ದೆಹಲಿ ಪಾಲಿಕೆಯಲ್ಲಿ ಆಪ್ ಗೆದ್ದಿದ್ದೇಕೆ? ಬಿಜೆಪಿ ಸೋತಿದ್ದೇಕೆ?

Published : Dec 08, 2022, 07:09 AM IST
ದೆಹಲಿ ಪಾಲಿಕೆಯಲ್ಲಿ ಆಪ್ ಗೆದ್ದಿದ್ದೇಕೆ? ಬಿಜೆಪಿ ಸೋತಿದ್ದೇಕೆ?

ಸಾರಾಂಶ

ಕಳೆದ 15 ವರ್ಷಗಳಿಂದಲೂ ದೆಹಲಿ ನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿಕೊಂಡು ಬರುತ್ತಿದ್ದ ಬಿಜೆಪಿ, ಆಮ್‌ ಆದ್ಮಿ ಪಕ್ಷದ ಎದುರು ಸೋತಿದೆ.  ಹಲವಾರು ಯೋಜನೆಗಳನ್ನು ಕೈಗೊಂಡರೂ ಬಿಜೆಪಿಗೆ ಈ ಬಾರಿ ಭಾರೀ ನಿರಾಶೆಯಾಗಿದೆ. ಹಾಗಿದ್ದರೆ ಬಿಜೆಪಿಗೆ ಮುಳುವಾಗಿದ್ದೇನು, ಆಪ್‌ಗೆ ವರವಾಗಿದ್ದೇನು?

ನವದೆಹಲಿ: ಕಳೆದ 15 ವರ್ಷಗಳಿಂದಲೂ ದೆಹಲಿ ನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿಕೊಂಡು ಬರುತ್ತಿದ್ದ ಬಿಜೆಪಿ, ಆಮ್‌ ಆದ್ಮಿ ಪಕ್ಷದ ಎದುರು ಸೋತಿದೆ. ಚುನಾವಣೆ ಸಮೀಪಿಸಿದಂತೆ ಆಮ್‌ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್‌ ಅವರ ವಿಡಿಯೋಗಳನ್ನು ಸೋರಿಕೆ ಮಾಡಿದ್ದಲ್ಲದೇ ಕೊಳೆಗೇರಿ ನಿವಾಸಿಗಳಿಗೆ ಫ್ಲಾಟ್‌ಗಳನ್ನು ಒದಗಿಸುವ ಹಲವಾರು ಯೋಜನೆಗಳನ್ನು ಕೈಗೊಂಡರೂ ಬಿಜೆಪಿಗೆ ಈ ಬಾರಿ ಭಾರೀ ನಿರಾಶೆಯಾಗಿದೆ. ಹಾಗಿದ್ದರೆ ಬಿಜೆಪಿಗೆ ಮುಳುವಾಗಿದ್ದೇನು, ಆಪ್‌ಗೆ ವರವಾಗಿದ್ದೇನು?

ಟಿಕೆಟ್‌ ಹಂಚಿಕೆ:

ಅಸಮರ್ಪಕ ಟಿಕೆಟ್‌ ಹಂಚಿಕೆ ನಿರ್ಧಾರ ಕೂಡಾ ಸೋಲಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಶಾಸಕರು ಹಾಗೂ ಸಂಸದರೊಂದಿಗೆ ಸರಿಯಾಗಿ ಸಮಾಲೋಚನೆ ನಡೆಸದೇ ಟಿಕೆಟ್‌ ನೀಡಲಾಗಿತ್ತು. ಇದು ಸೋಲಿಗೆ ಕಾರಣವಾಯಿತು.

