ಮಹಿಳಾ ಮಂಡಲ ಮುತ್ತಿಗೆಯಿಂದ ಪ್ರಧಾನಿ ಮೋದಿ ಮಾತಿಗೆ ಬ್ರೇಕ್‌

Kannadaprabha News   | Kannada Prabha
Published : Feb 05, 2026, 06:41 AM IST
parliament

ಸಾರಾಂಶ

ವಿಪಕ್ಷದ ಮಹಿಳಾ ಸಂಸದರು, ಲೋಕಸಭೆಯಲ್ಲಿ ಪ್ರಧಾನಿ ಕುಳಿತುಕೊಳ್ಳುವ ಸ್ಥಳಕ್ಕೆ ಮುತ್ತಿಗೆ ಹಾಕಿದ ಪರಿಣಾಮ ನರೇಂದ್ರ ಮೋದಿ ಅವರ ಭಾಷಣವನ್ನೇ ರದ್ದುಪಡಿಸಿದ ಅಪರೂಪದ ಬೆಳವಣಿಗೆಯೊಂದು ಬುಧವಾರ ನಡೆದಿದೆ.

ನವದೆಹಲಿ: ವಿಪಕ್ಷದ ಮಹಿಳಾ ಸಂಸದರು, ಲೋಕಸಭೆಯಲ್ಲಿ ಪ್ರಧಾನಿ ಕುಳಿತುಕೊಳ್ಳುವ ಸ್ಥಳಕ್ಕೆ ಮುತ್ತಿಗೆ ಹಾಕಿದ ಪರಿಣಾಮ ನರೇಂದ್ರ ಮೋದಿ ಅವರ ಭಾಷಣವನ್ನೇ ರದ್ದುಪಡಿಸಿದ ಅಪರೂಪದ ಬೆಳವಣಿಗೆಯೊಂದು ಬುಧವಾರ ನಡೆದಿದೆ. ಆದರೆ ಘಟನೆ ನಡೆದಾಗ ಮೋದಿ ಸ್ಥಳದಲ್ಲಿ ಹಾಜರಿರದ ಕಾರಣ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಲಾಪವನ್ನೇ ಗುರುವಾರಕ್ಕೆ ಮುಂದೂಡಲಾಯಿತು.

ಏನಾಯ್ತು?:

ರಾಹುಲ್‌ ಗಾಂಧಿ ಭಾಷಣಕ್ಕೆ ಅಡ್ಡಿ, ಅಮೆರಿಕ- ಭಾರತ ವ್ಯಾಪಾರ ಒಪ್ಪಂದ ಮತ್ತು ಬಿಜೆಪಿ ನಾಯಕ ನಿಶಿಕಾಂತ್‌ ದುಬೆ ಹೇಳಿಕೆಯಿಂದಾಗಿ ಬುಧವಾರ ಬೆಳಗ್ಗೆಯಿಂದಲೇ ಲೋಕಸಭೆಯಲ್ಲಿ ಭಾರೀ ಗದ್ದಲ ಉಂಟಾಗಿ ಹಲವು ಬಾರಿ ಕಲಾಪಕ್ಕೆ ಅಡ್ಡಿಯಾಗಿತ್ತು. ಅಂತಿಮವಾಗಿ ಸಂಜೆ 5ಕ್ಕೆ ಕಲಾಪ ಮುಂದೂಡಲಾಗಿತ್ತು. 5 ಗಂಟೆಗೆ ಪ್ರಧಾನಿ ಮೋದಿ, ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಬೇಕಿತ್ತು.

ಆದರೆ ಸಂಜೆ ಕಲಾಪ ಆರಂಭವಾಗುತ್ತಲೇ ವಿಪಕ್ಷದ ಮಹಿಳಾ ಸಂಸದರು, ನೆಹರೂ ಕುರಿತ ಹೇಳಿಕೆ ಖಂಡಿಸಿ, ಪ್ರಧಾನಿ ಮೋದಿ ಅವರ ಹಿಂಭಾಗದಲ್ಲಿ ಕುಳಿತಿದ್ದ ನಿಶಿಕಾಂತ್‌ ದುಬೆ ಅವರಿಗೆ ಮುತ್ತಿಗೆ ಹಾಕಲು ಮುಂದಾದರು. ಈ ಹಂತದಲ್ಲಿ ಮಧ್ಯಪ್ರವೇಶ ಮಾಡಿದ ಸ್ಪೀಕರ್‌, ಈ ವಿಷಯದಲ್ಲಿ ಈಗಾಗಲೇ ರೂಲಿಂಗ್‌ ನೀಡಿರುವ ಕಾರಣ ಯಾರೂ ಆ ವಿಷಯ ಮಾತನಾಡದಂತೆ ಸೂಚಿಸಿದರು. ಆದರೂ ಸಂಸದೆಯರು ದುಬೆ ಅವರತ್ತ ಮತ್ತು ಸದನದ ಬಾವಿಯತ್ತ ಧಾವಿಸಿದರು. ಈ ಪೈಕಿ ಕೆಲ ಮಹಿಳಾ ಸಂಸದೆಯರು ಮೋದಿ ಅವರು ಕೂರುವ ಜಾಗದ ಹಿಂಬದಿಗೂ ಹೋಗಿ ನಿಂತರು. ಈ ವೇಳೆ ಬಿಜೆಪಿಯ ಮಹಿಳಾ ಸದಸ್ಯರು ಕೂಡಾ ದುಬೆ ಅವರ ರಕ್ಷಣೆಗೆ ಧಾವಿಸಿದಾಗ ಸ್ಥಳದಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಸ್ಪೀಕರ್‌, ಕಲಾಪವನ್ನೇ ಗುರುವಾರಕ್ಕೆ ಮುಂದೂಡಿದರು.

ಮೋದಿಗೆ ಹೆದರಿಕೆ:

ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ‘ಪ್ರಧಾನಿ ಮೋದಿ ಹೆದರಿಕೊಂಡಿದ್ದಾರೆ. ಅದಕ್ಕೇ ಅವರು ಉತ್ತರ ನೀಡಲು ಸದನಕ್ಕೆ ಆಗಮಿಸಲಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ. ಈ ನಡುವೆ ಬಿಜೆಪಿ ನಾಯಕ ಮನೋಜ್‌ ತಿವಾರಿ ಮಾತನಾಡಿ, ‘ವಿಪಕ್ಷದ ಸದಸ್ಯರ ವರ್ತನೆಯ ಕಾರಣ ಪ್ರಧಾನಿ ಮೋದಿ ಲೋಕಸಭೆಯನ್ನು ಪ್ರವೇಶ ಮಾಡಲು ಆಗಲಿಲ್ಲ’ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೆಡಿಎಸ್ ಜೊತೆ ಮೈತ್ರಿ ಬೇಡ - ಚುನಾವಣೆ ಸ್ವತಂತ್ರವಾಗಿ ಎದುರಿಸೋಣ : ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಧರಣಿಮಂಡಲದೊಳಗೆ : - ಇಡೀ ದಿನ ಬಾವೀಲಿ ಧರಣಿ - ಸಚಿವ ತಲೆದಂಡಕ್ಕೆ ಪಟ್ಟು