HP Layoffs: ಇನ್ನು ಮೂರೇ ವರ್ಷದಲ್ಲಿ 6 ಸಾವಿರ ಎಚ್‌ಪಿ ಉದ್ಯೋಗಿಗಳ ವಜಾ!

By Santosh Naik  |  First Published Nov 23, 2022, 7:54 PM IST

ಭವಿಷ್ಯದ ರೂಪಾಂತರಕ್ಕೆ ಸಿದ್ಧವಾಗಿ ಎನ್ನುವ ಯೋಜನೆಯ ಭಾಗವಾಗಿ ಜಗತ್ತಿನ ಅತ್ಯಂತ ಪ್ರಸಿದ್ಧ ಕಂಪ್ಯೂಟರ್‌ ತಯಾರಕ ಕಂಪನಿಯಾದ ಹೆವ್ಲೆಟ್ ಪ್ಯಾಕರ್ಡ್ ಅಂದರೆ ಎಚ್‌ಪಿ ಕಂಪನಿ, ಮುಂದಿನ ಮೂರು ವರ್ಷಗಳಲ್ಲಿ ಕನಿಷ್ಠ 4 ರಿಂದ 6 ಸಾವಿರ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಣೆ ಮಾಡಿದೆ.


ನವದೆಹಲಿ (ನ.23): ಟ್ವಿಟರ್‌, ಫೇಸ್‌ಬುಕ್‌, ಮೆಟಾ, ಗೂಗಲ್‌ ಬಳಿಕ ಈಗ ಜಾಗತಿಕ ಕಂಪ್ಯೂಪರ್‌ ತಯಾರಿಕೆಯಲ್ಲಿ ಅಗ್ರಸ್ಥಾನದಲ್ಲಿರುವ ಅಮೆರಿಕದ ಕಂಪನಿ ಹೆವ್ಲೆಟ್‌ ಪ್ಯಾಕರ್ಡ್‌ ಅಂದರೆ ಎಚ್‌ಪಿ ಕಂಪನಿ ಉದ್ಯೋಗಿಗಳ ವಜಾ ಮಾಡಲು ಮುಂದಾಗಿದೆ. ಕಂಪ್ಯೂಟರ್‌ ಮಾರಾಟದಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡಿರುವ ಹಿನ್ನಲೆಯಲ್ಲಿ ಕಾರ್ಯನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವ ಗುರಿಯಲ್ಲಿರುವ ಎಚ್‌ಪಿ 2025ರ ವೇಳೆಗೆ ಗರಿಷ್ಠ 6 ಸಾವಿರ ಹಾಗೂ ಕನಿಷ್ಠ 4 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲು ತೀರ್ಮಾನ ಮಾಡಿದ್ದಾಗಿ ಹೇಳಿದೆ. ಕಂಪನಿಯ ವಾರ್ಷಿಕ ವರದಿ ಹೊರಬಿದ್ದ ಬೆನ್ನಲ್ಲಿಯೇ ಜಾಗತಿಕ ವರ್ಕ್‌ಫೋರ್ಸ್‌ನ ಶೇ.12ರಷ್ಟು ಸಿಬ್ಬಂದಿ ಕಡಿತ ಮಾಡುವುದಾಗಿ ಕಂಪನಿ ಹೇಳಿದೆ.  ಮುಖ್ಯ ಹಣಕಾಸು ಅಧಿಕಾರಿ ಮೇರಿ ಮೈಯರ್ಸ್ ತಮ್ಮ ಪ್ರಕಟಣೆಯಲ್ಲಿ ಇದನ್ನು ತಿಳಿಸಿದ್ದು, ಕಂಪ್ಯೂಟರ್‌ ಮಾರಾಟದಲ್ಲಿ ಆಗಿರುವ ಇಳಿಕೆಯೇ ಇದಕ್ಕೆ ದೊಡ್ಡ ಕಾರಣ ಎಂದು ಹೇಳಿದ್ದಾರೆ. ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿ ಕಾರಣದಿಂದಾಗಿ ಈಗಾಗಲೇ ಮೆಟಾ, ಅಮೆಜಾನ್‌ ತಮ್ಮ ಸಾವಿರಾರು ಕೆಲಸಗಾರರನ್ನು ವಜಾ ಮಾಡಿದೆ.

