Ticket Fight: ಬೀದರ್‌ ಶಾಸಕರಿಗೆ ಹೊಸ ಸ್ಪರ್ಧಿಗಳ ಸವಾಲ್‌

By Govindaraj S  |  First Published Dec 8, 2022, 5:42 AM IST

ಬಸವಾದಿ ಶರಣರ ನಾಡಾಗಿದ್ದರೂ ಬೀದರ್‌ನಲ್ಲಿ ಜಾತಿಯದ್ದೇ ಲೆಕ್ಕಾಚಾರ. ಪಕ್ಷ ವರ್ಚಸ್ಸಿಗಿಂತ ವ್ಯಕ್ತಿ ವರ್ಚಸ್ಸಿನದ್ದೇ ವಿಚಾರ. ಈ ಹಿಂದೆ ಬಿಜೆಪಿಯ ಭದ್ರ ಕೋಟೆಯಾಗಿದ್ದ ಬೀದರ್‌ನಲ್ಲಿ ಕಾಂಗ್ರೆಸ್‌ ಬಲಿಷ್ಠವಾಗಿದೆ. ಸದ್ಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡರಲ್ಲಿ ಆಡಳಿತಾರೂಢ ಬಿಜೆಪಿಯಿದೆ.


ಅಪ್ಪಾರಾವ್‌ ಸೌದಿ

ಬೀದರ್‌ (ಡಿ.08): ಬಸವಾದಿ ಶರಣರ ನಾಡಾಗಿದ್ದರೂ ಬೀದರ್‌ನಲ್ಲಿ ಜಾತಿಯದ್ದೇ ಲೆಕ್ಕಾಚಾರ. ಪಕ್ಷ ವರ್ಚಸ್ಸಿಗಿಂತ ವ್ಯಕ್ತಿ ವರ್ಚಸ್ಸಿನದ್ದೇ ವಿಚಾರ. ಈ ಹಿಂದೆ ಬಿಜೆಪಿಯ ಭದ್ರ ಕೋಟೆಯಾಗಿದ್ದ ಬೀದರ್‌ನಲ್ಲಿ ಕಾಂಗ್ರೆಸ್‌ ಬಲಿಷ್ಠವಾಗಿದೆ. ಸದ್ಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡರಲ್ಲಿ ಆಡಳಿತಾರೂಢ ಬಿಜೆಪಿಯಿದೆ. ಇದರಲ್ಲಿ ಒಬ್ಬರು ಕ್ಯಾಬಿನೆಟ್‌ ಸಚಿವರು. ಒಂದರಲ್ಲಿ ಜೆಡಿಎಸ್‌ ಶಾಸಕರಿದ್ದು, ಅವರು ಆ ಪಕ್ಷದ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಪಕ್ಷದ ಕೋರ್‌ ಕಮಿಟಿ ಅಧ್ಯಕ್ಷರೂ ಹೌದು. ಇನ್ನು ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದು, ಈ ಪೈಕಿ ಒಬ್ಬರು ಪಕ್ಷದ ಕಾರ್ಯಾಧ್ಯಕ್ಷರು. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಜತೆಗೆ ಆಮ್‌ ಆದ್ಮಿ ಪಾರ್ಟಿ ಹಾಗೂ ಎಐಎಂಐಎಂಯೂ ಸ್ಪರ್ಧೆಗೆ ಮುಂದಾಗಿರುವುದು ಕುತೂಹಲ ಮೂಡಿಸಿದೆ.

