19ನೇ ವಯಸ್ಸಿನಲ್ಲಿ ಆರಂಭವಾದ ಕೆಲ್ಸಕ್ಕೆ 83 ನೇ ವಯಸ್ಸಿನಲ್ಲಿ ವಿದಾಯ ! 63 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿದ ಮಹಿಳೆ

Published : Nov 04, 2026, 12:21 PM IST
flight attendant

ಸಾರಾಂಶ

Most Senior Flight Attendant : 63 ವರ್ಷಗಳ ಕಾಲ ಒಂದೇ ಕೆಲ್ಸ ಮಾಡೋದು ಸುಲಭವಲ್ಲ. ಅದೂ ವಯಸ್ಸು 80ರ ಗಡಿ ದಾಟಿದ ಮೇಲೆ ಪ್ಲೈಟ್‌ ಅಟೆಂಡೆಂಟ್‌ ಆಗಿ ಕೆಲ್ಸ ಮಾಡೋದು ಕಷ್ಟದ ಕೆಲ್ಸ. ಆದ್ರೆ ಈ ಮಹಿಳೆ ಮಾಡಿ ತೋರಿಸಿದ್ದಾರೆ. ಇಷ್ಟ ವರ್ಷಗಳ ನಂತ್ರ ಈಗ ನಿವೃತ್ತಿ ಘೋಷಿಸಿದ್ದಾರೆ.

ವರ್ಷ 60 ಆಗ್ತಿದ್ದಂತೆ ಕೆಲ್ಸಕ್ಕೆ ಗುಡ್‌ ಬೈ ಹೇಳಿ ಮನೆಯಲ್ಲಿ ರಾಮ ರಾಮ ಅಂತ ಕಾಲ ಕಳೆಯೋರೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಒಂದು ಕೆಲ್ಸವನ್ನು ಅಮ್ಮಮ್ಮ ಅಂದ್ರೆ ಮೂರೋ ನಾಲ್ಕೋ ವರ್ಷ ಮಾಡ್ತಾರೆ. ಒಂದೇ ರುಟೀನ್‌ ನಿಂದ ಬೋರ್‌ ಆಗುವ ಜನ, ಬೇರೆ ಕೆಲ್ಸ, ಬ್ಯುಸಿನೆಸ್‌ ಅಂತ ದಾರಿ ಬದಲಿಸ್ತಾರೆ. ಆದ್ರೆ ಬರೋಬ್ಬರಿ 63 ವರ್ಷಗಳ ಕಾಲ ಒಂದೇ ಕೆಲ್ಸವನ್ನು ಮಾಡಿದ ಮಹಿಳೆಗೆ ಈಗ ಬಿಳ್ಕೊಡುಗೆ ಸಿಕ್ಕಿದೆ. ಅವರು 60 ವರ್ಷಕ್ಕಲ್ಲ 83 ವರ್ಷಕ್ಕೆ ನಿವೃತ್ತಿ ಪಡೆದಿದ್ದಾರೆ.

83ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಣೆ

ಯಸ್‌, ವಯಸ್ಸು 80 ದಾಟಿಡ್ರೂ ಫ್ಲೈಟ್‌ ಅಟೆಂಡೆಂಟ್‌ ಆಗಿ ಎಲ್ಲರ ಮುಂದೆ ನಗ್ತಾ ಪ್ರಯಾಣಿಕರನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದ ಮಹಿಳೆ ಈಗ ಕೆಲಸಕ್ಕೆ ವಿದಾಯ ಹೇಳಿದ್ದಾರೆ. ಅಮೆರಿಕನ್ ಏರ್ಲೈನ್ಸ್ನ ಅತ್ಯಂತ ಹಿರಿಯ ಫ್ಲೈಟ್ ಅಟೆಂಡೆಂಟ್ ಆಗಿದ್ದ ಕರೋಲ್ ಫೇರ್ (Carol Fair) ಅವರ ಕೊನೆಯ ವಿಮಾನ ಪ್ರಯಾಣವೇ ಈಗ ಸುದ್ದಿಯಾಗಿದೆ. ಆರು ದಶಕಗಳಿಗೂ ಹೆಚ್ಚು ಕಾಲ ಆಕಾಶದಲ್ಲೇ ಕಳೆದ ಅವರ ವೃತ್ತಿಜೀವನಕ್ಕೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಬೀಳ್ಕೊಡುಗೆ ಸಿಕ್ಕಿದೆ.

