ಗಣಿ ಅಕ್ರಮದ ಆರೋಪದಿಂದಾಗಿ ರಾಜಕಾರಣದಿಂದ ದೂರ ಉಳಿದಿದ್ದ ಬಳ್ಳಾರಿಯ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಇದೀಗ ಸಕ್ರಿಯ ರಾಜಕೀಯಕ್ಕೆ ಮರಳಲು ಸನ್ನದ್ಧರಾಗಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಕೊಪ್ಪಳ/ಗಂಗಾವತಿ (ಡಿ.7) : ಗಣಿ ಅಕ್ರಮದ ಆರೋಪದಿಂದಾಗಿ ರಾಜಕಾರಣದಿಂದ ದೂರ ಉಳಿದಿದ್ದ ಬಳ್ಳಾರಿಯ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಇದೀಗ ಸಕ್ರಿಯ ರಾಜಕೀಯಕ್ಕೆ ಮರಳಲು ಸನ್ನದ್ಧರಾಗಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯಿಂದಲೇ ರಾಜಕೀಯ ಮರುಜನ್ಮ ಪಡೆಯಲು ಮುಂದಾಗಿರುವ ಜನಾರ್ದನ ರೆಡ್ಡಿ ಗಂಗಾವತಿಯಲ್ಲಿಯೇ ಬಿಡಾರ ಹೂಡುತ್ತಿದ್ದು, ನಾನಾ ದೇವಸ್ಥಾನ ಸುತ್ತುವುದು, ರಾಜಕೀಯ ನಾಯಕರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಸಹಜವಾಗಿ ರಾಜಕೀಯದಲ್ಲಿ ಬಿರುಗಾಳಿ ಏಳುವಂತೆ ಮಾಡಿದ್ದಾರೆ.
ಇದುವರೆಗೂ ತಮ್ಮ ರಾಜಕೀಯ ನಡೆ ಕುರಿತು ಸ್ಪಷ್ಟವಾಗಿ ಏನು ಹೇಳಿಲ್ಲವಾದರೂ ಸಕ್ರಿಯ ರಾಜಕೀಯಕ್ಕೆ ಬರುವುದನ್ನು ಸೂಚ್ಯವಾಗಿ ಹೇಳಿದ್ದಾರೆ ಮತ್ತು ಅದು ಗಂಗಾವತಿಯಿಂದಲೇ ಎನ್ನುವುದನ್ನು ತಮ್ಮ ನಡೆಯ ಮೂಲಕವೇ ತೋರಿಸಿಕೊಡುತ್ತಿದ್ದಾರೆ.
undefined
ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದ ಗಾಲಿ ಜನಾರ್ದನ ರೆಡ್ಡಿ ದಿಢೀರ್ ಗದಗ ಭೇಟಿ, ಹೊಸ ಪಕ್ಷ ಕಟ್ತಾರಾ?
ಕಳೆದೆರಡು ದಿನಗಳಿಂದ ಗಂಗಾವತಿಯಲ್ಲಿ ಒಂದು ಗಂಟೆಯೂ ವಿರಮಿಸದೆ ಸುತ್ತಾಡುತ್ತಿದ್ದಾರೆ. ಸ್ಥಳೀಯ ನಾಯಕರು ಹಾಗೂ ಕಲ್ಮಠದ ಸ್ವಾಮೀಜಿ ಭೇಟಿ ಸೇರಿದಂತೆ ಗಂಗಾವತಿ ಸುತ್ತಮುತ್ತ ಇರುವ ಒಂದು ದೇವಸ್ಥಾನಗಳನ್ನು ಬಿಡದಂತೆ ಸುತ್ತಾಡುತ್ತಿದ್ದಾರೆ. ಜತೆಗೆ ಗಂಗಾವತಿಯಲ್ಲಿ ನಗರಸಭೆಯ ಹಾಲಿ ಮತ್ತು ಮಾಜಿ ಸದಸ್ಯರ ಮನೆಗೆ ತೆರಳಿ ಗಾಳ ಹಾಕುತ್ತಿದ್ದಾರೆ.
