Mukhyamantri Chandru @ 70; ಬಡ ಹುಡುಗ ಚಂದ್ರಶೇಖರ್‌ ಮುಖ್ಯಮಂತ್ರಿ ಚಂದ್ರು ಆದೆ!

Published : Sep 04, 2022, 11:29 AM ISTUpdated : Sep 04, 2022, 11:35 AM IST
Mukhyamantri Chandru @ 70; ಬಡ ಹುಡುಗ ಚಂದ್ರಶೇಖರ್‌ ಮುಖ್ಯಮಂತ್ರಿ ಚಂದ್ರು ಆದೆ!

ಸಾರಾಂಶ

’ರಂಗಭೂಮಿ ಗೆ ಬಂದಿದ್ದು, ಮುಖ್ಯಮಂತ್ರಿ ನಾಟಕ ಮಾಡಿದ್ದು, ಸಿನಿಮಾ, ಕಿರುತೆರೆ ನಟನಾಗಿದ್ದು, ರಾಜಕೀಯ ಪ್ರವೇಶಿಸಿದ್ದು.. ನನ್ನ ಬದುಕಿನಲ್ಲಿ ಇವೆಲ್ಲ ಆಕಸ್ಮಿಕ..’ -70ರ ವಸಂತಕ್ಕೆ ಕಾಲಿಟ್ಟಿರುವ ಮುಖ್ಯಮಂತ್ರಿ ಚಂದ್ರು ಈ ಮಾತುಗಳನ್ನು ಹೇಳುತ್ತಲೇ ಈ ಆಕಸ್ಮಿಕಗಳಿಂದ ಬದುಕು ಬದಲಾದದ್ದನ್ನು ಹೇಳಿದ್ದಾರೆ.

ಪ್ರಿಯಾ ಕೆರ್ವಾಶೆ

70ರ ಹರೆಯ, 50 ವರ್ಷಗಳ ರಂಗಭೂಮಿ ನಂಟು. ಬದುಕಿನ ಮಹತ್ವದ ಘಟ್ಟಗಳನ್ನ ನೆನಪಿಸಿಕೊಳ್ಳುವುದಾದ್ರೆ?

ನನ್ನ ಬದುಕಿನಲ್ಲಿ ಪ್ರತಿಯೊಂದು ಘಟ್ಟವೂ ಆಕಸ್ಮಿಕವೇ. ನೆಲಮಂಗಲದ ಹೊನ್ನಸಂದ್ರದಿಂದ ಓದಿಗೆಂದು ಬೆಂಗಳೂರಿಗೆ ಬಂದಿದ್ದು. ಇಂಗ್ಲಿಷ್‌ ಬರದ ಕೀಳರಿಮೆಯನ್ನು ಭಂಡತನದಿಂದ ಮೀರಿದ್ದು, ಸರಿಯಾದ ನೆಲೆಯಿಲ್ಲದೆ ಸಂಜೆಗಳನ್ನು ಕಲಾಕ್ಷೇತ್ರದಲ್ಲಿ ಕಳೆಯುತ್ತಿದ್ದಾಗ ಯಾರೋ ಕಲಾವಿದ ಕೈಕೊಟ್ಟಅಂತ ಒತ್ತಾಯದಿಂದ ನನ್ನ ನಟಿಸುವಂತೆ ಮಾಡಿದ್ದು, ಪದ್ಮಾ ಬಾಳ ಸಂಗಾತಿಯಾದದ್ದು ಮುಂದಿನ ಮಹತ್ವ ಘಟ್ಟಗಳು, ಎಲ್ಲವೂ ಆಕಸ್ಮಿಕವಾಗಿಯೇ.

ನೀವು ಮುಖ್ಯಮಂತ್ರಿ ನಾಟಕ ಮಾಡಿದ್ದೂ ಆಕಸ್ಮಿಕ ಅಂದಿರಿ. ಅದು ಹೇಗೆ?