19ನೇ ವಯಸ್ಸಿನಲ್ಲಿ ಶುರುವಾದ ವೃತ್ತಿ ಜೀವನ

ಚಿಕ್ಕ ವಯಸ್ಸಿನಲ್ಲೇ ಕರೋಲ್ ಫೇರ್, ವಿಮಾನಯಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆ ಹೊಂದಿದ್ದರು. ತಮ್ಮ 19ನೇ ವಯಸ್ಸಿನಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿ ವೃತ್ತಿ ಆರಂಭಿಸಿದ್ದರು. ಆರಂಭದಲ್ಲಿ ಅವರು ಪೀಡ್ಮಾಂಟ್ ಏರ್ಲೈನ್ಸ್ನಲ್ಲಿ ಕೆಲಸಕ್ಕೆ ಸೇರಿದ್ದರು. ಆದ್ರೆ ಅವರ ಮೊದಲ ಆಯ್ಕೆ ಅಮೆರಿಕನ್ ಏರ್ಲೈನ್ಸ್ ಆಗಿತ್ತು. ಅಲ್ಲಿಗೆ ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗ ಅವರಿಗೆ ನಿರಾಕರಣೆ ಎದುರಾಗಿತ್ತು. ನೀವು ಅಮೆರಿಕನ್ ಏರ್ಲೈನ್ಸ್ಗೆ ಸೂಕ್ತ ಅಭ್ಯರ್ಥಿಯಲ್ಲ ಎಂದು ಅವರಿಗೆ ಹೇಳಿದ್ದರಂತೆ. ಈ ಬಗ್ಗೆ ಅವರು ಫೋರ್ಬ್ಸ್ಗೆ ನೀಡಿದ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

ಆರಂಭದಲ್ಲಿ ಕೇವಲ ಆರು ತಿಂಗಳು ಕೆಲಸ ಮಾಡಿ, ನಂತರ ಮದುವೆಯಾಗಬೇಕು ಎಂದುಕೊಂಡಿದ್ದರಂತೆ ಕರೋಲ್. ಆದರೆ ವಿಧಿ ಅವರಿಗಾಗಿ ಬೇರೆಯದೇ ಯೋಜನೆ ರೂಪಿಸಿತ್ತು. ಆರು ತಿಂಗಳ ಕೆಲಸ ಎಂದು ಆರಂಭಿಸಿದ್ದ ವೃತ್ತಿ ಬರೋಬ್ಬರಿ 63 ವರ್ಷಗಳ ಕಾಲ ಮುಂದುವರೆಯುವಂತೆ ಮಾಡಿತ್ತು.

ಅಕ್ಟೋಬರ್ 26ರಂದು ಕರೋಲ್ ಫೇರ್ ತಮ್ಮ ಕೊನೆಯ ವಿಮಾನ ಪ್ರಯಾಣ ಕೈಗೊಂಡರು. ಲಂಡನ್ನಿಂದ ಅಮೆರಿಕದ ನಾರ್ತ್ ಕೆರೊಲಿನಾದ ಚಾರ್ಲೆಟ್ಗೆ ತೆರಳಿದ ಅಮೆರಿಕನ್ ಏರ್ಲೈನ್ಸ್ 733 ವಿಮಾನವೇ ಅವರ ಕೊನೆಯ ಡ್ಯೂಟಿಯಾಗಿತ್ತು. ಅಚ್ಚರಿಯ ಸಂಗತಿಯೆಂದರೆ, 1987ರ ಜೂನ್ 15ರಂದು ಚಾರ್ಲೆಟ್ನಿಂದ ಲಂಡನ್ಗೆ ಪೀಡ್ಮಾಂಟ್ ಏರ್ಲೈನ್ಸ್ ಆರಂಭಿಸಿದ ಮೊದಲ ವಿಮಾನದಲ್ಲೂ ಕರೋಲ್ ಸೇವೆ ಸಲ್ಲಿಸಿದ್ದರು. ಈಗ ನಿವೃತ್ತಿಯ ಕೊನೆಯ ಪ್ರಯಾಣವೂ ಅದೇ ಮಾರ್ಗದ ಮೂಲಕ ಸಾಗಿದ್ದು ಅವರ ವೃತ್ತಿಜೀವನಕ್ಕೆ ಒಂದು ಸುಂದರ ಪೂರ್ಣವಿರಾಮ ನೀಡಿದಂತಾಗಿದೆ.

