20 ವರ್ಷ ಆಗಿತ್ತು ಹಳ್ಳಿ ಜೀವನ ಅನುಭವಿಸಿ: ರಿಷಬ್‌ ಶೆಟ್ಟಿ

By Kannadaprabha News  |  First Published Apr 10, 2020, 8:47 AM IST

ಲಾಕ್‌ಡೌನ್‌ ಟೈಮ್‌ನಲ್ಲಿ ಮರಳಿ ತನ್ನೂರು ಸೇರಿದ್ದಾರೆ ನಟ, ನಿರ್ದೇಶಕ ಕಂ ನಿರ್ಮಾಪಕ ರಿಷಬ್‌ ಶೆಟ್ಟಿ. ಹಳ್ಳಿ ಲೈಫ್‌ನ ಸೊಗಸನ್ನು ಅವರಿಲ್ಲಿ ತೆರೆದಿಟ್ಟಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ಕೇಳಿ.


ಕೊರೋನಾ ಭೀತಿಯಿಂದ ಬೆಂಗಳೂರು ಬಿಟ್ಟು ಬಂದಿದ್ದನ್ನು ಹೇಳುವುದಕ್ಕೂ ಮೊದಲು ನಾನು ಬೆಂಗಳೂರಿನಲ್ಲಿರುವ ಸ್ಥಿತಿಯನ್ನು ಹೇಳುವೆ. ನಾನು ವಾಸ ಮಾಡುತ್ತಿರುವುದು ಫ್ಲಾಟ್‌ನಲ್ಲಿ. ಇಲ್ಲಿ ಎ ಯಿಂದ ಕೆ ವರೆಗೂ ಬ್ಲಾಕ್‌ಗಳಿವೆ. ಪ್ರತಿಯೊಂದು ಬ್ಲಾಕ್‌ನಲ್ಲೂ 70 ರಿಂದ 75 ಪ್ಲಾಟ್‌ಗಳಿವೆ. ಪ್ರತಿ ಬ್ಲಾಕ್‌ಗೂ ಲಿಫ್ಟ್‌ಗಳಿವೆ. ಎಲ್ಲರೂ ಲಿಫ್ಟ್‌ ಬಳಸುತ್ತಾರೆ. ಕೊರೋನಾ ವೈರಸ್ಸು ಹರಡುತ್ತಿರುವ ಸುದ್ದಿಯಾಗುತ್ತಿರುವಾಗಲೇ ಲಿಫ್ಟ್‌ಗಳಲ್ಲಿ, ಮನೆಯ ಕಾರಿಡಾರ್‌ನಲ್ಲಿ ವೈರಸ್‌ ಹಬ್ಬಿಸುವ ಕಿಡಿಗೇಡಿಗಳ ವಿಡಿಯೋಗಳನ್ನು ನಾನು ಮಾಧ್ಯಮಗಳಲ್ಲಿ ನೋಡುತ್ತಿದ್ದೆ. ನನಗೆ ಒಂದು ಕ್ಷಣ ಭಯ ಆಯ್ತು. ಮನೆಯಲ್ಲಿ 11 ತಿಂಗಳ ನನ್ನ ಮಗು ಇದೆ. ಹೀಗಾಗಿ ಒಂದಿಷ್ಟುದಿನ ಊರಿಗೆ ಹೋಗೋಣ ಎಂದು ನಿರ್ಧರಿಸಿದ್ವಿ. ನಾಲ್ಕೈದು ದಿನ ಇದ್ದರೆ ಸಾಕು ಅಂತ ಅವಸರ ಮಾಡಿಕೊಂಡು ಬೆಂಗಳೂರು ಬಿಟ್ಟು ಊರಿಗೆ ಬಂದೆ.