ವಾರ್ಷಿಕ ಆದಾಯದ ವರದಿ ಪ್ರಕಟವಾದ ಬಳಿಕ ಮಾತನಾಡಿರುವ ಮೈಯರ್ಸ್‌, 2022ರಲ್ಲಿ ಎದುರಾಗಿರುವ ಸವಾಲುಗಳು 2023ರ ಹಣಕಾವು ವರ್ಷದಲ್ಲೂ ಖಂಡಿತವಾಗಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಸಿಬ್ಬಂದಿ ಪುನರ್‌ರಚನೆ ಹಾಗೂ ಇತರ ಶುಲ್ಕಗಳಿಗೆ ಸಂಬಂಧಿಸಿದ ಕಾರ್ಮಿಕರ ವೆಚ್ಚಗಳಲ್ಲಿ 1 ಬಿಲಿಯನ್‌ ಡಾಲರ್‌ (8,177 ಕೋಟಿ ರೂಪಾಯಿ) ಉಳಿಸಲು ಯೋಚನೆ ಮಾಡುತ್ತಿದೆ. ಅದರಲ್ಲಿ 2023ರ ಆರ್ಥಿಕ ವರ್ಷದಲ್ಲಿಯೇ ಸುಮಾರು 600 ಮಿಲಿಯನ್‌ (4900 ಕೋಟಿ ರೂಪಾಯಿ) ಮೊತ್ತವನ್ನು ಉಳಿಕೆ ಮಾಡಲು ನಿರ್ಧರಿಸಿದ್ದು, ಉಳಿದ ಹಣವನ್ನು ಮುಂದಿನ ಎರಡು ವರ್ಷಗಳಲ್ಲಿ ಸಮಾನವಾಗಿ ಹಂಚಿಕೆ ಮಾಡಲಾಗಿದೆ.

ಕಂಪನಿಯು ಪ್ರಸ್ತುತ ಸರಿಸುಮಾರು 50,000 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ ಮತ್ತು ಪುನರ್‌ರಚನೆ ಕಾರಣದದಿಂದಾಗಿ 4,000 ರಿಂದ 6,000 ಮಂದಿಯ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ. ಎಚ್‌ಪಿ ಕಂಪನಿಯ ಯಾವೆಲ್ಲಾ ವಿಭಾಗಗಳಲ್ಲಿ ವಜಾ ಪ್ರಕ್ರಿಯೆ ನಡೆಯಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತಾಗಿ ಎಚ್‌ಪಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು. 'ನಾವು ಮುಂದಿನ ಮೂರು ವರ್ಷಗಳಲ್ಲಿ ನಮ್ಮ ಉದ್ಯೋಗಿಗಳ ಗಾತ್ರವನ್ನು 4,000-6,000 ಜನರಿಗೆ ಕಡಿಮೆಗೊಳಿಸುತ್ತೇವೆ. ಇದು ನಾವು ಮಾಡಲಿರುವ ಕಠಿಣ ನಿರ್ಧಾರವಾಗಿದೆ. ಏಕೆಂದರೆ ಇದರಿಂದ ಕೆಲವು ವ್ಯಕ್ತಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದರ ಬಗ್ಗೆ ನಮಗೆ ಕಾಳಜಿ ವಹಿಸುತ್ತದೆ. ಅವರಿಗೆ ಮುಂದಿನ ಅವಕಾಶ ಕಂಡುಕೊಳ್ಳುವವರಗೆ ಅವರಿಗೆ ಹಣಕಾಸು ಮತ್ತು ವೃತ್ತಿ ಸೇವೆಗಳ ಬೆಂಬಲವನ್ನು ಒದಗಿಸಲು ಸಿದ್ಧವಾಗಿದ್ದೇವೆ' ಎಂದು ಹೇಳಿದೆ.