ಬದಲಾಗಲಿದೆ ರಾಜಕೀಯ:
ಗಾಲಿ ಜನಾರ್ದನ ರೆಡ್ಡಿ ಅವರು ರಾಜಕೀಯ ಮರುಪ್ರವೇಶದಿಂದ ಕೊಪ್ಪಳ, ಬಳ್ಳಾರಿ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಾಜಕೀಯವೇ ನಾನಾ ಮಜಲುಗಳನ್ನು ಪಡೆಯಲಿದೆ. ಇದಕ್ಕಾಗಿ ಈಗಾಗಲೇ ಕಳೆದ 6 ತಿಂಗಳಿಂದ ಸ್ಕೆಚ್ ಹಾಕಿಯೇ ಗಂಗಾವತಿಯಲ್ಲಿ ನೆಲೆಯೂರಲು ಮನೆ ಖರೀದಿಸಿ, ಗೃಹ ಪ್ರವೇಶ ಮಾಡುವ ತಯಾರಿಯಲ್ಲಿದ್ದಾರೆ.
ದೇವಸ್ಥಾನಗಳ ಅಭಿವೃದ್ಧಿ:
ಕಳೆದೊಂದು ವರ್ಷದಿಂದ ಆನೆಗೊಂದಿ ಸುತ್ತಮುತ್ತ ಇರುವ ಪೌರಾಣಿಕ ಹಾಗೂ ಐತಿಹಾಸಿಕ ದೇವಸ್ಥಾನಗಳನ್ನು ಖಾಸಗಿಯಾಗಿಯೇ ಶ್ರೀರಾಮುಲು ಅವರು ಜೀರ್ಣೋದ್ಧಾರ ಶುರು ಮಾಡುವ ಮೂಲಕ ಜನಾರ್ದನ ರೆಡ್ಡಿಯವರು ಇಲ್ಲಿ ನೆಲೆಯೂರಲು ಬುನಾದಿ ಹಾಕಿದ್ದರು. ಆಗ ಪ್ರಶ್ನೆ ಮಾಡಿದಾಗ, ರಾಜಕೀಯ ಮರುಪ್ರವೇಶಕ್ಕೂ ಇದಕ್ಕೂ ಥಳುಕು ಹಾಕಬೇಡಿ. ಇದು ಪುಣ್ಯದ ಕಾರ್ಯ ಎಂದೆಲ್ಲ ಹೇಳಿದ್ದರು. ಆದರೆ, ಇದೀಗ ಆನೆಗೊಂದಿ ಭಾಗದ ಕ್ಷೇತ್ರವಾಗಿರುವ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದಲೇ ಅವರು ಅಥವಾ ಅವರ ಪತ್ನಿಯನ್ನು ಅಖಾಡಕ್ಕೆ ಇಳಿಸುವುದು ಪಕ್ಕಾ ಎನ್ನುತ್ತಿವೆ ಮೂಲಗಳು.
ನಾನಾ ಮಜಲುಗಳು:
ಜನಾರ್ದನ ರೆಡ್ಡಿ ರಾಜಕೀಯ ಮರುಪ್ರವೇಶದ ಕುರಿತು ನಾನಾ ಮಜಲುಗಳು ಪ್ರಾರಂಭವಾಗಿದ್ದು, ಅದರಲ್ಲಿ ಪ್ರಮುಖವಾಗಿ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತಾರೆ ಎನ್ನುವುದು ಒಂದು ಕಡೆಯಾದರೆ, ಜತೆಗೆ ಸುಮಾರು 35 ಎಂಎಲ್‌ಎ ಕ್ಷೇತ್ರಗಳ ಉಸ್ತುವಾರಿ ಬಯಸಿದ್ದಾರೆ ಎನ್ನಲಾಗಿದೆ. ಈ ಕುರಿತು ಬಿಜೆಪಿಯ ದೆಹಲಿ ಹೈಕಮಾಂಡ್ ಮಟ್ಟದಲ್ಲಿಯೂ ಚರ್ಚೆಯಾಗಿದೆ ಎನ್ನಲಾಗುತ್ತದೆ. ಆದರೆ, ಇದಕ್ಕೆ ಬಿಜೆಪಿಯ ಸಮ್ಮತಿ ಅಷ್ಟಾಗಿ ಸಿಕ್ಕಿಲ್ಲ ಎಂದೇ ಹೇಳಲಾಗುತ್ತದೆ.
