ಸಿಎಂ ಸಿದ್ದರಾಮಯ್ಯ ತವರಲ್ಲಿ ಯಾರಿಗೆ ಜಿಲ್ಲಾ ಉಸ್ತುವಾರಿ?

By Kannadaprabha News  |  First Published May 28, 2023, 10:47 AM IST

ಮೈಸೂರು ಜಿಲ್ಲೆಯಿಂದ ಟಿ.ನರಸೀಪುರ ಕ್ಷೇತ್ರದ ಶಾಸಕ ಡಾ.ಎಚ್‌.ಸಿ.ಮಹದೇವಪ್ಪ ಹಾಗೂ ಪಿರಿಯಾಪಟ್ಟಣ ಕ್ಷೇತ್ರದ ಶಾಸಕ ಕೆ. ವೆಂಕಟೇಶ್‌ ಅವರಿಗೆ ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವ ಸ್ಥಾನ ಲಭಿಸಿದೆ. 


ಅಂಶಿ ಪ್ರಸನ್ನಕುಮಾರ್‌

ಮೈಸೂರು (ಮೇ.28): ಮೈಸೂರು ಜಿಲ್ಲೆಯಿಂದ ಟಿ.ನರಸೀಪುರ ಕ್ಷೇತ್ರದ ಶಾಸಕ ಡಾ.ಎಚ್‌.ಸಿ.ಮಹದೇವಪ್ಪ ಹಾಗೂ ಪಿರಿಯಾಪಟ್ಟಣ ಕ್ಷೇತ್ರದ ಶಾಸಕ ಕೆ. ವೆಂಕಟೇಶ್‌ ಅವರಿಗೆ ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವ ಸ್ಥಾನ ಲಭಿಸಿದೆ. ಇಬ್ಬರೂ ಆರನೇ ಬಾರಿ ವಿಧಾನಸಭೆ ಪ್ರವೇಶಿಸಿದವರು. ಮಹದೇವಪ್ಪ ಐದನೇ ಬಾರಿ, ವೆಂಕಟೇಶ್‌ ಎರಡನೇ ಬಾರಿ ಮಂತ್ರಿಯಾಗುತ್ತಿದ್ದಾರೆ. ಮಹದೇವಪ್ಪ ಅವರಿಗೆ ಸಮಾಜ ಕಲ್ಯಾಣ, ವೆಂಕಟೇಶ್‌ ಅವರಿಗೆ ಪಶುಸಂಗೋಪನೆ ಹಾಗೂ ರೇಷ್ಮೆ ಖಾತೆ ನೀಡಲಾಗಿದೆ. ಮಹದೇವಪ್ಪ ಅವರು 1985, 1994, 2004ರಲ್ಲಿ ಜನತಾ ಪರಿವಾರ, 2008, 2013, 2023ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ- ಒಟ್ಟು ಆರು ಬಾರಿ ಟಿ. ನರಸೀಪುರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 1989ರಲ್ಲಿ ಕಾಂಗ್ರೆಸ್‌ನ ಎಂ.ಶ್ರೀನಿವಾಸಯ್ಯ, 1999ರಲ್ಲಿ ಬಿಜೆಪಿಯ ಡಾ.ಎನ್‌.ಎಲ್‌. ಭಾರತೀಶಂಕರ್‌, 2018ರಲ್ಲಿ ಜೆಡಿಎಸ್‌ನ ಎಂ. ಅಶ್ವಿನ್‌ಕುಮಾರ್‌ ಎದುರು ಸೋತಿದ್ದರು.

Latest Videos

undefined

1994ರಲ್ಲಿ ಎಚ್‌.ಡಿ. ದೇವೇಗೌಡ ಹಾಗೂ ಜೆ.ಎಚ್‌. ಪಟೇಲ್‌ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. 2004ರಲ್ಲಿ ಎನ್‌. ಧರಂಸಿಂಗ್‌ ನೇತ್ವತ್ವದ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿದ್ದರು. ಬಾಗಲಕೋಟೆ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ನಿರ್ವಹಿಸಿದ್ದರು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. ಹಾಸನ, ಕೊಡಗು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಮೂರು ಜಿಲ್ಲೆಗಳಲ್ಲೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸುವ ಅಪರೂಪದ ಅವಕಾಶ ಅವರಿಗೆ ಸಿಕ್ಕಿತ್ತು. ಪಿರಿಯಾಪಟ್ಟಣದಿಂದ ಕೆ.ವೆಂಕಟೇಶ್‌ ಅವರು 1985, 1994, 2004ರಲ್ಲಿ ಜನತಾ ಪರಿವಾರ, 2008, 2013, 2023ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಆಯ್ಕೆಯಾದವರು. 

