Asianet Suvarna News Asianet Suvarna News

Udupi: ನಿವೃತ್ತಿ ವೇತನದ ಪೂರ್ಣ ಪಾವತಿಗೆ ಪರದಾಡುತ್ತಿರುವ 80 ವರ್ಷದ ಹಿರಿಯ ನಾಗರಿಕ

ವಯೋ ನಿವೃತ್ತಿ ಪಡೆದು 21 ವರ್ಷ ಕಳೆದರೂ ತನಗೆ ನ್ಯಾಯವಾಗಿ ಸಿಗಬೇಕಾದ ನಿವೃತ್ತಿ ವೇತನದ ಪೂರ್ಣಪಾವತಿಗಾಗಿ ವಿದ್ಯಾ ಇಲಾಖೆಯ ಅಧಿಕಾರಿಗಳೊಂದಿಗೆ ಹೆಣಗಾಡುತ್ತಿರುವ 80 ವರ್ಷದ ವಯೋವೃದ್ದರೋರ್ವರು ಇದೀಗ ನ್ಯಾಯ ಪಡೆಯಲು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದ್ದಾರೆ.

80-year-old senior citizen struggling for full payment of pension in Udupi gow
Author
First Published Feb 13, 2023, 4:04 PM IST

ಉಡುಪಿ (ಫೆ.13): ವಯೋ ನಿವೃತ್ತಿ ಪಡೆದು 21 ವರ್ಷ ಕಳೆದರೂ ತನಗೆ ನ್ಯಾಯವಾಗಿ ಸಿಗಬೇಕಾದ ನಿವೃತ್ತಿ ವೇತನದ ಪೂರ್ಣಪಾವತಿಗಾಗಿ ವಿದ್ಯಾ ಇಲಾಖೆಯ ಅಧಿಕಾರಿಗಳೊಂದಿಗೆ ಹೆಣಗಾಡುತ್ತಿರುವ 80 ವರ್ಷದ ವಯೋವೃದ್ದರೋರ್ವರು ಇದೀಗ ನ್ಯಾಯ ಪಡೆಯಲು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದ್ದಾರೆ. ಈ ಪ್ರಕರಣದಲ್ಲಿ ಉಚ್ಛ ನ್ಯಾಯಾಲಯ ನೀಡಿದ್ದ ತೀರ್ಪನ್ನು ಕಡೆಗಣಿಸಿರುವ ವಿದ್ಯಾ ಇಲಾಖೆಯ ಅಧಿಕಾರಿಗಳು ತಪ್ಪು ಅಫಿದಾವಿತ್ ನೀಡುವ ಮೂಲಕ ನ್ಯಾಯಾಲಯದ ದಾರಿ ತಪ್ಪಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ್ ಶಾನುಭೋಗ್ ಆರೋಪಿಸಿದರು. ಅವರು ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿಯನ್ನು ವಿವರಿಸಿದರು. 

ಪ್ರಕರಣದ ಹಿನ್ನಲೆ:
ಸರಕಾರೀ ಅನುದಾನ ಕೈ ಸೇರಿದ್ದ ಕಾರ್ಕಳದ ವೆಂಕಟರಮಣ ಪದವಿಪೂರ್ವ ಕಾಲೇಜಿನಲ್ಲಿ ಸುಮಾರು 33 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಪ್ರಾಚಾರ್ಯ ರಘುಪತಿ ಭಟ್ ರವರು 2002 ರಲ್ಲಿ ನಿವೃತ್ತರಾದರು. ತನ್ನ ಪಿಂಚಣಿ ಮಂಜೂರಾತಿಗೆ ಅವಶ್ಯವಿರುವ ದಾಖಲೆಗಳನ್ನು ಪಿಂಚಣಿ ಇಲಾಖೆಗೆ ಕಳುಹಿಸುವಂತೆ ನಿವೃತ್ತಿಗೆ ಮೂರು ತಿಂಗಳ ಮೊದಲೇ ಕಾಲೇಜು ಆಡಳಿತ ಮಂಡಳಿಯನ್ನು ವಿನಂತಿಸಿದ್ದರು. ಆದರೆ ಆಡಳಿತ ಮಂಡಳಿ ಹಾಗು ವಿದ್ಯಾ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದಾಗಿ 15 ವರ್ಷಗಳ ಕಾಲ ಪಿಂಚಣಿ ಮಂಜೂರಾಗಲೇ ಇಲ್ಲ. ಅದಕ್ಕಾಗಿ ಭಟ್ಟರು ಜಿಲ್ಲಾ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯದವರೆಗೆ ದೀರ್ಘಕಾಲದ ನ್ಯಾಯಾಂಗ ಹೋರಾಟವನ್ನೇ ಮಾಡಬೇಕಾಯಿತು.