Tap to resize

Latest Videos

ಬೀದರ್‌: ರಹೀಮ್‌ ಖಾನ್‌ಗೆ ಸವಾಲು ಹಾಕುವವರು ಯಾರು?
ನೇರ ಸ್ಪರ್ಧೆ ಹಾಗೂ ಜಾತಿ, ಮತ ವಿಭಜನೆಯ ತವರೂರಂತಿದೆ ಬೀದರ್‌ ಕ್ಷೇತ್ರ. ಕಾಂಗ್ರೆಸ್‌ನಲ್ಲಿ ಮೂರು ಬಾರಿ ಗೆದ್ದಿರುವ ಹಾಲಿ ಶಾಸಕ ರಹೀಮ್‌ಖಾನ್‌ ಅವರು ಈ ಬಾರಿಯೂ ಸ್ಪರ್ಧಿಸುವುದು ಪಕ್ಕಾ. ಇನ್ನು ಕೆಲ ವರ್ಷಗಳಿಂದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಪ್ರತಿ ಗ್ರಾಮ, ಗ್ರಾಮಗಳಿಗೂ ಮುಟ್ಟಿಸುವ ಕಾರ್ಯ ನಡೆಸುವ ಮೂಲಕ ಮಾಜಿ ಸಚಿವ ದಿ.ಗುರುಪಾದಪ್ಪ ನಾಗ್ಮಾರಪಳ್ಳಿ ಪುತ್ರ ಸೂರ್ಯಕಾಂತ ಅವರು ಮತ್ತೊಮ್ಮೆ ಬಿಜೆಪಿಯಲ್ಲಿ ಅದೃಷ್ಟಪರೀಕ್ಷೆಗಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ವಿಧಾನ ಪರಿಷತ್‌ ಸಭಾಪತಿಯಾಗಿರುವ ರಘುನಾಥರಾವ್‌ ಮಲ್ಕಾಪೂರೆ, ಬಿಜೆಪಿಯ ವಿಭಾಗೀಯ ಪ್ರಭಾರಿ ಈಶ್ವರಸಿಂಗ್‌ ಠಾಕೂರ್‌, ಹಿರಿಯ ಮುಖಂಡ ಗುರುನಾಥ ಕೊಳ್ಳೂರ್‌, ಸೋಮಶೇಖರ ಪಾಟೀಲ್‌, ಕೇಂದ್ರ ಸಚಿವ ಭಗವಂತ ಖೂಬಾ ಸಹೋದರ ಜಗದೀಶ ಖೂಬಾ ಸೇರಿದಂತೆ ಹಲವರು ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಜೆಡಿಎಸ್‌ ಈಗಾಗಲೇ ಘೋಷಿಸಿದಂತೆ ರಮೇಶ ಪಾಟೀಲ್‌ ಸೋಲಾಪುರ್‌ ಹೆಸರು ಸದ್ಯಕ್ಕೆ ಪಕ್ಕಾ. ಆದರೆ, ಬಿಜೆಪಿಯಿಂದ ಟಿಕೆಟ್‌ ವಂಚಿತರಿಗಾಗಿ ಗಾಳ ಹಾಕಿ ಕುಳಿತಂತಿರುವ ಆ ಪಕ್ಷದ ವರಿಷ್ಠರ ನಿರ್ಧಾರ ಕೊನೇ ಕ್ಷಣದಲ್ಲಿ ಬದಲಾದರೂ ಅಚ್ಚರಿ ಇಲ್ಲ. ಆಮ್‌ ಆದ್ಮಿ ಪಾರ್ಟಿ ಹಾಗೂ ಎಐಎಂಐಎಂ ಇನ್ನೂ ಅಭ್ಯರ್ಥಿ ವಿಚಾರ ಗುಟ್ಟುಬಿಟ್ಟುಕೊಟ್ಟಿಲ್ಲ.

Ticket Fight: ಕುತೂಹಲ ಮೂಡಿಸಿರುವ ಯಾದಗಿರಿ ಜಿಲ್ಲೆಯ ರಾಜಕೀಯ ಜಿದ್ದಾಜಿದ್ದಿ

ಭಾಲ್ಕಿ: ಖಂಡ್ರೆಗಳ ನಡುವಿನ ಸ್ಪರ್ಧೆ?
ಕಾಂಗ್ರೆಸ್‌ನಿಂದ ಹಾಲಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ಕಾಂಗ್ರೆಸ್‌ ಟಿಕೆಟ್‌ ಗಟ್ಟಿ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಿದ್ದ ಸಿದ್ರಾಮ್‌ ಈ ಬಾರಿಯ ಚುನಾವಣೆ ಪೂರ್ವ ಅಖಾಡಾದಲ್ಲಿ ಮೌನವಾದಂತೆ ಕಾಣುತ್ತಿದೆ. ಆದರೂ ಸದ್ಯ ಅವರೂ ಟಿಕೆಟ್‌ ಆಕಾಂಕ್ಷಿ. ಒಮ್ಮೆ ಕೆಜೆಪಿಯಿಂದ, ಮತ್ತೊಮ್ಮೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರಕಾಶ ಖಂಡ್ರೆ ಅವರೂ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಇದರೊಂದಿಗೆ ಇತ್ತೀಚೆಗೆ ಬಿಜೆಪಿ ಸೇರಿದ್ದ ಮರಾಠಾ ಸಮುದಾಯದ ಹಿರಿಯ ವೈದ್ಯ ಡಾ.ದಿನಕರ್‌ ಮೋರೆ ಅವರೂ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಸದ್ಯಕ್ಕೆ ಜೆಡಿಎಸ್‌ ಇಲ್ಲಿ ಲೆಕ್ಕಕ್ಕೂ ಇಲ್ಲ, ಆಟಕ್ಕೂ ಇಲ್ಲ ಎಂಬಂತಿದೆ.

