
ದರ್ಶನ್ ನಟನೆಯ ‘ದಿ ಡೆವಿಲ್’ ಟ್ರೈಲರ್ ಔಟ್!
ನಟ ದರ್ಶನ್ ತೂಗುದೀಪ (Darshan Thoogudeepa) ಅಭಿನಯದ 'ದಿ ಡೆವಿಲ್' ಸಿನಿಮಾ (The Devil) ಬರುವ ಗುರುವಾರ, ಅಂದರೆ 11 ಡಿಸೆಂಬರ್ 2025ರಂದು ಬಿಡುಗಡೆ ಆಗಲಿರುವುದು ಗೊತ್ತೇ ಇದೆ. ಇಂದು ಡೆವಿಲ್ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಈ ಟ್ರೇಲರ್‌ನಲ್ಲಿ ನಟ ದರ್ಶನ್ ಹೇಳಿರುವ ಡೈಲಾಗ್ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ. ಪ್ರಕಾಶ್ ವೀರ್ (ಮಿಲನಾ ಪ್ರಕಾಶ್) ನಿರ್ದೇಶನದ ದಿ ಡೆವಿಲ್ ಸಿನಿಮಾದ ಬಿಡುಗಡೆ ಆಗಿರುವ ಈ ಟ್ರೈಲರ್‌ನಲ್ಲಿ ನಟ ದರ್ಶನ್ ಅವರು 'ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ' ಎಂದು ಡೈಲಾಗ್ ಹೊಡೆದಿದ್ದಾರೆ.
ಟ್ರೈಲರ್ ನಲ್ಲಿ ಸ್ಟೈಲಿಶ್ ಅವತಾರದಲ್ಲಿ ಮಿಂಚಿರೋ ದರ್ಶನ್, ತಮ್ಮ ಅಭಿಮಾನಿಗಳಿಗೆ 'ಚಿನ್ನ' ಎಂದು ಸಂಬೋಧಿಸಿದ್ದಾರೆ. ಆದರೆ ಕೆಲವರು ಅದನ್ನೂ ಅಪಾರ್ಥ ಮಾಡಿಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಟ್ರೈಲರ್ ಬಿಡುಗಡೆಯಿಂದ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ದರ್ಶನ್ ನಟನೆಯ 'ದಿ ಡೆವಿಲ್' ಸಿನಿಮಾದ ಹೈಪ್ ಹಾಗೂ ಕುತೂಹಲ ಮತ್ತಷ್ಟು ಜಾಸ್ತಿಯಾಗಿದೆ. ಈ ಚಿತ್ರದಲ್ಲಿ ನಟಿ ರಚನಾ ರೈ ಅವರು ದರ್ಶನ್ ಜೋಡಿಯಾಗಿ ನಟಿಸಿದ್ದಾರೆ.
ನಟ ದರ್ಶನ್ ಉಪಸ್ಥಿತಿ ಇಲ್ಲದೆ ನಡೆದ ‘ದಿ ಡೆವಿಲ್’ ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಪ್ರಕಾಶ್ ವೀರ್, ‘ಸಿನಿಮಾ ಕುರಿತ ಪ್ರತಿಯೊಂದು ಅಪ್‌ಡೇಟ್‌ಗಳನ್ನೂ ದರ್ಶನ್ ಅವರಿಗೆ ನೀಡಲಾಗುತ್ತಿದೆ. ಅವರು ಬರುತ್ತಾರೆ ಎಂಬ ಆಸೆಯಲ್ಲಿ ನಾನು ಇಷ್ಟು ದಿನ ಕಾದೆ. ಅವರಿದ್ದಿದ್ದರೆ ಆನೆಬಲವಿತ್ತು. ಅವರು ಅಕ್ಟೋಬರ್‌ನಲ್ಲಿಯೇ ಸಿನಿಮಾ ರಿಲೀಸ್ ಮಾಡಲು ತಿಳಿಸಿದ್ದರು. ಆದರೆ ಚಿತ್ರ ಸಿದ್ಧವಿಲ್ಲದ ಕಾರಣ ಈಗ ಬಿಡುಗಡೆ ಮಾಡುತ್ತಿದ್ದೇವೆ. 2018ರಲ್ಲಿ ನಾನು ಈ ಕಥೆಯನ್ನು ಅವರ ಜೊತೆ ಚರ್ಚಿಸಿದ್ದೆ. ಅವರು ಓಕೆ, ನೀನು ಯಾವಾಗ ಸಿದ್ಧ ಅಂತ ಬರುತ್ತೀಯೋ ಆಗ ಮಾಡೋಣ ಎಂದಿದ್ದರು. ನಾನು ಅವರೂ ಫ್ಯಾಮಿಲಿ ಫ್ರೆಂಡ್ಸ್’ ಎಂದು ಹೇಳಿದರು.
