ವಿಶ್ವದಲ್ಲಿ ಆರ್ಥಿಕ ಹಿಂಜರಿತ ಆತಂಕ ಹೆಚ್ಚಾಗುತ್ತಿದೆ. ಒಂದೊಂದೆ ಕಂಪನಿಗಳು ನೌಕರರ ವಜಾ ಮಾಡುತ್ತಿದೆ. ಫೇಸ್‌ಬುಕ್, ಟ್ವಿಟರ್, ಅಮೆಜಾನ್ ಸೇರಿದಂತೆ ಹಲವು ಕಂಪನಿಗಳು ಈಗಾಗಲೇ ಉದ್ಯೋಗಿಗಳ ವಜಾ ಮಾಡಿದೆ. ಇದೀಗ ಗೂಗಲ್ ಸರದಿ.
ನವದೆಹಲಿ(ನ.22): ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತ ತೀವ್ರವಾಗಿ ಕಾಡುತ್ತಿದೆ. ಇದರ ಪರಿಣಾಮ ಭಾರತದ ಮೇಲೂ ಬಿದ್ದಿದೆ. ಹಲವು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಈಗಾಗಲೇ ಉದ್ಯೋಗಿಗಳ ವಜಾ ಆರಂಭಗೊಂಡಿದೆ. ಇನ್ನು ಟ್ವಿಟರ್, ಅಮೆಜಾನ್, ಮೆಟಾ ಸೇರಿದಂತೆ ಹಲವು ಕಂಪನಿಗಳು ಈಗಾಗಲೇ ಉದ್ಯೋಗಿಗಳ ವಜಾ ಮಾಡಿದೆ. ಮೆಟಾ, ಅಮೆಜಾನ್, ಟ್ವಿಟರ್ ಸೇರಿದಂತೆ 2022ರಲ್ಲಿ ಒಟ್ಟು 850 ಕಂಪನಿಗಳು ಒಟ್ಟು 1,36,989 ಉದ್ಯೋಗಿಗಳ ವಜಾ ಮಾಡಿದೆ. ಉದ್ಯೋಗಿಗಳನ್ನು ಕಂಪನಿಗಳು ಕಿತ್ತೆಸೆಯುತ್ತಿರುವ ಪ್ರಕ್ರಿಯೆ ಸದ್ದಿಲ್ಲದೆ ನಡೆಯುತ್ತಿದೆ. ಇದೀಗ ಇಂಟರ್ನೆಟ್ ದಿಗ್ಗಜ ಗೂಗಲ್ ಉದ್ಯೋಗಿಗಳ ವಜಾ ಕಾರ್ಯಕ್ರಮ ಆರಂಭಿಸಿದೆ. ಈಗಾಗಲೇ 10,000 ಉದ್ಯೋಗಿಗಳನ್ನು ಗುರುತಿಸಿಲಾಗಿದ್ದು, ಶೀಘ್ರದಲ್ಲೇ ಈ ಉದ್ಯೋಗಿಗಳನ್ನು ವಜಾಗೊಳಿಸಲು ಗೂಗಲ್ ಎಲ್ಲಾ ತಯಾರಿ ನಡೆಸಿದೆ.
ಗೂಗಲ್ ಮಾತೃಸಂಸ್ಥೆ ಆಲ್ಫಾಬೆಟ್ ಉದ್ಯೋಗಿಗಳ ವಜಾಗೆ ಸಜ್ಜಾಗಿದೆ. ಆಲ್ಫಾಬೆಟ್ ಈಗಾಗಲೇ ಉದ್ಯೋಗಿಗಳ ಪರ್ಫಾಮೆನ್ಸ್ ವಿಶ್ಲೇಷಣೆ ಮಾಡಿದೆ. ಕಳಪೆ ನಿರ್ವಹಣೆ ನೀಡುತ್ತಿರುವ ಉದ್ಯೋಗಿಗಳನ್ನು ಸಂಸ್ಥೆಯಿಂದ ವಜಾ ಮಾಡಲಾಗುವುದು ಎಂದು ಆಲ್ಫಾಬೆಟ್ ಹೇಳಿದೆ. ಸದ್ಯದ ಮಾರುಕಟ್ಟೆ ಸನ್ನಿವೇಶಗಳು ಭಿನ್ನವಾಗಿದೆ. ಹೀಗಾಗಿ ವೆಚ್ಚವನ್ನು ಕಡಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಂಪನಿ ಈಗ ದಿಟ್ಟ ನಿರ್ಧಾರ ಮಾಡಲೇಬೇಕಿದೆ ಎಂದು ಆಲ್ಫಾಬೆಟ್ ಹೇಳಿದೆ.
