‘ನಾನು ಲೋಕಸಭಾ ಚುನಾವಣೆಯ ಆಕಾಂಕ್ಷಿ ಅಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ಮೊನ್ನೆಯಾಗಿರುವ ಪೆಟ್ಟು ತಡೆದುಕೊಂಡರೆ ಸಾಕಾಗಿದೆ. ಮತ್ತೆ ಅಂತಹ ಪೆಟ್ಟು ತಿನ್ನಲು ಹೋಗುವುದಿಲ್ಲ’ ಎಂದು ಮಾಜಿ ಸಚಿವ ವಿ.ಸೋಮಣ್ಣ ಮಾರ್ಮಿಕವಾಗಿ ನುಡಿದಿದ್ದಾರೆ.
ಬೆಂಗಳೂರು (ಜೂ.08): ‘ನಾನು ಲೋಕಸಭಾ ಚುನಾವಣೆಯ ಆಕಾಂಕ್ಷಿ ಅಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ಮೊನ್ನೆಯಾಗಿರುವ ಪೆಟ್ಟು ತಡೆದುಕೊಂಡರೆ ಸಾಕಾಗಿದೆ. ಮತ್ತೆ ಅಂತಹ ಪೆಟ್ಟು ತಿನ್ನಲು ಹೋಗುವುದಿಲ್ಲ’ ಎಂದು ಮಾಜಿ ಸಚಿವ ವಿ.ಸೋಮಣ್ಣ ಮಾರ್ಮಿಕವಾಗಿ ನುಡಿದಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಸಂಸದ ಜಿ.ಎಸ್.ಬಸವರಾಜ ಅವರು ಹಿರಿಯರಾಗಿದ್ದು, ಅವರೊಂದಿಗೆ 40 ವರ್ಷದ ಒಡನಾಟ ಇದೆ. ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿರುವುದಕ್ಕೆ ಅವರಿಗೆ ಋುಣಿಯಾಗಿದ್ದೇನೆ.
ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂದಿ, ವಾಜಪೇಯಿ, ನರೇಂದ್ರ ಮೋದಿ ಅವರ ಆಡಳಿತ ವ್ಯವಸ್ಥೆಯನ್ನು ಗಮನಿಸಿದ್ದಾರೆ. ಎಲ್ಲವನ್ನೂ ಬಲ್ಲವರಾಗಿದ್ದು, ಅವರ ಹೇಳಿಕೆಯು ದೊಡ್ಡತನ ತೋರಿಸುತ್ತದೆ ಎಂದರು. ನಾನು ಯಾವುದೇ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಲ್ಲ, ಅದರ ಅವಶ್ಯಕತೆಯೂ ಇಲ್ಲ. ನನಗೆ 72 ವರ್ಷವಾಗಿದ್ದು, ಮುಂದಿನ ತಿಂಗಳು 73 ವರ್ಷವಾಗಲಿದೆ. ಚುನಾವಣೆಗೆ ಸ್ಪರ್ಧಿಸಿದ್ದು ಒತ್ತಡ ಎನ್ನುವುದಕ್ಕಿಂತ ನಾಯಕರ ಸಂದೇಶವನ್ನು ತಲೆಮೇಲೆ ಹೊತ್ತುಕೊಂಡು ಹೋಗಿ ಕೆಲಸ ಮಾಡಿದ್ದೇನೆ. ಪುಣ್ಯಾತ್ಮರು ಒಳ್ಳೆಯ ಕೆಲಸ ಮಾಡಿದ್ದಾರೆ.
ನನಗೆ 91 ವರ್ಷ. ಲೋಕಸಭೆಗೆ ಸ್ಪರ್ಧಿಸುವ ಪ್ರಶ್ನೆ ಬರದು: ಎಚ್.ಡಿ.ದೇವೇಗೌಡ
ಯಾವ ಹುತ್ತದಲ್ಲಿ ಯಾವ ಹಾವಿದೆ ಎಂಬುದನ್ನು ಹುಡುಕಲು ಆಗಲಿಲ್ಲ, ಹುಡುಕುವ ಪರಿಸ್ಥಿತಿಗೂ ಬಂದಿಲ್ಲ. ಒಬ್ಬ ಒಳ್ಳೆಯ ಕೆಲಸಗಾರನಾಗಿ ಬೆಳಗ್ಗೆ 4 ಗಂಟೆಯಿಂದ ತಡರಾತ್ರಿಯವರೆಗೆ ದುಡಿದಿದ್ದೇನೆ. ಅವರ ಮಾತನ್ನು ನಂಬಿ ಹೋಗಿದ್ದೆ. ಹೊಸಕೋಟೆಯಲ್ಲಿ ಒಂದು ಮಾತನ್ನು ಹೇಳಿದ್ದು, ಸೋಮಣ್ಣ ಗೆದ್ದರೆ ರಾಜ್ಯದಲ್ಲಿ ಪಕ್ಷವು ಒಂದು ದೊಡ್ಡ ಸ್ಥಾನ ನೀಡಲಿದೆ ಎಂದಿದ್ದರು. ಆದಾದ ಮೇಲೆ ನಡೆದ ಕೆಲವು ನೋವುಗಳು ಎಂದಿಗೂ ಮಾಸುವುದಿಲ್ಲ. ಭಗವಂತ ಉತ್ತರ ನೀಡುತ್ತಾನೆ. ಕಾದು ನೋಡೋಣ, ಪಕ್ಷದ ಸಂದೇಶ ದೊಡ್ಡದು ಎಂದು ಬೇಸರ ವ್ಯಕ್ತಪಡಿಸಿದರು.
