
ಮಂಡ್ಯ : ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಬಿಜೆಪಿ ಶಕ್ತಿಯುತವಾಗಿದೆ. ಎರಡೂ ಜಿಲ್ಲೆಗಳಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸೋಣ ಎನ್ನುವುದು ಮುಖಂಡರು, ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಹೇಳಿದರು.
ಮಂಗಳವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲೇ ಬಿಜೆಪಿ ಶಕ್ತಿಶಾಲಿಯಾಗಿದೆ ಎನ್ನುವುದು ಜೆಡಿಎಸ್‌ಗೂ ತಿಳಿದಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಸಹ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮೈತ್ರಿಗೆ ಅವಕಾಶ ನೀಡಿದ್ದೇ ಆದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಶೇ.೫೦ರಷ್ಟು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ವಿಚಾರವನ್ನು ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಮುಖಂಡರಿಗೆ ತಿಳಿಸುವುದಾಗಿ ಹೇಳಿದರು.
ಮಂಡ್ಯ ಮತ್ತು ಹಾಸನ ಜಿಲ್ಲೆಯಲ್ಲಿ ಬಿಜೆಪಿ ತನ್ನದೇ ಆದ ರಾಜಕೀಯ ಶಕ್ತಿಯಿಂದ ಹೊರಹೊಮ್ಮಿದೆ. 2019 ಮತ್ತು 2024 ರಲ್ಲಿ ಎನ್‌ಡಿಎ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಕುಮಾರಸ್ವಾಮಿ ಅವರಿಗೆ ತನ್ನಲ್ಲಾ ಶಕ್ತಿಯನ್ನು ಧಾರೆ ಎರೆದು ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಶ್ರಮಿಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಮ್ಮ ಬೆಂಬಲಿಗರನ್ನೂ ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಹೀಗಾಗಿ ಶೇ. 50ರಷ್ಟು ಸ್ಥಾನಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟಲ್ಲಿ ಮಾತ್ರ ಮೈತ್ರಿಗೆ ಅವಕಾಶ ಎಂಬುದಾಗಿಯೂ ತಿಳಿಸಿದ್ದಾರೆ ಎಂದರು.
ಮೈತ್ರಿ ಬಗ್ಗೆ ರಾಜ್ಯಾಧ್ಯಕ್ಷರು, ಕೋರ್‌ಕಮಿಟಿ ಮುಂದೆ ಕಾರ್ಯಕತರ್ಕರ ಅಭಿಪ್ರಾಯವನ್ನು ಇಡಲಾಗುವುದು. ಅಲ್ಲಿನ ನಿರ್ಣಯವನ್ನು ದೆಹಲಿಗೆ ಕಳುಹಿಸಲಾಗುವುದು. ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಅಂತಿಮವಾಗಿ ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಯಾವ್ಯಾವ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಗೆಲುವು ಸಾಧಿಸಲಿದೆ ಎಂಬ ಸಮೀಕ್ಷೆಯ ಆಧಾರದ ಮೇಲೆ ಸ್ಪರ್ಧೆಗೆ ಅವಕಾಶ ನೀಡಲಾಗುವುದೇ ಹೊರತು, ಜೆಡಿಎಸ್ ಅಥವಾ ಬಿಜೆಪಿ ಪ್ರಾಬಲ್ಯದ ಆಧಾರದ ಮೇಲೆ ಟಿಕೆಟ್ ಹಂಚಿಕೆ ಆಗುವುದಿಲ್ಲ. ೧೮೦ ಸ್ಥಾನಗಳನ್ನು ಗೆಲ್ಲುವಂತಹ ಗುರಿ ಹೊಂದಲಾಗಿದ್ದು, ಗೆಲ್ಲುವ ಸಾಮರ್ಥ್ಯವಿರುವ ವರದಿಗಳನ್ನು ಆಧರಿಸಿ ಟಿಕೆಟ್ ಹಂಚಿಕೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿಎಂ ಘೋಷಣೆಗೆ ವಿರೋಧ:
ಮೈತ್ರಿ ಬಗ್ಗೆ ಯಾವುದೇ ಗೊಂದಲವಿಲ್ಲದಿದ್ದರೂ, ರಾಜ್ಯದಲ್ಲಿ ಎರಡೂ ಪಕ್ಷಗಳ ವಾತಾವರಣ ತಿಳಿಯಾಗಬೇಕು. ಮೈತ್ರಿಗೆ ತಕ್ಕಂತೆ ಅವಕಾಶಗಳನ್ನು ನಿರ್ಮಿಸಬೇಕು. ಅದು ಬಿಟ್ಟು ಇವರೇ ಮುಖ್ಯಮಂತ್ರಿಯಾಗುತ್ತಾರೆ ಎಂಬುದನ್ನು ಘೋಷಣೆ ಮಾಡುವಂತಿಲ್ಲ. ಆದರೆ ನಿಖಿಲ್ ಕುಮಾರಸ್ವಾಮಿ ಅವರು ಕುಮಾರಸ್ವಾಮಿಯವರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡುತ್ತಿರುವುದನ್ನು ವಿರೋಧಿಸಿದರು.