ನಾನೀಗ ಮಾಡುವ ಮುಖ್ಯಮಂತ್ರಿ ನಾಟಕ ಆರಂಭದಲ್ಲಿ ಸೀರಿಯಸ್‌ ಆಗಿ ಬರೀ ಡೈಲಾಗ್‌ ಮೇಲೇ ನಿಂತಿದ್ದ ನಾಟಕ ಆಗಿತ್ತು. ಅದರಲ್ಲಿ ಹಿರಿಯ ನಟ ಲೋಹಿತಾಶ್ವ ಮುಖ್ಯಮಂತ್ರಿ ಪಾತ್ರ ಮಾಡಬೇಕಿತ್ತು. ನಾನು ಮತ್ತು ಕಲಾಗಂಗೋತ್ರಿಯ ಡಾ. ಬಿ.ವಿ. ರಾಜಾರಾಂ ಈ ನಾಟಕದ ನಿರ್ದೇಶಕರು. 7 ದಿನಗಳ ನಾಟಕ ಪ್ರದರ್ಶನಕ್ಕೆ ಕಲಾಕ್ಷೇತ್ರ ಬುಕ್‌ ಆಯ್ತು. ಪ್ರದರ್ಶನಕ್ಕೆ ಕೆಲವು ದಿನಗಳಿರುವಾಗ ಲೋಹಿತಾಶ್ವ ಅವರಿಗೆ ಟೈಫಾಯಿಡ್‌ ಬಂತು. ಕೊನೇ ಗಳಿಗೆಯಲ್ಲಿ ಅವರು ಬರುವ ತನಕ ಈ ಪಾತ್ರ ನಾನು ನಿರ್ವಹಿಸೋದು ಅಂತಾಯ್ತು. ಇದನ್ನ ಒಪ್ಪುವ ಮೊದಲು ಷರತ್ತು ಹಾಕಿದ್ದೆ. ಈ ಸ್ಕಿ್ರಪ್‌್ಟನಲ್ಲಿ ಇರೋ ಹಾಗೇ ಮಾಡಲ್ಲ, ನನಗೆ ಬೇಕಾದ ಹಾಗೆ ಡೈಲಾಗ್‌ ಬದಲಾಯಿಸ್ತೀನಿ, ನನ್ನ ಪಾತ್ರ ನಿರ್ವಹಣೆಯನ್ನು ಟೀಕಿಸಬಾರದು ಅಂತ. ಕೊಂಚ ಹಾಸ್ಯ ಬೆರೆಸಿ ಪಾತ್ರ ನಿರ್ವಹಿಸಿದೆ. ಏಳೂ ದಿನ ಹೌಸ್‌ಫುಲ್‌ ಶೋ. ಮಧ್ಯದ ದಿನದಲ್ಲಿ ಮಫ್ಲರ್‌ ಸಿಕ್ಕಿಸಿಕೊಂಡು ಲೋಹಿತಾಶ್ವ ಬಂದು ನಾಟಕ ನೋಡಿದ್ರು. ಅವರ ಬಳಿ, ‘ಇಷ್ಟುಮಾಡಿದ್ದೇನೆ. ಇನ್ನು ನೀವು ಮೊದಲಿನ ಹಾಗೆ ಸೀರಿಯಸ್‌ ನಾಟಕವಾಗಿ ಮುಂದುವರಿಸಬಹುದು’ ಎಂದೆ. ‘ನೀನು ನಾಟ್ಕವನ್ನೇ ಕೊಂದಿದ್ದೀಯಾ. ಇದು ಜನಪ್ರಿಯ ಆಗೋಗಿದೆ. ಇನ್ನು ನಾನು ಮಾಡೋಕ್ಕಾಗಲ್ಲ. ನೀನೇ ಮಾಡು’ ಅಂದುಬಿಟ್ಟರು. ಹಾಗೆ ಶುರುವಾದ ನಾಟಕ ಈಗ 800 ಪ್ರದರ್ಶನ ಕಾಣುತ್ತಿದೆ.

ಕಲಾಗಂಗೋತ್ರಿಗೆ ಐವತ್ತು ತುಂಬಿದೆ. ಆರಂಭದ ದಿನಗಳಲ್ಲಿ ಬಹಳ ಕಷ್ಟಪಟ್ಟಿದ್ದೆವು. ಈಗ ಕಷ್ಟಕಳೆದಿದೆ. ಖುಷಿ ಇದೆ. ಹೊಸ ಹೊಸ ನಾಟಕ ಪ್ರದರ್ಶನ, ರಂಗ ಗೌರವ ಸಲ್ಲಿಕೆ, ರಂಗ ತಂಡಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಾ ಬಂದಿದ್ದೇವೆ. ಈ ಕಲಾಸೇವೆಯ ಬಗ್ಗೆ ತೃಪ್ತಿ ಇದೆ.

- ಡಾ. ಬಿ ವಿ ರಾಜಾರಾಂ, ಕಲಾ ಗಂಗೋತ್ರಿ ಸಂಸ್ಥಾಪಕ

ಇದಾಗಿದ್ದು ನೀವು ರಾಜಕೀಯಕ್ಕೆ ಬರುವ ಮೊದಲು. ರಾಜಕೀಯಕ್ಕಿಳಿದ ಮೇಲೆ ಏನಾದ್ರೂ ವ್ಯತ್ಯಾಸ ಆಯ್ತಾ?

