Udupi: ವಿದೇಶದಲ್ಲಿ ಉದ್ಯೋಗ ಪಡೆಯೋ ಕನಸಿದ್ಯಾ..? ಹಾಗಿದ್ರೆ, ಇಲ್ಲಿದೆ ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ

By BK Ashwin  |  First Published Feb 15, 2023, 1:18 PM IST

ರಾಜ್ಯ ಸರ್ಕಾರವು ವಿದೇಶಕ್ಕೆ ತೆರಳುವ ರಾಜ್ಯದ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಅಸಂಘಟಿತ ಕಾರ್ಮಿಕ ಮಂಡಳಿಯ ಮೂಲಕ ಆರಂಭಿಸಿರುವ ರಾಜ್ಯದಲ್ಲಿನ 4 ಪ್ರಾಯೋಗಿಕ ಅಂತರರಾಷ್ಟ್ರೀಯ ವಲಸೆ ಕೇಂದ್ರಗಳ ಪೈಕಿ ಒಂದು ಮಾಹಿತಿ ಕೇಂದ್ರ ಉಡುಪಿಯ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾರ್ಮಿಕ ಇಲಾಖೆಯಲ್ಲಿದೆ.


ಉಡುಪಿ (ಫೆಬ್ರವರಿ 15, 2023) : ನಿಮಗೆ ವಿದೇಶದಲ್ಲಿ ಕೆಲಸ ಮಾಡುವ ಆಸಕ್ತಿಯಿದೆಯೇ, ವಿದೇಶದಲ್ಲಿ ಉದ್ಯೋಗಕ್ಕೆ ತೆರಳಲು ಇರಬೇಕಾದ ಅರ್ಹತೆಗಳೇನು, ಅಲ್ಲಿ ಎದುರಿಸಬೇಕಾದ ಕಾನೂನು ಪ್ರಕ್ರಿಯೆಗಳೇನು, ವಿದೇಶದಲ್ಲಿ ತೊದರೆಯಾದರೆ ಯಾರನ್ನು ಸಂಪರ್ಕಿಸಬೇಕು, ಸುರಕ್ಷಿತವಾಗಿ ವಿದೇಶಕ್ಕೆ ತೆರಳಿ, ಸುಗಮವಾಗಿ ಮರಳಿ ಹಿಂದಿರುಗಲು ಅನುಸರಿಸಬೇಕಾದ ಪ್ರಕಿಯೆಗಳೇನು, ಖಾಸಗಿ ಸಂಸ್ಥೆ ಮತ್ತು ಮಧ್ಯವರ್ತಿಗಳ ಮೂಲಕ ದುಬಾರಿ ಶುಲ್ಕ ನೀಡಿ ವಿದೇಶಗಳಿಗೆ ತೆರಳಿ ಅಲ್ಲಿ ತೊಂದರೆಯಾದಾಗ ಏನು ಮಾಡುವುದು ಈ ಎಲ್ಲಾ ಸಂದೇಹಗಳಿಗೆ ಉಚಿತವಾಗಿ ಪರಿಹಾರ ನೀಡುವ ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ ಉಡುಪಿ ಜಿಲ್ಲೆಯಲ್ಲಿಯೇ ಇದೆ. 

