
ಬಳ್ಳಾರಿ (ಅ.05): ಕೊಲೆ ಪ್ರಕರಣದಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಬೆನ್ನುನೋವಿನಿಂದ ಬಳಲುತ್ತಿದ್ದು, ಕಳೆದ ಎರಡು ದಿನಗಳಿಂದ ನಿದ್ರೆಯಿಲ್ಲದೆ ಒದ್ದಾಡಿದ್ದಾರೆ. ಆರೋಗ್ಯ ಸಮಸ್ಯೆ ಹೇಳಿಕೊಂಡ ನಟ ದರ್ಶನ್‌ಗೆ ನಗರದ ಬಿಮ್ಸ್ ವೈದ್ಯರು ಜೈಲಿಗೆ ಆಗಮಿಸಿ ಆರೋಗ್ಯ ತಪಾಸಣೆ ಮಾಡಿದರು. ಬೆನ್ನಿನಲ್ಲಿ ಊತ ಕಾಣಿಸಿಕೊಂಡಿದೆ. ಸ್ಕ್ಯಾನಿಂಗ್ ನಡೆಸಿ, ಸೂಕ್ತ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯಕ್ಕೆ ನೋವು ನಿವಾರಕ ಮಾತ್ರೆಯನ್ನಷ್ಟೇ ಕೊಡಿ. ಬೆಂಗಳೂರಿಗೆ ತೆರಳಿದ ಬಳಿಕ ಸ್ಕ್ಯಾನಿಂಗ್ ಹಾಗೂ ಶಸ್ತ್ರಚಿಕಿತ್ಸೆಗೆ ಒಳಗಾಗುವೆ ಎಂದು ನಟ ದರ್ಶನ್ ಹೇಳಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ದಿನದಿಂದಲೂ ನಟ ದರ್ಶನ್ ಬೆನ್ನುನೋವಿನ ಸಮಸ್ಯೆ ಹೇಳಿಕೊಂಡಿದ್ದರು.
ಹೀಗಾಗಿಯೇ ಸರ್ಜಿಕಲ್ ಚೇರ್‌ನ ಬೇಡಿಕೆ ಇಟ್ಟಿದ್ದರು. ಬಳಿಕ ಚೇರ್, ಬೆಡ್, ದಿಂಬು ಸೌಲಭ್ಯ ಒದಗಿಸುವಂತೆ ಕೋರಿದ್ದರು. ಆದರೆ, ಜೈಲು ಅಧಿಕಾರಿಗಳು ಈವರೆಗೆ ಸೌಲಭ್ಯ ಕಲ್ಪಿಸಿಲ್ಲ. ದರ್ಶನ್ ಬೆನ್ನು ನೋವಿನ ಬಗ್ಗೆ ವೈದ್ಯಕೀಯ ವರದಿ ಬಂದ ಬಳಿಕ ಅವರ ಮುಂದಿನ ಚಿಕಿತ್ಸೆ, ಸೆಲ್‌ಗೆ ಬೆಡ್, ದಿಂಬು ಸೌಲಭ್ಯ ಒದಗಿಸುವ ಕುರಿತು ಜೈಲಿನ ಅಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ದರ್ಶನ್ ಅವರ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಿರುವ ಜೈಲಿನ ವೈದ್ಯರು ಎರಡು ದಿನಕ್ಕೊಮ್ಮೆ ಅವರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.
ಪತ್ನಿ-ಪುತ್ರ ಜೈಲಿಗೆ ಭೇಟಿ: ಬಳ್ಳಾರಿಗೆ ನಟ ದರ್ಶನ್ ಸ್ಥಳಾಂತರವಾದ ಬಳಿಕ ಮೊದಲ ಬಾರಿಗೆ ತಂದೆಯನ್ನು ನೋಡಲು ತಾಯಿ ವಿಜಯಲಕ್ಷ್ಮಿ ಜತೆ ದರ್ಶನ್ ಪುತ್ರ ವಿನೀಶ್ ಜೈಲಿಗೆ ಭೇಟಿ ನೀಡಿದರು. ಜೈಲಿನಲ್ಲಿ ತಂದೆಯನ್ನು ಕಂಡ ಪುತ್ರ ವಿನೀಶ್ ಕಣ್ಣೀರಾದರು. ದರ್ಶನ್ ಮಗನನ್ನು ಸಮಾಧಾನಿಸಿ, ಧೈರ್ಯವಾಗಿರಬೇಕು. ಎಲ್ಲವೂ ಒಳ್ಳೆಯದಾಗುತ್ತದೆ. ಆದಷ್ಟು ಬೇಗ ಹೊರಗೆ ಬರುತ್ತೇನೆ. ನಿಮ್ಮ ಜೊತೆಯಿದ್ದು ಸಮಯ ಕಳೆಯುತ್ತೇನೆ. ಓದಿನ ಕಡೆ ಹೆಚ್ಚು ಗಮನ ಹರಿಸು ಎಂದು ಪುತ್ರ ವಿನೀಶ್‌ಗೆ ನಟ ದರ್ಶನ್ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನಮ್ಮಂತಹವರಿಗೆ ಮಾದರಿಯಾಗಲಿ: ಸಾ.ರಾ.ಮಹೇಶ್
ಪುತ್ರ, ಪತ್ನಿ ವಿಜಯಲಕ್ಷ್ಮಿ, ಸಂಬಂಧಿ ಸುಶಾಂತ್ ರೆಡ್ಡಿ, ಆಪ್ತರನ್ನು ಭೇಟಿಯಾಗಿ ಸುಮಾರು 40 ನಿಮಿಷಗಳ ಕಾಲ ನಟ ದರ್ಶನ್ ಮಾತುಕತೆ ನಡೆಸಿದರು. ಪತ್ನಿ ಎರಡು ಬ್ಯಾಗ್ ನಲ್ಲಿ ತಂದಿದ್ದ ಬಟ್ಟೆ, ಸಿಹಿ ತಿಂಡಿ ತಿನಿಸುಗಳನ್ನು ದರ್ಶನ್ ತಮ್ಮ ಸೆಲ್‌ಗೆ ತೆಗೆದುಕೊಂಡು ಹೋದರು. ಜೈಲಿನಲ್ಲಿ ನಟ ದರ್ಶನ್ ಅವರನ್ನು ಭೇಟಿಯಾದ ಬಳಿಕ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೇಶ್ ನಗರದ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.