ಪ್ರಚಾರದಲ್ಲಿ ವೈಫಲ್ಯ:

ಬಿಜೆಪಿ (BJP) ಕಾರ್ಯಕರ್ತರು ಮನೆಮನೆಗೆ ತೆರಳಿ ಪ್ರಚಾರ ನಡೆಸುವ ಬಗ್ಗೆ ಸೂಕ್ತ ಮಾಹಿತಿಯನ್ನೇ ನೀಡಿರಲಿಲ್ಲ. ಅದೇ ಆಪ್‌ ಕಾರ್ಯಕರ್ತರು ಮನೆಮನೆಗೆ ತೆರಳಿ ಪ್ರಚಾರ ಮಾಡಿದ್ದರು. ಮತಗಟ್ಟೆಹಂತದ ಪ್ರಚಾರಕ್ಕಾಗಿ ಬಿಜೆಪಿ ಪಕ್ಷ ಪಂಚ ಪರಮೇಶ್ವರ ಸಮ್ಮೇಳನವನ್ನು ನಡೆಸಿದರೂ ಅದನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುವಲ್ಲಿ ವಿಫಲವಾಯಿತು.

ಇಂದು ಗುಜರಾತ್‌, ಹಿಮಾಚಲ ಫಲಿತಾಂಶ: ಸತತ 7ನೇ ಬಾರಿ ಗುಜರಾತ್‌ ಗೆಲ್ಲುವತ್ತ ಬಿಜೆಪಿ ಚಿತ್ತ

ನಾಯಕತ್ವದ ಕೊರತೆ:

ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್‌ ಗುಪ್ತ (Adesh Gupta) ಅವರ ನೇತೃತ್ವದಲ್ಲಿ ಬಿಜೆಪಿ ಯಾವ ಚುನಾವಣೆಯನೂ ಗೆದ್ದಿಲ್ಲ. ಆದರೂ ರಾಜ್ಯ ಘಟಕದ ನಾಯಕತ್ವದಲ್ಲಿ ಬದಲಾವಣೆ ತರಲು ಯಾವ ಪ್ರಯತ್ನ ನಡೆಸಲಾಗಿಲ್ಲ. ಪ್ರಭಾವಿ ಮುಖ, ಪ್ರಬಲ ನಾಯಕತ್ವ, ಸ್ವಪಕ್ಷೀಯ ಕಲಹ ಬಿಜೆಪಿಗೆ ಮುಳುವಾಯಿತು.

ಆಪ್‌ ಗೆಲ್ಲಲು ಕಾರಣವಾದ ಅಂಶಗಳೇನು?

ಅಬ್ಬರದ ಪ್ರಚಾರ:

ಚುನಾವಣೆಗಿಂತ 2 ವಾರ ಮುನ್ನ ಆಮ್‌ ಆದ್ಮಿ ಪಕ್ಷ (AAP) ಪ್ರಚಾರಕ್ಕಾಗಿ ಅಭಿಯಾನ ಆರಂಭಿಸಿತು. ಕೊನೆ ಹಂತದಲ್ಲಿ ನಡೆಸಿದ ಅಬ್ಬರದ ಪ್ರಚಾರ ಜನರ ಮನಸ್ಸಿನಲ್ಲಿ ಉಳಿಯುವಂತಾಯಿತು.

ಕೇಂದ್ರದ ಸಹಕಾರ, ಮೋದಿ ಆಶೀರ್ವಾದ ಬೇಕು, ಪಾಲಿಕೆ ಗೆಲುವಿನ ಬಳಿಕ ಕೇಜ್ರಿವಾಲ್‌ ಮಾತು!

ಸಮಸ್ಯೆಗೆ ಪರಿಹಾರ:

ಕಸ ನಿರ್ವಹಣೆ, ನೈರ್ಮಲ್ಯ, ಹಾಳಾದ ರಸ್ತೆ, ಪಾಟ್‌ಹೋಲ್‌ ನಿರ್ವಹಣೆ, ಕೋವಿಡ್‌ ಬಿಕ್ಕಟ್ಟಿನ ವೇಳೆ ಅಸರ್ಮಪಕ ನಿರ್ವಹಣೆ ಮೊದಲಾದ ಸಮಸ್ಯೆಗಳಿಂದ ಬೇಸತ್ತ ಜನರು ಬಿಜೆಪಿ ಬದಲಾಗಿ ಹೊಸ ಪಕ್ಷಕ್ಕೆ ಅಧಿಕಾರ ನೀಡಲು ಮುಂದಾದರು.

