
ಶ್ರೀಹರಿ ರೆಡ್ಡಿ ನಿರ್ಮಾಣದ, ಕುಶಾಲ್ ಗೌಡ ನಿರ್ದೇಶಿಸಿ, ಡಾಲಿ ಧನಂಜಯ್ ನಟಿಸಿರುವ ‘ಜಮಾಲಿಗುಡ್ಡ’ ಸಿನಿಮಾ ಇದೇ ಡಿ.30ಕ್ಕೆ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಡಾಲಿ ಅವರ ಮಾತುಗಳು ಇಲ್ಲಿವೆ.
1. ಒಂದು ಅದ್ಭುತವಾದ ನೆನಪುಗಳನ್ನು ಉಳಿಸುವ ಸಿನಿಮಾ ‘ಜಮಾಲಿಗುಡ್ಡ’. ಪ್ರಯಾಣದ ಕತೆಗಳು ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲೂ ಜೀವನ ಪಯಣದ ಕತೆಗಳು ದೃಶ್ಯಗಳಾಗಿ ನಮ್ಮ ಮುಂದೆ ಬಂದಾಗ ಅವು ಕೊಡುವ ಫೀಲ್ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ.
2. ಈ ಚಿತ್ರವನ್ನು ನೋಡುತ್ತಿದ್ದಾಗ ನಿರ್ದೇಶಕ ಕುಶಾಲ್ ಗೌಡ ಅವರು ನಮ್ಮದೇ ಜಗತ್ತನ್ನು ಅಚ್ಚುಕಟ್ಟಾಗಿ ನಮ್ಮ ಮುಂದೆ ತೆರೆದಿಟ್ಟಿದ್ದಾರೆ ಎನಿಸುತ್ತದೆ. ಭಾವನಾತ್ಮಕ ಮನಸ್ಸುಗಳನ್ನು ತಟ್ಟುವ ಅಪರೂಪದ ಕತೆ ಇಲ್ಲಿದೆ.
3. ಮಾಸ್ ಹಾಗೂ ಆ್ಯಕ್ಷನ್ ಪ್ರಿಯರಿಗೆ ಈ ಸಿನಿಮಾ ಇಷ್ಟವಾಗುತ್ತದೆಯೇ ಎನ್ನುವ ಅನುಮಾನ ಬೇಡ. ಪ್ರೇಕ್ಷಕರು ಈಗ ಕ್ಯಾಟಗಿರಿ ಮಾಡಿಕೊಂಡು ಸಿನಿಮಾ ನೋಡಲ್ಲ. ಒಳ್ಳೆಯ ಕತೆಯನ್ನು ಯಾವ ಜಾನರ್‌ನಲ್ಲಿ ಹೇಳಿದರೂ ಇಷ್ಟಪಟ್ಟು ನೋಡುತ್ತಾರೆ. ಈಗ ಪ್ರೇಕ್ಷಕರಿಗೆ ಒಳ್ಳೆಯ ಕಂಟೆಂಟ್ ಮುಖ್ಯ. ಅದು ನಮ್ಮ ಈ ಚಿತ್ರದಲ್ಲಿ ಇದೆ ಎನ್ನುವ ಭರವಸೆ ಕೊಡುತ್ತೇನೆ.
4. ಪಾತ್ರಧಾರಿಗಳ ಸಂಯೋಜನೆಯೇ ಈ ಚಿತ್ರದ ಮತ್ತೊಂದು ವಿಶೇಷತೆ. ತುಂಬಾ ದಿನಗಳ ನಂತರ ನಟಿ ಭಾವನಾ ರಾಮಣ್ಣ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ಬೆಳವಾಡಿ, ಅದಿತಿ ಪ್ರಭುದೇವ, ನಂದಗೋಪಾಲ್, ಯಶ್ ಶೆಟ್ಟಿ, ಟಗರು ಸರೋಜ, ಬಾಲನಟಿ ಪ್ರಾಣ್ಯ ಹೀಗೆ ಕಲಾವಿದರ ದೊಡ್ಡ ದಂಡೇ ಚಿತ್ರದಲ್ಲಿದೆ. ಈ ಎಲ್ಲ ಪಾತ್ರಧಾರಿಗಳ ಸುತ್ತ ಒಂದು ಕತೆ ಸಾಗುತ್ತಿರುತ್ತದೆ. ಅದು ಭಾವನಾತ್ಮಕ ನೆನಪುಗಳ ಜರ್ನಿ ಆಗಿರುತ್ತದೆ.
