ಮಹೇಶ ಕುಮಟಳ್ಳಿಗೆ ಟಿಕೆಟ್ ನೀಡಿದಿದ್ದರೆ ನಾನೂ ಸಹ ಗೋಕಾಕನಿಂದ ಸ್ಪರ್ಧೆ ಮಾಡಲ್ಲ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಸವದಿ ಪುತ್ರ ಚಿದಾನಂದ ಸವದಿ ರೆಬೆಲ್ ಆಗಿ ಉತ್ತರ ನೀಡಿದ್ದಾರೆ. ಆದರೆ ಲಕ್ಷ್ಮಣ ಸವದಿ ಮೌನಕ್ಕೆ ಜಾರಿದ್ದಾರೆ.
ವರದಿ: ಮುಷ್ತಾಕ್ ಪೀರ್ಜಾದೆ, ಏಷ್ಯಾನೆಟ್ ಸುವರ್ಣನ್ಯೂಸ್
ಚಿಕ್ಕೋಡಿ (ಮಾ.13): ಮಹೇಶ ಕುಮಟಳ್ಳಿಗೆ ಟಿಕೆಟ್ ನೀಡಿದಿದ್ದರೆ ನಾನೂ ಸಹ ಗೋಕಾಕನಿಂದ ಸ್ಪರ್ಧೆ ಮಾಡಲ್ಲ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಸವದಿ ಪುತ್ರ ಚಿದಾನಂದ ಸವದಿ ರೆಬೆಲ್ ಆಗಿ ಉತ್ತರ ನೀಡಿದ್ದಾರೆ. ಆದರೆ ಇಷ್ಟೆಲ್ಲ ಬೆಳವಣಿಗೆಗಳು ಆಗ್ತಿದ್ರೂ ಸಹ ಲಕ್ಷ್ಮಣ ಸವದಿ ಮೌನಕ್ಕೆ ಜಾರಿದ್ದು ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಾಹುಕಾರ್ ಟಿಕೆಟ್ ವಿಚಾರದಲ್ಲಿ ಅಬ್ಬರಿಸುತ್ತಿದ್ದರೂ ಸಹ ಸವದಿ ಮೌನಕ್ಕೆ ಜಾರಿರೋದರ ಹಿಂದೆ ತಂತ್ರಗಾರಿಕೆ ಅಡಗಿದ್ಯಾ ಎಂಬ ಪ್ರಶ್ನೆ ಹುಟ್ಟಿದೆ.
undefined
ಸವದಿ ಮೌನದ ಹಿಂದಿದೆಯಾ ತಂತ್ರಗಾರಿಕೆ!
ಬೆಳಗಾವಿ ಜಿಲ್ಲೆಯ ರಾಜಕೀಯವೇ ವಿಚಿತ್ರ, ಇಲ್ಲಿನ ನಾಯಕರು ತಾನು ಗೆಲ್ಲಬೇಕು ತಾನು ಚುನಾವಣೆಯಲ್ಲಿ ಗೆದ್ರೆ ಸಾಕಪ್ಪ ಅನ್ನೋದಕ್ಕಿಂತ ಒಬ್ಬರಿಗೊಬ್ಬರು ಸೋಲಿಸೋದಕ್ಕೆ ಮುಂದು. ಚುನಾವಣೆ ಇನ್ನೂ ಘೋಷಣೆ ಆಗಿಲ್ಲ ಆದರೆ ಈಗಲೇ ಟಿಕೆಟ್ ವಿಚಾರ ಬೆಳಗಾವಿಯಲ್ಲಿ ರಂಗೆದ್ದಿದೆ. 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಲಕ್ಷ್ಮಣ ಸವದಿಯವರನ್ನ ಮಣಿಸಿದ್ದ ಮಹೇಶ ಕುಮಟಳ್ಳಿ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಬಿಜೆಪಿ ಸೇರಿದ್ರು. ಹೈಕಮಾಂಡ್ ಆದೇಶದಂತೆ ಸವದಿಯವರು ತಾವು ಪ್ರತಿನಿಧಿಸುತ್ತಿದ್ದ ತಮ್ಮ ಸ್ವಕ್ಷೇತ್ರ ಅಥಣಿಯನ್ನ ಮಹೇಶ ಕುಮಟಳ್ಳಿಯವರಿಗೆ ಬಿಟ್ಟು ಕೊಡಬೇಕಾಯ್ತು. ನಂತರ 2106ರ ಬೈ ಎಲೆಕ್ಷನ್ನಲ್ಲಿ ಸ್ವತಃ ಸವದಿಯವರೇ ನಿಂತು ಮಹೇಶ ಕುಮಟಳ್ಳಿಯವರನ್ನ ಆರಿಸಿ ತರಲು ಸಹಕರಿಸಿದ್ದು ಈಗ ಇತಿಹಾಸ. ಆದರೆ ಈ ಬಾರಿ ಮಹೇಶ ಕುಮಟಳ್ಳಿಗೆ ಟಿಕೆಟ್ ಕೈ ತಪ್ಪುತ್ತೆ ಎಂಬ ವಿಷಯ ರಾಜಕೀಯ ವಲಯದಲ್ಲಿ ಹರಿದಾಡತೊಡಗುತ್ತಿದ್ದಂತೆ ಎಚ್ಚೆತ್ತ ಸಾಹುಕಾರ ಅಥಣಿಯಿಂದ ಮಹೇಶ ಕುಮಟಳ್ಳಿಗೆ ಟಿಕೆಟ್ ನೀಡದಿದ್ದರೆ ನಾನೂ ಸಹ ಗೋಕಾಕನಿಂದ ಸ್ಪರ್ಧೆ ಮಾಡಲ್ಲ ಅಂತ ಬಹಿರಂಗವಾಗಿಯೇ ಹೇಳಿದ್ದರು.