ನಿಜ ಹೇಳ್ಬೇಕು ಅಂದ್ರೆ ನನಗೆ ಈ ನಾಟಕ ಅರ್ಥ ಆಗಿದ್ದೇ ರಾಜಕೀಯಕ್ಕೆ ಬಂದ ಮೇಲೆ.

ನಾಟಕ ಮಾಡ್ತಾ ಮಾಡ್ತಾ ಯಾವಾಗ ಮುಖ್ಯಮಂತ್ರಿ ಚಂದ್ರು ಆದಿರಿ?

ಅದಾಗಿದ್ದು ನಿಮ್ಮಂಥ ಪತ್ರಕರ್ತರಿಂದ. ಜಾಗ ಉಳಿಸೋಕೆ ಹೋಗಿ ಮುಖ್ಯಮಂತ್ರಿ ನಾಟಕದ ಚಂದ್ರಶೇಖರ್‌ ಅಂತ ಬರೆಯೋದನ್ನ ಮುಖ್ಯಮಂತ್ರಿ ಚಂದ್ರು ಮಾಡಿಬಿಟ್ಟರು. ಇನ್ನೊಂದು ಸ್ವಾರಸ್ಯಕರ ಘಟನೆ ಇದೆ. ಗೌರಿಬಿದನೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕ ಆಗಿದ್ದೆ. ಆಗ ಸದನದಲ್ಲಿ ನನ್ನ ಹೆಸರಿನ ವಿಷಯಕ್ಕೆ ಗಲಾಟೆ ಆಯ್ತು. ಸಂವಿಧಾನದ ಪ್ರಕಾರ ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ ಅಂತ ಗಲಾಟೆ ಮಾಡಿದರು. ಆಗ ನಾನಂದೆ, ನನ್ನ ಹೆಸರು ಚಂದ್ರಶೇಖರ್‌. ಸರ್ಕಾರವೇ ಐಡಿಯಲ್ಲಿ ಮುಖ್ಯಮಂತ್ರಿ ಚಂದ್ರು ಅಂತ ಹೆಸರು ಹಾಕಿದೆ. ಆಗಿನ ಮುಖ್ಯಮಂತ್ರಿ ಜೆ ಎಚ್‌ ಪಟೇಲ್‌, ‘ಸದನದಲ್ಲಿ ಇಬ್ಬರು ಮುಖ್ಯಮಂತ್ರಿ ಅಂದಾಗ ನೊಂದುಕೊಳ್ಳಬೇಕಿದ್ದದ್ದು ನಾನು. ಆದರೆ ನನಗೆ ಆನಂದ ಆಗಿದೆ. ಚುನಾವಣೆ ಇಲ್ಲದಿದ್ದರೂ ಖಾಯಂ ಮುಖ್ಯಮಂತ್ರಿ ಇರ್ತಾನೆ ಅಂದರೆ ತಲೆಬಿಸಿ ಯಾಕೆ?’ ಅಂದುಬಿಟ್ಟರು. ಅಲ್ಲಿ ಆದ ತೀರ್ಮಾನದಂತೆ ಅಫಿಡವಿಟ್‌ ಮಾಡಿಸಿ ಖಾಯಂ ಮುಖ್ಯಮಂತ್ರಿ ಚಂದ್ರು ಆದೆ. ಈ ನಾಟಕ ಶುರು ಮಾಡಿ 42 ವರ್ಷ ಆಯ್ತು. ಈ ಪಾತ್ರ ನಾನೊಬ್ಬನೇ ಮಾಡುತ್ತಿದ್ದೇನೆ. ಇದಕ್ಕಾಗಿ ಒಂದು ರುಪಾಯಿ ಕಾಸೂ ಪಡೆದಿಲ್ಲ. ಎಂಎಲ್‌ಎ, ಎಂಎಲ್‌ಸಿ ಆಗಿದ್ದಾಗಲೂ ನಾಟಕ ಮಾಡಿದ್ದೀನಿ. ಕಲಾ ಗಂಗೋತ್ರಿ ತಂಡ ಆರ್ಥಿಕ ಸಂಕಷ್ಟದಲ್ಲಿದ್ದಾಗ ಈ ನಾಟಕ ಮಾಡುತ್ತಿದ್ದೆವು. ತಂಡದ ಸ್ಥಿತಿ ಸುಧಾರಿಸುತ್ತಿತ್ತು.

