ನಟ, ಸಂಸದ ಜಗ್ಗೇಶ್ ಅವರು ಪ್ರಧಾನಿಯವರ ಕರೆಗೆ ತಮ್ಮ ಗ್ರಾಮದ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದ್ದು, ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ..
ಅಯೋಧ್ಯೆಯಲ್ಲಿ ಐತಿಹಾಸಿಕ ದಿನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ 22ರಂದು ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ದೇಶ-ವಿದೇಶಗಳಲ್ಲಿ ಜನರು ತಯಾರಿ ನಡೆಸುತ್ತಿದ್ದಾರೆ. ಶ್ರೀರಾಮನ ಭಕ್ತರು ಇದಾಗಲೇ ರಾಮನಾಪ ಜಪಿಸುವ ಮೂಲಕ ಈ ಅದ್ಭುತ ಕಾರ್ಯಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ. ಸುಮಾರು 500 ವರ್ಷಗಳ ಹೋರಾಟದ ಫಲವಾಗಿ, ನಾಲ್ಕು ಲಕ್ಷಕ್ಕೂ ಅಧಿಕ ಮಂದಿಯ ಬಲಿದಾನಕ್ಕೆ ಸಿಕ್ಕಿರುವ ಈ ಫಲವನ್ನು ಕಣ್ತುಂಬಿಸಿಕೊಳ್ಳಲು ರಾಮ ಭಕ್ತರು ತುದಿಗಾಲಿನಲ್ಲಿ ನಿಂತಿದ್ದಾರೆ. ವಿದೇಶಗಳಲ್ಲಿಯೂ ಈ ಐತಿಹಾಸಿಕ ಕ್ಷಣವನ್ನು ನೋಡುವುದಕ್ಕಾಗಿ ವಿವಿಧೆಡೆಗಳಲ್ಲಿ ನೇರ ಪ್ರಸಾರದ ವ್ಯವಸ್ಥೆಗೆ ಸಿದ್ಧತೆ ನಡೆಸಲಾಗುತ್ತಿದೆ. ಅಮೆರಿಕದಲ್ಲಿ ನೂರಕ್ಕೂ ಅಧಿಕ ಕಡೆಗಳಲ್ಲಿ ನೇರ ಪ್ರಸಾರದ ವೀಕ್ಷಣೆಗೆ ಸಿದ್ಧತೆ ಮಾಡಲಾಗುತ್ತಿದೆ.
ಇದರ ಅಂಗವಾಗಿ ಇದಾಗಲೇ ಅಂದರೆ ಜನವರಿ 12ರಿಂದ ಪ್ರಧಾನಿ ನರೇಂದ್ರ ಮೋದಿಯವರು ಉಪವಾಸ ವ್ರತ ಕೈಗೊಂಡಿದ್ದಾರೆ. ಈ ವೇಳೆ, ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಪ್ರಸಿದ್ಧ ಕ್ಷೇತ್ರ ಶ್ರೀ ಕಲಾರಾಮ್ ದೇವಾಲಯದಲ್ಲಿ ದರ್ಶನ ಪಡೆದ ಪ್ರಧಾನಿ ಮೋದಿ ದೇವಾಲಯದಲ್ಲಿ ವಿಶೇಷ ಪೂಜೆ ಮಾಡುವ ಮೂಲಕ ಉಪವಾಸ ವ್ರತಕ್ಕೆ ಚಾಲನೆ ನೀಡಿದ್ದಾರೆ. ಭಗವಾನ್ ರಾಮ ಲಕ್ಷ್ಮಣ, ಸೀತೆ 14 ವರ್ಷಗಳ ವನವಾಸ ಆರಂಭಿಸಿದಾಗ ಹೆಚ್ಚಿನ ಸಮಯವನ್ನು ದಂಡಾಕರಣ್ಯದಲ್ಲಿ ಕಳೆದಿದ್ದರು. ಈ ಸಂದರ್ಭದಲ್ಲಿ ಪಂಚವಟಿಯಲ್ಲಿ ಪರ್ಣ ಕುಟೀರದಲ್ಲಿ ಜೀವನ ಸಾಗಿಸುತ್ತಿದ್ದರು. ರಾಮ, ಸೀತೆ ಮತ್ತು ಲಕ್ಷ್ಮಣ ತಮ್ಮ ವನವಾಸದ ಬಹು ಸಮಯವನ್ನು ಈ ಜಾಗದಲ್ಲಿ ಕಳೆದಿದ್ದರಿಂದ ಈ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವಿದ್ದು, ಈ ಜಾಗದಿಂದಲೇ ಧರ್ಮ ಕಾರ್ಯಕ್ಕೆ ಪ್ರಧಾನಿ ಚಾಲನೆ ನೀಡಿದ್ದಾರೆ.
