
ಯಾಕೆ ಕರ್ನಾಟಕದಿಂದ ಪತ್ರಕರ್ತರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಬರುವುದಿಲ್ಲ? ಇಲ್ಲಿಯವರೆಗೂ ಇಲ್ಲಿಂದ ಒಬ್ಬ ಪತ್ರಕರ್ತನೂ ಬಂದದ್ದು, ಅದರ ಬಗ್ಗೆ ಬರೆದದ್ದು ನನ್ನ ನೆನಪಿನಲ್ಲಿಲ್ಲ ಎಂದು ಕೇಳಿದ್ದು-ಹೇಳಿದ್ದು ಬಿ.ಕೆ. ಕಾರಂಜಿಯಾ, 1974ರಲ್ಲಿ. ಅವರು ಇಂದಿನ ನ್ಯಾಷನಲ್ ಫಿಲಂ ಡೆವಲೆಪ್ಮೆಂಟ್ ಕಾರ್ಪೋರೇಷನ್ನಿನ ಪೂರ್ವದ ಅವತಾರವಾಗಿದ್ದ ಫಿಲಂ ಫೈನಾನ್ಸ ಕಾರ್ಪೋರೇಷನ್ ಆಫ್ ಇಂಡಿಯಾ (ಎಫ್ಎಫ್ಸಿಐ) ಅಧ್ಯಕ್ಷರಾಗಿದ್ದು ಮಾತ್ರವಲ್ಲ, ಆ ಕಾಲದ ಪ್ರಸಿದ್ಧ ಸಿನಿಮಾ ಪತ್ರಿಕೆ ‘ಫಿಲಂಫೇರ್’ ಪತ್ರಿಕೆಯ ಸಂಪಾದಕರೂ ಆಗಿದ್ದರಿಂದ ಕೇಳಿದ ಪ್ರಶ್ನೆ ಅದಾಗಿತ್ತು.
ಅವರ ಪ್ರಶ್ನೆ ಸರಿಯಿತ್ತು ಕೂಡ. ಕರ್ನಾಟಕದ ಯಾವ ಪತ್ರಕರ್ತನೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ಅಲ್ಲಿಯವರೆಗೆ ಕೇಳಿದ್ದಾಗಲಿ, ಬರೆದದ್ದಾಗಲಿ ಇರಲಿಲ್ಲ. ಕಾರಂಜಿಯಾ ಬೆಂಗಳೂರಿಗೆ ಬಂದದ್ದು ಎಫ್ಎಫ್ಸಿಐ ನಿರ್ಮಾಣದ ಸಿನಿಮಾಗಳ ಉತ್ಸವಕ್ಕಾಗಿ, 1974ರಲ್ಲಿ. ಗೆಲಾಕ್ಸಿ ಥಿಯೇಟರ್ನಲ್ಲಿ ಒಂದು ವಾರ ನಡೆದ ಚಿತ್ರೋತ್ಸವ ಅದಾಗಿತ್ತು. ಇದು ಆ ದಶಕದ ಬೆಂಗಳೂರಿನ ಎರಡನೆಯ ಚಿತ್ರೋತ್ಸವ. ಅದಕ್ಕೆ ಮೊದಲು ನಡೆದದ್ದು, ಸತ್ಯಜಿತ್ ರೇ ಚಿತ್ರೋತ್ಸವ, 1972ರಲ್ಲಿ. ಅವೆಲ್ಲಾ ಆ ಕಾಲದ ಅಪರೂಪಗಳು.
