
ಬೆಂಗಳೂರು (ಜೂ.03): ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ರಾಜ್ಯ ಮಟ್ಟಕ್ಕೆ ಮಾತ್ರವಲ್ಲ, ರಾಷ್ಟ್ರ ಮಟ್ಟದಲ್ಲೂ ಭಾರಿ ಸಂಚಲನ ಉಂಟು ಮಾಡುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಗೆಲುವಿನ ನಾಗಾಲೋಟದಲ್ಲಿರುವ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳಿಗೆ ಈ ಉಚಿತ ಯೋಜನೆಗಳ ಗ್ಯಾರಂಟಿಗಳು ದೊಡ್ಡ ಬೂಸ್ಟರ್ ಆಗುವ ಸಾಧ್ಯತೆಗಳಿವೆ. ಅಲ್ಲದೆ, ಗುಜರಾತ್ ಮಾದರಿ ಎಂಬ ಘೋಷ ವಾಕ್ಯವನ್ನು ರೂಪಿಸಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಬಿಜೆಪಿಗೆ ಈಗ ಉಚಿತ ಯೋಜನೆಗಳ ಈ ಕರ್ನಾಟಕ ಮಾದರಿ ದೊಡ್ಡ ಸವಾಲಾಗಿ ಕಾಡುವ ಸಾಧ್ಯತೆಯಿದೆ. /
ಏಕೆಂದರೆ, ಕರ್ನಾಟಕದ ಈ ಮಾದರಿಯ ಯಶಸ್ಸು ಇದೀಗ ದೇಶದ ಇತರ ರಾಜ್ಯಗಳಲ್ಲೂ ಪ್ರತಿಫಲಿತವಾಗ ತೊಡಗಿದೆ. ಇದು ಮುಂದೆ ಲೋಕಸಭೆ ಚುನಾವಣೆಯಲ್ಲೂ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡು ಸಂಚಲನ ಮೂಡಿಸುವ ಸಂಭವವೇ ಹೆಚ್ಚು. ಕರ್ನಾಟಕದ ಉಚಿತ ಗ್ಯಾರಂಟಿಗಳ ಮಾದರಿಯಿಂದ ಪ್ರೇರಣೆ ಪಡೆದು ಶೀಘ್ರವೇ ವಿಧಾನಸಭೆ ಚುನಾವಣೆಯ ನಿರೀಕ್ಷೆಯಲ್ಲಿರುವ ರಾಜಸ್ಥಾನದಲ್ಲಿ ಅಲ್ಲಿನ ಕಾಂಗ್ರೆಸ್ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ 100 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ಪ್ರಕಟ ಮಾಡಿದೆ. ಜತೆಗೆ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲೂ ಉಚಿತ ಕೊಡುಗೆಗಳ ಘೋಷಣೆ ಜೋರಾಗಿದೆ.
ಕಾಂಗ್ರೆಸ್ ಉಚಿತ ಯೋಜನೆಗಳ ಆಶ್ವಾಸನೆ ನೀಡಿರುವ ಪರಿಣಾಮ ಬಿಜೆಪಿಗೆ ಸೋಲು: ಕೋಟ ಶ್ರೀನಿವಾಸ ಪೂಜಾರಿ
ಇನ್ನು ಮುಂದಿನ ದಿನಗಳಲ್ಲಿ ಚುನಾವಣೆಗೆ ಸಜ್ಜಾಗಲಿರುವ ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣದಂತಹ ರಾಜ್ಯಗಳಲ್ಲೂ ಈ ಉಚಿತ ಯೋಜನೆಗಳು ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುವ ಸಾಧ್ಯತೆಯಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ನಿರೀಕ್ಷೆಗಿಂತಲೂ ವೇಗ ಹಾಗೂ ಸಮರ್ಪಕವಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಘೋಷಣೆ ಮಾಡಿದೆ. ತನ್ಮೂಲಕ ಹೊಸ ಕರ್ನಾಟಕ ಮಾದರಿ ರಾಜಕೀಯಕ್ಕೆ ಮುನ್ನುಡಿ ಬರೆದಿದ್ದು, ಕರ್ನಾಟಕ ‘ಗ್ಯಾರಂಟಿ’ ಮಾದರಿಯು ಬೇರೆ ರಾಜ್ಯಗಳಿಗೂ ಮಾದರಿಯಾಗಿ ರಾಷ್ಟ್ರ ರಾಜಕೀಯದಲ್ಲಿ ಸ್ಥಿತ್ಯಂತರ ಸೃಷ್ಟಿಸುವ ಸಾಧ್ಯತೆ ಇದೆ.