ಕಳೆದ ತಿಂಗಳು ಸಂಶೋಧಾನಾ ಸಂಸ್ಥೆ ಕೌಂಟರ್‌ಪಾಯಿಂಟ್‌ ತನ್ನ ವರದಿಯನ್ನು ನೀಡಿತ್ತು. ಅದರಲ್ಲಿ 2021ರ ಮೂರನೇ ತ್ರೈಮಾಸಿಕಕ್ಕೂ 2022ರ ಮೂರನೇ ತ್ರೈಮಾಸಿಕಕ್ಕೂ ಹೋಲಿಸಿದರೆ,  ಜಾಗತಿಕ ಪಿಸಿ ಮಾರಾಟ ಹಾಗು ಶಿಪ್‌ಮೆಂಟ್‌ಗಳಲ್ಲಿ ಶೇ. 15.5 ರಷ್ಟು ಕಡಿಮೆಯಾಗಿದೆ. ಎಚ್‌ಪಿ ಎನ್ನುವುದು ಜಗತ್ತಿನಲ್ಲಿ ಗರಿಷ್ಠ ಪಿಸಿ ಮಾರಾಟ ಮಾಡುವ ಕಂಪನಿಗಳಲ್ಲಿ 2ನೇ ಸ್ಥಾನದಲ್ಲಿದೆ.

850 ಕಂಪನಿಯಿಂದ 1.36 ಲಕ್ಷ ಉದ್ಯೋಗಿಗಳ ವಜಾ, ಇದೀಗ ಗೂಗಲ್ 10,000 ನೌಕರರ ಕಡಿತಕ್ಕೆ ಪ್ಲಾನ್!

Tap to resize

Latest Videos

2021ರ ಮೂರನೇ ತ್ರೈಮಾಸಿಕದಲ್ಲಿ ಎಚ್‌ಪಿ 17.3 ಮಿಲಿಯನ್‌ ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ, 2022ರ ಮೂರನೇ ತ್ರೈಮಾಸಿಕದಲ್ಲಿ 12.7 ಮಿಲಿಯನ್ ಯುನಿಟ್‌ ಮಾರಾಟ ಮಾಡಿದೆ. ಈ ವರದಿಯನ್ನು ಬರೆದಿರುವ ಸಂಶೋಧಕ ವಿಲಿಯಮ್‌ ಲೀ ಪ್ರಕಾರ, 2023ರ ವರ್ಷವನ್ನು ಗಮನಿಸುವುದಾದರೆ, ಜಾಗತಿಕ ಪರ್ಸನಲ್‌ ಕಂಪ್ಯೂಟರ್‌ ಮಾರುಕಟ್ಟೆಯ ಮೇಲೆ ಕಾರ್ಮೋಡ ಆವರಿಸಿದೆ ಎಂದೇ ಹೇಳಬಹುದು. 2021ರ ಪೂರ್ತಿ ವರ್ಷಕ್ಕೆ ಹೋಲಿಸಿದರೆ, 2022ರ ಪೂರ್ತಿ ವರ್ಷದಲ್ಲಿ ಪಿಸಿ ಮಾರಾಟದಲ್ಲಿ ಶೇ.13ರಷ್ಟು ಇಳಿಕೆಯಾಗಬಹುದು ಎನ್ನಲಾಗಿದೆ' ಎಂದೊದ್ದಾರೆ.

ಟ್ವಿಟ್ಟರ್‌ ಆಯ್ತು ಈಗ Meta ಕಂಪನಿಯಿಂದ ಸಾವಿರಾರು ಉದ್ಯೋಗಿಗಳ ವಜಾ..!

ಎಚ್‌ಪಿ ಅಲ್ಲದೆ, ಅಮೆಜಾನ್‌ ಹಾಗೂ ಮಟಾ ಕೂಡ ತೀವ್ರ ಆರ್ಥಿಕ ಸ್ಥಿತಿಯ ಕಾರಣದಿಂದಾಗಿ ಸಿಬ್ಬಂದಿಗಳನ್ನು ವಜಾ ಮಾಡಿತ್ತು. ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್‌ ಈಗಾಗಳೇ ತನ್ನ ಅರ್ಧಕ್ಕೂ ಅಧಿಕ ಸಿಬ್ಬಂದಿಯನ್ನು ವಜಾ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಕೆಲವು ವ್ಯಕ್ತಿಗಳು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದೆ. ಇದರ ನಡುವೆ ಗೂಗಲ್‌ ಕೂಡ ಅಂದಾಜು 11 ಸಾವಿರ ಸಿಬ್ಬಂದಿಯನ್ನು ವಜಾ  ಮಾಡಲು ತೀರ್ಮಾನ ಮಾಡಿದೆ ಎನ್ನಲಾಗಿದೆ.
 

click me!