ಕಾರಂಜಿಯಾ ಜೊತೆ ನಡೆದ ಸಂವಾದ ಗೋಷ್ಠಿಯಲ್ಲಿದ್ದ ಹಿರಿಯ ಪತ್ರಕರ್ತ ವಿ.ಎನ್. ಸುಬ್ಬರಾಯರು, ಮುಂದಿನ 1976ರ ಚಲನಚಿತ್ರೋತ್ಸವದಲ್ಲಿ, ಇಲ್ಲಿಂದ ಖಂಡಿತವಾಗಿಯೂ ಐದಾರು ಪತ್ರಕರ್ತರು ಹಾಜರಿರುತ್ತಾರೆ ಅಂತ ಘೋಷಿಸಿಯೂ ಬಿಟ್ಟರು. 1976ರ ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆದದ್ದು ಮುಂಬೈನಲ್ಲಿ. ಯೋಗಾನುಯೋಗವೆಂಬಂತೆ, ಬಿ.ವಿ. ಕಾರಂತ ನಿರ್ದೇಶನದ ‘ಚೋಮನದುಡಿ’ ಚಿತ್ರ ಅದಕ್ಕೆ ಆಯ್ಕೆಯಾಗಿತ್ತು. ನೆನಪಿದ್ದ ಹಾಗೆ, ಇಡೀ ದಕ್ಷಿಣದಿಂದ ಆಯ್ಕೆಯಾಗಿದ್ದ ಒಂದೇ ಚಿತ್ರ ಅದಾಗಿತ್ತು. ಕಾರಂತರೊಂದಿಗೆ ಚಿತ್ರದ ಪ್ರಮುಖ ನಟರಾದ ವಾಸುದೇವ ರಾವ್ ಮತ್ತು ಪದ್ಮಾ ಕುಮುಟಾರಿಗೆ ಅಧಿಕೃತ ಆಹ್ವಾನವಿತ್ತು.
ಆಗಿನ್ನೂ ಪುಣೆಯ ಫಿಲಂ ಇನ್ಸಟಿಟ್ಯೂಟ್ ವಿದ್ಯಾರ್ಥಿಯಾಗಿದ್ದ ಹಾಗೂ ‘ಚೋಮನದುಡಿ’ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ಗಿರೀಶ ಕಾಸರವಳ್ಳಿಯೂ ಹಾಜರಾಗುವವರಿದ್ದರು. ಮುಂಬೈ ದೂರದರ್ಶನದಲ್ಲಿದ್ದ ಅದರ ಸಹಾಯಕ ಕ್ಯಾಮೆರಾಮನ್ ಶಶಿಧರ ಕುಲಕರ್ಣಿಗೂ ಭಾಗವಹಿಸುವ ಅವಕಾಶವಿತ್ತು.
ಇನ್ನು, ಹಿಂದಿನ ವರ್ಷವಷ್ಟೇ ಬಿಡುಗಡೆಯಾಗಿದ್ದ ‘ಹಂಸಗೀತೆ’ಯ ನಿರ್ದೇಶಕ, ಚಿತ್ರರಂಗದ ಹಿರಿಯ ಜಿ.ವಿ. ಅಯ್ಯರ್ ಮತ್ತು ಅವರ ಖಾಸಾ ಶಿಷ್ಯ ವಿ.ಆರ್.ಕೆ. ಪ್ರಸಾದ್ ಸಹ ಹೊರಟರು. ಆಗೆ ಪುಣೆಯ ಫಿಲಂ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಯಾಗಿದ್ದ ಮುಂದೆ ‘ಈ ಟಿವಿ’ ಪ್ರಮುಖರಾದ ಪವನ್ಕುಮಾರ್ ಮಾನ್ವಿ ಸಹ ಪಟ್ಟಿಯಲ್ಲಿದ್ದರು. ಮುಂಬೈ ನಿವಾಸಿಯಾಗಿದ್ದು ಹಿಂದಿ ಚಿತ್ರರಂಗದ ಬಗ್ಗೆ ಬರೆಯುತ್ತಿದ್ದ ಸಂತೋಷಕುಮಾರ ಗುಲ್ವಾಡಿಯವರ ಹಾಜರಾತಿ ಕಡ್ಡಾಯವಾಗಿತ್ತು. ಆಗೆಲ್ಲಾ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಪಾಸ್ ಪಡೆಯುವುದು ಸುಲಭವೇನಾಗಿರಲಿಲ್ಲ.