ಪುತ್ರ ರಣ್ವಿತ್‌ ಮೊದಲ ಬರ್ತಡೇಗೆ ಸ್ಪೆಷಲ್‌ ಗಿಫ್ಟ್‌ ನೀಡಿದ ರಿಷಬ್‌ ಶೆಟ್ಟಿ

Latest Videos

undefined

ಮರಳಿ ಹಳ್ಳಿಗೆ

ನಾವು ಕುಟುಂಬ ಸಮೇತರಾಗಿ ಊರು ಸೇರಿಕೊಂಡ ಮೇಲೆ ಜನತಾ ಕಪ್ರ್ಯೂ ಘೋಷಣೆ ಮಾಡಿದರು. ಇದಾದ ಮೇಲೆ 21 ದಿನ ಲಾಕ್‌ಡೌನ್‌ ಶುರುವಾಯಿತು. ನಾಲ್ಕೈದು ದಿನ ಊರಲ್ಲಿ ಇದ್ದು ಹೋಗೋಣ ಎಂದುಕೊಂಡು ಬಂದವರನ್ನು ಲಾಕ್‌ಡೌನ್‌ ಹಳ್ಳಿಯಲ್ಲೇ ನಿಲ್ಲುವಂತೆ ಮಾಡಿತು. ಏಪ್ರಿಲ್‌ 14ಕ್ಕೆ ಮುಗಿಯುತ್ತೋ, ಮುಂದುವರಿಯುತ್ತೋ ಗೊತ್ತಿಲ್ಲ. ನಮ್ಮದು ಕುಂದಾಪುರ ಬಳಿಯ ಕೆರಾಡಿ ಗ್ರಾಮ. ಅಧುನಿಕ ನಗರದ ಬಣ್ಣ ಇಲ್ಲದ ಊರು. ಮರಳಿ ಪಡೆದುಕೊಂಡ ಹಳ್ಳಿಯ ಜೀವನ ಅನುಭವ ಹೇಗಿದೆ ಎಂದು ಕೇಳಿದರೆ ಇಂಥದ್ದೊಂದು ಜೀವನ ಕಂಡು 20 ವರ್ಷಗಳಾಗಿತ್ತು. ನಾನು ಕಾಲೇಜು ಓದುವಾಗಲೂ ಇಷ್ಟುದಿನ ನನ್ನ ಹಳ್ಳಿಯ ಮನೆಯಲ್ಲಿ ಇರಲಿಲ್ಲ. ಬೆಂಗಳೂರು ಸೇರಿಕೊಂಡ ಮೇಲೆ ವರ್ಷಕ್ಕೆ ಒಂದೆರಡು ಸಲ ಊರು ನೆನಪಾಗುತ್ತಿತ್ತು. ಅದು ಬಿಟ್ಟರೆ ನಗರದ ಜಂಜಾಟಗಳು ಹುಟ್ಟೂರನ್ನೇ ಮರೆಸಿವೆ ಎನ್ನಬಹುದು.

ನಡೆಯಿರಿ ನಿಮ್ಮೂರಿಗೆ ಅಂದಿತು ಕೊರೋನಾ

ದುಡಿಮೆ, ಕನಸು, ಗುರಿ, ಸಂಪಾದನೆ, ಹೆಸರು, ಅಸ್ತಿ... ಹೀಗೆ ಎಲ್ಲದರ ಹಿಂದೆಯೂ ಓಡುತ್ತಿದ್ದೇವೆ. ಅದು ನಗರ ಜೀವನ ಮೂಲಭೂತ ಲಕ್ಷಣ ಎನ್ನುವ ಅಘೋಷಿತ ನಿಯಮವನ್ನು ನಾವೆಲ್ಲ ಒಪ್ಪಿ, ಓಡುತ್ತಲೇ ಇದ್ದೇವೆ. ಯಾರಿಗೂ ಟೈಮ್‌ ಇಲ್ಲ. ಬೇರೆಯವರ ಬಗ್ಗೆ ಇರಲಿ, ನಮ್ಮ ಬಗ್ಗೆ ನಾವೇ ಯೋಚಿಸುವುದಕ್ಕೂ ಸಮಯ ಇಲ್ಲ. ಹೀಗೆ ಓಡುತ್ತಿರುವ ಮನುಷ್ಯನನ್ನು ತಡೆದು ನಿಲ್ಲಿಸುವ ಶಕ್ತಿ ಇರುವುದು ಪ್ರಕೃತಿ ವಿಕೋಪಗಳಿಗೆ ಮಾತ್ರ. ಪ್ರಕೃತಿ ಮುನಿಸಿಕೊಂಡರೆ ಮನುಷ್ಯ ಬೆದರಿ ನಿಲ್ಲಬೇಕು. ಈಗ ಕೊರೋನಾ ರೂಪದಲ್ಲಿ ಅಂಥದ್ದೊಂದು ಭಯ ಶುರುವಾಗಿ, ನಡೆಯಿರಿ ನಿಮ್ಮ ಊರಿಗೆ ಎನ್ನುವಂತಾಗಿದೆ. ಶೇ.80 ಭಾಗದ ಜನ ತಮ್ಮೂರುಗಳತ್ತ ಮುಖ ಮಾಡಿದ್ದಾರೆ. ಅವರಲ್ಲಿ ನಾನೂ ಒಬ್ಬ.

