ಏಕಾಏಕಿ ತೆರೆಗೆ ಅಪ್ಪಳಿಸಿದ 11 ಕನ್ನಡ ಸಿನಿಮಾಗಳು; ಪ್ರೇಕ್ಷಕ ಕಂಗಾಲು!

By Kannadaprabha NewsFirst Published Feb 8, 2020, 10:20 AM IST
Highlights

ಒಂದೇ ದಿನ 11 ಸಿನಿಮಾಗಳು ಒಟ್ಟಿಗೆ ಬಿಡಿಗಡೆಯಾಗುವುದು ಸಿನಿಮಾ ದೃಷ್ಟಿಯಿಂದಲೂ, ಕಲೆಕ್ಷನ್ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಫೆ. 07 ರಂದು ಒಂದೇ ದಿನ 11 ಸಿನಿಮಾಗಳು ಒಟ್ಟಿಗೆ ಬಿಡುಗಡೆಯಾಗಿವೆ. 

- ನಮ್ಮ ಚಿತ್ರಕ್ಕೆ ಥಿಯೇಟರ್‌ ಕೊಡುತ್ತೇನೆ ಎಂದವರು ಈಗ ಕೊಡುತ್ತಿಲ್ಲ.

- ಒಳ್ಳೆಯ ಚಿತ್ರ ಮಾಡಿದ್ದೇವೆ. ಆದರೂ ನಮಗೆ ಥಿಯೇಟರ್‌ ಸಿಗುತ್ತಿಲ್ಲ.

- ನಾವು ಹೊಸಬರು, ಸಿನಿಮಾ ಚೆನ್ನಾಗಿದ್ದರೂ ಜನ ಬರುತ್ತಿಲ್ಲ.

- ಚಿತ್ರಮಂದಿರಕ್ಕೆ ಜನ ಬರುವ ತನಕ ಸಿನಿಮಾ ನಿಲ್ಲಿಸಿಕೊಳ್ಳಕ್ಕೆ ಆಗಲಿಲ್ಲ.

- ನಮ್ಮ ಚಿತ್ರ ಚೆನ್ನಾಗಿದ್ದರೂ ಎತ್ತಂಗಡಿ ಮಾಡುತ್ತಿದ್ದಾರೆ. ಯಾಕೆ ಅಂತ ಗೊತ್ತಿಲ್ಲ.

ಚಿತ್ರರಂಗದಲ್ಲಿ ಪ್ರತಿ ಶುಕ್ರವಾರ ಸಾಮಾನ್ಯವಾಗಿ ಕೇಳಿ ಬರುವ ಮಾತುಗಳು ಇವು. ಆದರೂ ಹೀಗೆ ಅಳಲು ತೋಡಿಕೊಳ್ಳುವವರೇ ತಾ ಮುಂದು, ನಾ ಮುಂದೆ ಎನ್ನುತ್ತ ವಾರಕ್ಕೆ ಐದಾರು ಚಿತ್ರಗಳನ್ನು ಬಿಡುಗಡೆ ಮಾಡುತ್ತಲೇ ಇದ್ದಾರೆ. ಈ ಶುಕ್ರವಾರಂತೂ (ಫೆ.7) ಏಕಾಏಕಿ 11 ಸಿನಿಮಾಗಳು ತೆರೆ ಮೇಲೆ ಅಪ್ಪಳಿಸಿವೆ.

ಆ ಪೈಕಿ ಒಂಭತ್ತು ಚಿತ್ರಗಳು ಅಧಿಕೃತವಾಗಿ ದಿನಾಂಕ ಪ್ರಕಟಿಸಿಕೊಂಡು ತೆರೆ ಮೇಲೆ ಬಂದರೆ, ಉಳಿದ ಎರಡು ಚಿತ್ರಗಳು ಬಂದ ಪುಟ್ಟಹೋದ ಪುಟ್ಟಪಟ್ಟಿಗೆ ಸೇರಿವೆ. ಎರಡು ಅಥವಾ ಮೂರು ಚಿತ್ರಗಳಿಗೆ ಸೀಮಿತವಾಗಿದ್ದ ಸ್ಯಾಂಡಲ್‌ವುಡ್‌ನಲ್ಲಿ 11 ಸಿನಿಮಾಗಳು ಬಿಡುಗಡೆಯಾಗುವ ಮೂಲಕ ಸಿನಿಮಾ ಸಂತೆ ಸೃಷ್ಟಿಯಾಗಿ ಅತಿವೃಷ್ಟಿಗೆ ತುತ್ತಾಗಿದೆ.

