
ಬಿಹಾರದ ಸಮಸ್ತಿಪುರ ಜಿಲ್ಲೆಯ ಉಜಿಯಾರ್‌ಪುರ ಬ್ಲಾಕ್ ಪ್ರದೇಶದ ನಿವಾಸಿ ಅಮರದೀಪ್ ಕುಮಾರ್ ಅವರ ಯಶೋಗಾಥೆ, ಉತ್ತಮ ಭವಿಷ್ಯವನ್ನು ಅರಸಿ ಗ್ರಾಮದಿಂದ ನಗರಗಳಿಗೆ ಅಥವಾ ವಿದೇಶಗಳಿಗೆ ತೆರಳಲು ಬಯಸುವ ಯುವಕರಿಗೆ ಸ್ಫೂರ್ತಿಯಾಗಿದೆ. ಅಮರದೀಪ್ ಅವರಿಗೂ ವಾರ್ಷಿಕ ₹27 ಲಕ್ಷದ ಪ್ಯಾಕೇಜ್ ಹೊಂದಿದ್ದ ಉದ್ಯೋಗದ ಅವಕಾಶವಿತ್ತು. ಭಾರತ ಸೇರಿದಂತೆ ವಿದೇಶಗಳಲ್ಲಿಯೂ ಕೆಲಸ ಮಾಡಿದ ಅನುಭವವನ್ನು ಅವರು ಪಡೆದುಕೊಂಡಿದ್ದರು. ಆದರೂ, ಉದ್ಯೋಗದ ಹಾದಿಯನ್ನು ಬಿಟ್ಟು ತಮ್ಮ ಗ್ರಾಮಕ್ಕೆ ಮರಳುವ ನಿರ್ಧಾರ ಕೈಗೊಂಡರು.
ಅಮರದೀಪ್ ಅವರ ಬಾಲ್ಯ ತುಂಬಾನೆ ಕಷ್ಟವಾಗಿದ್ದು, ಮನೆಯ ಜವಾಬ್ಧಾರಿ ತೆಗೆದುಕೊಳ್ಳಲು ಹೊಟೇಲಲ್ಲಿ ಪಾತ್ರೆತೊಳೆದು ದಿನಕ್ಕೆ 7 ರೂಪಾಯಿ ಸಂಪಾದಿಸುತ್ತಿದ್ದವರು. ಅದರ ಜೊತೆಗೆ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದರು. ಯುಪಿಎಸ್ ಸಿ ಗೆ ತಯಾರಿ ಕೂಡ ನಡೆಸಿ ಸೋತಿದ್ದರು. ಬಳಿಕ ಅವರ ಕೈ ಹಿಡಿದದ್ದು ಕಾರ್ಪರೇಟ್ ಕೆಲಸ. ಸ್ವಂತ ಉದ್ಯಮ ಆರಂಭಿಸಿ ಹಣ ಸಂಪಾದಿಸುವುದು ಮಾತ್ರ ಅವರ ಗುರಿಯಾಗಿರಲಿಲ್ಲ. ತಮ್ಮ ಪ್ರದೇಶದ ಜನರಿಗೆ ಉದ್ಯೋಗ ಒದಗಿಸುವುದು ಮತ್ತು ರೈತರ ಆದಾಯ ಹೆಚ್ಚಿಸಲು ನೆರವಾಗುವುದು ಅವರ ಉದ್ದೇಶವಾಗಿತ್ತು. ಈ ಚಿಂತನೆಯೊಂದಿಗೆ ಗ್ರಾಮೀಣ ಪ್ರದೇಶದಲ್ಲೇ ಊದುಬತ್ತಿ ತಯಾರಿಕಾ ಉದ್ಯಮ ಆರಂಭಿಸಿದ ಅವರು, ಅದನ್ನು ಹಂತ ಹಂತವಾಗಿ ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾರೆ.
ಗ್ರಾಮದಲ್ಲೇ ಉದ್ಯೋಗ ಸೃಷ್ಟಿಸಿದ ಊದುಬತ್ತಿ ಉದ್ಯಮ
ಗ್ರಾಮೀಣ ಪ್ರದೇಶದಲ್ಲೇ ಊದುಬತ್ತಿ ಕಾರ್ಖಾನೆಯನ್ನು ಸ್ಥಾಪಿಸಲು ನಿರ್ಧರಿಸಿದ್ದರ ಹಿಂದೆ ಸ್ಥಳೀಯ ಜನರಿಗೆ ತಮ್ಮ ಊರಿನಲ್ಲೇ ಉದ್ಯೋಗ ದೊರೆಯಬೇಕು ಎಂಬ ಉದ್ದೇಶವಿತ್ತು ಎಂದು ಅಮರದೀಪ್ ಕುಮಾರ್ ತಿಳಿಸಿದ್ದಾರೆ. ಅವರ ಕಾರ್ಖಾನೆಯಲ್ಲಿ ತಯಾರಾಗುವ ‘ಮೋರಂಗ್ ದೇಶ್’ (Morang Desh) ಬ್ರ್ಯಾಂಡ್‌ನ ಅಗರಬತ್ತಿಗಳು ಈಗ ವಿದೇಶಗಳಿಗೂ ತಲುಪುತ್ತಿವೆ. ಇದರ ಜೊತೆಗೆ ಅವರು ‘ಸಾಂಥೂ ಎಫ್‌ಪಿಒ’ (Santhu FPO) ಎಂಬ ರೈತ ಉತ್ಪಾದಕ ಸಂಸ್ಥೆಯನ್ನೂ ಆರಂಭಿಸಿದ್ದಾರೆ. ಈ ಸಂಸ್ಥೆಯ ಮೂಲಕ ರೈತರ ಆದಾಯ ಹೆಚ್ಚಿಸುವುದು ಮತ್ತು ಕೃಷಿ ವೆಚ್ಚವನ್ನು ಕಡಿಮೆ ಮಾಡುವುದರ ಮೇಲೆ ಗಮನ ಹರಿಸಲಾಗುತ್ತಿದೆ.
ರೈತರ ಆದಾಯ ಹೆಚ್ಚಿಸಲು ಕೇವಲ ಉತ್ಪಾದನೆಯನ್ನು ಹೆಚ್ಚಿಸಿದರೆ ಸಾಲದು. ಕೃಷಿಗೆ ತಗಲುವ ವೆಚ್ಚವನ್ನೂ ಕಡಿಮೆ ಮಾಡಬೇಕು ಎಂಬುದು ಅಮರದೀಪ್ ಅವರ ಅಭಿಪ್ರಾಯ. ಈ ನಿಟ್ಟಿನಲ್ಲಿ ರೈತರಿಗೆ ಅಗತ್ಯವಾದ ಕೃಷಿ ಪರಿಕರಗಳು ಮತ್ತು ಇತರ ಒಳಸುರಿಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಒದಗಿಸಲು ಪ್ರಯತ್ನಿಸುತ್ತಿದ್ದಾರೆ.
ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿ ಅಭಿವೃದ್ಧಿ
ದಕ್ಷಿಣ ಭಾರತದಲ್ಲಿ ಅನುಸರಿಸಲಾಗುತ್ತಿರುವ ಕೃಷಿ ತಂತ್ರಜ್ಞಾನಗಳನ್ನು ಬಿಹಾರದಲ್ಲಿಯೂ ಅಳವಡಿಸಿಕೊಂಡರೆ, ರೈತರು ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಪಡೆಯಬಹುದು ಎಂಬುದು ಅವರ ನಂಬಿಕೆ. ಇದರ ಜೊತೆಗೆ ಮಣ್ಣಿನ ಸಂರಕ್ಷಣೆಯ ಕ್ಷೇತ್ರದಲ್ಲಿಯೂ ಅವರು ಕೆಲಸ ಮಾಡುತ್ತಿದ್ದಾರೆ. ಸಾಂಪ್ರದಾಯಿಕ ಕೃಷಿ ಪದ್ಧತಿಗಳಿಗೆ ಮಾತ್ರ ಸೀಮಿತವಾಗದೆ, ತಂತ್ರಜ್ಞಾನ ಮತ್ತು ಉತ್ತಮ ನಿರ್ವಹಣೆಯ ಮೂಲಕ ರೈತರ ಆದಾಯ ಹೆಚ್ಚಿಸುವುದು ಅವರ ಗುರಿಯಾಗಿದೆ.