ಕುಂದಾಪುರ ಕೆರಾಡಿಯ ಪ್ರಕೃತಿ ಮಡಿಲಲ್ಲಿ ಪುತ್ರ ರಣ್ವಿತ್‌ ಹುಟ್ಟು ಹಬ್ಬ ಆಚರಿಸಿದ ರಿಷಬ್‌!

ತೋಟದಲ್ಲಿ ಸುತ್ತಾಟ, ಮಗನೊಂದಿಗೆ ಆಟ

ನಾನು ನಗರದಲ್ಲಿ ಇದ್ದಿದ್ದರೆ ಏನೆಲ್ಲ ಕೆಲಸಗಳನ್ನು ಮಾಡುತ್ತಿದ್ದೆ ಎಂದು ಯೋಚಿಸಿದರೆ ನನ್ನೂರು, ಇಲ್ಲಿನ ಸಂಭ್ರಮ, ಇಲ್ಲಿನ ಖುಷಿ ಮುಂದೆ ಅದ್ಯಾವುದೂ ದೊಡ್ಡದು ಅನಿಸುತ್ತಿಲ್ಲ. ಪ್ರತಿ ದಿನ ಸಮಯಕ್ಕೆ ಸರಿಯಾಗಿ ತಿಂಡಿ, ಊಟ ಆಗುತ್ತಿದೆ. ಇದು ಬೆಂಗಳೂರು ಜೀವನದಲ್ಲಿ ಸಾಧ್ಯವಾಗುತ್ತಿರಲಿಲ್ಲ. ಬೆಳಗ್ಗೆ 7 ಗಂಟೆಗೆ ಎದ್ದರೆ ತೋಟದಲ್ಲಿ ಒಂದಿಷ್ಟು ಸುತ್ತಾಟ. ಮನೆಗೆ ಕಡೆ ಬಂದರೆ ತಿಂಡಿ ತಿಂದು ಮಗನ ಜತೆ ಆಟ. ಅವನ ಗಲಾಟೆ, ಅವನ ಅಳು, ಅವನ ಆಟಗಳು ಎಲ್ಲವೂ ನಮಗೆ ಮುದ್ದು. ಒಬ್ಬ ಅಪ್ಪನಿಗೆ ಮಾತ್ರ ದಕ್ಕುವ ಸಂಭ್ರಮ ಇದು. ಮಧ್ಯಾಹ್ನದವರೆಗೂ ಹೀಗೆ ಆಟ, ಆಮೇಲೆ ಊಟ ಮಾಡಿ ಸಣ್ಣ ನಿದ್ದೆ. ಇದರ ಜತೆಗೆ ಸಣ್ಣ ಪುಟ್ಟತೋಟದ ಕೆಲಸಗಳನ್ನು ಮಾಡುವುದು.