ಚಿತ್ರರಂಗದಲ್ಲಿ ಸೋಷಿಯಲ್ ಮೀಡಿಯಾ ಮಾಫಿಯಾ: ರಾಜೇಂದ್ರ ಸಿಂಗ್ ಬಾಬು

ಸಿನಿಮಾ ಬಿಡುಗಡೆಯ ದಿನವೇ ವಿಜಯ್‌ ರಾಘವೇಂದ್ರ ಸಿನಿಮಾದಿಂದ ಪ್ರಜ್ವಲ್‌ ದೇವರಾಜ್‌ ಚಿತ್ರಕ್ಕೆ ಅನ್ಯಾಯ ಆಗಿದೆ ಎನ್ನುವ ಸುದ್ದಿ ಬಂತು. ಈ ಎರಡೂ ಚಿತ್ರಗಳಿಂದ ತಮಗೆ ಥಿಯೇಟರ್‌ ಸಿಕ್ಕಿಲ್ಲ ಎಂದು ಉಳಿದವರು ಗಲಾಟೆ ಮಾಡಿದ್ದು ಸುದ್ದಿ ಆಗಲಿಲ್ಲ. ಇವರಿಬ್ಬರ ಜಂಗಿ ಕುಸ್ತಿಯಲ್ಲಿ ಜಬರ್‌ದಸ್ತ್ ಆಗಿ ಬಂದು ಕೂತಿರುವುದು ಪರಭಾಷೆಯ ಸಿನಿಮಾಗಳು.

ಹಾಗಾದರೆ ಇಲ್ಲಿ ಯಾರಿಗೆ ಯಾರು ಸ್ಪರ್ಧಿ ಎಂಬುದನ್ನು ಕೂತು ಯೋಚಿಸಬೇಕಿರುವುದು ಆಯಾ ಸಿನಿಮಾದವರೇ ಹೊರತು ಬೇರಾರ‍ಯರೂ ಅಲ್ಲ. ಯಾಕೆಂದರೆ ನಮ್ಮಲ್ಲಿ ಸ್ಕ್ರೀನ್‌ ಕಮಿಟಿ ಅಂತ ಒಂದು ಇದೆ. ಅದು ಒಂಥರಾ ಹಲ್ಲಿಲ್ಲದ ಹಾವಿನಂತೆ. ಒಂದು ವೇಳೆ ಹಲ್ಲು ಇದ್ದರೂ ಅದಕ್ಕೆ ಹೆದರುವುದು ಮಾತ್ರ ಹೊಸಬರ ಚಿತ್ರಗಳೇ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ!

ಒಂದು ವಾರಕ್ಕೆ ಒಂದು ಅಥವಾ ಎರಡು ಸಿನಿಮಾ ಬಿಡುಗಡೆಯಾಗುವ ಜಾಗದಲ್ಲಿ ಹೀಗೆ 10 ಕ್ಕೂ ಹೆಚ್ಚು ಸಿನಿಮಾಗಳು ಬರುವುದು ಚಿತ್ರರಂಗದ ದೃಷ್ಟಿಯಿಂದ ಮಾತ್ರವಲ್ಲ, ಆಯಾ ಸಿನಿಮಾ ನಿರ್ದೇಶಕ, ನಿರ್ಮಾಪಕ, ಕಲಾವಿದರು, ತಂತ್ರಜ್ಞರಿಗೂ ಒಳ್ಳೆಯದಲ್ಲ ಎಂಬುದನ್ನು ಸ್ವಲ್ಪ ಗಟ್ಟಿಯಾಗಿಯೇ ಹೇಳುವ ಅಗತ್ಯವಿದೆ. ಹಾಗೆ ನೋಡಿದರೆ ಈ ವಾರ ತೆರೆ ಬಂದಿರುವ ಅಷ್ಟೂಚಿತ್ರಗಳ ಪೈಕಿ ನಾಲ್ಕು ಚಿತ್ರಗಳು ನೋಡಲೇಬೇಕಾದ ಸಿನಿಮಾಗಳು ಎಂಬುದು ಈಗಾಗಲೇ ನೋಡುಗರಿಂದ ಬಂದಿರುವ ವರದಿ. ಆದರೆ, ಈ ನಾಲ್ಕೂ ಚಿತ್ರಗಳತ್ತ ಪ್ರೇಕ್ಷಕ ಮುಖ ಮಾಡುವವರೆಗೂ ಚಿತ್ರಮಂದಿರಗಳಲ್ಲಿ ಆ ಚಿತ್ರಗಳನ್ನು ಉಳಿಸಿಕೊಳ್ಳುವ ಶಕ್ತಿ ಆಯಾ ಚಿತ್ರತಂಡದವರಿಗೆ ಉಂಟಾ ಎಂಬುದು ಸದ್ಯದ ಯಕ್ಷ ಪ್ರಶ್ನೆ.

