ಕೋಡಿಂಗ್ ಪಾಸಾದ ಭಾರತದ ಬಾಲಕನಿಗೆ ಭಾರಿ ಆಫರ್: ವಯಸ್ಸು ತಿಳಿದು ಆಫರ್ ವಾಪಸ್ ಪಡೆದ US ಸಂಸ್ಥೆ

By Anusha Kb  |  First Published Jul 24, 2022, 10:05 PM IST

ಮಹಾರಾಷ್ಟ್ರ ರಾಜ್ಯದ ನಾಗಪುರ ಜಿಲ್ಲೆಯ 15 ವರ್ಷದ ಬಾಲಕನೋರ್ವ ಕೋಡಿಂಗ್‌ ಸ್ಪರ್ಧೆಯನ್ನು ಗೆದ್ದಿದ್ದಾನೆ. ಈತನಿಗೆ ಅಮೆರಿಕಾದ ಸಂಸ್ಥೆಯೊಂದು ವಾರ್ಷಿಕ 33 ಲಕ್ಷ ಸಂಬಳದ ಆಫರ್ ನೀಡಿತ್ತು. ಆದರೆ ಆತ ಕೇವಲ 15 ವರ್ಷದ ಬಾಲಕ ಎಂಬುದು ತಿಳಿಯುತ್ತಿದ್ದಂತೆ ತನ್ನ ಆಫರ್‌ನ್ನು ಸಂಸ್ಥೆ ವಾಪಸ್‌ ಪಡೆದಿದೆ. 


ನ್ಯೂಯಾರ್ಕ್‌: ಮಹಾರಾಷ್ಟ್ರ ರಾಜ್ಯದ ನಾಗಪುರ ಜಿಲ್ಲೆಯ 15 ವರ್ಷದ ಬಾಲಕನೋರ್ವ ಕೋಡಿಂಗ್‌ ಸ್ಪರ್ಧೆಯನ್ನು ಗೆದ್ದಿದ್ದಾನೆ. ಈತನಿಗೆ ಅಮೆರಿಕಾದ ಸಂಸ್ಥೆಯೊಂದು ವಾರ್ಷಿಕ 33 ಲಕ್ಷ ಸಂಬಳದ ಆಫರ್ ನೀಡಿತ್ತು. ಆದರೆ ಆತ ಕೇವಲ 15 ವರ್ಷದ ಬಾಲಕ ಎಂಬುದು ತಿಳಿಯುತ್ತಿದ್ದಂತೆ ತನ್ನ ಆಫರ್‌ನ್ನು ಸಂಸ್ಥೆ ವಾಪಸ್‌ ಪಡೆದಿದೆ. 

ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ವೇದಾಂತ್‌ ಡೆಕಾಟೆ ಎಂಬ ಬಾಲಕನೇ ಹೀಗೆ ಕೋಡಿಂಗ್ ಸ್ಪರ್ಧೆಯಲ್ಲಿ ಪಾಸಾಗಿ ಅಮೆರಿಕಾದ ಸಂಸ್ಥೆಯೊಂದರ ಆಫರ್ ಗಿಟ್ಟಿಸಿಕೊಂಡ ದೇಶದ ಹೆಮ್ಮೆಯ ಬಾಲಕ. ಅಮೆರಿಕಾದ ಸಂಸ್ಥೆಯೊಂದು ಆಯೋಜಿಸಿದ್ದ ಈ ಕೋಡಿಂಗ್ ಸ್ಪರ್ಧೆಯಲ್ಲಿ ಸಾವಿರಕ್ಕೂ ಹೆಚ್ಚು ಸ್ಪರ್ಧಾರ್ತಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ವೇದಾಂತ್ ಅವರು ಎರಡು ದಿನಗಳ ಅವಧಿಯಲ್ಲಿ 2,066 ಸಾಲುಗಳ ಕೋಡಿಂಗ್ ಬರೆಯುವ ಮೂಲಕ ಈ ಸ್ಪರ್ಧೆಯ ವಿಜಯಶಾಲಿಯಾಗಿ ಹೊರ ಹೊಮ್ಮಿದ್ದಾರೆ. 

Latest Videos

undefined

Parenting Tips: ಮಕ್ಕಳು ಲಕ್ಷಗಟ್ಟಲೆ ಸಂಬಳ ಪಡೀಬೇಕಾ? ಹಾಗಿದ್ರೆ ಈಗ್ಲೇ ಟ್ರೇನ್ ಮಾಡಿ

ಕೋಡಿಂಗ್ ಸ್ಪರ್ಧೆಯಲ್ಲಿ ಗೆದ್ದ ನಂತರ ಈ ಸ್ಪರ್ಧೆ ಆಯೋಜಿಸಿದ ಸಂಸ್ಥೆಯೇ ಬಾಲಕ ವೇದಾಂತ್‌ಗೆ ವಾರ್ಷಿಕ 33 ಲಕ್ಷ ಸಂಬಳ ಬರುವ ಉದ್ಯೋಗದ ಆಫರ್ ನೀಡಿದೆ. ನ್ಯೂಜೆರ್ಸಿಯಲ್ಲಿರುವ ಜಾಹೀರಾತು ಸಂಸ್ಥೆಯೊಂದರ ಹೆಚ್‌ಆರ್‌ಡಿ ತಂಡಕ್ಕೆ ಈತನನ್ನು ಉದ್ಯೋಗಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ ನಂತರ ಸಂಘಟಕರು ಬಾಲಕನ ವಯಸ್ಸನ್ನು ಸಂಸ್ಥೆಗೆ ತಿಳಿಸಿದಾಗ ಅವರು ಈ ಆಫರ್‌ ಅನ್ನು ಹಿಂಪಡೆದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 