ನಿಧಿ ಬಿಡುಗಡೆ ತಡೆ:

ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಪಾಲಿಕೆಗೆ ಸರಿಯಾಗಿ ನಿಧಿ ಬಿಡುಗಡೆ ಮಾಡಿಲ್ಲ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದಲೇ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದು ಆಪ್‌ ಆರೋಪಿಸುತ್ತಲೇ ಬಂದಿತ್ತು.

ಮಧ್ಯಮ ವರ್ಗ:

ವಿಶೇಷವಾಗಿ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಜನರಿಗಾಗಿಯೇ ಆಮ್‌ ಆದ್ಮಿ ಪಕ್ಷ ‘ಆಪ್‌ ಕಾ ವಿಧಾಯಕ, ಆಪ್‌ ಕಾ ಪ್ರಸಾದ್‌’ ಎಂಬ ಘೋಷಣೆಯನ್ನು ಯಶಸ್ವಿಯಾಗಿ ಬಳಸಿತು. ಅಲ್ಲದೇ ಶಿಕ್ಷಣ(Education), ಆರೋಗ್ಯ (Health), ಕಡಿಮೆ ವೆಚ್ಚದಲ್ಲಿ ವಿದ್ಯುತ್‌, ನೀರಿನ ಬಿಲ್‌ ಕಡಿತ ಮೊದಲಾದ ಭರವಸೆ ನೀಡಿತು.

ದೆಹಲಿ ಪಾಲಿಕೆ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ಕಚೇರಿ ಖಾಲಿ ಖಾಲಿ!

ಬಿಜೆಪಿಯ ನಿರ್ಲಕ್ಷ್ಯ:

ದೆಹಲಿಯಲ್ಲಿ ಸಿಎಎ ವಿರೋಧಿಸಿ ನಡೆದ ದಂಗೆಗಳ ಬಳಿಕ 2021ರಲ್ಲಿ ಮಹಾನಗರ ಪಾಲಿಕೆ ಉಪಚುನಾವಣೆಯಲ್ಲಿ ಆಪ್‌ 5 ಸೀಟುಗಳ ಪೈಕಿ 4ರಲ್ಲಿ ಗೆಲುವು ಸಾಧಿಸಿತು. 1 ಸೀಟು ಕಾಂಗ್ರೆಸ್‌ ಗೆದ್ದಿತ್ತು. ಆಗಲೇ ಮತದಾರರ ಮನದಲ್ಲಿ ಬಿಜೆಪಿಗೆ ಬದಲಾಗಿ ಒಂದು ಪ್ರಬಲ ಪಕ್ಷವಾಗಿ ಆಪ್‌ ಹೊರಹೊಮ್ಮಿತ್ತು. ಆದರೆ ಬಿಜೆಪಿ ಇದನ್ನು ನಿರ್ಲಕ್ಷಿಸಿತು.

ಮತದಾರರ ಓಲೈಕೆ:

ಆಪ್‌ ಸತತವಾಗಿ ಮತದಾರರನ್ನು ಓಲೈಸಲು ಪ್ರಯತ್ನಿಸಿದ್ದಲ್ಲದೇ ಆ ದಿಶೆಯಲ್ಲಿ ಕಾರ್ಯಗತವಾಯಿತು. ದೆಹಲಿಯಲ್ಲಿ ತ್ಯಾಜ್ಯ ನಿರ್ವಹಣೆ ಸಮಸ್ಯೆಯಲ್ಲಿ ಬಿಜೆಪಿ ವೈಫಲ್ಯದ ಬಗ್ಗೆ ಆಪ್‌ ಅಬ್ಬರದ ಪ್ರಚಾರ ನಡೆಸಿತು. ಅಲ್ಲದೇ ಕಸದ ನಿರ್ವಹಣೆಗಾಗಿ ವೈಜ್ಞಾನಿಕ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿತು.