ಪ್ರಿಯಾಂಕಾ ಸೌಂದರ್ಯ ಅನಾವರಣ, ಟ್ರೋಲಿಗರಿಗೆ ದಿಶಾ ಎಂಥಾ ಏಟು ಕೊಟ್ರಣ್ಣ!

ಕೊನೆಗೆ ಸಿನಿಮಾ ಚಿತ್ರಮಂದಿರದಿಂದ ಮಾಯವಾದ ಮೇಲೆ ಸಿನಿಮಾ ಚೆನ್ನಾಗಿದ್ದರೂ ನೋಡಲಾಗದವರು ‘ಅಯ್ಯೋ ನಾನು ಆ ಸಿನಿಮಾ ನೋಡಬೇಕು ಎನ್ನುವಷ್ಟರಲ್ಲಿ ಅದು ಚಿತ್ರಮಂದಿರದಲ್ಲೇ ಇಲ್ಲವಾಯಿತು’, ‘ಸಿನಿಮಾ ಚೆನ್ನಾಗಿದೆ ಎನ್ನುತ್ತಿದ್ದಾರೆ. ಆದರೆ, ಯಾವ ಥಿಯೇಟರ್‌ನಲ್ಲಿದೆ ಅಂತ ಗೊತ್ತಿಲ್ಲ. ಹುಡುಕಿಕೊಂಡು ಹೋಗಕ್ಕಾಗಲ್ಲ, ಒಂದಿಷ್ಟುದಿನ ಕಾದರೆ ಟಿವಿ, ನೆಟ್‌ಪ್ಲಿಕ್ಸ್‌, ಅಮೇಜಾನ್‌ಗೆ ಬರುತ್ತೆ ನೋಡೋಣ’ ಎನ್ನುತ್ತಾರೆ. ಒಂದೇ ವಾರ ರಾಶಿ ರಾಶಿ ಸಿನಿಮಾಗಳು ತೆರೆಗೆ ಬರುವುದರ ಬಹು ದೊಡ್ಡ ಸಮಸ್ಯೆ ಇದು. ಈ ಶುಕ್ರವಾರ ಆಗಿರುವುದು ಕೂಡ ಇದೇ.

ತೆರೆ ಮೇಲೆ ಬಂದ ಚಿತ್ರಗಳು

1. ಜಂಟಲ್‌ಮನ್‌

2. ಮಾಲ್ಗುಡಿ ಡೇಸ್‌

3. ದಿಯಾ

4. ಮತ್ತೆ ಉದ್ಭವ

5. ಬಿಲ್‌ಗೇಟ್ಸ್‌

6. ಥರ್ಡ್‌ ಕ್ಲಾಸ್‌

7. ಡೆಡ್ಲಿ ಅಫೈರ್‌

8. ಜಿಲ್ಕಾ

9. ಓಜಸ್‌

10. ಪುರ್‌ಸೋತ್‌ ರಾಮ

11. ಅರಿಷಡ್ವರ್ಗ

 

ವಾರಕ್ಕೆ ಐದು, ಹತ್ತು ಸಿನಿಮಾಗಳನ್ನು ತೆರೆಗೆ ತರುವುದು ಒಳ್ಳೆಯದಲ್ಲ. ಇದರಿಂದ ಒಳ್ಳೆಯ ಸಿನಿಮಾಗಳೂ ಕೂಡ ಪ್ರೇಕ್ಷಕನಿಂದ ದೂರವಾಗುವ ಸಾಧ್ಯತೆಗಳಿವೆ. ಹಾಗಂತ ಇಲ್ಲಿ ಯಾರು, ಯಾರನ್ನೂ ಕಂಟ್ರೋಲ್‌ ಮಾಡಲಾಗದು. ಚಿತ್ರರಂಗದ ಹಿರಿಯರು ಈ ಬಗ್ಗೆ ಯೋಚಿಸಬೇಕಿದೆ. ಸ್ಕ್ರೀನಿಂಗ್‌ ಕಮಿಟಿಗೆ ಜೀವ ಕೊಟ್ಟು ಅದನ್ನು ಗಟ್ಟಿಯಾಗಿ ಬೆಳೆಸಬೇಕಿದೆ.