ದೇವೇಗೌಡ ಕುಟುಂಬದ ದಾಖಲೆ ಸರಿಗಟ್ಟಿದ ಬಂಗಾರಪ್ಪ ಕುಟುಂಬ

1989ರಲ್ಲಿ ಕಾಂಗ್ರೆಸ್‌ನ ಕೆ.ಎಸ್‌. ಕಾಳಮರೀಗೌಡ, 1999 ರಲ್ಲಿ ಬಿಜೆಪಿಯ ಎಚ್‌.ಸಿ. ಬಸವರಾಜು, 2018 ರಲ್ಲಿ ಜೆಡಿಎಸ್‌ನ ಕೆ. ಮಹದೇವ್‌ ಅವರು ಎದುರು ಸೋತವರು. 1994 ರಲ್ಲಿ ಗೆದ್ದಾಗ ಜೆ.ಎಚ್‌. ಪಟೇಲ್‌ ಅವರ ಸಂಪುಟದಲ್ಲಿ ಕಾಡಾ ಸಚಿವರಾಗಿದ್ದರು. 2004 ರಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಇದ್ದರೂ ಮಂತ್ರಿಯಾಗಲಿಲ್ಲ. ನಂತರ ಸಿದ್ದರಾಮಯ್ಯ ಅವರ ಹಿಂದೆ ಕಾಂಗ್ರೆಸ್‌ಗೆ ಬಂದರು. 2008 ಕಾಂಗ್ರೆಸ್‌ ಟಿಕೆಟ್‌ ಮೇಲೆ ಗೆದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. 2013 ರಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆದರೂ ವೆಂಕಟೇಶ್‌ ಅವರಿಗೆ ಮಂತ್ರಿ ಸ್ಥಾನ ಸಿಗಲಿಲ್ಲ. 

ಪ್ರಾದೇಶಿಕತೆ, ಜಿಲ್ಲಾ ಹಾಗೂ ಜಾತಿ ಸಮೀಕರಣದಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಅವರನ್ನು ಬಿಡಿಎ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಈ ಬಾರಿ ಅವರಿಗೆ ಕೊನೆಗೂ ಅವಕಾಶ ಸಿಕ್ಕಿದೆ. ಮಹದೇವಪ್ಪ ಹಾಗೂ ವೆಂಕಟೇಶ್‌ ಇಬ್ಬರೂ ಸಿದ್ದರಾಮಯ್ಯ ಅವರು ಆಪ್ತ ವಲಯಕ್ಕೆ ಸೇರಿದವರು. ಈಗಾಗಲೇ ಮಹದೇವಪ್ಪ ಅವರು ಕಳೆದ ಬಾರಿ ಕಾಂಗ್ರೆಸ್‌ ಸರ್ಕಾರ ಇದ್ದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಈಗಲೂ ಅವರಿಗೆ ಕೊಡಬಹುದು. ಆದರೆ 2004, 2013 ರಲ್ಲಿ ಮಂತ್ರಿ ಸ್ಥಾನ ಮಿಸ್‌ ಮಾಡಿಕೊಂಡಿದ್ದ ವೆಂಕಟೇಶ್‌ ಈ ಬಾರಿ ಕೊನೆಗೂ ಮಂತ್ರಿಯಾಗಿದ್ದೇನೆ ಎಂದು ಹೇಳಿ ಉಸ್ತುವಾರಿಯನ್ನು ಕೇಳಬಹುದು.

ಅವಿಭಜಿತ ಮೈಸೂರು ಜಿಲ್ಲೆಗೆ ಸೇರಿದ ಚಾಮರಾಜನಗರದಿಂದ ಯಾರೂ ಸಚಿವರಿಲ್ಲ. ಹೀಗಾಗಿ ಒಬ್ಬರಿಗೆ ಮೈಸೂರು, ಮತ್ತೊಬ್ಬರಿಗೆ ಚಾಮರಾಜನಗರ ಉಸ್ತುವಾರಿ ನೀಡಬಹುದು. ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಕೊಡಗು ಜಿಲ್ಲೆಯಿಂದಲೂ ಯಾರೂ ಸಚಿವರಿಲ್ಲ. ಟಿ. ನರಸೀಪುರದಿಂದ ಈ ಬಾರಿ ವಿಧಾನಸಭೆಗೆ ಸ್ಪರ್ಧಿಸಬಯಸಿದ್ದ ಡಾ.ಮಹದೇವಪ್ಪ ಪುತ್ರ ಸುನಿಲ್‌ ಬೋಸ್‌ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಕಣಕ್ಕಿಳಿಯುವ ಆಸಕ್ತಿ ತೋರಿದ್ದಾರೆ. ಹೀಗಾಗಿ ಆ ಜಿಲ್ಲೆಯ ಉಸ್ತುವಾರಿ ಯಾರಿಗೆ? ಎಂಬುದು ಕುತೂಹಲ ಕೆರಳಿಸಿದೆ.