ಅಥಣಿ ಬಿಜೆಪಿ ಟಿಕೆಟ್ ಹಂಗಾಮ, ಶಾ ಪಾಠಕ್ಕೆ ಇಲ್ಲ ಬೆಲೆ...!
ಅಥಣಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಇಷ್ಟೆಲ್ಲ ಮಾತಾಡ್ತಿದ್ರೂ ಲಕ್ಷ್ಮಣ ಸವದಿ ಮಾತ್ರ ಸೈಲೆಂಟ್ ಆಗಿದ್ದಾರೆ. ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿರುವ ಲಕ್ಷ್ಮಣ ಸವದಿ ಈಗೇನಾದ್ರೂ ಮಾತನಾಡಿದರೆ ಹೆಚ್ಚು ಕಡಿಮೆ ಆದೀತು ಎಂಬ ಕಾರಣಕ್ಕೆ ಮಾಧ್ಯಮಗಳಿಂದ ದೂರ ಉಳಿದು ಟಿಕೆಟ್ ತಮಗೆ ಯಾಕೆ ನೀಡಬೇಕು ಎಂಬ ಕಾರಣವನ್ನು ಪಕ್ಷದ ವರಿಷ್ಠರಿಗೆ ಅರ್ಥ ಮಾಡಿಸುವುದರಲ್ಲಿ ಬ್ಯುಸಿ ಆಗಿದ್ದಾರೆ ಅಂತ ಅವರ ಆಪ್ತ ವಲಯ ಹೇಳ್ತಿದೆ. ಆದರೆ ಅಥಣಿ ಟಿಕೆಟ್ ಕುರಿತು ಹೇಳಿಕೆ ನೀಡಿದ್ದ ರಮೇಶ್‌ಗೆ ಸವದಿ ಪುತ್ರ ಚಿದಾನಂದ ಸವದಿ ತಿರುಗೇಟು ನೀಡಿದ್ದು ಮಹೇಶ ಕುಮಟಳ್ಳಿ ಮೇಲೆ ರಮೇಶ ಅವರಿಗೆ ಅಷ್ಟೊಂದು ಪ್ರೀತಿ ಇದ್ದರೆ ಅವರ ಗೋಕಾಕ್ ಕ್ಷೇತ್ರವನ್ನೇ ಅವರಿಗೆ ಬಿಟ್ಟು ಕೊಡಲಿ ಎಂದು ತಿರುಗೇಟು ನೀಡಿದ್ದಾರೆ.
ಡಿಕೆಶಿ ಸಾಹುಕಾರ್ ಮಧ್ಯೆ ವಾಗ್ಯುದ್ಧ: ಮತ್ತೆ 'ಸಿಡಿ'ದೆದ್ದ ಸಾಹುಕಾರ್
ರಮೇಶ ಹಾಗೂ ಚಿದಾನಂದ ಸವದಿ ಮಧ್ಯೆ ಟಿಕೆಟ್ ಕುರಿತಾಗಿ ಇಷ್ಟೆಲ್ಲ ನಡೆಯುತ್ತಿದ್ದರೂ ಸಹ ಲಕ್ಷ್ಮಣ ಸವದಿ ಸೈಲೆಂಟ್ ಆಗಿದ್ದಾರೆ. ಟಿಕೆಟ್ ಹಂಚಿಕೆ ವಿಚಾರವಾಗಿ ವರಿಷ್ಠರಿಗೆ ಅರ್ಥ ಮಾಡಿಸುವ ಕೆಲಸ ಮಾಡ್ತಿದ್ದಾರೆ ಅಂತ ಅವರ ಆಪ್ತ ವಲಯದ ಮೂಲಗಳಿಂದ ತಿಳಿದು ಬಂದಿದ್ದು ಚುನಾವಣೆಯಲ್ಲಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಅನ್ನೋದನ್ನ ಕಾದು ನೋಡಬೇಕು.