- ಜಡೇಶ್‌ ಕುಮಾರ್‌ ಹಿಂಪಿ, ನಿರ್ದೇಶಕ

ಕನ್ನಡ ಸಿನಿಮಾಗಳಿಂದ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಗುತ್ತಿಲ್ಲ. ಪರಭಾಷೆ ಚಿತ್ರಗಳಿಂದ ಆಗುತ್ತಿದೆ. ಈಗ ನಮ್ಮ ‘ಮಾಲ್ಗುಡಿ ಡೇಸ್‌’ಗೆ ಕರ್ನಾಟಕ ಬಿಟ್ಟು ಬೇರೆ ರಾಜ್ಯಗಳಲ್ಲಿ ಒಂದೇ ಒಂದು ಶೋ ಸಿಕ್ಕಿಲ್ಲ. ಆದರೆ, ಬೇರೆ ಭಾಷೆಯ ಚಿತ್ರಗಳಿಗೆ ನಮ್ಮಲ್ಲಿ ನೂರಾರು ಶೋಗಳಿಗೆ ಜಾಗ ಸಿಗುತ್ತದೆ. ಈ ವ್ಯವಸ್ಥೆ ಬದಲಾಬೇಕು. ನಮ್ಮ ರಾಜ್ಯದಲ್ಲಿರುವ ಅಷ್ಟೂಚಿತ್ರಮಂದಿರಗಳಲ್ಲಿ ನಮ್ಮ ಭಾಷೆಯ ಚಿತ್ರಗಳು ಇದ್ದರೆ ಜನ ಯಾವುದನ್ನ ಬೇಕಾದರೂ ಆಯ್ಕೆ ಮಾಡಿಕೊಳ್ಳುತ್ತಾರೆ. ಜನರ ಆಯ್ಕೆಗೆ ಜಾಗವೇ ಸಿಗುತ್ತಿಲ್ಲ ಎಂಬುದು ದೊಡ್ಡ ಸಮಸ್ಯೆ.

-ಕಿಶೋರ್‌ ಮೂಡಬಿದ್ರೆ, ನಿರ್ದೇಶಕ

ಒಂದೇ ವಾರಕ್ಕೆ ಹತ್ತು ಸಿನಿಮಾಗಳು ಬಂದರೆ ಪ್ರೇಕ್ಷಕನಿಗೆ ಗೊಂದಲ ಆಗುತ್ತದೆ. ಯಾಕೆಂದರೆ ಶೋಗಳ ಸಂಖ್ಯೆ ಕಡಿಮೆ ಆಗುತ್ತದೆ. ಬೆಳಗ್ಗಿನ ಶೋ ರಿವ್ಯೂ ನೋಡಿಕೊಂಡು ಸಂಜೆ ಆ ಸಿನಿಮಾಗೆ ಬರುವಂ ಹೊತ್ತಿಗೆ ಅಲ್ಲಿ ಮತ್ತೊಂದು ಸಿನಿಮಾ ಪ್ರದರ್ಶನ ಆಗುತ್ತಿರುತ್ತದೆ. ಚೆನ್ನಾಗಿದೆ ಎನ್ನುವ ಕಾರಣಕ್ಕೂ ಎಲ್ಲೋ ಇರುವ ಚಿತ್ರವನ್ನು ಹುಡುಕಿಕೊಂಡು ಹೋಗುವ ಪುರುಸೊತ್ತು ಈಗ ಯಾರಿಗೂ ಇಲ್ಲ. ಒಂದು ಚಿತ್ರಮಂದಿರಕ್ಕೆ ಮೂರು ಸಿನಿಮಾಗಳು ಸ್ಪರ್ಧಿಸುತ್ತವೆ. ಎಲ್ಲರಿಗೂ ಒಂದೊಂದು ಶೋ ಕೋಡುತ್ತಾರೆ. ಪ್ರೇಕ್ಷಕನ ಟೈಮ್‌ಗೆ ಶೋ ಕೊಡಕ್ಕೆ ಆಗಲ್ಲ.

- ಅಶೋಕ ಕೆ ಎಸ್‌, ನಿರ್ದೇಶಕ

click me!