undefined
ಆರ್ಥಿಕ ಹಿಂಜರಿತದ ಭೀತಿ, ಉದ್ಯೋಗ ಕಡಿತಕ್ಕೆ ಮುಂದಾದ ಅಮೆರಿಕದ ಕಾರ್ಪೋರೇಟ್ ಕಂಪನಿಗಳು
ಆಲ್ಫಾಬೆಟ್ ಈಗಾಗಲೇ ಉದ್ಯೋಗಿಗಳ ರ್ಯಾಂಕಿಂಗ್ ಪರ್ಫಾಮೆನ್ಸ್ ಪ್ಲಾನ್ ಜಾರಿಮಾಡಿದೆ. ಈ ಪ್ಲಾನ್ ಪ್ರಕಾರ ಯಾರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ, ಯಾರು ಕಳಪೆ ನಿರ್ವಹಣೆ ತೋರುತ್ತಿದ್ದಾರೆ ಅನ್ನೋದು ಉದ್ಯೋಗಿಗಳಿಗೂ ಮಾಹಿತಿ ಸಿಗಲಿದೆ. ಹೊಸ ಪದ್ದತಿಯಡಿಯಲ್ಲಿ ಇದೀಗ ಆಲ್ಫಾಬೆಟ್ ಶೇಕಡಾ 6 ರಷ್ಟು ಉದ್ಯೋಗಿಗಳನ್ನು ಕಳಪೆ ನಿರ್ವಹಣೆಯಿಂದ ವಜಾ ಮಾಡಲು ಮುಂದಾಗಿದೆ. ಶೇಕಡಾ 6 ರಷ್ಟು ಅಂದರೆ 10 ರಿಂದ 11,000 ಉದ್ಯೋಗಿಗಳು ಆಲ್ಫಾಬೆಟ್‌ನಿಂದ ವಜಾಗೊಳ್ಳಲಿದ್ದಾರೆ.
ಟ್ವಿಟ್ಟರ್ ಆಯ್ತು ಈಗ Meta ಕಂಪನಿಯಿಂದ ಸಾವಿರಾರು ಉದ್ಯೋಗಿಗಳ ವಜಾ..!
ಅಮೆಜಾನ್‌ನಲ್ಲಿ 10,000 ಸಿಬ್ಬಂದಿ ಕಡಿತ
ಟ್ವೀಟರ್ ಹಾಗೂ ಮೆಟಾ ಬಳಿಕ ಆದಾಯ ಕಡಿತದ ಕಾರಣ ನೀಡಿ ಅಮೆಜಾನ್ ತನ್ನ 10 ಸಾವಿರ ಸಿಬ್ಬಂದಿಗಳ ಕಡಿತಕ್ಕೆ ಬುಧವಾರ ಚಾಲನೆ ನೀಡಿದೆ. ವಿಶ್ವದಾದ್ಯಂತ ಅಮೆಜಾನ್ ಕಂಪನಿಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಈ ಮೇಲ್ ಮೂಲಕ ಸಂದೇಶ ರವಾನಿಸಿದೆ. ಈ ಕುರಿತು ಮಾತನಾಡಿರುವ ಕಂಪನಿಯ ಸಾಧನ - ಸೇವೆಗಳ ವಿಭಾಗದ ಮುಖ್ಯಸ್ಥ ಡೇವಿಡ್ ಲಿಂಪ್, ಸಂಬಂಧಿಸಿದ ಉದ್ಯೋಗಿಗಳಿಗೆ ಕಡಿತದ ಕುರಿತು ಇ-ಮೇಲ್ ಮೂಲಕ ಸಂದೇಶ ರವಾನಿಸಿದೆ. ಕಂಪನಿಯಲ್ಲಿ ಕೆಲವು ಹುದ್ದೆಗಳು ಅನವಶ್ಯಕವಾಗಿದ್ದು, ಅವುಗಳನ್ನು ಕಡಿತಗೊಳಿಸಲಾಗುತ್ತಿದೆ ಈ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ಕಂಪನಿಯಲ್ಲಿ ಹೊಸ ಪಾತ್ರ ಹುಡುಕಿಕೊಳ್ಳಲು ಅಥವಾ ಬೇರೆಡೆ ಕೆಲಸ ಹುಡುಕಿಕೊಳ್ಳಲು ಕಂಪನಿ ಸಹಾಯ ಒದಗಿಸಲಿದೆ ಎಂದು ಹೇಳಿದ್ದಾರೆ. ಉದ್ಯೋಗಿಗಳು ಕಂಪನಿಯಲ್ಲಿ ಬೇರೆ ಹುದ್ದೆ ಹುಡುಕಿಕೊಳ್ಳಲು ವಿಫಲರಾದರೆ ಅವರಿಗೆ ಪ್ರತ್ಯೇಕ ಪಾವತಿ ಹಾಗೂ ಹುದ್ದೆ ಪರಿವರ್ತನೆಯ ಪ್ರಯೋಜನಗಳು, ಬೇರೆಡೆ ಉದ್ಯೋಗ ಒದಗಿಸಿಕೊಡುವ ಸೌಲಭ್ಯ ನೀಡುತ್ತಿದೆ ಎಂದೂ ಡೇವಿಡ್ ಹೇಳಿದ್ದಾರೆ. ಕಳೆದ ವಾರ ಫೇಸ್‌ಬುಕ್ ಕಂಪನಿ 11,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು.