ಸೊರಬ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಧು ಬಂಗಾರಪ್ಪ ಸಚಿವರಾಗಿದ್ದು, ಬಂಗಾರಪ್ಪ ಕುಟುಂಬದ ಮೂರನೇ ವ್ಯಕ್ತಿಯಾಗಿ ಸಚಿವ ಸ್ಥಾನ ಪಡೆದಿದ್ದಾರೆ. ಆ ಮೂಲಕ ಒಂದೇ ಕುಟುಂಬದ ಮೂರು ಮಂದಿ ಸಚಿವ ಸ್ಥಾನ ಪಡೆದ ಜೆಡಿಎಸ್‌ನ ದೇವೇಗೌಡ ಕುಟುಂಬದ ದಾಖಲೆಯನ್ನು ಅವರು ಸರಿಗಟ್ಟಿದ್ದಾರೆ.
ಶಿವಮೊಗ್ಗ (ಮೇ.28): ಸೊರಬ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಧು ಬಂಗಾರಪ್ಪ ಸಚಿವರಾಗಿದ್ದು, ಬಂಗಾರಪ್ಪ ಕುಟುಂಬದ ಮೂರನೇ ವ್ಯಕ್ತಿಯಾಗಿ ಸಚಿವ ಸ್ಥಾನ ಪಡೆದಿದ್ದಾರೆ. ಆ ಮೂಲಕ ಒಂದೇ ಕುಟುಂಬದ ಮೂರು ಮಂದಿ ಸಚಿವ ಸ್ಥಾನ ಪಡೆದ ಜೆಡಿಎಸ್‌ನ ದೇವೇಗೌಡ ಕುಟುಂಬದ ದಾಖಲೆಯನ್ನು ಅವರು ಸರಿಗಟ್ಟಿದ್ದಾರೆ. ಮಧು ಅವರು 2021ರ ನವಂಬರ್‌ನಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಇವರ ತಂದೆ ಎಸ್.ಬಂಗಾರಪ್ಪ ಅವರು 1967ರಲ್ಲಿ ಚುನಾವಣಾ ರಾಜಕೀಯ ಪ್ರವೇಶಿಸಿದ್ದು, ಬಳಿಕ, ಸಚಿವರಾಗಿ, 1990ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದರು.
ಬಂಗಾರಪ್ಪನವರ ಹಿರಿಯ ಪುತ್ರ, ಮಧು ಬಂಗಾರಪ್ಪನವರ ಅಣ್ಣ ಕುಮಾರ್ ಬಂಗಾರಪ್ಪನವರು 1999ರಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಈಗ ಮಧು ಬಂಗಾರಪ್ಪನವರು ಸಚಿವರಾಗಿದ್ದಾರೆ. ದೇವೇಗೌಡರ ಕುಟುಂಬದಲ್ಲಿ ದೇವೇಗೌಡರು, ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ, ಎಚ್.ಡಿ.ರೇವಣ್ಣನವರು ಸಚಿವರಾಗಿ ಕೆಲಸ ನಿರ್ವಹಿಸಿದ್ದಾರೆ.
ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಹಿರಿಯರ ಅತೃಪ್ತಿ: ಜಯಚಂದ್ರ, ಲಮಾಣಿ, ಸಲೀಂ ಅಹ್ಮದ್‌ರಿಂದ ಬಹಿರಂಗ ಬೇಸರ
ಪ್ರಾಥಮಿಕ ಶಿಕ್ಷಣ ಖಾತೆ ಪಡೆದ ಜಿಲ್ಲೆಯ 2ನೇ ವ್ಯಕ್ತಿ ಮಧು ಬಂಗಾರಪ್ಪ: ನೂತನವಾಗಿ ಸಚಿವ ಸ್ಥಾನ ಪಡೆದ ಮಧು ಬಂಗಾರಪ್ಪ ಅವರಿಗೆ ಸಿಕ್ಕಿರುವುದು ಪ್ರಾಥಮಿಕ ಶಿಕ್ಷಣ ಸಚಿವ ಸ್ಥಾನ. ಜಿಲ್ಲೆಯಲ್ಲಿ ಈ ಖಾತೆಯನ್ನು ಕಿಮ್ಮನೆ ರತ್ನಾಕರ್ ನಿರ್ವಹಿಸಿದ್ದು, ಮಧು ಬಂಗಾರಪ್ಪ ಎರಡನೆಯವರಾಗಿ ಈ ಖಾತೆ ಪಡೆದಿದ್ದಾರೆ. ಅತ್ಯಂತ ಸೂಕ್ಷ್ಮ ವಿಷಯಗಳನ್ನು ಒಳಗೊಂಡ ಈ ಖಾತೆ ನಿಭಾಯಿಸುವುದು ಸುಲಭದ ಮಾತಲ್ಲ. ಅದರಲ್ಲಿಯೂ ಪಠ್ಯ ಪರಿಷ್ಕರಣೆ, ಪರೀಕ್ಷೆ ಆಯೋಜನೆ ದೊಡ್ಡ ಜವಾಬ್ದಾರಿ.
ಕಿಮ್ಮನೆ ಸಚಿವರಾದ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ವಿಚಾರದಲ್ಲಿ ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಗಿತ್ತು ಎಂಬುದನ್ನು ಗಮನಿಸಬೇಕಾಗಿದೆ. ಹಿಂದಿನ ಸರ್ಕಾರದಲ್ಲಿ ಪಠ್ಯ ಪರಿಷ್ಕರಣೆ ಎಂಬುದು ದೊಡ್ಡ ಗೊಂದಲದ ಗೂಡಾಗಿತ್ತು. ನೀರಾವರಿ, ಹೋರಾಟ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದ್ದ ಮಧು ಬಂಗಾರಪ್ಪ ಅವರು ಈ ಖಾತೆಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲದ ಸಂಗತಿ.