ಸಿನಿಮಾ ಸಿದ್ಧತೆಯೂ ನಡೆಯುತ್ತಿದೆ

ಬೆಂಗಳೂರು ಬಿಡುವ ಮುನ್ನವೇ ಸಾಹಸ ತರಬೇತಿಗೆ ಹೋಗುತ್ತಿದೆ. ಸಿನಿಮಾವೊಂದಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ. ಈಗ ಆ ಫೈಟ್‌ ತರಗತಿಗಳು ನನ್ನ ತೋಟದಲ್ಲಿ ನಡೆಯುತ್ತಿದೆ. ಬೆಳಗ್ಗೆ ಒಂದು ಗಂಟೆ ತೋಟದಲ್ಲಿ ವ್ಯಾಯಾಮ ಮಾಡುತ್ತಿದ್ದೇನೆ. ಇದು ಸಿನಿಮಾಗಾಗಿ. ಇನ್ನೂ ಬರವಣಿಗೆ ಮಾಡುತ್ತಿಲ್ಲ. ಯಾಕೆಂದರೆ ನಾನು ಡಿಕ್ಟೇಟ್‌ ಮಾಡೋನು. ಕತೆ ಹೇಳುತ್ತ ಹೋಗುತ್ತೇನೆ. ಮತ್ತೊಬ್ಬರು ಬರೆಯಬೇಕು. ಹೀಗಾಗಿ ಊರಿಗೆ ಬರುವ ಮೊದಲೇ ಮೂವರಿಗೆ ಮೂರು ಕತೆಗಳನ್ನು ಕೊಟ್ಟಿದ್ದೆ. ಅದರ ಬಗ್ಗೆ ಫೋನ್‌ನಲ್ಲೇ ಚರ್ಚೆ ಮಾಡುವುದು, ಅಭಿಪ್ರಾಯ ಹೇಳುವುದು ಇತ್ಯಾದಿ ನಡೆಯುತ್ತಿದೆ.

ಹಳ್ಳಿಯ ಖುಷಿಯೇ ಬೇರೆ

ಸಿನಿಮಾ, ಓದು, ಸ್ನೇಹಿತರು ಬೆಂಗಳೂರಿಗೆ ಹೋದ ಮೇಲೂ ಇರುತ್ತದೆ. ಆದರೆ 20 ವರ್ಷಗಳ ನಂತರ ಹಳ್ಳಿಯಲ್ಲಿ ಕಳೆಯುವ ದಿನಗಳನ್ನು ಯಾವ ಕಾರಣಕ್ಕೂ ಮಿಸ್‌ ಮಾಡಿಕೊಳ್ಳಬಾರದು ಅಂದುಕೊಂಡು ನಗರ ಕೆಲಸಗಳನ್ನೆಲ್ಲ ಬದಿಗಿಟ್ಟು ಮಗ, ಹೆಂಡತಿ, ಪೋಷಕರು, ಹಳ್ಳಿ, ತೋಟ ಇಷ್ಟೇ ನನ್ನ ಪ್ರಪಂಚ ಆಗಿದೆ. ಲಾಕ್‌ಡೌನ್‌ ಮುಂದುವರಿದರೂ ಇದೇ ನನ್ನ ಪ್ರಪಂಚ. ನಾನೇ ಮಗನಿಗೆ ಸ್ನಾನ ಮಾಡಿಸುತ್ತೇನೆ, ತೋಟಕ್ಕೆ ಕರೆದುಕೊಂಡು ಹೋಗುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ಮೊನ್ನೆ ತೋಟದಲ್ಲಿ ನಾವು ಮಗನ ಮೊದಲ ವರ್ಷದ ಹುಟ್ಟು ಹಬ್ಬ ಮಾಡಿದ್ದು. ಯಾರಿಗೂ ಯಾವುದನ್ನೂ ಹೇಳಿರಲಿಲ್ಲ. ನಮ್ಮ ಪಾಡಿಗೆ ನಾವು ಅಂದುಕೊಂಡ್ವಿ. ಎಷ್ಟುಚೆನ್ನಾಗಿತ್ತು ಅಂದರೆ ಒಂದು ಅದ್ದೂರಿಯಾಗಿ ಹೋಟೆಲ್‌ ನಲ್ಲಿ ಮಾಡಿದ್ದರೂ ಈ ಖುಷಿ ಸಿಗುತ್ತಿರಲಿಲ್ಲ.