ಇದಕ್ಕೆ ಪರ್ಯಾಯವಾಗಿಯೂ ಜನಾರ್ದನ ರೆಡ್ಡಿ ಅವರು ರಾಜಕೀಯ ನಡೆ ಬಿ ಪ್ಲಾನ್ ಸಹ ಇದೆ ಎನ್ನುವುದು ಚರ್ಚೆಯಾಗುತ್ತಿರುವ ವಿಷಯ. ಜೆಡಿಎಸ್‌ದಿಂದ ಸ್ಪರ್ಧೆ ಮಾಡುತ್ತಾರೆ ಮತ್ತು ಅಲ್ಲಿಯೂ 30- 35 ಕ್ಷೇತ್ರಗಳ ಟಿಕೆಟ್ ಕೇಳಿದ್ದಾರೆ ಎನ್ನಲಾಗುತ್ತಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿಯೇ ಅಖಾಡಕ್ಕೆ ಇಳಿದು ವಿವಿಧೆಡೆ ಸುಮಾರು 25 ಕ್ಷೇತ್ರಗಳಲ್ಲಿ ಶಕ್ತಿಯುತವಾಗಿರುವ ಪಕ್ಷೇತರರನ್ನು ಬೆಂಬಲಿಸಿ ಅವರನ್ನು ಗೆಲ್ಲಿಸುವ ದಿಸೆಯಲ್ಲಿಯೂ ಚಿಂತನೆ ಇದೆ ಎನ್ನುವುದು ತೇಲಾಡುತ್ತಿರುವ ಗಾಳಿ ಸುದ್ದಿಗಳು.
ಕೊಪ್ಪಳ ರಾಜಕೀಯ ಏರುಪೇರು?
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಗಂಗಾವತಿಯಲ್ಲಿ ನೆಲೆಯೂರುತ್ತಿದ್ದಂತೆ ಜಿಲ್ಲೆಯ ರಾಜಕೀಯದಲ್ಲಿ ತಲ್ಲಣ ಶುರುವಾಗಿದೆ. ಅವರಿಗೆ ಟಿಕೆಟ್ ಇಲ್ಲ, ಇವರಿಗೆ ಟಿಕೆಟ್ ಸಿಗುತ್ತದೆ ಎನ್ನುವ ವದಂತಿಗಳಿಗೆ ರೆಕ್ಕೆಪುಕ್ಕ ಬಂದಿದೆ. ಜನಾರ್ದನ ರೆಡ್ಡಿ ಗಂಗಾವತಿಯಿಂದಲೇ ಸ್ಪರ್ಧೆ ಮಾಡಿದ್ದೇಯಾದರೆ ಹಲವು ಏರುಪೇರು ಆಗಲಿವೆ.
Ballari Politics: ಹೊಸ ಪಕ್ಷ ಕಟ್ಟಲು 'ಗಣಿಧಣಿ' ನಿರ್ಧಾರ?: ಆಪ್ತಮಿತ್ರರ ಮಧ್ಯೆ ಬಿರುಕು
ಆಂಧ್ರ ಸಮುದಾಯದವರೊಂದಿಗೆ ಚರ್ಚೆ
ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಅಧಿಕ ಮತಗಳಿರುವ ಆಂಧ್ರ ಸಮುದಾಯವರೊಂದಿಗೆ ಜನಾರ್ದನ ರೆಡ್ಡಿ ಇತ್ತೀಚೆಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಶ್ರೀರಾಮನಗರದಲ್ಲಿ 25ಕ್ಕೂ ಹೆಚ್ಚು ಆಂಧ್ರ ಕ್ಯಾಂಪುಗಳಿವೆ. ಇಲ್ಲಿನ ಮತದಾರರಿಗೆ ತಮ್ಮನ್ನು ಬೆಂಬಲಿಸುವಂತೆ ಕೋರಿದ್ದಾರೆಂದು ಹೇಳಲಾಗುತ್ತಿದೆ.
ನಾನು ಈಗ ರಾಜಕೀಯ ಮಾತನಾಡುವುದಿಲ್ಲ. ಡಿ. 18ರ ನಂತರವೇ ರಾಜಕೀಯ ಕುರಿತು ಮಾತನಾಡುತ್ತೇನೆ. ಆಗ ಎಲ್ಲವನ್ನು ಎಳೆ ಎಳೆಯಾಗಿ ನಿಮ್ಮ ಮುಂದೆ ಹೇಳುತ್ತೇನೆ.
ಜನಾರ್ದನ ರೆಡ್ಡಿ, ಮಾಜಿ ಸಚಿವ
ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಯಾರಿಗೇ ಬಿಜೆಪಿ ಟಿಕೆಟ್ ಸಿಗಲಿ, ಅವರ ಗೆಲುವಿಗೆ ಶ್ರಮಿಸುತ್ತೇನೆ. ಜನಾರ್ದನ ರೆಡ್ಡಿ ಅವರು ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟಿಸಿ ಹೆಚ್ಚಿನ ಸ್ಥಾನ ಪಡೆಯುವ ಉದ್ದೇಶ ಇವರದ್ದಾಗಿದೆ.
ವಿರೂಪಾಕ್ಷಪ್ಪ ಸಿಂಗನಾಳ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