ವರ್ಕ್ ಫ್ರಮ್ ಹೋಮ್ ಗೆ 57 ಲಕ್ಷ, ಆಫೀಸ್ ಗೆ ಹೋದ್ರೆ 84 ಲಕ್ಷ! ಕೆಲ್ಸದ ಆಯ್ಕೆಯಲ್ಲಿ ಕನ್ಫ್ಯೂಸ್ ಆದ ಟೆಕ್ಕಿ

Published : Sep 28, 2026, 11:52 AM IST
job

ಸಾರಾಂಶ

ಜೀವನದಲ್ಲಿ ಹಣ ಮುಖ್ಯವೋ ಅಥವಾ ಹಣದ ಜೊತೆ ನೆಮ್ಮದಿ, ಕುಟುಂಬದ ಜೊತೆ ಸಮಯ ಕಳೆಯುವುದು ಮುಖ್ಯವೋ ಎಂಬ ಪ್ರಶ್ನೆಯನ್ನು ಟೆಕಿಯೊಬ್ಬರ ಪೋಸ್ಟ್‌ ಹುಟ್ಟುಹಾಕಿದೆ. ಹೆಚ್ಚು ಸ್ಯಾಲರಿ ಜೊತೆ ಹೆಚ್ಚು ಟೆನ್ಷನ್‌ ಒಂದ್ಕಡೆಯಾದ್ರೆ ಕಡಿಮೆ ಸ್ಯಾಲರಿ ಕಡಿಮೆ ಟೆನ್ಷನ್‌, ಇದ್ರಲ್ಲಿ ಯಾವುದನ್ನು ಆಯ್ಕೆ ಮಾಡ್ಕೊಳ್ಬೇಕು ಎಂಬ ಗೊಂದಲದಲ್ಲಿ ಟೆಕ್ಕಿಯಿದ್ದಾರೆ.

ಈಗಿನ ದಿನಗಳಲ್ಲಿ ಜನರು ಬರೀ ಸಂಬಳ ನೋಡ್ತಿಲ್ಲ. ಸಂಬಳದ ಜೊತೆ ನೆಮ್ಮದಿ ಜೀವನಕ್ಕೂ ಆಧ್ಯತೆ ನೀಡ್ತಿದ್ದಾರೆ. ಕೆಲ್ಸ ಆಯ್ಕೆಗೆ ಮುನ್ನ ಸಂಬಳದ ಜೊತೆ ಕೆಲ್ಸದ ಬಗ್ಗೆ ಉಳಿದ ವಿಷ್ಯಗಳನ್ನು ತಿಳಿದು ಕೆಲ್ಸ ಆಯ್ಕೆ ಮಾಡ್ಕೊಳ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಟೆಕ್ಕಿಯೊಬ್ಬರ ಪೋಸ್ಟ್‌ ವೈರಲ್‌ ಆಗಿದೆ. ಅದ್ರಲ್ಲಿ ಅವರು ಕೆಲ್ಸ ಆಯ್ಕೆ ಬಗ್ಗೆ ತಮಗಿರುವ ಗೊಂದಲ ಹಂಚಿಕೊಂಡಿದ್ದಾರೆ.

ವರ್ಕ್‌ ಫ್ರಮ್‌ ಹೋಮ್‌ ಅಥವಾ ವರ್ಕ್‌ ಫ್ರಮ್‌ ಆಫೀಸ್?

ಟೆಕ್ಕಿ ಸದ್ಯ ಲಾಭದಲ್ಲಿರುವ ಅಮೆರಿಕದ ಸೀರೀಸ್-ಎಫ್ ಸ್ಟಾರ್ಟ್ಅಪ್ನಲ್ಲಿ ಸೀನಿಯರ್ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ 57 ಲಕ್ಷ ರೂಪಾಯಿ ಬೇಸ್ ಸ್ಯಾಲರಿ ಇದ್ದು, ಯಾವುದೇ ಬೋನಸ್ ಇಲ್ಲ. ಮಧುರೈನಿಂದಲೇ ಸಂಪೂರ್ಣ ರಿಮೋಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಸುಮಾರು 3.24 ಲಕ್ಷ ರೂಪಾಯಿ ಟೆಕ್-ಹೋಮ್ ಸ್ಯಾಲರಿ ಸಿಗುತ್ತಿದೆ.

