ಮೋದಿಗೆ ಕೊಟ್ಟ ಖಾಲಿ ಚೊಂಬು 10 ವರ್ಷದಲ್ಲಿ ಅಕ್ಷಯ ಪಾತ್ರೆ ಆಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ. ಹಾಗಿದ್ದರೆ ರಾಜ್ಯದ ಬರ ಪರಿಹಾರಕ್ಕೆ ಕೇಂದ್ರ ಏಕೆ ಅನುದಾನ ಕೊಡಲಿಲ್ಲ? ರಾಜ್ಯದ ಪಾಲಿನ ತೆರಿಗೆ ಹಣ ಯಾಕೆ ಕೊಡಲು ಕೇಂದ್ರ ತಯಾರಿಲ್ಲ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಶಿಡ್ಲಘಟ್ಟ(ಕೋಲಾರ) (ಏ.22): ಮೋದಿಗೆ ಕೊಟ್ಟ ಖಾಲಿ ಚೊಂಬು 10 ವರ್ಷದಲ್ಲಿ ಅಕ್ಷಯ ಪಾತ್ರೆ ಆಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ. ಹಾಗಿದ್ದರೆ ರಾಜ್ಯದ ಬರ ಪರಿಹಾರಕ್ಕೆ ಕೇಂದ್ರ ಏಕೆ ಅನುದಾನ ಕೊಡಲಿಲ್ಲ? ರಾಜ್ಯದ ಪಾಲಿನ ತೆರಿಗೆ ಹಣ ಯಾಕೆ ಕೊಡಲು ಕೇಂದ್ರ ತಯಾರಿಲ್ಲ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ನಗರದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಪರ ಹಮ್ಮಿಕೊಂಡಿದ್ದ ಪ್ರಚಾರ ಕಾರ್ಯಕ್ರಮದ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಕೊಟ್ಟ ಖಾಲಿ ಚೊಂಬನ್ನು ಅಕ್ಷಯ ಪಾತ್ರೆ ಮಾಡಿದ್ದು ಮೋದಿ ಎಂದು ಚಿಕ್ಕಬಳ್ಳಾಪುರದಲ್ಲಿ ದೇವೇಗೌಡರು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದರು.
ಕೇಂದ್ರದಿಂದ ರಾಜ್ಯಕ್ಕೆ ಎಲ್ಲಾ ವಿಷಯದಲ್ಲೂ ಅನ್ಯಾಯವಾಗುತ್ತಿದೆ ಎಂದು ಪ್ರಧಾನಿಗಳ ಗಮನಸೆಳೆಯಲು ಕಾಂಗ್ರೆಸ್ ಕಾರ್ಯಕರ್ತರು ಖಾಲಿ ಚೊಂಬು ಪ್ರದರ್ಶಿಸಿದರೆ ಅದು ದೇವೇಗೌಡರಿಗೆ ಅಕ್ಷಯಪಾತ್ರೆಯಂತೆ ಕಾಣಿಸಿದ್ದು ಹೇಗೆ? ಖಾಲಿ ಚೊಂಬು ಅಕ್ಷಯಪಾತ್ರೆಯಂತೆ ಕಾಣಿಸಿದರೆ ರಾಜ್ಯದ ಪಾಲಿನ ತೆರಿಗೆ ಹಣ ವಾಪಸ್ ಯಾಕೆ ಬರಲಿಲ್ಲ? ಬರಗಾಲದ ಅನುದಾನ ಯಾಕೆ ನೀಡಲಿಲ್ಲ? ಪ್ರವಾಹದ ವೇಳೆ ರಾಜ್ಯದ ಅನುದಾನ ಯಾಕೆ ಕೊಡಲಿಲ್ಲ? ರೈತರ ಸಾಲ ಯಾಕೆ ಮನ್ನಾ ಮಾಡಲು ಆಗಿಲ್ಲ ಎಂದು ಸಿದ್ದರಾಮಯ್ಯ ಅವರು ದೇವೇಗೌಡರಿಗೆ ಸರಣಿ ಪ್ರಶ್ನೆಗಳನ್ನು ಕೇಳಿದರು.