30 ಸಾವಿರ ಉದ್ಯೋಗಿಗಳಲ್ಲಿ ನಂಬರ್ 1

ಕರೋಲ್ ಅವರ ಸಾಧನೆ ಸಾಮಾನ್ಯವಾದುದಲ್ಲ. ಅಮೆರಿಕನ್ ಏರ್ಲೈನ್ಸ್ನಲ್ಲಿ ಸುಮಾರು 30 ಸಾವಿರ ಉದ್ಯೋಗಿಗಳಿದ್ದು, ಹಿರಿಯ ಸೇವಾ ಹಿರಿತನದ ಪಟ್ಟಿಯಲ್ಲಿ ಅವರು ಮೊದಲ ಸ್ಥಾನದಲ್ಲಿದ್ದರು. 2008ರಲ್ಲಿ ಅವರನ್ನು ನಾರ್ತ್ ಕೆರೊಲಿನಾ ಟ್ರಾನ್ಸ್ಪೋರ್ಟೇಶನ್ ಹಾಲ್ ಆಫ್ ಫೇಮ್ಗೆ ಸೇರಿಸಿ ಗೌರವಿಸಲಾಗಿತ್ತು. ತಮ್ಮ ವೃತ್ತಿಜೀವನದ ಆರಂಭದಲ್ಲಿ ಸಣ್ಣ ವಿಮಾನಗಳಲ್ಲಿ ಕೆಲಸ ಮಾಡಿದ್ದ ಅವರು, ನಂತರ ಬೋಯಿಂಗ್ನ ದೊಡ್ಡ ವಿಮಾನಗಳಲ್ಲಿಯೂ ಸೇವೆ ಸಲ್ಲಿಸಿದರು. ಡಿಸಿ-3 ವಿಮಾನದಿಂದ ಬೋಯಿಂಗ್ 767 ವಿಮಾನಕ್ಕೆ ಬಡ್ತಿ ಸಿಕ್ಕಾಗಿನ ಖುಷಿಯನ್ನು ನೆನಪಿಸಿಕೊಂಡಿರುವ ಅವರು, ಆ ದಿನದ ಹಿಂದಿನ ರಾತ್ರಿ ನಿದ್ರೆಯೇ ಬಂದಿರಲಿಲ್ಲ ಎಂದಿದ್ದಾರೆ.

ಕರೋಲ್ ಅವರ ಕೊನೆಯ ಪ್ರಯಾಣವನ್ನು ವಿಶೇಷವಾಗಿಸಲು ಅಮೆರಿಕನ್ ಏರ್ಲೈನ್ಸ್ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸಿದ್ಧತೆ ಮಾಡಿತ್ತು. ತಲೆಯ ಮೇಲೆ ಕಿರೀಟ, ಹೆಗಲಿಗೆ ಗೌರವದ ಸ್ಯಾಶ್ ಧರಿಸಿ, ಕೈಯಲ್ಲಿ ಬಲೂನ್ಗಳನ್ನು ಹಿಡಿದು ಅವರು ಸಂಭ್ರಮದಲ್ಲಿ ಭಾಗಿಯಾದರು. ಅಷ್ಟೇ ಅಲ್ಲ, ಅವರ ಗೌರವಾರ್ಥ ವಿಮಾನಕ್ಕೆ ವಾಟರ್ ಸೆಲ್ಯೂಟ್ ನೀಡಲಾಯಿತು. ವಿಮಾನಯಾನ ಕ್ಷೇತ್ರದಲ್ಲಿ ಪೈಲಟ್ಗಳಿಗೆ ಸಾಮಾನ್ಯವಾಗಿ ನೀಡುವ ಈ ಗೌರವವನ್ನು ಫ್ಲೈಟ್ ಅಟೆಂಡೆಂಟ್ಗೆ ನೀಡುವುದು ಅಪರೂಪ.

PREV
Read more Articles on
click me!

Recommended Stories

AIನಲ್ಲಿ ಭವಿಷ್ಯವಿದೆ ಎಂದೋರಿಗೆ ಕಂಪೆನಿ ಶಾಕ್​: ಊಟ ಮುಗಿಸಿ ಬರೋದ್ರೊಳಗೆ 550 ಭಾರತೀಯರು ಮನೆಗೆ
ಉದ್ಯೋಗಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್​ ಕೊಟ್ಟ Amazon: 250 ಮಂದಿ ವಜಾ ಮಾಡಿ ಇ-ಮೇಲ್​ ಸಂದೇಶ