ಇಬ್ಬರೂ 1985 ರಿಂದಲೂ ಸಿದ್ದು ಜೊತೆ ಸೋಲು- ಗೆಲುವಿನಲ್ಲಿ ಜೊತೆಯಾದವರು!: ಮೈಸೂರು ಭಾಗದಲ್ಲಿ 1985 ರಿಂದಲೂ ಸಿದ್ದರಾಮಯ್ಯ, ಡಾ.ಎಚ್‌.ಸಿ. ಮಹದೇವಪ್ಪ, ಕೆ. ವೆಂಕಟೇಶ್‌ ಅವರು ಸೋಲು- ಗೆಲುವಿನಲ್ಲಿ ಜೊತೆಗಾರರು!. ಸಿದ್ದರಾಮಯ್ಯ ಒಂದು ಉಪ ಚುನಾವಣೆ ಸೇರಿದಂತೆ ಒಂಭತ್ತು ಚುನಾವಣೆಗಳಲ್ಲಿ ಗೆದ್ದಿದ್ದಾರೆ. ಉಳಿದಿಬ್ಬರು ತಲಾ ಆರು ಬಾರಿ ಗೆದ್ದಿದ್ದಾರೆ. ಆದರೆ ಮೂವರಿಗೂ ಮೂರು ಬಾರಿ ಸೋಲಾಗಿದೆ. ಸಿದ್ದರಾಮಯ್ಯ ಅವರು ಮಹದೇವಪ್ಪ, ವೆಂಕಟೇಶ್‌ ಅವರಿಗಿಂತ ಒಂದು ಚುನಾವಣೆ ಮೊದಲು ಅಂದರೆ 1983 ರಲ್ಲಿ ವಿಧಾನಸಭೆ ಪ್ರವೇಶಿಸಿದರು. 1985, 1994, 2004, 2008, 2013, 2023 ರಲ್ಲಿ ಸಿದ್ದರಾಮಯ್ಯ, ಡಾ.ಎಚ್‌.ಸಿ. ಮಹದೇವಪ್ಪ, ಕೆ. ವೆಂಕಟೇಶ್‌ ಗೆದ್ದಿದ್ದಾರೆ. 1989, 1999, 2018 ರಲ್ಲಿ ಸೋತಿದ್ದಾರೆ. ಸಿದ್ದರಾಮಯ್ಯ ಅವರು 2018 ರಲ್ಲಿ ಬಾದಾಮಿಯಿಂದಲೂ ಸ್ಪರ್ಧಿಸಿ, ಗೆದ್ದಿದ್ದರು.

ತನ್ವೀರ್‌ಸೇಠ್‌ ಕಾಯುವುದು ಅನಿವಾರ್ಯ: ಮೈಸೂರಿನ ನರಸಿಂಹರಾಜ ಕ್ಷೇತ್ರದಿಂದ ಒಂದು ಉಪ ಚುನಾವಣೆ ಸೇರಿದಂತೆ 2002, 2004, 2008, 2013, 2018, 2023- ಹೀಗೆ ಸತತ ಆರು ಬಾರಿ ಗೆದ್ದಿರುವ ತನ್ವೀರ್‌ ಸೇಠ್‌ ಅವರು ಮಂತ್ರಿಗಿರಿಗಾಗಿ ಕಾಯುವುದು ಅನಿವಾರ್ಯ. ಜಿಲ್ಲೆ. ಜಾತಿ ಮತ್ತು ಪ್ರಾದೇಶಿಕತೆ ಇದಕ್ಕೆ ಕಾರಣ. ತನ್ವೀರ್‌ ಸೇಠ್‌ ಅವರು 2004 ರಲ್ಲಿ ಧರಂಸಿಂಗ್‌ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕಾರ್ಮಿಕ ಹಾಗೂ ವಕ್ಫ್ ಸಚಿವರಾಗಿ ಕೊಡಗು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ನಿರ್ವಹಿಸಿದ್ದರು.

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಹಿರಿಯರ ಅತೃಪ್ತಿ: ಜಯಚಂದ್ರ, ಲಮಾಣಿ, ಸಲೀಂ ಅಹ್ಮದ್‌ರಿಂದ ಬಹಿರಂಗ ಬೇಸರ

 2013 ರಲ್ಲಿ ಮೂರು ಕಾಲು ವರ್ಷದ ನಂತರ ಸಿದ್ದರಾಮಯ್ಯ ಸಂಪುಟ ಸೇರಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿ, ರಾಯಚೂರು ಜಿಲ್ಲಾ ಉಸ್ತುವಾರಿ ನಿರ್ವಹಿಸಿದ್ದರು. ಈ ಬಾರಿ ಕೂಡ ಮಂತ್ರಿಗಿರಿಗೆ ಅವರ ಹೆಸರು ಕೇಳಿಬಂದಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಮೈಸೂರು ಜಿಲ್ಲೆಯ ಮೂವರಿಗೆ ಸ್ಥಾನ ದೊರೆತಿದೆ. ಆರು ಬಾರಿ ಗೆದ್ದಿದ್ದರೂ ವೆಂಕಟೇಶ್‌ ಅವರು ಮಂತ್ರಿಯಾಗಿದ್ದು ಒಮ್ಮೆ ಮಾತ್ರ. ಅಲ್ಪಸಂಖ್ಯಾತ ಕೋಟಾದ‚ಡಿ ಜಮೀರ್‌ ಅಹಮದ್‌ ಖಾನ್‌, ರಹೀಂ ಖಾನ್‌ ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ತನ್ವೀರ್‌ ಸೇಠ್‌ ಅವರು ಕಾಯುವುದು ಅನಿವಾರ್ಯವಾಗಿದೆ.

click me!