ದೇವಸ್ಥಾನ ಪ್ರವೇಶ ನಿಷಿದ್ಧವೆಂದು ದೇಹವನ್ನೇ ರಾಮನ ಗುಡಿ ಮಾಡಿಕೊಂಡ ಜನಾಂಗದ ಇಂಟರೆಸ್ಟಿಂಗ್ ವಿಷ್ಯವಿದು!
ಇದೇ ವೇಳೆ, ಶ್ರೀ ಕಲಾರಾಮ್ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯವನ್ನು ಖುದ್ದು ಕೈಗೊಂಡ ಪ್ರಧಾನಿ, ದೇವಾಲಯವನ್ನು ಸ್ವಚ್ಛಗೊಳಿಸುವಂತೆ ಜನರಿಗೆ ಮನವಿ ಮಾಡಿಕೊಂಡರು. ಈ ಮನವಿ ಮೇರೆಗೆ ಇದಾಗಲೇ ಸಹಸ್ರಾರು ಮಂದಿ ತಮ್ಮ ತಮ್ಮ ವ್ಯಾಪ್ತಿಯಲ್ಲಿರುವ ದೇಗುಲಗಳ ಸ್ವಚ್ಛತೆಯನ್ನು ನಡೆಸುತ್ತಿದ್ದಾರೆ. ಬಿಜೆಪಿಯ ಕಾರ್ಯಕರ್ತರು ಮಾತ್ರವಲ್ಲದೇ ಸಹಸ್ರ ಸಂಖ್ಯೆಯಲ್ಲಿ ಜನರು ಪ್ರಧಾನಿ ನರೇಂದ್ರ ಮೋದಿಯವರ ಈ ಮನವಿಗೆ ಸ್ಪಂದಿಸುತ್ತಿದ್ದಾರೆ.
ಇದೀಗ ನಟ, ಸಂಸದ ಜಗ್ಗೇಶ್ ಅವರೂ ತಮ್ಮ ಗ್ರಾಮದ ಕಾಲಭೈರವೇಶ್ವರ ಆಲಯ ಶುಚಿಗೊಳಿಸಿದ್ದಾರೆ. ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ನಟ, ಹೆಮ್ಮೆಯ ನಮ್ಮ ಪ್ರಧಾನಿಗಳು ಶ್ರೀ ನರೇಂದ್ರ ಮೋದಿಯವರ ಪ್ರೀತಿಯ ಬೇಡಿಕೆಯಂತೆ ಇಂದು ನನ್ನ ಗ್ರಾಮದ ಕಾಲಭೈರವೇಶ್ವರ ಆಲಯ ಶುಚಿಗೊಳಿಸುವ ಕಾರ್ಯ ಆಂತರ್ಯ ಭಕ್ತಿಯಿಂದ ಮಾಡಿದೆ. 560 ವರ್ಷಗಳ ಹೋರಾಟದ ಫಲಶ್ರುತಿಯಿಂದ ಶ್ರೀರಾಮ ದೇವಸ್ಥಾನ ಸ್ಥಾಪನೆ ಆಗುತ್ತಿದೆ. ಇನ್ನಾದರೂ ದೇಶದ ಪ್ರತಿಪ್ರಜೆಗಳ ಹೃದಯದಲ್ಲಿ ಶ್ರೀರಾಮ ಸ್ಥಾಪಿತವಾಗಲಿ, ಜೈ ಶ್ರೀರಾಮ ಎಂದು ಅವರು ಬರೆದುಕೊಂಡಿದ್ದಾರೆ.
ರಾಮ ಭಕ್ತರ ಆಸೆ ಕೊನೆಗೂ ಈಡೇರಿಸಿದ ಡಾ.ಬ್ರೋ: ರಾಮಲಲ್ಲಾ ಮಂದಿರದ ಮುಖ್ಯದ್ವಾರದಲ್ಲಿ ಗಗನ್ ವಿವರಣೆ...