15 ಕಂಪನಿಗಳೊಂದಿಗೆ ನಡೆಯಲಿದೆ ಒಪ್ಪಂದ, 50 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಲಭಿಸಲಿದೆ. ಉತ್ತರ ಕರ್ನಾಟಕ ಭಾಗದ ಗೇಮ್ ಚೇಂಜರ್ ಆಗಲಿದೆ ಕ್ಲಸ್ಟರ್: ಜಗದೀಶ ಶೆಟ್ಟರ್
ಶಿವಾನಂದ ಗೊಂಬಿ
ಹುಬ್ಬಳ್ಳಿ(ಅ.25): ಉತ್ತರ ಕರ್ನಾಟಕದ ಬಹುನಿರೀಕ್ಷಿತ ಎಫ್‌ಎಂಸಿಜಿ ಕ್ಲಸ್ಟರ್ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ಪ್ರಾರಂಭಕ್ಕೆ ಕಾಲ ಸನ್ನಿಹಿತವಾಗಿದೆ. ಅ.28ಕ್ಕೆ ವಿವಿಧ ಕಂಪನಿಗಳೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಳ್ಳಲಿದ್ದು, ಬಳಿಕ ನಿವೇಶನ ಹಂಚಿಕೆ ಕಾರ್ಯ ಶುರುವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2023ರ ಮಾರ್ಚ್‌ನೊಳಗೆ ಇದು ಪ್ರಾರಂಭವಾಗುವ ಲಕ್ಷಣಗಳಿವೆ. ಇದರಿಂದ ಉತ್ತರ ಕರ್ನಾಟಕ ಭಾಗದ ನಿರುದ್ಯೋಗ ಸಮಸ್ಯೆ ಬಗೆಹರಿಯಲು ಸಹಕಾರಿಯಾಗಲಿದೆ.
undefined
ಕೈಗಾರಿಕೆಗಳು ಬೆಂಗಳೂರು ಕೇಂದ್ರೀತವಾಗಿವೆ. ಇಲ್ಲಿ ಉದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಉದ್ಯೋಗ ಅರಸಿ ಇಲ್ಲಿನ ಯುವಜನತೆ ಅನಿವಾರ್ಯವಾಗಿ ಬೆಂಗಳೂರು, ಪುಣೆ, ಗೋವಾ, ಮುಂಬೈ ಸೇರಿದಂತೆ ವಿವಿಧೆಡೆ ವಲಸೆ ಹೋಗಬೇಕಾದ ಅನಿವಾರ್ಯತೆ ಇದೆ. ಇದನ್ನು ಮನಗಂಡು ಹೇಗಾದರೂ ಮಾಡಿ ಇಲ್ಲಿಗೆ ಕೈಗಾರಿಕೆಗಳನ್ನು ತರಬೇಕು. ಉದ್ಯಮಿಗಳನ್ನು ಆಕರ್ಷಿಸಬೇಕೆಂಬುದು ಪ್ರಯತ್ನ ಪಟ್ಟಿದ್ದು ಈ ಹಿಂದೆ ಜಗದೀಶ ಶೆಟ್ಟರ್ ಕೈಗಾರಿಕಾ ಸಚಿವರಾಗಿದ್ದ ವೇಳೆ 2020ರಲ್ಲಿ ಹುಬ್ಬಳ್ಳಿಯಲ್ಲೇ ‘ಇನ್ವೆಸ್ಟ್ ಕರ್ನಾಟಕ ಸಮಾವೇಶ’ ನಡೆಸುವಲ್ಲಿ ಯಶಸ್ವಿಯಾಗಿದ್ದರು. ಇದರಿಂದಾಗಿ ಆಗ ಬರೋಬ್ಬರಿ 83 ಸಾವಿರ ಕೋಟಿ ಬಂಡವಾಳ ಹೂಡಿಕೆಯ ವಾಗ್ದಾನವಾಗಿತ್ತು.