5. ಕತೆ ಕೇಳಿದಾಗಲೇ ಈ ಚಿತ್ರದಲ್ಲಿ ನಟಿಸಬೇಕು ಎನಿಸುತ್ತದೆ. ಅಂಥ ಚಿತ್ರಗಳ ಸಾಲಿಗೆ ಸೇರುವ ಸಿನಿಮಾ ‘ಜಮಾಲಿಗುಡ್ಡ’. ಇದೊಂದು ಕಾಲ್ಪನಿಕಾ ಕತೆಯಾದರೂ ನೋಡುತ್ತಿದ್ದಾಗ ಎಲ್ಲೋ ಇದು ನಮ್ಮದೇ ಜೀವನದಲ್ಲಿ ಬಂದಿದೆಯಲ್ಲ ಎನಿಸುವ ಮಟ್ಟಿಗೆ ಈ ಸಿನಿಮಾ ಕನೆಕ್ಟ್ ಆಗುತ್ತದೆ.
6. ಕಾಲ್ಪನಿಕ ಜಗತ್ತು, ಅಲ್ಲಿನ ಸ್ನೇಹ, ಪ್ರೀತಿ- ಪ್ರೇಮ ಮತ್ತು ಜಗಳ, ಸಂಬಂಧಗಳು, ಜೈಲು ಇತ್ಯಾದಿಗಳ ಸುತ್ತ ಸಾಗುವ ಈ ಚಿತ್ರದಲ್ಲಿ ವಿಶೇಷ ತಿರುವುಗಳಿವೆ. ಇದೇ ಚಿತ್ರದ ನಿರೂಪಣೆಯ ವಿಶೇಷತೆ ಎನ್ನಬಹುದು.
Jamali Gudda: ನಟ ರಾಕ್ಷಸನ 'ಜಮಾಲಿ ಗುಡ್ಡ'ದ ಟ್ರೈಲರ್ ಸೂಪರ್: ನಿರೀಕ್ಷೆ ಹೆಚ್ಚಿಸಿದೆ 1995ರ ಕಥೆ
7. ಕತೆಯನ್ನು ಒಂದು ಸಾಲಿನಲ್ಲಿ ಹೇಳುವುದಾದರೆ ಜೈಲಿನಿಂದ ಪರಾರಿಯಾದ ಖೈದಿಯ ಸುತ್ತ ಸಾಗುವ ಸನ್ನಿವೇಶ, ಘಟನೆಗಳು ಅಥವಾ ಪಾತ್ರಧಾರಿಗಳ ಒಟ್ಟು ಸಂಯೋಜನೆಯೇ ಜಮಾಲಿಗುಡ್ಡ. 95 ಹಾಗೂ 96ರ ಕಾಲಘಟ್ಟದ ಕತೆಯಾದರೂ ಈಗಲೂ ನೋಡಿದಾಗ ಹೊಸತನದಿಂದ ಕಾಣುತ್ತದೆ.
8. ನಿರ್ದೇಶಕ ಕುಶಾಲ್ ಗೌಡ ಅವರ ಜೀವನದ ನೈಜ ಅನುಭವ ಕತೆಯನ್ನು ಈ ಚಿತ್ರದಲ್ಲಿ ಹೇಳಿದ್ದಾರೆ. ಹೀಗಾಗಿ ಇಡೀ ಸಿನಿಮಾ ಸಾಕಷ್ಟುರಿಯಾಲಿಟಿಯಿಂದ ಕೂಡಿರುತ್ತದೆ. ನಿರ್ಮಾಪಕ ಶ್ರೀಹರಿ ರೆಡ್ಡಿ ಅವರು ಯಾವುದಕ್ಕೂ ಕೊರತೆ ಮಾಡಿಲ್ಲ. ಹೀಗಾಗಿ ಮೇಕಿಂಗ್ ಕೂಡ ತುಂಬಾ ಚೆನ್ನಾಗಿ ಬಂದಿದೆ.
9. ಈ ವರ್ಷ ತೆರೆಗೆ ಬರುತ್ತಿರುವ ನನ್ನ ನಟನೆಯ 6ನೇ ಸಿನಿಮಾ ಜಮಾಲಿಗುಡ್ಡ. ವರ್ಷದ ಕೊನೆಯಲ್ಲಿ ಕುಟುಂಬ ಸಮೇತರಾಗಿ ನೋಡುವಂತಹ ಸಿನಿಮಾ ಕೊಡುತ್ತಿದ್ದೇವೆಂಬ ಖುಷಿ ಮತ್ತು ತೃಪ್ತಿ ಇದೆ. ಈಗಾಗಲೇ ಟೀಸರ್ ಹಾಗೂ ಟ್ರೇಲರ್ ನೋಡಿದ್ದೀರಿ. ಸಿನಿಮಾ ಕೂಡ ಅಷ್ಟೇ ವಿಶೇಷವಾಗಿ ಕೂಡಿರುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.