ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ಸ್ಪಷ್ಟತೆ ಇಲ್ಲದ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಈಗ ಅದನ್ನು ಸ್ಪಷ್ಟವಿವರಗಳಿಲ್ಲದೆ ಇದೀಗ ಜನಾಕ್ರೋಶ ಬಳಿಕ ವಿಳಂಬವಾಗಿ ಅನುಷ್ಠಾನಕ್ಕೆ ತರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.
ಮಂಗಳೂರು (ಜೂ.03): ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ಸ್ಪಷ್ಟತೆ ಇಲ್ಲದ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಈಗ ಅದನ್ನು ಸ್ಪಷ್ಟವಿವರಗಳಿಲ್ಲದೆ ಇದೀಗ ಜನಾಕ್ರೋಶ ಬಳಿಕ ವಿಳಂಬವಾಗಿ ಅನುಷ್ಠಾನಕ್ಕೆ ತರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ. ಮಂಗಳೂರಿನ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಈ ಯೋಜನೆಗಳ ಅನುಷ್ಟಾನವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಇದಕ್ಕೆ ಬೇಕಾದ ಆದಾಯ ಮೂಲ ಎಲ್ಲಿಂದ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಈ ಕುರಿತಂತೆ ಸರ್ಕಾರ ತಕ್ಷಣವೇ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿದರು.
ಪ್ರಣಾಳಿಕೆಯಲ್ಲಿ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ 5 ಕೆಜಿ ಅಕ್ಕಿ ನೀಡುತ್ತಿದೆ. ಅದರ ಜತೆ ಹೆಚ್ಚುವರಿ 10 ಕೆಜಿ ಅಕ್ಕಿ ಕೊಡುತ್ತೀರಾ? ಅದಲ್ಲದೆ ನಮ್ಮ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಎರಡು ಕೆಜಿ ಹೆಚ್ಚುವರಿ ಆಹಾರ ಧಾನ್ಯ ಕೊಡುತ್ತಿದ್ದರು. ಅದನ್ನು ನಿಮ್ಮ ಸರ್ಕಾರ ಮುಂದುವರಿಸಲಿದೆಯೇ ಎಂಬುದನ್ನು ಸ್ಪಷ್ಟಪಡಿಸಿ ಎಂದು ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದರು. ಮನೆಯ ಯಜಮಾನಿಗೆ ಹಣ ಎನ್ನುತ್ತೀರಿ,‘ಯಜಮಾನಿ’ ಶಬ್ದದ ಕುರಿತು ಸ್ಪಷ್ಟತೆಯೇ ಇಲ್ಲ ಎಂದಿರುವ ಅವರು, ಯುವ ನಿಧಿ ಎಂದರೇನು?
ಕಾಂಗ್ರೆಸ್ ಉಚಿತ ಯೋಜನೆಗಳ ಆಶ್ವಾಸನೆ ನೀಡಿರುವ ಪರಿಣಾಮ ಬಿಜೆಪಿಗೆ ಸೋಲು: ಕೋಟ ಶ್ರೀನಿವಾಸ ಪೂಜಾರಿ
ನಿರುದ್ಯೋಗಿಗಳ ನಿಜವಾದ ವ್ಯಾಖ್ಯಾನ ಏನು? ಪದವಿ, ಡಿಪ್ಲೊಮಾ ಪಾಸಾಗಿ ಕೆಲವು ವರ್ಷಗಳಿಂದ ಉದ್ಯೋಗ ಸಿಗದೆ ಇರುವವರನ್ನು ಪರಿಗಣಿಸದೆ ಇರಲು ಕಾರಣ ಏನು? ಇತ್ಯಾದಿ ಪ್ರಶ್ನೆಗಳನ್ನು ಅವರು ಮುಂದಿಟ್ಟರು. 2022-23ರಲ್ಲಿ ಪಾಸಾದವರಿಗೆ 24 ತಿಂಗಳು ಯುವ ನಿಧಿ ಕೊಡುವುದಾಗಿ ತಿಳಿಸಿದೆ. ಹಿಂದೆ ಓದಿ ನಿರುದ್ಯೋಗಿಗಳಾಗಿಯೇ ಇರುವವರು ಇದರಿಂದ ನ್ಯಾಯವಂಚಿತರಾಗುವುದಿಲ್ಲವೇ? ಇದೆಲ್ಲ ಯೋಜನೆಗಳಿಗೆ ಹಣ ಸಂಗ್ರಹಕ್ಕೆ ತೆರಿಗೆದಾರರ ಮೇಲೆ ಹೆಚ್ಚು ತೆರಿಗೆ ವಿಧಿಸುವುದಿಲ್ಲವೇ ಎಂದು ನಳಿನ್ ಕುಮಾರ್ ಪ್ರಶ್ನಿಸಿದ್ದಾರೆ. ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಹಾಲು ಹಾಕುವ ಹೈನುಗಾರರಿಗೆ ಲೀಟರ್‌ಗೆ ನೀಡುತ್ತಿದ್ದ 1.50 ರು. ಪ್ರೋತ್ಸಾಹಧನ ಮೊತ್ತವನ್ನು ಕಡಿತಗೊಳಿಸಲಾಗಿದೆ.
ವಿಪಕ್ಷಗಳಿಗೆ ಗ್ಯಾರಂಟಿ ಬಗ್ಗೆ ಅನವಸರ ಗೊಂದಲ: ಸಂಸದ ಡಿ.ಕೆ.ಸುರೇಶ್
ಈ ಕ್ರಮ ಹೈನುಗಾರರ ಮೇಲೆ ಸರ್ಕಾರ ನಡೆಸುತ್ತಿರುವ ಸವಾರಿಗೆ ಸಾಕ್ಷಿಯಾಗಿದೆ. ಅಲ್ಲದೆ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಎಂದಿದ್ದಾರೆ, ಆದರೆ ಕರಾವಳಿ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಬಗ್ಗೆ ಏನೂ ಹೇಳಿಲ್ಲ ಎಂದಿದ್ದಾರೆ. ಮುಂಬರುವ ಚುನಾವಣೆ ದೃಷ್ಟಿಯಿಂದ ಇಂಥ ಯೋಜನೆ ನೀಡಿದರೆ ಕರ್ನಾಟಕವು ಪಾಕಿಸ್ತಾನ ಮತ್ತು ಶ್ರೀಲಂಕಾದಂತೆ ಆರ್ಥಿಕ ಹಿಂಜರಿತವನ್ನು ಕಾಣಲಿದೆ ಎಂದೂ ನಳಿನ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಮುಖಂಡರಾದ ರವಿಶಂಕರ್ ಮಿಜಾರ್, ಜಗದೀಶ್ ಶೇಣವ, ರಾಧಾಕೃಷ್ಣ, ಪ್ರೇಮಾನಂದ ಶೆಟ್ಟಿ, ಮಾಧವ, ನಿತಿನ್ ಕುಮಾರ್ ಮತ್ತಿತರರಿದ್ದರು.