ರಾಜ್ಯ ಸರ್ಕಾರವು ವಿದೇಶಕ್ಕೆ ತೆರಳುವ ರಾಜ್ಯದ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಅಸಂಘಟಿತ ಕಾರ್ಮಿಕ ಮಂಡಳಿಯ ಮೂಲಕ ಆರಂಭಿಸಿರುವ ರಾಜ್ಯದಲ್ಲಿನ 4 ಪ್ರಾಯೋಗಿಕ ಅಂತರರಾಷ್ಟ್ರೀಯ ವಲಸೆ ಕೇಂದ್ರಗಳ ಪೈಕಿ ಒಂದು ಮಾಹಿತಿ ಕೇಂದ್ರ ಉಡುಪಿಯ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾರ್ಮಿಕ ಇಲಾಖೆಯಲ್ಲಿದೆ. ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಮಾಜಿಕ ಭದ್ರತಾ ಮಂಡಳಿ, ಸಾಗರೋತ್ತರ ನೇಮಕಾತಿ ಸಂಸ್ಥೆ, ಕರ್ನಾಟಕ ಸರ್ಕಾರದ ಸಂಸ್ಥೆಯು ಉದ್ಯೋಗ ಅರಸಿ ರಾಜ್ಯದಿಂದ ವಿದೇಶಕ್ಕೆ ತೆರಳುವ ಎಲ್ಲಾ ಕಾರ್ಮಿಕರಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದು, ವಿದೇಶದಲ್ಲಿನ ಉದ್ಯೋಗವಕಾಶಗಳು, ಬೇಕಾದ ಅರ್ಹತೆಗಳು, ಉದ್ಯೋಗದ ಕುರಿತು ಸಮಾಲೋಚನೆ ಮತ್ತು ಮಾರ್ಗದರ್ಶನ, ಮ್ಯಾನೇಜ್‌ಮೆಂಟ್ ಇನ್‌ಫಾರ್ಮೇಶನ್‌ ಸಿಸ್ಟಂ ಅಡಿಯಲ್ಲಿ ನೊಂದಾವಣಿ, ದಾಖಲಾತಿಗಳ ಪರಿಶೀಲನೆ ವಿಧಾನ, ಕರಾರು ವಿವರಣೆಗಳ ಮಾಹಿತಿ, ಪ್ರಯಾಣದಲ್ಲಿ ಅನುಸರಿಸಬೇಕಾದ ವಿಧಾನಗಳ ಸೇರಿದಂತೆ ಎಲ್ಲಾ ರೀತಿಯ ಸಮಗ್ರ ಮಾರ್ಗದರ್ಶನ ಈ ಕೇಂದ್ರದಲ್ಲಿ ದೊರೆಯಲಿದೆ.

Tap to resize

Latest Videos

undefined

ಇದನ್ನು ಓದಿ: ಸಮುದ್ರ ಪ್ರದೇಶದಲ್ಲಿ ಸಾವಿನ ಪ್ರಮಾಣ ಶೂನ್ಯಕ್ಕೆ ತರಲು ಸಂಘಟಿತ ಪ್ರಯತ್ನ ಅಗತ್ಯ: ಜಿಲ್ಲಾಧಿಕಾರಿ ಕೂರ್ಮಾರಾವ್

ಈ ಕೇಂದ್ರಗಳ ಮೂಲಕ ವಿದೇಶಕ್ಕೆ ತೆರಳಿದ್ದಲ್ಲಿ, ವಿದೇಶದಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ಸರಕಾರದ ವತಿಯಿಂದ ಅಗತ್ಯ ನೆರವು ದೊರೆಯಲಿದ್ದು, ವಿದೇಶದಲ್ಲಿದ್ದರೂ ಸಹ ಎಲ್ಲಾ ಸಂದರ್ಭದಲ್ಲಿ ಸುರಕ್ಷಿತವಾಗಿ ಇರಲು ಸಾಧ್ಯವಾಗಲಿದೆ. ಅಲ್ಲದೆ ನಿಮಗೆ ಉದ್ಯೋಗ ನೀಡಿದ ಸಂಸ್ಥೆಯೊಂದಿಗೆ ನಿರಂತರ ಸಂಪಕದಲ್ಲಿದ್ದು, ಆ ದೇಶದಲ್ಲಿನ ಭಾರತೀಯ ರಾಯಭಾರ ಕಚೇರಿಯಿಂದ ಅಗತ್ಯ ನೆರವು ಒದಗಿಸುವುದರ ಜೊತೆಗೆ ನಿಮೆಗೆ ವಿಮೆ ಪಡೆಯಲು ಮತ್ತು ಕಲ್ಯಾಣ ನಿಧಿಯ ಮೊತ್ತ ದೊರೆಯಲು ಸಹ ಸಹಕರಿಸಲಿದೆ. 

