ದೇಶದ ಯುವ ಜನತೆ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎನ್ನುವ ನಾರಾಯಣ ಮೂರ್ತಿ ಅವರ ಹೇಳಿಕೆ ಸಾಕಷ್ಟು ಚರ್ಚೆ ಆಗುತ್ತಿದೆ. ಇದರ ನಡುವೆ ಜಿಂದಾಲ್ ಗ್ರೂಪ್‌ನ ಎಂಡಿ ಸಜ್ಜನ್ ಜಿಂದಾಲ್ ಕೂಡ ಈ ಮಾತನ್ನು ಬೆಂಬಲಿಸಿದ್ದಾರೆ. ದೇಶದ ಪ್ರಧಾನಿ ಕೂಡ ದಿನಕ್ಕೆ 16 ಗಂಟೆ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.
ನವದೆಹಲಿ (ಅ.28): ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಅವರು ಭಾರತದ ಕೆಲಸದ ಉತ್ಪಾದಕತೆ ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದು ಹೇಳಿದ್ದರು. ಆದ್ದರಿಂದ ದೇಶದ ಯುವಕರು ದಿನಕ್ಕೆ 12 ಗಂಟೆಗಳ ಕಾಲ ದುಡಿಯುವುದು ಅಗತ್ಯವಾಗಿದೆ ಎಂದು ಹೇಳಿದ್ದರು.ನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಅವರೊಂದಿಗೆ 'ದಿ ರೆಕಾರ್ಡ್' ಪಾಡ್‌ಕಾಸ್ಟ್ ಮಾತನಾಡಿದ್ದ ಅವರು, ಭವಿಷ್ಯದ ದಿನಗಳಲ್ಲಿ ನಾವು ಚೀನಾವನ್ನು ಸೋಲಿಸಬೇಕಾದಲ್ಲಿ ದೇಶದ ಯುವ ಜನತೆ ಕನಿಷ್ಠ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದ್ದರು. ಇದೀಗ ಮೂರ್ತಿ ಅವರ ಈ ಹೇಳಿಕೆಗೆ ಜೆಎಸ್‌ಡಬ್ಲ್ಯೂ ಗ್ರೂಪ್ ಸಂಸ್ಥಾಪಕ ಸಜ್ಜನ್ ಜಿಂದಾಲ್ ಬೆಂಬಲ ಸಿಕ್ಕಿದೆ. ನಾರಾಯಣ ಮೂರ್ತಿಯವರ ಮಾತನ್ನು ನಾನು ಒಪ್ಪುತ್ತೇನೆ, ನಮ್ಮ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರತಿದಿನ 16 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ನಮ್ಮ ಕೆಲಸ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ನಾವು ಉತ್ಸಾಹವನ್ನು ಕಂಡುಕೊಳ್ಳಬೇಕು ಎಂದು ಸಜ್ಜನ್ ಜಿಂದಾಲ್ ಹೇಳಿದ್ದಾರೆ.
ಈ ಕುರಿತಾಗಿ ಸಜ್ಜನ್ ಜಿಂದಾಲ್ ತಮ್ಮ ಸೋಶಿಯಲ್ ಮೀಡಿಯಾ ಪುಟದಲ್ಲಿ ಬರೆದುಕೊಂಡಿದ್ದಾರೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಐದು ದಿನಗಳ ಕೆಲಸದ ಸಂಸ್ಕೃತಿ ಅಗತ್ಯವಿಲ್ಲ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿದಿನ 14-16 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಾರೆ. ನನ್ನ ತಂದೆ 12-14 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ನಾನು ಪ್ರತಿದಿನ 10-12 ಗಂಟೆಗಳ ಕಾಲ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ನಾವು ನಮ್ಮ ಕೆಲಸ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಉತ್ಸಾಹವನ್ನು ಕಂಡುಕೊಳ್ಳಬೇಕು. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದ ಪರಿಸ್ಥಿತಿಗಳು ಮತ್ತು ಸವಾಲುಗಳು ವಿಭಿನ್ನವಾಗಿವೆ. ಹಿಂದಿನ ತಲೆಮಾರುಗಳು ಹೆಚ್ಚು ಸಮಯ ಮತ್ತು ಹೆಚ್ಚು ಉತ್ಪಾದಕ ಗಂಟೆಗಳ ಕೆಲಸ ಮಾಡಿದ್ದರಿಂದ ಅವರು ವಾರದಲ್ಲಿ 4 ಅಥವಾ 5 ದಿನಗಳು ಕೆಲಸ ಮಾಡುತ್ತಿದ್ದಾರೆ. ನಾವು ಅವರ ಕೆಲಸದ ಸಂಸ್ಕೃತಿಯನ್ನು ನಮ್ಮ ಕೆಲಸದ ವಾರದ ಮಾನದಂಡವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸಜ್ಜನ್ ಜಿಂದಾಲ್ ಇನ್ನೊಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಭಾರತದ ದೊಡ್ಡ ಶಕ್ತಿ ನಮ್ಮ ಯುವಕರು. ಸೂಪರ್ ಪವರ್ ಆಗುವ ನಮ್ಮ ಪ್ರಯಾಣದಲ್ಲಿ, ಈ ಪೀಳಿಗೆಯು ವಿರಾಮಕ್ಕಿಂತ ಕೆಲಸಕ್ಕೆ ಆದ್ಯತೆ ನೀಡಬೇಕಾಗುತ್ತದೆ. ನಾವು ಮುಂದುವರಿಯುತ್ತಿದ್ದಂತೆ, ವಿಶ್ರಾಂತಿ ಪಡೆಯಲು ಅವಕಾಶಗಳಿವೆ ಮತ್ತು 2047 ರ ಯುವಕರು ನಮ್ಮ ತ್ಯಾಗ ಮತ್ತು ಶ್ರಮದಿಂದ ಪ್ರಯೋಜನ ಪಡೆಯುತ್ತಾರೆ ಎಂದು ಸಜ್ಜನ್ ಜಿಂದಾಲ್ ಬರೆದಿದ್ದಾರೆ.
ಐಟಿ ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿದೆ: ಇನ್ಫೋಸಿಸ್ ನಾರಾಯಣ ಮೂರ್ತಿ!
ಜೆಎಸ್‌ಡಬ್ಲ್ಯು ಗ್ರೂಪ್ ಭಾರತೀಯ ಬಹುರಾಷ್ಟ್ರೀಯ ಕಂಪನಿ. ಇದು OP ಜಿಂದಾಲ್ ಗ್ರೂಪ್‌ನ ಭಾಗವಾಗಿದೆ, ಸಜ್ಜನ್ ಜಿಂದಾಲ್ ಇದರ ಸಂಸ್ಥಾಪಕರಾಗಿದ್ದಾರೆ. ಗುಂಪಿನ ವ್ಯಾಪಾರ ಉದ್ಯಮಗಳಲ್ಲಿ ಉಕ್ಕು, ಶಕ್ತಿ, ಮೂಲ ಸೌಕರ್ಯ, ಸಿಮೆಂಟ್ ಮತ್ತು ಬಣ್ಣಗಳು ಸೇರಿವೆ. ಭಾರತವಲ್ಲದೆ, ಅಮೆರಿಕ ಮತ್ತು ಆಫ್ರಿಕಾಕ್ಕೂ ವ್ಯಾಪಾರ ವಿಸ್ತರಿಸಿದೆ. 2013 ರ ಪ್ರವಾಹದಲ್ಲಿ ನಾಶವಾದ ಕೇದಾರನಾಥದ ಪುನಃಸ್ಥಾಪನೆ ಮತ್ತು ನವೀಕರಣ ಕಾರ್ಯಕ್ಕಾಗಿ ಉತ್ತರಾಖಂಡ ಸರ್ಕಾರದೊಂದಿಗೆ ಜಿಂದಾಲ್ ಗ್ರೂಪ್ ಸಹಿ ಹಾಕಿತ್ತು. ಸಜ್ಜನ್ ಕಾಂಗ್ರೆಸ್ ಸಂಸದ ನವೀನ್ ಜಿಂದಾಲ್ ಅವರ ಹಿರಿಯ ಸಹೋದರ. ಅವರು ಪ್ರಧಾನಿ ಮೋದಿಗೆ ಆಪ್ತರು ಎನ್ನಲಾಗಿದೆ. 2015ರ ಡಿಸೆಂಬರ್ 25 ರಂದು, ಪ್ರಧಾನಿ ಮೋದಿ ಅಫ್ಘಾನಿಸ್ತಾನದಿಂದ ಲಾಹೋರ್‌ಗೆ ಹೋಗಲು ನಿರ್ಧರಿಸಿದಾಗ, ಸಜ್ಜನ್ ಜಿಂದಾಲ್ ಕಾರಣದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿತ್ತು.
IT Sector Increments: ಐಟಿ ಉದ್ಯೋಗಿಗಳಿಗೆ ಈ ವರ್ಷ ಸ್ಯಾಲರಿ ಹೈಕ್ ಡೌಟು!