ಬೀದರ್‌ ದಕ್ಷಿಣ: ಖಾಶೆಂಪೂರ್‌-ಖೇಣಿ-ಬೆಲ್ದಾಳೆ ಫೈಟ್‌?
ಬೀದರ್‌ ದಕ್ಷಿಣ ಕ್ಷೇತ್ರದಿಂದ ಕಳೆದ ಬಾರಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್‌ ಗೆದ್ದಿದ್ದಾರೆ. ಜೆಡಿಎಸ್‌ ಶಾಸಕಾಂಗ ಪಕ್ಷದ ಉಪನಾಯಕರೂ ಆಗಿರುವ ಖಾಶೆಂಪುರ್‌ ಈ ಬಾರಿಯೂ ಪಕ್ಷದಿಂದ ಕಣಕ್ಕಿಳಿಯುವುದು ಪಕ್ಕಾ. ಈ ಹಿಂದೆ ಬಿಎಸ್‌ಪಿಯಿಂದ ಸ್ಪರ್ಧಿಸಿ ನಿದ್ದೆಗೆಡಿಸಿದ್ದ ನಸೀಮ್‌ ಪಟೇಲ್‌ ಈ ಬಾರಿ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಇನ್ನುಳಿದಂತೆ ಇತರೆ ಪಕ್ಷಗಳ, ಪ್ರಮುಖರ ವರ್ಚಸ್ಸು ಅಷ್ಟಕ್ಕಷ್ಟೆ. 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲುಂಡಿದ್ದ ನೈಸ್‌ ಕಂಪನಿ ಮುಖ್ಯಸ್ಥ ಅಶೋಕ್‌ ಖೇಣಿ ಈ ಬಾರಿಯೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ. ಮಾಜಿ ಮುಖ್ಯಮಂತ್ರಿ ದಿ.ಧರಂಸಿಂಗ್‌ ಅಳಿಯ ಚಂದ್ರಾಸಿಂಗ್‌, ಧರಂಸಿಂಗ್‌ ಪುತ್ರ ವಿಜಯಸಿಂಗ್‌ ಕೂಡ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲುಂಡಿದ್ದ ಡಾ.ಶೈಲೇಂದ್ರೆ ಬೆಲ್ದಾಳೆ ಈ ಬಾರಿ ಮತ್ತೊಮ್ಮೆ ಬಿಜೆಪಿ ಟಿಕೆಟ್‌ ಆಕಾಂಕ್ಷಿ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್‌ ಅವರು ಇತ್ತೀಚೆಗೆ ಬೀದರ್‌ ಭೇಟಿ ಸಂದರ್ಭದಲ್ಲಿ ಬೆಲ್ದಾಳೆ ಗೆಲುವಿಗೆ ಶ್ರಮಿಸುವಂತೆ ತುಂಬಿದ ಸಭೆಯಲ್ಲಿ ಹೇಳಿ ಹೋಗಿದ್ದು, ಟಿಕೆಟ್‌ ಘೋಷಣೆ ಮಾತ್ರ ಬಾಕಿಯಿದೆ ಎಂಬಂತಾಗಿದೆ.

