ಇಂದು ನಟ ಜಗ್ಗೇಶ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಮಂತ್ರಾಯಲಯಕ್ಕೆ ಪೂಜೆಗಾಗಿ ಹೋದ ನಟ, ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
ಇಂದು ನಟ ಜಗ್ಗೇಶ್ ಅವರಿಗೆ 61ನೇ ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ನಿಮಿತ್ತ ಮಂತ್ರಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿರುವ ಜಗ್ಗೇಶ್ ಅವರು ಅಲ್ಲಿಂದಲೇ ನೇರಪ್ರಸಾರದಲ್ಲಿ ಬಂದು ಕೆಲವೊಂದು ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ತಾವು ನಡೆದು ಬಂದ ಹಾದಿಯನ್ನೂ ಹೇಳುವ ಮೂಲಕ, ಕ್ಷಮೆಯನ್ನೂ ಕೋರಿದ್ದಾರೆ, ಜೊತೆಗೆ ತಮ್ಮ ಸಿನಿಮಾದ ಕುರಿತೂ ಮಾತನಾಡಿದ್ದಾರೆ. ಮೊದಲಿಗೆ ಮನುಷ್ಯನ ಜೀವನದ ಬಗ್ಗೆ ಮಾತನಾಡಿದ ಜಗ್ಗೇಶ್ ಅವರು, ಮನುಷ್ಯನ ಜೀವನ ಶ್ರೇಷ್ಠವಾದದ್ದು, 60 ವರ್ಷ ಬಹಳ ದೊಡ್ಡ ಆಯಸ್ಸು. ಇವತ್ತು ಅದೂ ಮುಗಿದು ಹೋಯ್ತು. ಕನ್ನಡ ಚಿತ್ರರಂಗದಲ್ಲಿ ಅನ್ನವನ್ನು ಹುಡುಕಿ ಬಂದವನು ನಾನು. ಆಗ ರಾಯರ ಮಾರ್ಗದರ್ಶನ ಸಿಕ್ಕಿತು. ಆಟೋ ರಿಕ್ಷಾ ಚಾಲನೆ ಮಾಡಲು ಸಂಪಾದನೆ ಮಾಡಲು ಹೊರಟವ ನನಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಎಲ್ಲವೂ ರಾಯರ ದಯೆ ಎಂದಿದ್ದಾರೆ.
ಇದೇ ವೇಳೆ ಪ್ರತಿಯೊಬ್ಬರ ಜೀವನದಲ್ಲಿ ಅಪ್ಪ-ಅಮ್ಮ ಎಷ್ಟು ಮುಖ್ಯ ಎನ್ನುವುದನ್ನು ಹೇಳಿದ ನಟ, ಎಲ್ಲಾ ಮಕ್ಕಳಿಗೂ ಪ್ರಥಮ ದೇವರು ತಾಯಿ. ನಿಮಗೆ ಈ ವಿಶ್ವದಲ್ಲಿ ತಂದೆ-ತಾಯಿಯಿಂದ ಬೇರೆ ದೇವರು ಇರಲು ಸಾಧ್ಯವಿಲ್ಲ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ತೊಂದರೆ ಬಂದರೆ, ಅಥವಾ ತಪ್ಪು ಮಾಡಿದ್ದರೆ, ಮೊದಲು ಅಪ್ಪ-ಅಮ್ಮನ ಕಾಲಿಗೆ ಬಿದ್ದು ಕ್ಷಮೆ ಕೋರಿ ಎಲ್ಲವೂ ಸರಿಯಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಹಲವು ದಿನಗಳಿಂದ ಮನಸ್ಸಿನಲ್ಲಿ ಇರುವ ಕೆಲವೊಂದು ಮಾತುಗಳನ್ನೂ ಆಡುವುದಾಗಿ ಹೇಳಿರುವ ನಟ, ಕ್ಷಮೆಯನ್ನೂ ಕೋರಿದ್ದಾರೆ. 'ತುಂಬಾ ದಿನಗಳಿಂದ ಮನಸ್ಸಿನಲ್ಲಿ ನೋವು ಇದೆ. ಅದನ್ನು ನೇರವಾಗಿ ಹೇಳಬೇಕು ಎಂದುಕೊಂಡು ಹೇಳುತ್ತಿದ್ದೇನೆ. ಅಷ್ಟಕ್ಕೂ ನಾನು ಯಾವಾಗಲೂ ನೇರವಾಗಿ ಮಾತನಾಡುತ್ತೇನೆ. ನನ್ನ ಮನಸ್ಸಿನ ವಿಷ ಇಲ್ಲ, ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ಆದರೆ ಹಳ್ಳಿಯವ ನೋಡಿ, ಕೆಲವೊಂದು ಬಾರಿ ಮಾತನಾಡುವ ಸಂದರ್ಭದಲ್ಲಿ ಕೆಲವೊಂದು ಪದಗಳ ಬಳಕೆ ಆಗಿಬಿಡುತ್ತದೆ. ಹಾಗೆಯೇ ಕೆಲವು ಬಾರಿ ಮಾತನಾಡಿದ್ದೇನೆ. ಇದರಿಂದ ಹರ್ಟ್ ಆಗಿದ್ದರೆ ದಯವಿಟ್ಟು ಕ್ಷಮಿಸಿ. ನಾನು ನಿಮ್ಮ ತಂದೆ ವಯಸ್ಸಿನವ, ಕ್ಷಮಿಸಿ ಬಿಡಿ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯ ಕರೆಗೆ ಸ್ಪಂದಿಸಿ ದೇಗುಲದ ಆವರಣ ಸ್ವಚ್ಛಗೊಳಿಸಿದ ನಟ ಜಗ್ಗೇಶ್ ಹೀಗೊಂದು ಮನವಿ...