17-10-2017 ರಂದು 177 ತಿಂಗಳ ಪಿಂಚಣಿ ಬಾಕಿ ಒಟ್ಟಿಗೆ ಸಂದಾಯವಾಯಿತು. ಈ ಮೊತ್ತವನ್ನು ತಡವಾಗಿ ಪಾವತಿಸಿರುವುದಕ್ಕೆ ನಿಯಮಾನುಸಾರ ಇಲಾಖೆಯು 15 ವರ್ಷಗಳ ಬಡ್ಡಿ ಸೇರಿಸಿರಬೇಕಿತ್ತು. ಈ ಕುರಿತು ಪಿಂಚಣಿ ಇಲಾಖೆ ಬರೆದ ಪತ್ರದಲ್ಲಿ "ಪಿಂಚಣಿ ಬಾಕಿಯನ್ನು ನೀಡಿದ್ದೇವೆ. ಆದರೆ ಬಡ್ಡಿಗಾಗಿ ನೀವು ವಿದ್ಯಾ ಇಲಾಖೆಯನ್ನೇ ಸಂಪರ್ಕಿಸಿರಿ" ಎಂಬ ಷರಾ ಸೇರಿಸಿತ್ತು.

ಇದೀಗ ಬಡ್ಡಿಗಾಗಿ ಹೋರಾಟ:
ಅಸಹಾಯಕರಾದ ಭಟ್ಟರು ಎರಡು ವರ್ಷಗಳ ಕಾಲ ಪಿಯೂಸಿ ಬೋರ್ಡಿನ ನಿರ್ದೇಶಕರಿಂದ ಹಿಡಿದು ವಿದ್ಯಾ ಇಲಾಖೆಯ ಕಾರ್ಯದರ್ಶಿಗಳ ವರೆಗೆ ಹತ್ತು ಹಲವು ಪತ್ರಗಳನ್ನು ಬರೆದರೂ ಅವರಾರೂ ಒಂದೇ ಒಂದು ಉತ್ತರ ನೀಡಲಿಲ್ಲ. ಉಪಾಯವಿಲ್ಲದೇ ಭಟ್ಟರು 2019 ರಲ್ಲಿ ಪುನಃ ಹೈಕೋರ್ಟ್ ಮೆಟ್ಟಲೇರಿದರು. ಸುಮಾರು 18 ತಿಂಗಳ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯವು 2021 ರ ಜನವರಿಯಲ್ಲಿ ತೀರ್ಪು ನೀಡಿ ಪಿಂಚಣಿ ಬಾಕಿ ಅವಧಿಗೆ ಶೇಕಡಾ 8 ರಂತೇ ಬಡ್ಡಿ ನೀಡುವಂತೆ ಆದೇಶಿಸಿತು. ಬಡ್ಡಿ ಪಾವತಿಗಾಗಿ ನಾಲ್ಕು ವಾರಗಳ ಗಡುವನ್ನೂ ವಿಧಿಸಿತು. ಮಾತ್ರವಲ್ಲ ಸರ್ಕಾರವು ಈ ಮೊತ್ತವನ್ನು ವಿಳಂಬಕ್ಕೆ ಕಾರಣರಾದವರಿಂದಲೇ ವಸೂಲು ಮಾಡುವ ನಿರ್ದೇಶವನ್ನೂ ನೀಡಿತು.