ಔರಾದ್‌: ಚವ್ಹಾಣ್‌-ವಿಜಯಕುಮಾರ್‌ ಫೈಟ್‌?
ಔರಾದ್‌, ಜಿಲ್ಲೆಯ ಮೀಸಲು ಕ್ಷೇತ್ರ. ಕ್ಷೇತ್ರದಿಂದ ಮೂರು ಬಾರಿ ಬಿಜೆಪಿಯಿಂದ ಗೆದ್ದಿರುವ, ಈಗ ಪಶು ಸಂಗೋಪನಾ ಸಚಿವರಾಗಿರುವ ಪ್ರಭು ಚವ್ಹಾಣ್‌ ಈ ಭಾಗದ ಪ್ರಬಲ ನಾಯಕ. ಈ ಬಾರಿಯ ಚುನಾವಣೆಯಲ್ಲೂ ಚವ್ಹಾಣ್‌ ಅವರೇ ಬಿಜೆಪಿಯಿಂದ ಮತ್ತೆ ಸ್ಪರ್ಧಿಸುವುದು ಖಚಿತ. ಚವ್ಹಾಣ್‌ಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ವಿಜಯ ಕುಮಾರ್‌ ಅವರು ಭಾರೀ ಪೈಪೋಟಿ ನೀಡಿದ್ದರು. ಈ ಬಾರಿ ಮತ್ತೆ ವಿಜಯಕುಮಾರ್‌ ಅವರನ್ನೇ ಕಾಂಗ್ರೆಸ್‌ ಕಣಕ್ಕಿಳಿಸುವ ನಿರೀಕ್ಷೆ ಇದೆ. ನಿವೃತ್ತ ಐಎಎಸ್‌ ಅಧಿಕಾರಿ ಭೀಮಸೇನ್‌ ಸಿಂಧೆ, ಸುಧಾಕರ ಕೊಳ್ಳೂರ್‌ ಸೇರಿ ಇನ್ನೂ ಹಲವರು ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್‌ಗೆ ಕ್ಷೇತ್ರದಲ್ಲಿ ಹೇಳಿಕೊಳ್ಳುವ ನೆಲೆ ಇಲ್ಲ. ಅಭ್ಯರ್ಥಿಯೂ ಪಕ್ಕಾ ಆಗಿಲ್ಲ.

ಹುಮನಾಬಾದ್‌: ತ್ರಿಕೋನ ಸ್ಪರ್ಧೆಯ ಕ್ಷೇತ್ರ
ಕಾಂಗ್ರೆಸ್‌ ಹಾಗೂ ಬಿಜೆಪಿಯೊಂದಿಗೆ ಜೆಡಿಎಸ್‌ ಕೂಡ ಇಲ್ಲಿ ಪ್ರಬಲ. ಜಿಲ್ಲೆಯ ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಇಲ್ಲಿ ಯಾವತ್ತಿಗೂ ತ್ರಿಕೋನ ಸ್ಪರ್ಧೆ. ನಾಲ್ಕು ಬಾರಿ ಗೆದ್ದಿರುವ ಹಾಲಿ ಶಾಸಕ ರಾಜಶೇಖರ ಪಾಟೀಲ್‌ ಈ ಬಾರಿಯೂ ಕಾಂಗ್ರೆಸ್‌ ಹುರಿಯಾಳಾಗುವುದು ಬಹುತೇಕ ಖಚಿತ. ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದ ದಿ. ಮಿರಾಜುದ್ದೀನ್‌ ಪಟೇಲ್‌ ನಂತರ ಕಮರಿ ಹೋಗಿದ್ದ ಜೆಡಿಎಸ್‌ ಇಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪುತ್ರ ಫಯಾನ್‌ರನ್ನು ಕಣಕ್ಕಿಳಿಸುವ ನಿರೀಕ್ಷೆ ಇದೆ. ಕಾಂಗ್ರೆಸ್‌ ಶಾಸಕ ರಾಜಶೇಖರ ಪಾಟೀಲ್‌ ಸಹೋದರ ಸಂಬಂಧಿ ಡಾ.ಸಿದ್ದು ಪಾಟೀಲ್‌ ಬಿಜೆಪಿಯಿಂದ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್‌ ಕೂಡ ಟಿಕೆಟ್‌ ಆಕಾಂಕ್ಷಿ. ಇನ್ನು ಟಿಆರ್‌ಎಸ್‌ ಮತ್ತು ಎಂಐಎಂ ಜಿಲ್ಲೆಯ ಹುಮನಾಬಾದ್‌ನಲ್ಲಿ ತಳವೂರಲು ಯತ್ನಿಸುತ್ತಿದ್ದು ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ. ಸಾಧ್ಯವಾÜಗದಿದ್ದರೆ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.