ಕರ್ನಾಟಕದಲ್ಲಿ 1,747 ಕೋಟಿ ಹೂಡಿಕೆಗೆ ಅಸ್ತು, 4,900 ಉದ್ಯೋಗ ಸೃಷ್ಟಿ, ಸಚಿವ ನಿರಾಣಿ
ಆಗಿನಿಂದಲೂ ಎಫ್‌ಎಂಸಿಜಿ ಕ್ಲಸ್ಟರ್ ಪ್ರಾರಂಭಕ್ಕೆ ಶೆಟ್ಟರ್ ಬಹಳ ಪ್ರಯತ್ನ ಪಟ್ಟಿದ್ದರು. ಆದರೆ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಇದರ ವಾಗ್ದಾನವಾಗಿರಲಿಲ್ಲ. ಆದರೂ ಪಟ್ಟು ಬಿಡದ ಶೆಟ್ಟರ್ ಇದಕ್ಕಾಗಿ ಉಲ್ಲಾಸ ಕಾಮತ್ ನೇತೃತ್ವದಲ್ಲಿ ವಿಜನ್ ಕಮಿಟಿ ರಚಿಸಿದ್ದರು. ಸಮಿತಿ ಆಸ್ಸಾಂನ ಗುವಾಹಟಿಯಲ್ಲಿನ ಎಫ್‌ಎಂಸಿಜಿ ಕ್ಲಸ್ಟರ್‌ಗೆ ಭೇಟಿ ನೀಡಿ ಅಧ್ಯಯನ ನಡೆಸಿತ್ತು. ಜತೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಎಫ್‌ಎಂಸಿಜಿ ಸ್ಥಾಪಿಸುವುದರಿಂದ ಏನೆಲ್ಲ ಅನುಕೂಲಗಳಿವೆ ಎಂಬುದನ್ನು ಮನವರಿಕೆ ಮಾಡಿತ್ತು. ಕೊನೆಗೆ ಈ ಕ್ಲಸ್ಟರ್‌ನಲ್ಲಿನ ಉದ್ಯಮಿಗಳು ಇಲ್ಲಿ ತಮ್ಮ ಉತ್ಪಾದನಾ ಘಟಕ ಸ್ಥಾಪಿಸಲು ಮುಂದೆ ಬಂದಿವೆ. ಅವೀಗ ಒಪ್ಪಂದ ಮಾಡಿಕೊಳ್ಳುತ್ತಿವೆ.
ಎಫ್‌ಎಂಸಿಜಿ ಎಂದರೇನು?
ಪೇಸ್ಟ್, ಸೋಪ್, ಶಾಂಪೂ, ಹೇರ್ ಆಯಿಲ್ ಸೇರಿದಂತೆ ನಿತ್ಯ ಬಳಸಬಹುದಾದ ಅಗತ್ಯ ವಸ್ತುಗಳನ್ನು ಎಫ್‌ಎಂಸಿಜಿ ಉತ್ಪನ್ನಗಳೆಂದು ಕರೆಯಲಾಗುತ್ತಿದೆ. ಇದಕ್ಕೆ ಮಿತಿ ಎನ್ನುವುದರುವುದಿಲ್ಲ. ಜನರ ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ವಸ್ತುಗಳು ಇದರಡಿ ಸೇರ್ಪಡೆಯಾಗುತ್ತಲೇ ಹೋಗುತ್ತವೆ.
ಎಲ್ಲಿ ಸ್ಥಾಪನೆ?:
ಧಾರವಾಡದ ಮುಮ್ಮಿಗಟ್ಟಿಕೈಗಾರಿಕಾ ಪ್ರದೇಶದಲ್ಲಿ 500 ಎಕರೆ ಪ್ರದೇಶವಿದೆ. ಅದರಲ್ಲಿ 250 ಎಕರೆಗೂ ಅಧಿಕ ಪ್ರದೇಶವನ್ನು ಎಫ್‌ಎಂಸಿಜಿಗೆ ಮೀಸಲಿಡಲಾಗಿದೆ. ಅ. 28ರಂದು ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸರ್ಕಾರದೊಂದಿಗೆ 10ರಿಂದ 15 ಕಂಪನಿಗಳು ಒಪ್ಪಂದ ಮಾಡಿಕೊಳ್ಳಲಿವೆ. ಬಳಿಕ ಅವುಗಳಿಗೆ ಬೇಕಾದ ನಿವೇಶನ, ವಿದ್ಯುತ್, ನೀರು ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸುವ ಕೆಲಸವಾಗಬೇಕಿದೆ. ಬಳಿಕ ಈ ಘಟಕಗಳು ಪ್ರಾರಂಭವಾಗಲಿವೆ. ಪ್ರಾರಂಭದಲ್ಲೇ 50 ಸಾವಿರ ಜನರಿಗೆ ಉದ್ಯೋಗ ಲಭಿಸುವ ಸಾಧ್ಯತೆ ಇದೆ. ವರ್ಷದಿಂದ ವರ್ಷಕ್ಕೆ ಇದರ ಸಾಮರ್ಥ್ಯ ಹೆಚ್ಚುತ್ತಾ ಲಕ್ಷಗಟ್ಟಲೇ ಯುವಕರಿಗೆ ಉದ್ಯೋಗ ಲಭಿಸಲಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ ಎಂಬುದು ಉದ್ಯಮಿಗಳ ಆಶಯ.