ಕೊಲೆ ಆರೋಪದ ಬಳಿಕ ಚಿತ್ರೀಕರಣದಲ್ಲಿ ಹೇಗಿದ್ದರು ಎಂಬ ಪ್ರಶ್ನೆಗೆ, ‘ಅವರು ಯಾವತ್ತೂ ಅವರ ವೈಯಕ್ತಿಕ ವಿಚಾರವನ್ನು ಸೆಟ್‌ಗೆ ತರುತ್ತಿರಲಿಲ್ಲ. ಬೆನ್ನುನೋವಿನ ಕಾರಣಕ್ಕೆ ತುಂಬಾ ಮೆಡಿಸಿನ್ ತೆಗೆದುಕೊಳ್ಳುತ್ತಿದ್ದದ್ದನ್ನು ನಾವು ನೋಡಿದ್ದೇವೆ. ಅದರ ಹೊರತಾಗಿ ನಾವು ಸಿನಿಮಾ ಕುರಿತು ಮಾತ್ರ ಮಾತನಾಡುತ್ತಿದ್ದೆವು’ ಎಂದರು.
ಪ್ರಮುಖ ಪಾತ್ರಧಾರಿ ಶರ್ಮಿಳಾ ಮಾಂಡ್ರೆ, ‘18 ವರ್ಷದ ಹಿಂದೆ ದರ್ಶನ್ ಜೊತೆ ನವಗ್ರಹ ಸಿನಿಮಾ ಮಾಡಿದ್ದೆ. 18 ವರ್ಷದ ನಂತರ ಎರಡನೇ ಸಿನಿಮಾ ಮಾಡುತ್ತಿದ್ದೇನೆ. ದರ್ಶನ್ ಅವರ ಮೇಲೆ ಅಪಾರ ಗೌರವ ಇದೆ’ ಎಂದರು. ನಾಯಕ ನಟಿ ರಚನಾ ರೈ, ‘ನನ್ನನು ಇಡೀ ಕರ್ನಾಟಕಕ್ಕೆ ಪರಿಚಯಿಸಿದ ಸಿನಿಮಾ ಇದು. ಇನ್ನು ಮಂದೆ ನನಗೆ ಎಷ್ಟೇ ಸಕ್ಸಸ್ ಸಿಕ್ಕಿದರೂ ಅದು ಡೆವಿಲ್ ಚಿತ್ರಕ್ಕೆ, ದರ್ಶನ್ ಸರ್‌ಗೆ, ಪ್ರಕಾಶ್ ವೀರ್ ಸರ್‌ಗೆ ಅರ್ಪಣೆ’ ಎಂದರು. ಕಾರ್ಯಕಾರಿ ನಿರ್ಮಾಪಕಿ ತಶ್ವಿನಿ, ಕಲಾವಿದರಾದ ಅಚ್ಯುತ್ ಕುಮಾರ್, ಹುಲಿ ಕಾರ್ತಿಕ್, ಸೋನಿಯಾ, ಯುವರಾಜ್, ಶೋಭರಾಜ್, ಸಂಭಾಷಣಾಕಾರ ಕಾಂತರಾಜ್, ಚಿತ್ರಸಾಹಿತಿಗಳಾದ ಪ್ರಮೋದ್ ಮರವಂತೆ, ಅನಿರುದ್ಧ ಶಾಸ್ತ್ರಿ ಇದ್ದರು.
ಡೆವಿಲ್ ಸಿನಿಮಾದಲ್ಲಿ ದರ್ಶನ್ ಬಳಸಿರುವ ವಿಶೇಷ ವಿನ್ಯಾಸದ ಅದ್ದೂರಿ ಡೆವಿಲ್ ಕುರ್ಚಿಯನ್ನು ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಈ ಕುರ್ಚಿ ಜೊತೆ ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳಬಹುದಾಗಿದ್ದು, ದರ್ಶನ್ ಅಭಿಮಾನಿಗಳು ಕುರ್ಚಿ ಜೊತೆ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಈ ಕುರ್ಚಿ ವಿನ್ಯಾಸ ಆದಾಗಲೇ ದರ್ಶನ್ ಅವರು, ‘ಈ ಕುರ್ಚಿಯನ್ನು ರಿಲೀಸ್ ಟೈಮಲ್ಲಿ ಚಿತ್ರಮಂದಿರದ ಹೊರಗೆ ಇರಿಸಬೇಕು. ನನಗೆ ಖುಷಿಯಾಗುತ್ತದೆ’ ಎಂದಿದ್ದರಂತೆ. ಅದಕ್ಕೆ ಪೂರಕವಾಗಿ ಕುರ್ಚಿಯನ್ನು ಇಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.