Lok Sabha Elections 2024: ಸದಾನಂದಗೌಡ ಬಳಿಕ ಮತ್ತೊಬ್ಬ ಬಿಜೆಪಿ ಸಂಸದ ಸಂಗಣ್ಣ ಅಪಸ್ವರ

By Kannadaprabha News  |  First Published Jun 8, 2023, 4:27 AM IST

13 ಸಂಸದರಿಗೆ ಟಿಕೆಟಿಲ್ಲ ಎಂಬ ಬಗ್ಗೆ ಸ್ಪಷ್ಟನೆ ಕೊಡಿ, 6 ತಿಂಗಳು ಮೊದಲೇ ಟಿಕೆಟ್‌ ಘೋಷಣೆ ಮಾಡಿ: ಸಂಸದ ಸಂಗಣ್ಣ ಕರಡಿ 


ಕೊಪ್ಪಳ(ಜೂ.08):  ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯ 13 ಮಂದಿ ಹಾಲಿ ಸಂಸದರಿಗೆ ಟಿಕೆಟ್‌ ಇಲ್ಲ ಎಂಬ ಮಾಧ್ಯಮ ವರದಿ ಹಿನ್ನೆಲೆಯಲ್ಲಿ ಉಂಟಾಗಿರುವ ಗೊಂದಲಗಳ ಬಗ್ಗೆ ಸಂಸದ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. 

ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ತಕ್ಷಣವೇ ಮಧ್ಯಪ್ರವೇಶ ಮಾಡಿ, ಈ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಆಗ್ರಹಿಸಿದ್ದರು. ಅವರ ಬಳಿಕ, ಮತ್ತೊಬ್ಬ ಬಿಜೆಪಿ ಸಂಸದ ಸಂಗಣ್ಣ ಕರಡಿ ಕೂಡ ಅಪಸ್ವರ ವ್ಯಕ್ತಪಡಿಸಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಪ್ರಮುಖ ಕಾರಣವೇ ಟಿಕೆಟ್‌ ಹಂಚಿಕೆಯಲ್ಲಾದ ಗೊಂದಲ. ಹೀಗಾಗಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಾದರೂ 6 ತಿಂಗಳ ಮೊದಲೇ ಟಿಕೆಟ್‌ ಘೋಷಣೆ ಮಾಡಿ ಎಂದು ಆಗ್ರಹಿಸಿದ್ದಾರೆ.

Latest Videos

undefined

ಸೂಲಿಬೆಲೆ ಜೈಲ್‌ಗೆ ಹಾಕ್ತೇವೆ ಅನ್ನೋಕೆ ಎಂಬಿ ಪಾಟೀಲ್ ಯಾರು? ಗೃಹಮಂತ್ರಿನಾ? ಸಂಸದ ಸಂಗಣ್ಣ ಕರಡಿ ವಾಗ್ದಾಳಿ

ನಗರದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಕೊಪ್ಪಳ ಸಂಸದ ಕರಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಪ್ರಮುಖ ಕಾರಣವೇ ಟಿಕೆಟ್‌ ಹಂಚಿಕೆಯಲ್ಲಾದ ಗೊಂದಲ. ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೂ ಕೆಲವರಿಗೆ ಟಿಕೆಟ್‌ ಇಲ್ಲ ಎನ್ನುವಂತಾಗಿತ್ತು. ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಸೇರಿದಂತೆ ವಿವಿಧ ಕ್ಷೇತ್ರಗಳ ಟಿಕೆಟ್‌ ಹಂಚಿಕೆ ಕುರಿತು ಸಂಸದನಾದ ನನಗೇ ಏನೂ ಗೊತ್ತಿರಲಿಲ್ಲ. ನನ್ನ ಸೊಸೆಗೆ ಟಿಕೆಟ್‌ ಘೋಷಣೆ ಮಾಡಿದ ಮೇಲೆಯೇ ನನಗೂ ಗೊತ್ತಾಗಿದೆ. ಕ್ಷೇತ್ರದಲ್ಲಿ ಹಲವಾರು ಕಾರ್ಯಕರ್ತರು ಪಕ್ಷ ಸಂಘಟನೆ ಮಾಡಿದವರಿದ್ದರು. ಯಾರಾರ‍ಯರದೋ ಹೆಸರು ಮುನ್ನೆಲೆಯಲ್ಲಿ ಇತ್ತು. ಆ ಪೈಕಿ, ಮಹಾಂತೇಶ ಮೈನಳ್ಳಿ ಅವರಿಗೆ ಟಿಕೆಟ್‌ ಘೋಷಣೆ ಮಾಡಿದ್ದರೂ ನಾನು ಗೆಲ್ಲಿಸಿಕೊಂಡು ಬರುತ್ತಿದ್ದೆ. ಆದರೆ, ಕೊನೆ ಗಳಿಗೆಯಲ್ಲಿ ತೀರ್ಮಾನ ಮಾಡಿದ್ದರಿಂದ ತೀವ್ರ ಸಮಸ್ಯೆಯಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಲೂ ಲೋಕಸಭಾ ಚುನಾವಣೆಗೆ ವರ್ಷ ಇರುವಾಗಲೇ 13 ಸಂಸದರಿಗೆ ಟಿಕೆಟ್‌ ಕೈ ತಪ್ಪುತ್ತದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕುರಿತು ಪಕ್ಷದ ಹೈಕಮಾಂಡ್‌ ಸ್ಪಷ್ಟನೆ ನೀಡಬೇಕು. ಇಂತಹ ಗೊಂದಲಗಳಿಂದ ಸಮಸ್ಯೆಯಾಗುತ್ತದೆ. ಹೀಗಾಗಿ, ಲೋಕಸಭಾ ಚುನಾವಣೆಯಲ್ಲಿ ಯಾರಿಗಾದರೂ ಟಿಕೆಟ್‌ ಕೊಡಿ. ಆದರೆ, 6 ತಿಂಗಳ ಮೊದಲೇ ಘೋಷಣೆ ಮಾಡಿ. ಇದರಿಂದ ಚುನಾವಣೆಗೆ ತಯಾರಿಯನ್ನಾದರೂ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ನಾನು ನನಗೆ ಟಿಕೆಟ್‌ ಕೊಡಿ ಎಂದು ಕೇಳುವುದಿಲ್ಲ. ಆದರೆ, ಬೇಗನೇ ತೀರ್ಮಾನ ಮಾಡಬೇಕು ಮತ್ತು ಊಹಾಪೋಹಗಳಿಗೆ ತೆರೆ ಎಳೆಯಬೇಕು ಎಂದು ಪಕ್ಷದ ಮುಖಂಡರನ್ನು ಆಗ್ರಹಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಸೋಲಲು ಹಲವು ಕಾರಣಗಳು ಇರಬಹುದಾದರೂ ತಪ್ಪು ನಿರ್ಧಾರಗಳು ಪ್ರಮುಖ ಕಾರಣವಾಗಿವೆ. ಯಡಿಯೂರಪ್ಪ ಅವರನ್ನು ಅವಮಾನಿಸಿದ್ದು, ಲಕ್ಷ್ಮಣ ಸವದಿಗೆ ಟಿಕೆಟ್‌ ತಪ್ಪಿಸಿದ್ದು, ಜಗದೀಶ ಶೆಟ್ಟರ್‌ ಅವರಿಗೆ ಟಿಕೆಟ್‌ ನಿರಾಕರಣೆ ಮಾಡಿದ್ದು, ಈಶ್ವರಪ್ಪ ಅವರನ್ನು ಅವಮಾನಿಸಿದ್ದು ಸೋಲಿಗೆ ಇತರ ಕಾರಣಗಳು ಎಂದು ಹಲವರು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದರು.

click me!