ರಾಜಕೀಯ ಸಾಧನೆಗಳಿಗೆ ಆಶೀರ್ವದಿಸಿದ ಜನತೆಗೆ ಕೃತಜ್ಞ: ನನ್ನೆಲ್ಲಾ ರಾಜಕೀಯ ಸಾಧನೆಗಳ ಹೆಜ್ಜೆಗೆ ತಾಲೂಕಿನ ಜನತೆ ನನ್ನ ಜೊತೆಗಿದ್ದು, ಆಶೀರ್ವದಿಸಿದ್ದಾರೆ. ಅವರ ಸ್ಪಂದನೆ ಮತ್ತು ಸಹಕಾರಕ್ಕೆ ನಾನು ಮತ್ತು ನನ್ನ ಕುಟುಂಬ ಸದಾ ಚಿರಋುಣಿ ಆಗಿರುತ್ತೇವೆ ಎಂದು ನೂತನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶನಿವಾರ ಬೆಳಿಗ್ಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ತೆರಳುವ ಮೊದಲು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಪಕ್ಷ ತಮಗೆ 4 ವಿವಿಧ ಹುದ್ಧೆಗಳನ್ನು ನೀಡಿತ್ತು. ಅದನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ ಎನ್ನುವ ಭಾವನೆ ತಮಗಿದೆ. ಚುನಾವಣಾ ಸಂದರ್ಭದಲ್ಲಿ ಇತರೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿದ್ದ ಕಾರಣ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರದಲ್ಲಿ ತಾವು ಕಾಣಿಸಿಕೊಳ್ಳದಿದ್ದರೂ ತಾಲೂಕಿನ ಜನತೆ ತಮ್ಮ ಮೇಲೆ ವಿಶ್ವಾಸವಿಟ್ಟು ಸುಮಾರು 45 ಸಾವಿರ ಅಧಿಕ ಮತಗಳ ಅಂತರದಿಂದ ಜಯಗಳಿಸಿಕೊಟ್ಟಿದ್ದಾರೆ. ಅವರ ನಂಬಿಕೆ ಮತ್ತು ವಿಶ್ವಾಸಕ್ಕೆ ದ್ರೋಹ ಬಗೆಯದೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಎಂದರು.
ಸಚಿವರಾಗಬೇಕೆಂಬ ಬಯಕೆ ಪ್ರತಿಯೊಬ್ಬ ಶಾಸಕನಿಗೂ ಇರುತ್ತದೆ. ಕಾಂಗ್ರೆಸ್ ಎನ್ನುವುದು ದೊಡ್ಡ ಹಡಗು. ಎಲ್ಲರಿಗೂ ಸಚಿವ ಸ್ಥಾನ ನೀಡುವುದು ಕಷ್ಟಸಾಧ್ಯ. ಹೈಕಮಾಂಡ್ ಅಳೆದು, ತೂಗಿ ಸಚಿವರನ್ನು ಆಯ್ಕೆ ಮಾಡಿದೆ. ಅದರಲ್ಲಿ ತಾವೂ ಕೂಡ ಒಬ್ಬರಾಗಿದ್ದು, ಈ ಹಿಂದೆ ನೀಡಿದ ಹುದ್ಧೆಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರು ತಮ್ಮ ಮೇಲೆ ವಿಶ್ವಾಸವಿಟ್ಟು ಮಂತ್ರಿ ಪದವಿ ನೀಡಿದ್ದಾರೆ ಎನ್ನುವ ಭಾವನೆ ತಮಗಿದೆ. ಯಾವುದೇ ಸಚಿವ ಸ್ಥಾನ ನೀಡಿದರೂ ನಿರ್ವಹಿಸಲು ಬದ್ಧನಾಗಿದ್ದೇನೆ ಎಂದರು.
ಎಷ್ಟೇ ಹಿರಿಯರಾದರೂ ಹೈಕಮಾಂಡ್ ನಿರ್ಧಾರ ಫೈನಲ್: ವೀರಪ್ಪ ಮೊಯ್ಲಿ
ತಾಲೂಕಿನ ಜನತೆ ತಮ್ಮ ಮೇಲೆ ವಿಶ್ವಾಸವಿಟ್ಟು ವಿಧಾನಸಭೆಗೆ ಆರಿಸಿ ಕಳುಹಿಸಿದ್ದಾರೆ. ಸಚಿವರಾಗಿ ಮಲೆನಾಡು ಭಾಗದಲ್ಲಿರುವ ಹಲವು ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಅದರಲ್ಲೂ ಅರಣ್ಯ ಭೂಮಿ ಸಾಗುವಳಿ ಮತ್ತು ಬಗರ್‌ಹುಕುಂ ರೈತರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಇದರ ಜೊತೆಗೆ ಪರಿಸರವನ್ನೂ ಉಳಿಸಬೇಕಿದೆ. ರೈತರಿಗೆ ರಕ್ಷಣೆ ನೀಡುವುದೇ ತಮ್ಮ ಗುರಿಯಾಗಿದ್ದು, ಈ ಬಗ್ಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಜೊತೆ ಚರ್ಚಿಸಿದ್ದೇನೆ ಎಂದರು.