ಪುನಃ ನ್ಯಾಯಾಂಗ ನಿಂದನಾ ದಾವೆ:
ಮುಂದಿನ 9 ತಿಂಗಳ ಕಳೆದರೂ ಪಿಂಚಣಿ ವಿಳಂಬಕ್ಕೆ ಬಡ್ಡಿ ನೀಡುವಂತೆ ಹೈಕೋರ್ಟ್ ನೀಡಿದ ಆದೇಶದ ಪಾಲನೆಯಾಗಲೇಯಿಲ್ಲ. ಈ ಕುರಿತು ಭಟ್ಟರು ಬರೆದ ಪತ್ರಕ್ಕೂ ಅಧಿಕಾರಿಗಳು ಉತ್ತರಿಸದೇ ಇದ್ದುದರಿಂದ ನ್ಯಾಯಾಂಗ ನಿಂದನಾ ದಾವೆ ಸಲ್ಲಿಸಲಾಯಿತು. ಇದೀಗ ನ್ಯಾಯಾಲಯಕ್ಕೆ ಹಾಜರಾದ ಸರಕಾರಿ ವಕೀಲರು ವಿವಿಧ ಇಲಾಖೆಗಳ ಅಧಿಕಾರಿಗಳು ಈ ಕುರಿತು ಕಾರ್ಯೋನ್ಮುಖರಾಗಿರುವುದರಿಂದ ಹಣಕಾಸು ಸಚಿವಾಲಯದಿಂದ ಒಪ್ಪಿಗೆ ಪಡೆಯಲು 3 ವಾರಗಳ ಅವಧಿ ಕೇಳಿದರು . ಅದಕ್ಕೂ ಉಚ್ಚ ನ್ಯಾಯಾಲಯವು ಅನುಮತಿ ನೀಡಿತು.

ಹೈಕೋರ್ಟ್ ನೀಡಿದ ಮೂರು ವಾರಗಳ ಗಡುವು ಕಳೆದು ಹತ್ತು ತಿಂಗಳಾದರೂ ಬಡ್ಡಿ ಪಾವತಿಯಾಗದೇ 04-10-2022 ರಂದು ನ್ಯಾಯಾಲಯಕ್ಕೆ "ಮೆಮೊ” ಸಲ್ಲಿಸಲಾಯಿತು.

ಇದೀಗ ವಿದ್ಯಾ ಇಲಾಖೆಯ ಅಧಿಕಾರಿಗಳಿಗೆ ಬಂಧನದ ಆದೇಶ ಬರುವುದು ಖಚಿತ ಎಂದು ಮನವರಿಕೆಯಾದುದರಿಂದ ಇಲಾಖೆ ತನ್ನದೇ ರೀತಿಯಲ್ಲಿ ಲೆಕ್ಕ ಹಾಕಿ ಭಟ್ಟರಿಗೆ ನ್ಯಾಯವಾಗಿ ನೀಡಬೇಕಾದ ಬಡ್ಡಿ ಮೊತ್ತದ ಅರ್ಧಕ್ಕಿಂತಲೂ ಕಡಿಮೆ ಹಣವನ್ನು ಅವರ ಖಾತೆಗೆ ಜಮಾ ಮಾಡಿದೆ. ಮಾತ್ರವಲ್ಲ, “ನ್ಯಾಯಾಲಯದ ಆದೇಶ ಪಾಲಿಸಲಾಗಿದೆ' ಎಂಬ ತಪ್ಪು ಅಫಿದಾವಿತ್ ಸಲ್ಲಿಸಿದೆ.

ಸಾಯುವವರೆಗೂ ಹೋರಾಟ ಅನಿವಾರ್ಯವೇ?:
ವಯೋವೃದ್ಧರಿಗೆ ನಿವೃತ್ತಿಯ ಮರು ತಿಂಗಳಲ್ಲೇ ಪಿಂಚಣಿ ಪಾವತಿಯಾಗಬೇಕು ಎಂದು ಸರ್ಕಾರ ಘೋಷಿಸಿದ್ದರೂ ಅಧಿಕಾರಿಗಳು ಬಿಡಬೇಕಲ್ಲ ? ಮೊದಲನೆಯದಾಗಿ ಪಿಂಚಣಿ ಪಾವತಿಸಲು 177 ತಿಂಗಳು ತಡ ಮಾಡಿದರು, ತಡವಾಗಿ ಪಾವತಿಸಲಾದ ಪಿಂಚಣಿಗೆ 8% ಬಡ್ಡಿ ಪಾವತಿಸುವಂತೆ ಹೈಕೋರ್ಟ್ ಆದೇಶವಿದ್ದರೂ 63 ತಿಂಗಳ ನಂತರ ಬಡ್ಡಿ ಪಾವತಿಸಲಾಯಿತು. ಬಡ್ಡಿ ಲೆಕ್ಕಾಚಾರದಲ್ಲೂ ತಪ್ಪೆಸಗಿ ಅರ್ಧಕ್ಕಿಂತಲೂ ಕಡಿಮೆ ಪಾವತಿ ಮಾಡಿ ನ್ಯಾಯಾಲಯಕ್ಕೆ ಅಫಿದಾವಿತ್ ನೀಡಲಾಗಿದೆ. ಈ ಅನ್ಯಾಯವನ್ನು "ಮೆಮೊ” ಒಂದರ ಮೂಲಕ ಉಚ್ಚನ್ಯಾಯಾಲಯದ ಗಮನಕ್ಕೆ ತರಲಾಗಿದೆ.