ಈ ಕೇಂದ್ರದ ಮೂಲಕ ಉದ್ಯೋಗಕ್ಕೆ ತೆರಳಲು ಇಚ್ಚಿಸಿದ್ದಲ್ಲಿ ಈಗಾಗಲೇ ಇ-ಮೈಗ್ರೇಟ್ ಪೋರ್ಟಲ್‌ನಲ್ಲಿ ಉದ್ಯೋಗದ ಬೇಡಿಕೆ ಕೋರಿರುವ ನೋಂದಣಿ ಮಾಡಿರುವ ವಿದೇಶಿ ಸಂಸ್ಥೆಗಳ ನೈಜತೆ ಪರಿಶೀಲಿಸಿ, ಉದ್ಯೋಗದಾತ ಸಂಸ್ಥೆಯಲ್ಲಿ ಯಾವುದೇ ಸಂದರ್ಭದಲ್ಲಿ ಕಾರ್ಮಿಕರಿಗೆ ಅನಗತ್ಯ ತೊಂದರೆಗಳು ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿದೆ. ವಿಶೇಷವಾಗಿ ವಿದೇಶದಲ್ಲಿ ಉದ್ಯೋಗಕ್ಕೆ ತೆರಳುವ ಮಹಿಳಾ ಉದ್ಯೋಗಿಗಳ ಬಗ್ಗೆ ಕೇಂದ್ರವು ಹೆಚ್ಚಿನ ಕಾಳಜಿ ವಹಿಸಲಿದೆ. ವಿದೇಶದಿಂದ ವಾಪಸಾದ ಬಳಿಕ ಕಾರ್ಮಿಕರ ಕೌಶಲ್ಯ ಸಂಗ್ರಹ ಮತ್ತು ಮರು ವಲಸೆಗೆ ಸಹಾಯ ಮಾಡುವುದರ ಜೊತೆಗೆ, ಪುರ್ನವಸತಿ ಬಗ್ಗೆ ಮಾಹಿತಿ ನೀಡಲಿದ್ದು, ಕುಂದು ಕೊರತೆಗಳ ನಿವಾರಣೆ ಮತ್ತು ವಿಮಾ ಮೊತ್ತವನ್ನು ಪಡೆಯಲು ಸಹಾಯ ಮಾಡಲಿದೆ. 

ಇದನ್ನೂ ಓದಿ: Udupi: ನಿವೃತ್ತಿ ವೇತನದ ಪೂರ್ಣ ಪಾವತಿಗೆ ಪರದಾಡುತ್ತಿರುವ 80 ವರ್ಷದ ಹಿರಿಯ ನಾಗರಿಕ

 ವಿದೇಶಕ್ಕೆ ತೆರಳುವ ಮುನ್ನ 8 ಗಂಟೆಗಳ ಸಮಗ್ರ ತರಬೇತಿಯನ್ನು ಅಭ್ಯರ್ಥಿಗಳಿಗೆ ನೀಡಲಿದ್ದು, ವಿದೇಶ ಪ್ರಯಾಣದ ಅವಧಿಯಲ್ಲಿ ಮತ್ತು ನಂತರ ವಹಿಸಬೇಕಾದ ಮುನ್ನೆಚ್ಚರಿಕೆ  ವಿಧಾನಗಳು, ಸಿದ್ಧತೆಗಳು, ವಿಮಾನ ನಿಲ್ದಾಣದಲ್ಲಿ ವ್ಯವಹರಿಸುವ ಕಾರ್ಯವಿಧಾನ ಬಗ್ಗೆ ಸಹ ತರಬೇತಿ ನೀಡಲಾಗುತ್ತದೆ. ಪ್ರಸ್ತುತ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಉಡುಪಿ, ದಾವಣಗೆರೆ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಈ ಕೇಂದ್ರಗಳನ್ನು ತೆರೆಯಲಾಗಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾವಿರಾರು ಮಂದಿ ಉದ್ಯೋಗ ಅರಸಿ ವಿದೇಶಗಳಿಗೆ ತೆರಳುತ್ತಿದ್ದು ಈ ಕೇಂದ್ರದ ಪ್ರಯೋಜನ ಪಡೆಯುವ ಮೂಲಕ ವಿದೇಶದಲ್ಲಿ ಸೂಕ್ತ ಉದ್ಯೋಗ ಪಡೆದು ಅಲ್ಲಿಯೂ ನೆಮ್ಮದಿಯ ಜೀವನ ನಡೆಸಲು ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ ಸಕಲ ನೆರವು ನೀಡಲಿದೆ. 