ಹಳ್ಳಿ ತೋಟದಲ್ಲಿ ರಿಷಬ್‌ ಪುತ್ರ ರಣ್ವಿತ್‌ ಬರ್ತಡೇ; ಫೋಟೋ ನೋಡಿ

ದಯಮಾಡಿ ಪರಿಸ್ಥಿತಿ ಅರ್ಥಮಾಡಿಕೊಳ್ಳಿ

ನಿಜ, ಇಷ್ಟೆಲ್ಲ ಸಂಭ್ರಮಗಳ ನಡುವೆ ಲಾಕ್‌ಡೌನ್‌ ಒಂದಿಷ್ಟುಕಷ್ಟಗಳನ್ನು ತಂದು ಒಡ್ಡಿದೆ. ಲಾಕ್‌ಡೌನ್‌ ಮುಗಿದ ಮೇಲೆ ಉದ್ಯೋಗಗಳಿಗೆ ಕತ್ತರಿ ಬೀಳುತ್ತದೆ, ಒಂದಿಷ್ಟುಕಂಪನಿಗಳು ಮುಚ್ಚಬಹುದು, ಕೆಲಸ ಕಳೆದುಕೊಳ್ಳಬಹುದು. ಆರ್ಥಿಕ ವ್ಯವಸ್ಥೆ 15 ವರ್ಷಗಳ ಹಿಂದಕ್ಕೆ ಹೋಗಬಹುದು. ಆದರೆ, ಆರೋಗ್ಯ, ಪ್ರಾಣ ಇದ್ದರೆ ಮತ್ತೆ ಅದನ್ನು ಪಡೆಯಬಹುದು. ಒಂದು ಅಪತ್ತು ಬಂದಿದೆ. ಅದನ್ನ ತಡೆಯಲು ನಮಗೆ ನಾವೇ ತಯಾರಿ ಮಾಡಿಕೊಳ್ಳಬೇಕು. ಸುಮ್ಮನೆಯಲ್ಲಿ ಕೂರಬೇಕು. ಇದು ಸರ್ಕಾರಿ ಅದೇಶ ಅಂತ ಮಾತ್ರ ಅಂದುಕೊಳ್ಳಬೇಡಿ. ನಮ್ಮ ಹಾಗೂ ನಮ್ಮ ಸುತ್ತಲಿನವರನ್ನು ಕಾಪಾಡುವ ಕೆಲಸ. ನನಗೆ ಗೊತ್ತಿರುವ ಹಾಗೆ ಈ ಹೊತ್ತಿನಲ್ಲಿ ಸುಮ್ಮನೆ ಮನೆಯಲ್ಲಿರುವುದಕ್ಕಿಂತ ದೊಡ್ಡ ದೇಶ ಸೇವೆ ಮತ್ತೊಂದು ಇಲ್ಲ. ಆದರೆ, ನಮ್ಮ ಜನ ಕೇಳಲ್ಲ. ಮನೆಯಲ್ಲಿದ್ದು ದೀಪ ಹಚ್ಚಲು ಹೇಳಿದರೆ ಬೀದಿಗೆ ಬಂದು ಪಟಾಕಿ ಹೊಡೆಯುತ್ತಾರೆ. ಚಪ್ಪಾಳೆ ತಟ್ಟಿಅಂದರೆ ಬೀದಿಗೆ ಬಂದು ಮೆರವಣಿಗೆ ಮಾಡುತ್ತಾರೆ. ಒಂದು ತಿಳಿದುಕೊಳ್ಳಿ, ನಮ್ಮ ಜೀವ ಕಾಪಾಡಲು ಶ್ರಮಿಸುತ್ತಿರುವ ಪೊಲೀಸರಿಗೆ, ಡಾಕ್ಟರ್‌ಗೂ ನಮ್ಮ ಹಾಗೆ ಜೀವ ಇದೆ. ನಮ್ಮ ಹಾಗೆ ಕುಟುಂಬಗಳಿವೆ.

ಆರಂಭದಲ್ಲಿ ಕೊರೋನಾ ಬಂದಾಗ ಭಾರತ 3ನೇ ಸ್ಥಾನದಲ್ಲಿತ್ತು. ಈಗ 10ನೇ ಸ್ಥಾನಕ್ಕೆ ಬಂದಿದೆ. ಕೊರೋನಾ ಅಪಾಯದಿಂದ ನಿಧಾನಕ್ಕೆ ದೂರ ಹೋಗುತ್ತಿದ್ದೇವೆ. ಅದಕ್ಕೆ ನಾವು ಮನೆಯಲ್ಲಿದ್ದರೆ ಈ ಅಪಾಯವನ್ನು ಹಿಮ್ಮೆಟ್ಟಿಸಲು ಶ್ರಮಿಸುತ್ತಿರುವ ವೈದ್ಯರಿಗೆ ನಾವು ಕೊಡುವ ದೊಡ್ಡ ಗೌರವ ಆಗುತ್ತದೆ.

click me!