ನನ್ನನ್ನು ಸೋಲಿಸಲು ‘ಅಲ್ಲಿಂದಲೇ’ ಸೂಚನೆ: ವರುಣ ಮತ್ತು ಚಾಮರಾಜನಗರದಲ್ಲಿ ನನ್ನನ್ನು ಸೋಲಿಸಬೇಕೆಂದು ‘ಅಲ್ಲಿಂದಲೇ’ ನಿರ್ದೇಶನ ಬಂದಿತ್ತು ಎಂದು ಯಾರ ಹೆಸರೆತ್ತದೆ ಮಾಜಿ ಸಚಿವ ವಿ.ಸೋಮಣ್ಣ ತಮ್ಮ ಎರಡೂ ಕ್ಷೇತ್ರಗಳಲ್ಲಿ ಪರಾಭವಕ್ಕೆ ಕಾರಣ ತೆರೆದಿಟ್ಟು, ನನ್ನ ಸೋಲಿಗೆ ನನ್ನ ಸಮುದಾಯದವರೇ, ಅದರಲ್ಲೂ ಮುಂಚೂಣಿ ನಾಯಕರೇ ಕಾರಣ ಎಂದು ಮಾರ್ಮಿಕವಾಗಿ ಹೇಳಿದರು. ನಗರದಲ್ಲಿ ಆಯೋಜಿಸಿದ್ದ ವರುಣಾ ಕ್ಷೇತ್ರದ ಬಿಜೆಪಿ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಸೋಲಿಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು ಯಾರೆಂಬು ದೂ ನನಗೆ ಗೊತ್ತಿದೆ.
ನಂಬಿದವರೇ ನನ್ನ ಕತ್ತು ಕೊಯ್ದರು. ಅದರ ಬಗ್ಗೆ ಬರೆದರೆ ಒಂದು ಪುಸ್ತಕವಾದೀತು. ಚಾಮುಂಡೇಶ್ವರಿ ತಾಯಿಯೇ ನನ್ನ ವಿರುದ್ಧದ ಅಪಪ್ರಚಾರವನ್ನು ನೋಡಿ ಕೊಳ್ಳುತ್ತಾಳೆ ಎಂದು ದುಖಿಃತರಾಗೇ ಹೇಳಿದರು. ಇನ್ನು, ಚಾಮರಾಜಜಗರದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲೂ ಇದೇ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ರಾಜಕೀಯ ನಿಂತ ನೀರಲ್ಲ, ನನ್ನ ಸೋಲಿನ ಕಾರಣವೂ ಮುಂದೊಂದು ದಿನ ತಾನೇ ಹೊರಗೆ ಬರುತ್ತದೆ ಎಂದರಲ್ಲದೇ, ಬಿ.ವೈ.ವಿಜಯೇಂದ್ರ ಆಪ್ತ ರುದ್ರೇಶ್ ವಿರುದ್ಧವೂ ಇದೇ ವೇಳೆ ಕಿಡಿಕಾರಿದರು.
ಸಂಸದರಿಗೆ ಟಿಕೆಟ್: ಗೊಂದಲ ಇತ್ಯರ್ಥಕ್ಕೆ ಸದಾನಂದಗೌಡ ಆಗ್ರಹ
ಹೈಕಮಾಂಡ್ ಸೂಚನೆಯಿತ್ತು: ಪಕ್ಷದ ಹೈಕಮಾಂಡ್ ಸೂಚಿಸಿದ್ದರಿಂದ ನಾನು ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾದೆ. ದೇವರಾಣೆ ನಾನಾಗಿ ಸ್ಪರ್ಧೆ ಮಾಡಬೇಕೆಂದು ಇಲ್ಲಿಗೆ ಬರಲಿಲ್ಲ, ಹೈಕಮಾಂಡ್ ಆದರೂ ಯಾಕೆ ನನ್ನ ಇಲ್ಲಿಗೆ ಕರೆಸಿದ್ದರೋ ಗೊತ್ತಿಲ್ಲ ಎಂದು ಹೇಳಿದರು. ಸಿಟ್ಟು ಬಂದ್ರೆ ಪಕ್ಷಾನೂ ಬೇಡ: ನಾನು ಬೆಂಗಳೂರಿನಲ್ಲಿ ನನ್ನದೇ ಆದ ಕೋಟೆ ಕಟ್ಟಿದ್ದೇನೆ. ಚಿನ್ನದಂಥ ನನ್ನ ಕ್ಷೇತ್ರದ ಜನ ಈಗ ಬೀದಿಯಲ್ಲಿ ಅನಾಥರಾಗಿ ಕಣ್ಣಿರು ಸುರಿಸುತ್ತಿದ್ದಾರೆ ಎಂದರಲ್ಲದೇ, ನನಗೆ ಪಕ್ಷವೇ ದೇವರು, ಪಕ್ಷವೇ ತಾಯಿ. ಆದರೆ, ನನಗೆ ಸಿಟ್ಟು ಬಂದರೆ ಮಾತ್ರ ಪಕ್ಷವೂ ಬೇಡ ಎಂದು ಎದ್ದು ಹೋಗುತ್ತಿರುತ್ತೇನೆ ಎಂದು ಖಚಿತವಾಗಿ ಹೇಳಿದರು.