ನಮ್ಮಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವುದಿಲ್ಲ. ಅಂತಿಮವಾಗಿ ವರಿಷ್ಠರು ತೀರ್ಮಾನ ಮಾಡುತ್ತಾರೆ. ಅದಕ್ಕೆ ಬದ್ಧರಾಗಬೇಕು. ಅದು ಬಿಟ್ಟು ಮೊದಲೇ ಇವರೇ ಸಿಎಂ, ಅವರೇ ಸಿಎಂ ಎನ್ನುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆಗೆ ಪಕ್ಷ ಸಜ್ಜು:
ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಪಕ್ಷವನ್ನು ಸಜ್ಜುಗೊಳಿಸಲು ರಾಜ್ಯಾಧ್ಯಕ್ಷರು ತೀರ್ಮಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲ ಪ್ರಧಾನ ಕಾರ್ಯದರ್ಶಿಗಳಿಗೂ ರಾಜ್ಯಾದ್ಯಂತ ಪ್ರವಾಸ ಮಾಡಲು ಸೂಚಿಸಿದ್ದಾರೆ. ಅದರಂತೆ ನಾವು ಈಗಾಗಲೇ ಕೊಡಗು, ಚಾಮರಾಜನಗರ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಿಧಾನ ಸಭಾ ಕ್ಷೇತ್ರವಾರು ಸಂಘಟನೆಗೆ ಒತ್ತು ನೀಡಿದ್ದೇವೆ. ಪ್ರಮುಖರು, ಕಾರ್ಯಕರ್ತರ ಸಭೆಗಳನ್ನು ನಡೆಸಿ ಸಂಘಟನೆಗೆ ಮುಂದಾಗಿದ್ದೇವೆ ಎಂದರು.
ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ:
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಜೆಡಿಎಸ್‌ನ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿರುವುದನ್ನು ನೋಡಿದ್ದೇವೆ. ಅವರು ಮೊದಲು ದೊಡ್ಡ ದೊಡ್ಡ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು. ನಾವೂ ಸಹ ಮಾತನಾಡುಬಹುದು. ಆದರೆ, ಪಕ್ಷದ ಗೌರವಕ್ಕೆ ಚ್ಯುತಿ ಬರುತ್ತೆ ಎಂಬ ಕಾರಣಕ್ಕೆ ಸುಮ್ಮನಿದ್ದೇವೆ ಎಂದು ಆರೋಪಿಸಿದರು.
ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ನಮ್ಮ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಕೇಂದ್ರದ ವರಿಷ್ಠರು ಸೂಚನೆ ನೀಡಿದ್ದರು. ಅದನ್ನು ನಾವು ಪಾಲಿಸಿದ್ದೇವೆ. ಆದರೆ, ಅವರು ನಮ್ಮ ಕಾರ್ಯಕರ್ತರು ಹೋದರೆ ಹಾರ, ಶಾಲು ಹಾಕಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಘೋಷಿಸುತ್ತಿರುವುದು ಶಾಸಕರಿಗೆ ಶೋಭೆ ತರುವುದಿಲ್ಲ ಎಂದು ಎಚ್ಚರಿಸಿದರು.
ನಾವೂ ಗೊಂದಲ ನಿರ್ಮಾಣ ಮಾಡಬಾರದು ಎಂದು ಸುಮ್ಮನಿದ್ದೇವೆ. ಈ ಬಗ್ಗೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೂ ತಂದಿದ್ದೇವೆ. ಸರಿಪಡಿಸದಿದ್ದಲ್ಲಿ ನಾವೇ ಮುಖಂಡರ ನಿಯೋಗ ತೆರಳಿ ಕೇಂದ್ರದ ನಾಯಕರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಅಧ್ಯಕ್ಷ ಡಾ. ಎನ್.ಎಸ್. ಇಂದ್ರೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್‌ಗೌಡ, ಮುಖಂಡರಾದ ಡಾ. ಸಿದ್ದರಾಮಯ್ಯ, ಅಶೋಕ್ ಜಯರಾಂ, ಎಸ್.ಪಿ.ಸ್ವಾಮಿ, ಅಶೋಕ್‌ಕುಮಾರ್ ಇತರರು ಗೋಷ್ಠಿಯಲ್ಲಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.