₹3 ಕೋಟಿಗೂ ಅಧಿಕ ವಾರ್ಷಿಕ ವಹಿವಾಟು
ಅಮರದೀಪ್ ಅವರ ಯೋಜನೆ ಈಗ ಕೇವಲ ಊದುಬತ್ತಿ ಉದ್ಯಮಕ್ಕೆ ಸೀಮಿತವಾಗಿಲ್ಲ. ತಮ್ಮ ಪ್ರದೇಶದಲ್ಲಿ ಬೆಳೆಯುವ ಹಣ್ಣು ಮತ್ತು ತರಕಾರಿಗಳನ್ನು ದೇಶದ ವಿವಿಧ ಮಾರುಕಟ್ಟೆಗಳ ಜೊತೆಗೆ ವಿದೇಶಗಳಿಗೂ ತಲುಪಿಸುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಊದುಬತ್ತಿ ಉದ್ಯಮ ಮತ್ತು ಎಫ್‌ಪಿಒಗೆ ಸಂಬಂಧಿಸಿದ ವ್ಯವಹಾರಗಳ ಒಟ್ಟು ವಾರ್ಷಿಕ ವಹಿವಾಟು ₹3 ಕೋಟಿಗೂ ಅಧಿಕವಾಗಿದೆ ಎಂದು ಅಮರದೀಪ್ ತಿಳಿಸಿದ್ದಾರೆ.
₹27 ಲಕ್ಷದ ಪ್ಯಾಕೇಜ್ ಹೊಂದಿದ್ದ ಉದ್ಯೋಗವನ್ನು ಬಿಟ್ಟು ಗ್ರಾಮಕ್ಕೆ ಮರಳುವುದು ಸುಲಭದ ನಿರ್ಧಾರವಾಗಿರಲಿಲ್ಲ. ಆದರೆ ಇಂದು ತಮ್ಮ ನಿರ್ಧಾರದ ಬಗ್ಗೆ ಸಂತೋಷವಿದೆ ಎಂದು ಅವರು ಹೇಳುತ್ತಾರೆ. ಯುವಕರು ತಮ್ಮದೇ ಪ್ರದೇಶದಲ್ಲಿ ನೆಲೆಸಿ ಉದ್ಯೋಗ ಪಡೆಯುವಂತೆಯೂ, ರೈತರು ತಮ್ಮ ಬೆಳೆಗಳಿಗೆ ಉತ್ತಮ ಆದಾಯ ಗಳಿಸುವಂತೆಯೂ ಗ್ರಾಮೀಣ ಉದ್ಯಮದ ಮಾದರಿಯನ್ನು ರೂಪಿಸುವುದು ಅವರ ಉದ್ದೇಶವಾಗಿದೆ. ತಮ್ಮ ಜೀವನದಲ್ಲಿ ಮುಂದೆ ಸಾಗುವುದಷ್ಟೇ ನಿಜವಾದ ಯಶಸ್ಸಲ್ಲ; ತಮ್ಮೊಂದಿಗೆ ಇತರರನ್ನೂ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುವುದೇ ನಿಜವಾದ ಯಶಸ್ಸು ಎಂಬುದನ್ನು ಅಮರದೀಪ್ ಕುಮಾರ್ ಅವರ ಕಥೆ ಸಾರುತ್ತದೆ.