ಇದೀಗ ಅವರಿಗೆ ಅಮೆರಿಕದ ಮತ್ತೊಂದು ದೊಡ್ಡ ಸಾಫ್ಟ್ವೇರ್ ಕಂಪನಿಯಿಂದ ಸ್ಟಾಫ್ ಸಾಫ್ಟ್ವೇರ್ ಎಂಜಿನಿಯರ್ ಹುದ್ದೆಯ ಆಫರ್ ಬಂದಿದೆ. ಈ ಕೆಲಸದಲ್ಲಿ 62 ಲಕ್ಷ ರೂಪಾಯಿ ಬೇಸ್ ಸ್ಯಾಲರಿ, 6.2 ಲಕ್ಷ ರೂಪಾಯಿ ಟಾರ್ಗೆಟ್ ಬೋನಸ್ ಹಾಗೂ ಸುಮಾರು 50 ಸಾವಿರ ಡಾಲರ್, ಅಂದರೆ ಸುಮಾರು 48 ಲಕ್ಷ ರೂಪಾಯಿ ಮೌಲ್ಯದ ಆರ್ಎಸ್ಯುಗಳನ್ನು ಮೂರು ವರ್ಷಗಳಲ್ಲಿ ನೀಡಲಾಗುತ್ತದೆ. ಈ ಆಫರ್ನಲ್ಲಿ ತಿಂಗಳ ಟೆಕ್-ಹೋಮ್ ಸ್ಯಾಲರಿ ಸುಮಾರು 3.76 ಲಕ್ಷ ರೂಪಾಯಿ ಎಂದು ತಿಳಿಸಲಾಗಿದೆ.

ಹೆಚ್ಚು ಸಂಬಳದ ಜೊತೆ ಬಂದ ದೊಡ್ಡ ಸವಾಲು

ಹೊಸ ಕೆಲಸದಲ್ಲಿ ಒಂದು ಪ್ರಮುಖ ಷರತ್ತು ಇದೆ. ವಾರಕ್ಕೆ ಎರಡು ದಿನ ಬೆಂಗಳೂರಿನ ಬೆಳ್ಳಂದೂರು ಕಚೇರಿಯಿಂದ ಕೆಲಸ ಮಾಡಬೇಕು. ಆದರೆ ಟೆಕಿ ಬೆಂಗಳೂರಿಗೆ ಶಿಫ್ಟ್ ಆಗಲು ಬಯಸುತ್ತಿಲ್ಲ. ತಮ್ಮ ಕುಟುಂಬದ ಮಧುರೈನಲ್ಲಿ ನೆಲೆಸಿದ್ದು, ಅಲ್ಲಿಯೇ ಉಳಿಯಲು ಬಯಸುತ್ತಿದ್ದಾರೆ.

ಅವರ ಯೋಜನೆಯ ಪ್ರಕಾರ, ಪ್ರತಿ ಸೋಮವಾರ ರಾತ್ರಿ ಓವರ್ನೈಟ್ ರೈಲಿನಲ್ಲಿ ಬೆಂಗಳೂರಿಗೆ ಬರಬೇಕು. ಮಂಗಳವಾರ ಮತ್ತು ಬುಧವಾರ ಕಚೇರಿಯಿಂದ ಕೆಲಸ ಮಾಡಿ, ಬುಧವಾರ ರಾತ್ರಿ ಮತ್ತೆ ರೈಲಿನಲ್ಲಿ ಮಧುರೈಗೆ ವಾಪಸ್ ಹೋಗಬೇಕು. ಹೀಗೆ ವರ್ಷಕ್ಕೆ ಸುಮಾರು 40 ಬಾರಿ ರೌಂಡ್ ಟ್ರಿಪ್ ಮಾಡಬೇಕಾಗುತ್ತದೆ. ಪ್ರತಿ ವಾರ ಸುಮಾರು 20 ಗಂಟೆ ರೈಲು ಪ್ರಯಾಣದಲ್ಲೇ ಕಳೆಯಬೇಕಾಗುತ್ತದೆ.

ಹೀಗಾಗಿ ಅವರ ಮುಂದಿರುವ ಪ್ರಶ್ನೆ ಕೇವಲ ಸಂಬಳದ್ದಲ್ಲ. ಇಂತಹ ಪ್ರಯಾಣವನ್ನು ಒಂದು ಅಥವಾ ಎರಡು ವರ್ಷ ಮುಂದುವರಿಸಿದರೆ ಅದು ಆರೋಗ್ಯ, ನಿದ್ರೆ ಮತ್ತು ಕೆಲಸ ಮಾಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದು ಅವರ ಚಿಂತೆ. ರಾತ್ರಿಯ ರೈಲು ಪ್ರಯಾಣದಿಂದ ನಿದ್ರೆಯ ಸಮಯ ಬದಲಾಗಬಹುದು ಎಂಬ ಆತಂಕವೂ ಅವರಿಗಿದೆ.