ಹಾಗಾದರೇ, 80 ವರ್ಷದ ರಘುಪತಿ ಭಟ್ಟರು ಈಗಾಗಲೇ 21 ವರ್ಷಗಳ ಹೋರಾಟ ನಡೆಸಿದ್ದಾರೆ. ಮುಂದೆ ಸಾಯುವವರೆಗೂ ನ್ಯಾಯಾಲಯಕ್ಕೆ ದಾವೆ ದಾಖಲಿಸುತ್ತಲೇ ಇರಬೇಕೆ ? ಎಂದು ಪ್ರಶ್ನಿಸಿದರು. 

ಪ್ರತಿಷ್ಠಾನದಿಂದ ಸಂಪೂರ್ಣ ಸಹಕಾರ:
ತನ್ನ ಪಿಂಚಣಿ ಹಾಗು ವಿಳಂಬಕ್ಕೆ ನೀಡಬೇಕಾದ ಬಡ್ಡಿ ಪಡೆಯಲು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಈ ವಯೋವೃದ್ಧರಿಗೆ ಸಹಕಾರ ಹಾಗು ಮಾರ್ಗದರ್ಶನ ನೀಡುತ್ತಲೇ ಬಂದಿದೆ . ಇದೇ ವೇಳೆ, 2003 ರ ಕೋರ್ಟ್ ತೀರ್ಪಿನ ಆಧಾರದಲ್ಲಿ ಹೊರಡಿಸಲಾದ ಇನ್ನೊಂದು ಸರಕಾರೀ ಆದೇಶದ ಪ್ರಕಾರ ಪಿಂಚಣಿ ಹಾಗು ಇತರ ಸವಲತ್ತು ಗಳನ್ನೂ ನೀಡಲು ವಿಳಂಬವಾದಲ್ಲಿ ಶೇಕಡಾ 12% ರಂತೆ ಬಡ್ಡಿ ನೀಡಲು ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದೆ. ಈ ಹೆಚ್ಚುವರಿ ಬಡ್ಡಿಯನ್ನು ಪಡೆಯಲೂ ಪ್ರತಿಷ್ಠಾನ ಅವರಿಗೆ ಸಂಪೂರ್ಣ ಸಹಕಾರ ನೀಡಲಿದೆ. ಅವರಿಗೆ ಕೊನೇಯ ರುಪಾಯಿ ಸಿಗುವವರೆಗೂ ಈ ಹೋರಾಟ ಮುಂದುವರೆಯಲಿದೆ.

ಇಂತಹ ಅನ್ಯಾಯದ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶ ಪಾಲಿಸುವುದು ಕಾರ್ಯಂಗದ ಕರ್ತವ್ಯ. ಒಂದೊಮ್ಮೆ ಆದೇಶ ಪಡೆದಮೇಲೂ ಅದರ ಪಾಲನೆಯಾಗುದಿಲ್ಲ . ಅಗಲೂ ಆದೇಶದ ಪಾಲನೆ ಯಾಗದಿದ್ದಾಗ ಬಂಧನದ ಆದೇಶ ತರಬೇಕು. ಪ್ರತಿ ಪ್ರಕರಣದಲ್ಲಿ ನ್ಯಾಯಾಂಗ ನಿಂದನಾ ದಾವೆ ಹೂಡುವುದು ಅವಶ್ಯವೇ? ಆಗಲೂ ಆದೇಶದ ಪಾಲನೆ ಆಗದಿದ್ದಾಗ ಬಂಧನದ ವಾರಂಟ್ ತರುವುದು ಅನಿವಾರ್ಯವೇ?