ಪಂಜಾಬ್‌ ಗೆದ್ದು ಗುರುತಿಸಿಕೊಳ್ಳುವಿಕೆ:

2017ರಲ್ಲಿ ಆಪ್‌ ಅಷ್ಟೇನೂ ಪ್ರಬಲ ಪಕ್ಷವಾಗಿ ಮೂಡಿ ಬಂದಿರಲಿಲ್ಲ. ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರಲಿಲ್ಲ. ಆದರೆ 2020ರ ವೇಳೆ ಪಕ್ಷವು ಸಾಕಷ್ಟು ಕಾರ್ಯಕರ್ತರನ್ನು ಹೊಂದಿದ್ದಲ್ಲದೇ ಪಂಜಾಬ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಜನರಲ್ಲಿ ವಿಶ್ವಾಸಾರ್ಹ ಪಕ್ಷ ಎನಿಸಿಕೊಂಡಿತು.

ಕಾಂಗ್ರೆಸ್‌ ಲೆಕ್ಕಕ್ಕೇ ಇರಲಿಲ್ಲ! ಚುನಾವಣೆಗೆ ಮುನ್ನ ಸೋಲು:

ಪ್ರಭಾವಿ ಮುಖ, ಪ್ರಬಲ ನಾಯಕತ್ವದ ಕೊರತೆಯು ಕಾಂಗ್ರೆಸ್‌ನಲ್ಲೂ ಎದ್ದು ಕಾಣುತ್ತಿತ್ತು. ಚುನಾವಣೆಗೆ ಮುನ್ನವೇ ಕಾಂಗ್ರೆಸ್‌ ಸೋಲೊಪ್ಪಿಕೊಂಡಂತಿತ್ತು. ಹೀಗಾಗಿ ಚುನಾವಣೆ ಬಹುತೇಕ ದ್ವಿಪಕ್ಷೀಯ ಎಂದೇ ಬಿಂಬಿತವಾಗಿತ್ತು.

ಥಂಡಾ ಪ್ರಚಾರ:

ಬಿಜೆಪಿ-ಆಪ್‌ ಅಬ್ಬರದ ಪೈಪೋಟಿಯ ನಡುವೆ ಚುನಾವಣೆಗೆ ಮುನ್ನವೇ ಕಾಂಗ್ರೆಸ್‌ ತಣ್ಣಗೆ ಮೂಲೆಗೆ ಸರಿದಿತ್ತು. ಹೀಗಾಗಿ ಪ್ರಭಾವ ಬೀರುವಂತಹ ಚುನಾವಣಾ ಪ್ರಚಾರವನ್ನೂ ನಡೆಸಲಿಲ್ಲ.

ಮುಸ್ಲಿಂ ವೋಟ್‌ಬ್ಯಾಂಕ್‌:

ಕಾಂಗ್ರೆಸ್‌ ಸಾಂಪ್ರದಾಯಿಕವಾಗಿ ಕೊಳಗೇರಿಗಳ ಮುಸ್ಲಿಂ ಪ್ರಾಬಲ್ಯದ ಸ್ಥಳಗಳ ವೋಟ್‌ ಬ್ಯಾಂಕ್‌ ಅನ್ನು ಹೊಂದಿತ್ತು. ಈ ಬಾರಿ ಆಪ್‌ ಅವುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಕ್ಕೆ ಕಾಂಗ್ರೆಸ್‌ಗೆ ಬೀಳುತ್ತಿದ್ದ ಮತಗಳೂ ಆಪ್‌ಗೆ ಸಿಕ್ಕವು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!