ಬಸವಕಲ್ಯಾಣ: ಶರಣು ಸಲಗರಿಗೆ ಮತ್ತೊಂದು ಅಗ್ನಿಪರೀಕ್ಷೆ
ಲಿಂಗಾಯತ ಹಾಗೂ ಮರಾಠಾ ಸಮುದಾಯದ ಮತದಾರರೇ ಹೆಚ್ಚಿರುವ ಬಸವಕಲ್ಯಾಣ ಕ್ಷೇತ್ರಕ್ಕೆ ಕಳೆದ ವರ್ಷ ನಡೆದಿದ್ದ ಉಪ ಚುನಾವಣೆಯಲ್ಲಿ ಬಿಜೆಪಿ ಶಾಸಕರಾಗಿ ಶರಣು ಸಲಗರ ಆಯ್ಕೆಯಾಗಿದ್ದಾರೆ. ಟಿಕೆಟ್‌ಗಾಗಿ ಬಿರುಸಿನ ಪೈಪೋಟಿ, ಭಾರೀ ಒಡಕುಗಳ ಮಧ್ಯೆಯೇ ಕಳೆದ ಉಪ ಚುನಾವಣೆಯಲ್ಲಿ ಹೆದ್ದು ಶಾಸಕರಾಗಿ ಆಯ್ಕೆಯಾದ ಶರಣು ಸಲಗರ ಅವರು ಈ ಬಾರಿಯೂ ಟಿಕೆಟ್‌ ಆಕಾಂಕ್ಷಿ. ಉಪಚುನಾವಣೆ ಗೆಲುವಿನಲ್ಲಿ ಪ್ರಮುಖ ಪಾತ್ರಧಾರಿಯಲ್ಲೊಬ್ಬರಾದ ಕೇಂದ್ರ ಸಚಿವ, ಸಂಸದ ಭಗವಂತ ಖೂಬಾ ಜೊತೆಗಿನ ಇವರ ವಿರಸ ಮತ್ತೊಮ್ಮೆ ಟಿಕೆಟ್‌ಗಾಗಿ ಪೈಪೋಟಿ ನಡೆಸುವಂಥ ಸ್ಥಿತಿಗೆ ತಂದಿದ್ದರೂ ಸ್ಪರ್ಧೆಗಿಳಿಯೋದು ಖಚಿತ ಎನ್ನುತ್ತಾರೆ ಬೆಂಬಲಿಗರು. ಕಾಂಗ್ರೆಸ್‌ನಿಂದ ಈ ಬಾರಿ ಧರಂಸಿಂಗ್‌ ಅವರ ಪುತ್ರ ವಿಜಯಸಿಂಗ್‌ ಪೈಪೋಟಿಗಿಳಿದಿದ್ದಾರೆ. ಇದಲ್ಲದೆ ಲಿಂಗಾಯತ ಸಮುದಾಯದ ಆನಂದ ದೇವಪ್ಪ ಕೈ ಟಿಕೆಟ್‌ ಪ್ರಬಲ ಆಕಾಂಕ್ಷಿ. ಕಳೆದ ಬಾರಿ ಬಿಜೆಪಿ ಟಿಕೆಟ್‌ ಸಿಗದೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಲ್ಲಿಕಾರ್ಜುನ್‌ ಖೂಬಾ ನಡೆ ಇನ್ನೂ ಸ್ಪಷ್ಟವಾಗಿಲ್ಲ. ಖೂಬಾ ಅವರಿಗೆ ಜೆಡಿಸ್‌ ಗಾಳ ಹಾಕಿದ್ದು, ಪಕ್ಷ ಸೇರ್ಪಡೆಯಾದರೆ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚಿದೆ. ಕಳೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಯಸ್ರಾಬ್‌ ಅಲಿ ಖಾದ್ರಿ ಅವರೂ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

Ticket Fight: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಮಲ ಪಾಳಯ ಭೇದಿಸಲು ಕಾಂಗ್ರೆಸ್‌ ಯತ್ನ

ಹಾಲಿ ಬಲಾಬಲ
ಕ್ಷೇತ್ರ 6
ಬಿಜೆಪಿ 2
ಕಾಂಗ್ರೆಸ್‌ 3
ಜೆಡಿಎಸ್‌ 1

click me!