ಮುಖ್ಯಮಂತ್ರಿಗಳ ಮುಂದೆಯೇ ಮುಖ್ಯಮಂತ್ರಿ ಪ್ರದರ್ಶಿಸಿದ ಅನುಭವ?

ಹದಿಮೂರು ಮುಖ್ಯಮಂತ್ರಿಗಳು ಇದನ್ನ ನೋಡಿದ್ದಾರೆ. ಗುಂಡೂರಾವ್‌ ಅವರ ಮುಂದೆ ಈ ನಾಟಕ ಪ್ರದರ್ಶಿಸುವಾಗ ನಾಟಕ ಬ್ಯಾನ್‌ ಆಗುವ, ನಮ್ಮ ಅರೆಸ್ಟ್‌ ಆಗುವ ಭಯವಿತ್ತು. ಅವರ ಸರ್ಕಾರದ ಭ್ರಷ್ಟಾಚಾರವನ್ನೇ ನಾವಿಲ್ಲಿ ಹೇಳುತ್ತಿದ್ದೇವೆ ಎಂದು ತಿಳಿಯುವ ಅಪಾಯವಿತ್ತು. ಆದರೆ ಅವರು ನಾಟಕ ನೋಡಿ ನಮ್ಮ ಬೆನ್ನು ತಟ್ಟಿ, ‘ಇದರಲ್ಲಿರೋದು ಏನೂ ಅಲ್ಲ. ಹತ್ತು ಪರ್ಸೆಂಟ್‌ ಮಾತ್ರ ಹೇಳಿದ್ದೀರಿ. ನಮ್‌ ಹತ್ರ ಬಂದಿದ್ರೆ ಇನ್ನೂ ಅದ್ಭುತ ಕೆಲಸ ತೋರಿಸ್ತಿದ್ವಿ’ ಅಂದುಬಿಟ್ಟರು!

ಈಗ ‘ಮತ್ತೆ ಮುಖ್ಯಮಂತ್ರಿ’ ಮಾಡುತ್ತಿದ್ದೀರಿ?

ಕೆ ವೈ ಎನ್‌ ಬರೆದ ಈ ನಾಟಕ ಬಹಳ ಹರಿತವಾಗಿದೆ. ಈಗಿನ ಭ್ರಷ್ಟಾಚಾರ, ರೈತ ಹೋರಾಟದ ಕತೆಗಳನ್ನೆಲ್ಲ ಒಳಗೊಂಡಿದೆ.

ಕಲಾಗಂಗೋತ್ರಿ ಸುವರ್ಣ ಸಂಭ್ರಮ

ಕಲಾಗಂಗೋತ್ರಿಗೆ 50 ವರ್ಷ, ಮುಖ್ಯಮಂತ್ರಿ ಚಂದ್ರು ಹಾಗೂ ಡಾ ಬಿ ವಿ ರಾಜಾರಾಂ ಅವರಿಗೆ 70 ತುಂಬಿದ ಹಿನ್ನೆಲೆಯಲ್ಲಿ ‘ಕಲಾ ಗಂಗೋತ್ರಿ 50ನೇ ವರ್ಷದ ರಂಗಹಬ್ಬ’ ಕಾರ್ಯಕ್ರಮ ಸೆ.5ರಂದು ಸಂಜೆ 4ರಿಂದ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಡಾ. ಕೆ.ವೈ. ನಾರಾಯಣ ಸ್ವಾಮಿ ರಚನೆ, ಡಾ. ಬಿ ವಿ ರಾಜಾರಾಂ ನಿರ್ದೇಶನ, ಮುಖ್ಯಮಂತ್ರಿ ಚಂದ್ರು ನಟನೆಯ, ‘ಮತ್ತೆ ಮುಖ್ಯಮಂತ್ರಿ’ ನಾಟಕ ಪ್ರದರ್ಶನ ನಡೆಯಲಿದೆ. ಇದೇ ಸಂದರ್ಭ ಮುಖ್ಯಮಂತ್ರಿ ಚಂದ್ರು ಆತ್ಮಕಥನ ‘ರಂಗವನದ ಚಂದ್ರತಾರೆ’ ಬಿಡುಗಡೆಯಾಗಲಿದೆ. ಮೈಸೂರಿನ ಕವಿತಾ ಪ್ರಕಾಶನದಿಂದ ಪ್ರಕಟಗೊಂಡ ಈ ಕೃತಿ 245 ಪುಟಗಳನ್ನು ಒಳಗೊಂಡಿದೆ. 250 ರೂಪಾಯಿ ಬೆಲೆ. ಪ್ರತಿಗಳಿಗೆ ಮೊ.ಸಂ 9880105526 ಸಂಪರ್ಕಿಸಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?