ಜನರ ಸಲಹೆ

ರೆಡಿಟ್ನಲ್ಲಿ ಅವರು ತಮ್ಮ ಸಮಸ್ಯೆಯನ್ನು ಹಂಚಿಕೊಂಡಿದ್ದು, ಅಲ್ಲಿಯೂ ಜನರ ಅಭಿಪ್ರಾಯಗಳು ವಿಭಿನ್ನವಾಗಿವೆ. ಕೆಲವರು ವಾರಕ್ಕೊಮ್ಮೆ ಇಷ್ಟೊಂದು ದೂರ ಪ್ರಯಾಣ ಮಾಡುವುದು ತುಂಬಾ ಆಯಾಸ ಉಂಟುಮಾಡಬಹುದು ಎಂದು ಹೇಳಿದ್ದಾರೆ. ತಮ್ಮ ಅನುಭವ ಹಂಚಿಕೊಂಡ ಕೆಲವರು, ವಾರಕ್ಕೆ ಎರಡು ದಿನ ಕಚೇರಿಗೆ ಹೋಗುವುದಕ್ಕಾಗಿ ದೀರ್ಘ ಪ್ರಯಾಣ ಮಾಡಿದರೆ ಕೆಲಸದ ಹೊರತಾಗಿ ಬೇರೆ ಯಾವುದಕ್ಕೂ ಶಕ್ತಿ ಉಳಿಯುವುದಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ರಾತ್ರಿ ರೈಲಿನಲ್ಲಿ ಪ್ರತಿವಾರ ಪ್ರಯಾಣಿಸುವುದು ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯ ಮೇಲೂ ಪರಿಣಾಮ ಬೀರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ ಬೆಂಗಳೂರಿನಲ್ಲಿ ಎರಡು ದಿನ ಉಳಿಯಬೇಕಾದರೆ ರೈಲು ಟಿಕೆಟ್ ಮಾತ್ರವಲ್ಲದೆ ಉಳಿದುಕೊಳ್ಳುವ ಸ್ಥಳ, ಊಟ ಸೇರಿದಂತೆ ಹೆಚ್ಚುವರಿ ಖರ್ಚುಗಳೂ ಬರುತ್ತವೆ. ಹೀಗಾಗಿ ಕಾಗದದ ಮೇಲೆ ಕಾಣುವ ಸಂಬಳದ ವ್ಯತ್ಯಾಸ, ಈ ಖರ್ಚುಗಳ ನಂತರ ಅಷ್ಟೊಂದು ದೊಡ್ಡದಾಗಿ ಉಳಿಯದೇ ಇರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಆದರೆ ಮತ್ತೊಂದು ಕಡೆ, ಸಂಬಳದ ವ್ಯತ್ಯಾಸ ಸಾಕಷ್ಟು ದೊಡ್ಡದಾಗಿದೆ. ಪ್ರಯಾಣವನ್ನು ಕೆಲವು ಸಮಯದವರೆಗೆ ನಿಭಾಯಿಸಲು ಸಾಧ್ಯವಾದರೆ ಬೆಂಗಳೂರಿನ ಆಫರ್ ಅನ್ನು ಪರಿಗಣಿಸಬಹುದು ಎಂದಿದ್ದಾರೆ.

ಟೆಕಿಯ ಮುಂದಿರುವ ಪ್ರಶ್ನೆ ಕೇವಲ 57 ಲಕ್ಷ ರೂಪಾಯಿ ಅಥವಾ 84 ಲಕ್ಷ ರೂಪಾಯಿಯದ್ದಲ್ಲ. ಹೆಚ್ಚು ಪ್ಯಾಕೇಜ್ಗಾಗಿ ಪ್ರತಿವಾರ ಸುಮಾರು 20 ಗಂಟೆ ಪ್ರಯಾಣ ಮಾಡುವುದರಿಂದ ಜೀವನಶೈಲಿ, ನಿದ್ರೆ, ಕುಟುಂಬದ ಜೊತೆಗಿನ ಸಮಯ ಮತ್ತು ವೈಯಕ್ತಿಕ ಸಮಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದಾಗಿದೆ.

PREV
Read more Articles on
click me!

Recommended Stories

ಮುಂದುವರೆದ ವಜಾ ಪರ್ವ: ಶೇಕಡಾ 50ರಷ್ಟು ಟೆಕ್ಕಿಗಳ ಮನೆಗೆ ಕಳಿಸ್ತಿದೆ ಅಡಿದಾಸ್​! ಎಲ್ಲಿದು
1.5 ಕೋಟಿ ಜಾಬ್ ಬಿಟ್ಟು ಕಂಟೆಂಟ್ ಕ್ರಿಯೇಟರ್ ಆದವಳ ತಿಂಗಳ ಗಳಿಗೆ 500 ರೂ..!