ಎಲ್ಲಾ ಸರಿ, ಆದರೆ ಪತ್ರಕರ್ತರ ಕೋಟಾದಲ್ಲಿದ್ದದ್ದು ವಿ.ಎನ್. ಸುಬ್ಬರಾಯರು ಮಾತ್ರ. ಯಾವ ಪತ್ರಿಕೆಯವರಿಗೂ ಈ ಚಿತ್ರೋತ್ಸವ ಮುಖ್ಯವಾಗಿರಲಿಲ್ಲ. ಹೀಗಾಗಿ ಅವರುಗಳು ತಮ್ಮವರನ್ನು ಕಳಿಸಲು ಮುಂದಾಗಲಿಲ್ಲ. ಚಿತ್ರೋತ್ಸವಕ್ಕೆ ನೀನು ಬಾ ಅಂತ ನನ್ನನ್ನು ಸುಬ್ಬರಾಯರು ಕರೆದರು. ಸುಬ್ಬರಾಯರು ಅನಧಿಕೃತವಾಗಿ ನಡೆಸುತ್ತಿದ್ದ ಆ ಕಾಲದ ಖ್ಯಾತ ಸಿನಿಮಾ ವಾರಪತ್ರಿಕೆ ‘ಮೇನಕಾ’ದಲ್ಲಿ ಸಾಕಷ್ಟು ಲೇಖನಗಳನ್ನು ಪ್ರಕಟಿಸಿದ್ದು, ಒಂದು ರೀತಿಯಲ್ಲಿ ಅದರ ಅರೆಕಾಲಿಕ ಪತ್ರಕರ್ತನಾಗಿದ್ದು, ಅವರು ನನ್ನನ್ನು ಕರೆಯಲು ಕಾರಣ. ಹೀಗಾಗಿ ಹೊರಟ ನಾನು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ವರದಿ ಮಾಡಿದ ಕರ್ನಾಟಕದ ಎರಡನೇ ಪತ್ರಕರ್ತ ನಾನಾದೆ. ಮೊದಲನೆಯವರು ಸುಬ್ಬರಾಯರು ಎಂದು ಹೇಳಬೇಕಿಲ್ಲ. ಅದರ ಕುರಿತ ವರದಿಗಳನ್ನು ನಾನು ‘ಮೇನಕಾ’ಗೆ, ಸುಬ್ಬರಾಯರು ಅವರ ‘ಇಂಡಿಯನ್ ಎಕ್ಸಪ್ರೆಸ್’ ಗೆ ಬರೆದರು.
1976ರ ಆ ಚಿತ್ರೋತ್ಸವದಲ್ಲಿ, ಈ ಚಿತ್ರದಲ್ಲಿಲ್ಲದ ಖ್ಯಾತ ನಿರ್ದೇಶಕ ಎನ್. ಲಕ್ಷ್ಮೀನಾರಾಯಣ್ ಸಹ ಇದ್ದರು. ಮುಂಬೈನಲ್ಲೇ ನೆಲೆಸಿದ್ದ ಖ್ಯಾತ ಕ್ಯಾಮರಾಮನ್ ವಿ.ಕೆ ಮೂರ್ತಿ ಸಹ ಇದ್ದರು. 10-12 ಕನ್ನಡದ ಪ್ರತಿನಿಧಿಗಳಿದ್ದ ಚಿತ್ರೋತ್ಸವ ಅದಾಗಿತ್ತು. ಆಗ ಸಹನಿರ್ದೇಶಕನಾಗಿ ಭಾಗವಹಿಸಿದ್ದ ಗಿರೀಶ್ ಕಾಸರವಳ್ಳಿ, ಈ ಐವತ್ತು ವರ್ಷಗಳಲ್ಲಿ ಇದೇ 20 ನೇ ತಾರೀಖಿನಿಂದ ನಡೆಯುತ್ತಿರುವ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ, ಅವರ 50 ವರ್ಷಗಳ ಸಾಧನೆಗಾಗಿ ಅವರ ಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಈ 50 ವರ್ಷದಲ್ಲಿ ಚಿತ್ರದಲ್ಲಿರುವ ನಾನು, ಗಿರೀಶ್, ಮಾನ್ವಿಯ ಹೊರತಾಗಿ ಉಳಿದವರು ಯಾರೂ ನಮ್ಮೊಂದಿಗಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.