಇಂಟ್ರೆಸ್ಟಿಂಗ್ ಫ್ಯಾಕ್ಟಸ್!
ರಾಜ್ಯದಲ್ಲಿ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ, ಪ್ರಾಣಿ ಕಲ್ಯಾಣ ಮಂಡಳಿ, ಪ್ರಾಣಿ ಸಹಾಯವಾಣಿ, 100 ಸರ್ಕಾರಿ ಗೋಶಾಲೆಗಳು, ಪಶು ಸಂಜೀವಿನಿ ಆ್ಯಂಬುಲೆನ್ಸ್, ಗೋಮಾತಾ ಸಹಕಾರ ಸಂಘ, ಆತ್ಮನಿರ್ಭರ ಗೋಶಾಲೆ, ಸಂಚಾರಿ ಪಶು ಚಿಕಿತ್ಸಾ ವಾಹನಗಳು, ಪಶು ಜಿಲ್ಲಾಸ್ಪತ್ರೆಗಳ ನಿರ್ಮಾಣ, ಸ್ಪೇಷಲ್, ಸೂಪರ್ ಸ್ಪೇಷಾಲಿಟಿ ಹಾಗೂ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಗಳು, 100 ಪಶು ಚಿಕಿತ್ಸಾಲಯಗಳು, 400 ಪಶು ವೈದ್ಯರ ನೇಮಕಾತಿ, 250 ಕಿರಿಯ ಪಶು ವೈದ್ಯಕೀಯ ಸಹಾಯಕರ ನೇಮಕಾತಿ, ಪುಣ್ಯಕೋಟಿ ದತ್ತು ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದೀಗ ಕಿಚ್ಚ ಸುದೀಪ್ ರಾಯಭಾರಿಯಾಗಲು ಒಪ್ಪಿರುವುದು ಗೋಸೇವೆಯಲ್ಲಿ ತೋಡಗಿರುವ ನಮಗೆ ಆನೆಬಲ ಬಂದಂತಾಗಿದೆ ಎಂದು ಪ್ರಭು ಚವ್ಹಾಣ್ ಹರ್ಷ ವ್ಯಕ್ತಪಡಿಸಿದ್ದಾರೆ.