ಒಟ್ಟಿನಲ್ಲಿ ಎರಡ್ಮೂರು ವರ್ಷಗಳಿಂದ ನಿರಂತರ ಶ್ರಮಿಸುತ್ತಿದ್ದ ಎಫ್‌ಎಂಸಿಜಿ ಕ್ಲಸ್ಟರ್ ಘಟಕ ಸ್ಥಾಪನೆಗೆ ಇದೀಗ ಕಾಲ ಕೂಡಿ ಬಂದಿದೆ. ಸರ್ಕಾರವೂ ಈ ಬಗ್ಗೆ ತೀವ್ರಗತಿಯಲ್ಲಿ ಕ್ರಮ ಕೈಗೊಂಡು 2023ರ ಮಾರ್ಚ್‌ನೊಳಗೆ ಕಾರ್ಯಾರಂಭವಾಗುವಂತೆ ನೋಡಿಕೊಳ್ಳಬೇಕು ಎಂಬುದು ಯುವಕರ ಆಶಯ.
ಮೂನ್ ಲೈಟಿಂಗ್ ಮಾಡೋರು ರಾಜ್ಯ ಬಿಡಿ, ಟೆಕ್ಕಿಗಳಿಗೆ ಸಚಿವ ಅಶ್ವತ್ಥ ನಾರಾಯಣ್ ಖಡಕ್ ಎಚ್ಚರಿಕೆ
ನಾನು ಕೈಗಾರಿಕಾ ಸಚಿವರಾಗಿದ್ದ ವೇಳೆ ಇದಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದೆ. ಇದಕ್ಕಾಗಿ ಉಲ್ಲಾಸ ಕಾಮತ್ ಅವರ ನೇತೃತ್ವದಲ್ಲಿ ಕಮಿಟಿ ರಚಿಸಲಾಗಿತ್ತು. ಆ ಸಮಿತಿ ವರದಿ ಕೊಟ್ಟು ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಎಫ್‌ಎಂಸಿಜಿ ಉತ್ತರ ಕರ್ನಾಟಕದ ಭಾಗದ ಅಭಿವೃದ್ಧಿಗೆ ಪೂರಕ. ಒಂದು ರೀತಿ ಗೇಮ್ ಚೇಂಜರ್ ಆಗಲಿದೆ ಅಂತ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಅ. 28ಕ್ಕೆ 10ರಿಂದ 15 ಕಂಪನಿಗಳು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಿವೆ. ಯಾವ್ಯಾವ ಕಂಪನಿಗಳು ಎಂಬುದು ಅ. 27ರಂದು ಬಹಿರಂಗವಾಗಲಿದೆ. ಬಳಿಕ ಯಾವ್ಯಾವ ಕಂಪನಿಗಳಿಗೆ ಎಷ್ಟೆಷ್ಟು ನಿವೇಶನ ಬೇಕು ಎಂಬುದನ್ನು ಅರಿತು ಹಂಚಿಕೆ ಮಾಡಬೇಕು. ಮೂಲಸೌಲಭ್ಯ ಕಲ್ಪಿಸಬೇಕಿದೆ ಅಂತ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸಿದ್ದಣ್ಣ ಹೇಳಿದ್ದಾರೆ.