ಇದೇ ವೇಳೆ, ಇನ್ನೊಂದು ವಿಷಯವನ್ನೂ ಹೇಳುತ್ತೇನೆ ಅದೇನೆಂದರೆ, ಇತ್ತೀಚೆಗೆ ಒಂದು ಸಿನಿಮಾ ಮಾಡಿದ್ದೆ. ಅದನ್ನು ನೋಡಿದವರು ನನ್ನ ಮೇಲೆ ಬೇಸರ ಮಾಡಿಕೊಂಡಿರುವುದು ತಿಳಿದಿದೆ ಎಂದ ನಟ, ನಿರ್ದೇಶಕನನ್ನು ನಂಬಿಕೆ ಕೆಲಸ ಕೊಟ್ಟೆ. ಅವರು ತಮ್ಮ ಆಸೆಗೆ ತಕ್ಕಂತೆ ಕರ್ತವ್ಯ ನಿರ್ವಹಿಸಿದ್ದಾರೆ. ಆ ಸಿನಿಮಾದಿಂದ ಅಕಸ್ಮಾತ್ ಬೇಸರವಾಗಿದ್ದರೆ ಕ್ಷಮೆ ಇರಲಿ ಎಂದಿದ್ದಾರೆ. ಜೊತೆಗೆ ತಾವು ಕೊಟ್ಟಿರುವ ಕೆಲವೊಂದು ಉತ್ತಮ ಸಿನಿಮಾಗಳ ಬಗ್ಗೆ ಮಾತನಾಡಿದ ಜಗ್ಗೇಶ್ ಅವರು, ‘ಪ್ರೀಮಿಯರ್ ಪದ್ಮಿನಿ’, ‘8 ಎಂಎಂ’, ’ಕಾಳಿದಾಸ ಕನ್ನಡ ಮೇಷ್ಟ್ರು’ ಸೇರಿದಂತೆ ಕೆಲವು ಸಿನಿಮಾಗಳ ಬಗ್ಗೆ ಹೇಳಿದ್ದಾರೆ. ಈ ಒಂದು ಸಿನಿಮಾದಿಂದ ದೂರಾಗುವುದು ಬೇಡ ಎಂದಿದ್ದಾರೆ.
ವೃತ್ತಿಯಲ್ಲಿ ಲೋಪದೋಷಗಳಾಗಿದ್ದರೆ ಕ್ಷಮೆ ಇರಲಿ. ರಾಯರ ಸನ್ನಿಧಿಯಲ್ಲಿ ನಿಂತು ಈ ಕುರಿತು ಮಾತನಾಡಬೇಕು, ಮನಸ್ಸಿನಲ್ಲಿ ಇದ್ದ ವಿಷಯಗಳನ್ನು ಹೇಳಿ ಬಿಡಬೇಕು ಅಂದುಕೊಂಡಿದ್ದೆ, ಅದನ್ನೇ ಹೇಳುತ್ತಿದ್ದೇನೆ. ಮನಸ್ಸಿನಲ್ಲಿ ಇರುವುದನ್ನೆಲ್ಲಾ ಹೇಳುತ್ತಿದ್ದೇನೆ ಎಂದು ನಟ ಜಗ್ಗೇಶ್ ಹೇಳಿದ್ದಾರೆ.