ಒಂದೆಡೆ ಹೆಮ್ಮೆ ಮತ್ತೊಂದೆಡೆ ಬೇಸರದ ಈ ಕ್ಷಣದಲ್ಲಿ ಅಮೆರಿಕಾ ಮೂಲದ ಸಂಸ್ಥೆಯೂ ಬಾಲಕನಿಗೆ ಪ್ರೇರಣೆ ತುಂಬುವ ಸಂದೇಶವೊಂದನ್ನು ಕಳುಹಿಸಿದೆ. ಅವನು 10ನೇ ತರಗತಿ ಬಾಲಕ. ಆದರೆ ಆತನನ್ನು ಕಳೆದುಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಹೀಗಾಗಿ ಜಾಹೀರಾತು ಸಂಸ್ಥೆ ಆತನ ಶಿಕ್ಷಣ ಮುಗಿಯಲು ಪ್ರೋತ್ಸಾಹಿಸುವುದು. ಶಿಕ್ಷಣ ಮುಗಿದ ನಂತರ ಆತನನ್ನು ಮತ್ತೆ ಸಂಪರ್ಕಿಸಲಾಗುವುದು ಎಂದು ಸಂದೇಶ ಕಳುಹಿಸಿದೆ. ಜೊತೆಗೆ ನಿಮ್ಮ ಈ  ವೃತ್ತಿಪರತೆ ಹಾಗೂ ಅನುಸರಣೀಯ ವಿಧಾನ ಹಾಗೂ ಅನುಭವದಿಂದ ನಾವು ಪ್ರಭಾವಿತರಾಗಿದ್ದೇವೆ ಎಂದು ಸಂಸ್ಥೆ ಸಂದೇಶದಲ್ಲಿ ತಿಳಿಸಿದೆ. 

ಬಾಲಕ ವೇದಾಂತ್ ಸ್ವತಃ ತಾನೇ ತರಬೇತಿ ಪಡೆದ ಕೋಡರ್ ಆಗಿದ್ದು, ತನ್ನ ತಾಯಿಯ ಲ್ಯಾಪ್‌ಟಾಪ್‌ ಮೂಲಕ ತನ್ನ ಕೌಶಲ್ಯವನ್ನು ಹೆಚ್ಚಿಸಿಕೊಂಡಿದ್ದಾನೆ. ಲ್ಯಾಪ್‌ಟಾಪ್‌ನಲ್ಲಿ ಈತ ನಿಧಾನ ಮತ್ತು ಹಳತಾಗಿದೆ ಎಂದು ವಿವರಿಸಲಾದ ಎರಡು ಡಜನ್‌ಗೂ ಹೆಚ್ಚು ಆನ್‌ಲೈನ್ ಟ್ಯುಟೋರಿಯಲ್‌ಗಳಿಗೆ ವೇದಾಂತ್‌  ಹಾಜರಾಗಿದ್ದ. ಅಲ್ಲದೇ ವೇದಾಂತ್ ತನ್ನ ತಾಯಿಯ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಂದಿದ್ದಂತಹ ಕೋಡಿಂಗ್ ಸ್ಪರ್ಧೆಯ ಜಾಹೀರಾತನ್ನು ನೋಡಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ. 

Success Story: ಕ್ಯಾಬ್ ಡ್ರೈವರ್‌ ಆಗಿದ್ದವ ಸಾಫ್ಟ್‌ವೇರ್ ಇಂಜಿನಿಯರ್ ಆದ!

ಇನ್ನು ವೇದಾಂತ್‌ನ ತಂದೆ ತಾಯಿಯಾದ ರಾಜೇಶ್‌ ಹಾಗೂ ಅಶ್ವಿನ್ ಡೆಕಾಟೆ ನಾಗಪುರದ ಇಂಜಿನಿಯರಿಂಗ್‌ ಕಾಲೇಜೊಂದರಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಮಗನ ಸಾಧನೆ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ನಮಗೆ ಯಾವುದೇ ಸುಳಿವುಗಳಿರಲಿಲ್ಲ. ನಮ್ಮ ಮಗನ ಶಾಲೆಯಿಂದ ನಮಗೊಂದು ಕರೆ ಬಂದಿತ್ತು. ಅವರು ಈ ಆಫರ್ ಬಗ್ಗೆ ಹೇಳಿದರು. ವೇದಾಂತ್ ಓದುತ್ತಿದ್ದ ಶಾಲೆಯವರೇ ವೇದಾಂತ್‌ನ ಎಲ್ಲಾ ಮಾಹಿತಿಗಳನ್ನು ಸಂಸ್ಥೆಯೊಂದಿಗೆ ಹಂಚಿಕೊಂಡು ಆತನಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸುವಲ್ಲಿ ಸಹಾಯ ಮಾಡಿದರು ಎಂದು ಹೇಳಿದರು. 

ಪುತ್ರನ ಈ ಸಾಧನೆ ನೋಡಿದ ಪೋಷಕರು, ಈಗ ಆತನಿಗೆ ಹೊಸ ಲ್ಯಾಪ್‌ಟಾಪ್ ಗಿಫ್ಟ್‌ ನೀಡುವ ಯೋಜನೆಯಲ್ಲಿದ್ದಾರೆ. 

click me!