ಮನೆ ಬಾಗಿಲಿಗೆ ಮಾಸಾಶನ ಸ್ಥಗಿತದಿಂದ ಜನರ ಪರದಾಟ: ಅಂಗವಿಕಲರು, ವೃದ್ಧರಿಗೆ ಹೆಚ್ಚು ತೊಂದರೆ

ಪ್ರಾಚಾರ್ಯ ರಘುಪತಿ ಭಟ್ಟರ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ಆದೇಶದ ಮೂರನೇ ಪ್ಯಾರಾದಲ್ಲಿ ಮುಖ್ಯ ಸಂಗತಿಯೊಂದಿದೆ. ಭಟ್ಟರಿಗೆ ಈ ಕೂಡಲೇ ನಿಯಮಾನುಸಾರ ಬಡ್ಡಿ ನೀಡಬೇಕು, ಈ ಬಡ್ಡಿಯ ಮೊತ್ತ ಹಾಗೂ ದಾವೆಗೆ ತಗಲಿದ ಖರ್ಚನ್ನು ಈ ಅನ್ಯಾಯಕ್ಕೆ ಕಾರಣರಾದವರಿಂದ ವಸೂಲಿ ಮಾಡಬೇಕು. ಪ್ರತಿಷ್ಠಾನ ಈಗಾಗಲೇ ಈ ಸಮಸ್ಯೆಗೆ ಇಲಾಖೆಯ ಅಧಿಕಾರಿಗಳು ಹಾಗೂ ಕಾಲೇಜಿನ ಆಡಳಿತ ಮಂಡಳಿ ಎಷ್ಟು ಕಾರಣ ಎಂಬ ತನಿಖೆ ನಡೆಸುತ್ತಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಏಕೆಂದರೆ ಅಧಿಕಾರಿಗಳಾಗಲಿ ಆಡಳಿತ ಮಂಡಳಿಯಾಗಲಿ ಮಾಡಿದ ಅನ್ಯಾಯಕ್ಕೆ ಜನರ ತೆರಿಗೆ ಹಣ ಏಕೆ ಪೋಲಾಗಬೇಕು?, ದ್ರೋಹ ಎಸಗಿದವರು ತಕ್ಕ ಬೆಲೆ ತೆರಲೇಬೇಕು ಎಂದು ಆಗ್ರಹಿಸಿದರು.

ಅಟಲ್ ಪಿಂಚಣಿ ಯೋಜನೆಗೆ 5 ಕೋಟಿ ಜನರು ಸೇರ್ಪಡೆ; ಮಹಿಳೆಯರ ಪ್ರಮಾಣದಲ್ಲಿಏರಿಕೆ 

ನನಗೆ ಬರಬೇಕಾದ ಸಮಯದಲ್ಲಿ ಪಿಂಚಣಿ ಕೈ ಸೇರಲಿಲ್ಲ. ನ್ಯಾಯಾಲಯದ ಆದೇಶವಿದ್ದರೂ, ಬಡ್ಡಿಯ ಮೊತ್ತವನ್ನು ನೀಡಿಲ್ಲ. 2011 ರಲ್ಲಿ ಹೃದಯ ಸಂಭಂದಿ ಖಾಯಿಲೆಯಿಂದ ಬಳಲುತ್ತಿದ್ದ ಮಡದಿಗೆ ಸರಿಯಾಗಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೇ ಆಕೆಯೂ ಇಹಲೋಕ ತ್ಯಜಿಸಿದಳು. ಮಗಳ ವೈದ್ಯಯಾಗುವ ಕನಸನ್ನು ಪೂರೈಸಲು ಸಾಧ್ಯವಾಗದ ನತದೃಷ್ಟ ತಂದೆಯಾಗಿದ್ದೇನೆ ಎಂದು ನಿವೃತ್ತ ಪ್ರಾಚಾರ್ಯ ರಘುಪತಿ ಭಟ್ ಅಳಲನ್ನು ಹೇಳಿಕೊಂಡರು.

Follow Us:
Download App:
  • android
  • ios