ಮೇಕೆದಾಟು ಡ್ಯಾಂಗೆ ಅನುಮತಿ ನೀಡಿ, ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸ್ತೀವಿ: ಸಿಎಂ ಸಿದ್ದರಾಮಯ್ಯ
ಶ್ರೀಮಂತರ ಪಾಲಿಗೆ ಅಕ್ಷಯ ಪಾತ್ರೆ: ಮೋದಿಯವರ ಚೊಂಬು ಅತ್ಯಂತ ಶ್ರೀಮಂತರ, ಉದ್ಯಮಿಗಳ ಲಕ್ಷ ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆಯೇ ವಿನಃ ಬಡವರ ಸಾಲವನ್ನಲ್ಲ. ಮೋದಿ ಚೊಂಬು ಅತಿ ಶ್ರೀಮಂತರ ಪಾಲಿಗೆ ಅಕ್ಷಯ ಪಾತ್ರೆಯೇ ಹೊರತು ಭಾರತೀಯರ, ನಾಡಿನ ಜನರ ಪಾಲಿಗೆ ಖಾಲಿ ಚೊಂಬು ಅಷ್ಟೆ ಎಂದು ಕಾಲೆಳೆದರು. 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಮಾಡಿದ ಮೋಸಕ್ಕೆ ಮೋದಿಯವರ ಖಾಲಿ ಚೊಂಬು ಸಾಕ್ಷಿ. ದೇವೇಗೌಡರೇ ಈ ಚೊಂಬು ನಿಮ್ಮ ಕಣ್ಣಿಗೆ ಅಕ್ಷಯ ಪಾತ್ರೆಯಾಗಿದ್ದರೆ 15ನೇ ಹಣಕಾಸು ಆಯೋಗದಲ್ಲಿ ಆಗಿರುವ ನಷ್ಟದ ಅನ್ಯಾಯವನ್ನು ತುಂಬಿ ಕೊಡಿಸಿ, ಅಕ್ಷಯಪಾತ್ರೆಯಿಂದ ಪರಿಹಾರ ಉದುರಿಸಿ ನೋಡೋಣ ಎಂದು ಸವಾಲು ಹಾಕಿದರು. ಜಾತ್ಯತೀತರೆಂದು ಹೇಳಿಕೊಳ್ಳುವ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೋಮುವಾದಿ ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆ. ಅವರ ಢೋಂಗಿ ರಾಜಕಾರಣ ಬಯಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಮೋದಿ ಹಾಗೂ ದೇವೇಗೌಡರು ಸುಳ್ಳು ಹೇಳಿದ್ದಾರೆ. ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು. ಆದರೆ ಇವರ ಸುಳ್ಳನ್ನು ಯಾರೂ ನಂಬುವುದಿಲ್ಲ ಎಂದರು.
ಈ ವರ್ಷ ಸಿಇಟಿ ಪರೀಕ್ಷೆಗೆ ನೀಡಿದ್ದು 2023ರ ಪತ್ರಿಕೆಯಾ?: ಇಂದು ಎಬಿವಿಪಿ ಪ್ರತಿಭಟನೆ
ರೋಡ್ ಶೋನಲ್ಲೂ ಚೊಂಬಿನ ಸದ್ದು: ಬಂಗಾರಪೇಟೆ ಪಟ್ಟಣದಲ್ಲಿ ನಡೆದ ಮುಖ್ಯಮಂತ್ರಿಗಳ ರೋಡ್ ಶೋನಲ್ಲಿ ಚೊಂಬಿನ ಸದ್ದು ಜೋರಾಗಿ ಕೇಳಿಸಿತು. ಕೇಂದ್ರದ ವಿರುದ್ಧ ಟೀಕೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕರಿಗೆ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಜನತೆ ಚೊಂಬು ಚೊಂಬು ಎಂದು ಕೂಗಿದರು. ಪ್ರಧಾನಿ ಮೋದಿಯವರು ನಿಮ್ಮ ಅಕೌಂಟಿಗೆ 15 ಲಕ್ಷ ಹಾಕ್ತೀನಿ ಅಂದ್ರಲ್ವಾ? ಎಷ್ಟು ಹಣ ಬಂತು ಎಂದು ಕೇಳಿದಾಗ ಜನ ಚೊಂಬು ಎಂದು ಕೂಗಿದರು. ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀನಿ ಅಂದಿದ್ದರಲ್ವಾ? ಎಷ್ಟು ಜನರಿಗೆ ನೇಮಕಾತಿ ಆದೇಶ ಬಂತು ಎಂದಾಗಲೂ ಜನ ಚೊಂಬು ಚೊಂಬು ಎಂದು ದನಿಗೂಡಿಸಿದರು. ಮೋದಿ ಅವರು ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದರಲ್ವ, ಎಷ್ಟು ರೈತರಿಗೆ ದಿಪ್ಪಟ್ಟು ಹಣ ಬಂತು ಎಂದು ಪ್ರಶ್ನಿಸಿದಾಗಲೂ ಮತ್ತೆ ಚೊಂಬು ಎಂಬ ಕೂಗು ಅನುರಣಿಸಿತು. ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗಿಗ್ದರೆ ಮೈತ್ರಿ ಅಭ್ಯರ್ಥಿ ಕೈಗೆ ಖಾಲಿ ಚೊಂಬು ನೀಡಿ ಎಂದು ಹೇಳಿದರು.