ಉಡುಪಿ ಮತ್ತು ದಕ್ಷಿಣ ನ್ನಡ ಜಿಲ್ಲೆಗಳಿಂದ ಸುಮಾರು 40,000ಕ್ಕೂ ಅಧಿಕ ಮಂದಿ ಮಧ್ಯಪ್ರಾಚ್ಯ ದೇಶದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಖಾಸಗಿ ಸಂಸ್ಥೆಗಳು ಮತ್ತು ಮದ್ಯವರ್ತಿಗಳ ಮೂಲಕ ದುಬಾರಿ ಶುಲ್ಕ ನೀಡಿ, ಸಮರ್ಪಕ ದಾಖಲೆ ಮತ್ತು ಮಾಹಿತಿಯಿಲ್ಲದೇ ವಿದೇಶಗಳಿಗೆ ತೆರಳಿ, ಅಲ್ಲಿ ಸೂಕ್ತ ದಾಖಲೆಗಳ ಮತ್ತು ಇತರೆ ಕಾನೂನು ತೊಡುಕುಗಳಿಗೆ ಸಿಲುಕಿಕೊಂಡಾಗ ಇವರಿಂದ ಸೂಕ್ತ ನೆರವು ದೊರೆಯದೇ ಕಷ್ಟಕ್ಕೆ ಸಿಲುಕುತ್ತಿರುವುದು ಕೇಳಿಬರುತ್ತಿದೆ. ಜಿಲ್ಲೆಯಿಂದ ವಿದೇಶಕ್ಕೆ ತೆರಳುವವವರು, ಜಿಲ್ಲೆಯಲ್ಲಿ ಸರ್ಕಾರ ಆರಂಭಿಸಿರುವ ವಲಸೆ ಮಾಹಿತಿ ಕೇಂದ್ರದ ನೆರವಿನಿಂದ ವಿದೇಶದಲ್ಲಿ ಸೂಕ್ತ ಉದ್ಯೋಗದ ಆಯ್ಕೆ ಮಾಡಿಕೊಳ್ಳುವುದರೊಂದಿಗೆ ನೆಮ್ಮದಿಯ ಮತ್ತು ಸುರಕ್ಷಿತ ಜೀವನ ನಡೆಸಲು ಸಾಧ್ಯವಾಗಲಿದೆ. 

ಇದನ್ನೂ ಓದಿ: ಯಕ್ಷ​ಗಾ​ನದ ಡಾಟಾ ಬ್ಯಾಂಕ್‌ ಆಗ​ಬೇ​ಕಿ​ದೆ: ಸಚಿವ ಸುನಿ​ಲ್‌

ಈ ಕೇಂದ್ರದ ಬಗ್ಗೆ ಮಾಹಿತಿ ನೀಡಿದ ಉಡುಪಿ ಉಪ ವಿಭಾಗದ  ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ,ಕುಮಾರ್ ಬಿ. ಆರ್, ಈ ಕೇಂದ್ರದ ಸೌಲಭ್ಯಗಳ ಬಗ್ಗೆ ಮತ್ತು ವಿದೇಶದಲ್ಲಿ ಉದ್ಯೋಗಕ್ಕೆ ತೆರಳಬಯಸುವ ಉದ್ಯೋಗಾಕಾಂಕ್ಷಿಗಳು ದೂರವಾಣಿ ಸಂಖ್ಯೆ 0820-2574851 ಅಥವಾ 24x7 ಕಾರ್ಮಿಕ ಸಹಾಯವಾಣಿ ಸಂಖ್ಯೆ 155214 ನ್ನು ಸಂಪರ್ಕಿಸಿ ಈ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬಹುದು. ಈ ಬಗ್ಗೆ ಇತ್ತೀಚೆಗೆ ನಡೆದ ಉದ್ಯೋಗಾಕಾಂಕ್ಷಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ 130ಕ್ಕೂ ಹೆಚ್ಚು ಮಂದಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ ಎಂದಿದ್ದಾರೆ. 

ಇದನ್ನೂ ಓದಿ: National Lok Adalat ಒಂದೇ ದಿನದಲ್ಲಿ ಒಟ್ಟು 42,687  ಪ್ರಕರಣ ಇತ್ಯರ್ಥ!

click me!