ಮತದಾರರು ಗ್ಯಾರಂಟಿ ಯೋಜನೆಗಳಿಗೆ ಈ ಪರಿ ಮನ ಸೋಲುವುದು ಖಾತ್ರಿಯಾಗಿರುವುದರಿಂದ ಬೇರೆ ರಾಜ್ಯಗಳು ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೂ ಇದೇ ಉಚಿತ ಗ್ಯಾರಂಟಿಗಳ ಮೊರೆ ಹೋಗುವ ಸಂಭವವಿದೆ. ಹೀಗಾಗಿ ‘ಉಚಿತ ಕೊಡುಗೆ ನೀಡುವುದು ಬೇಜವಾಬ್ದಾರಿ ಸಂಸ್ಕೃತಿ’ ಎಂದು ಪ್ರತಿಪಾದಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರಾಜಕೀಯ ಸಿದ್ಧಾಂತಕ್ಕೆ ತೀವ್ರ ಪ್ರತಿರೋಧ ಒಡ್ಡುವ ಸಾಧ್ಯತೆಯಿದೆ. ರಾಜ್ಯ ಕಾಂಗ್ರೆಸ್ ಪಕ್ಷವು ಚುನಾವಣೆಗೆ ಮೊದಲು ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಘೋಷಿಸಿತ್ತು. ಈ ಗ್ಯಾರಂಟಿಗಳನ್ನು ಎರಡನೇ ಸಂಪುಟ ಸಭೆಯಲ್ಲೇ ಅನುಷ್ಠಾನಗೊಳಿಸಿ ಎಪಿಎಲ್ ಕಾರ್ಡ್‌ದಾರರು ಸೇರಿದಂತೆ ಶೇ.90 ರಷ್ಟುಕುಟುಂಬಗಳಿಗೆ ತಲುಪಿಸಲು ಸಿದ್ಧತೆ ನಡೆಸಿದೆ.
ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ವಿವಿಧ ಸಮಸ್ಯೆಗಳಿಂದ ತತ್ತರಿಸಿ ಏದುಸಿರು ಬಿಡುವ ಪ್ರಜೆಗಳಿಗೆ ಗ್ಯಾರಂಟಿ ಯೋಜನೆಗಳು ಪ್ರಾಣವಾಯುವಿನಂತೆ ಭಾಸವಾಗುತ್ತಿವೆ. ಇದಕ್ಕೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಂದಿರುವ ಪ್ರಚಂಡ ಬಹುಮತವೇ ಸಾಕ್ಷಿ. ಇದೀಗ ಗ್ಯಾರಂಟಿಗಳ ಸಮರ್ಪಕ ಅನುಷ್ಠಾನವಾದರೆ ಲೋಕಸಭೆ ಚುನಾವಣೆಯಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಪರ ಒಲವು ರೂಪುಗೊಳ್ಳುವ ಸಾಧ್ಯತೆಯಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಗ್ಯಾರಂಟಿ ಘೋಷಣೆಗಳೂ ಪ್ರಮುಖ ಕಾರಣ ಎಂಬುದು ಈಗಾಗಲೇ ನಡೆದ ವಿಶ್ಲೇಷಣೆಗಳಿಂದ ಸಾಬೀತಾಗಿದೆ.
ನನಗೆ ಮಂತ್ರಿ ಸ್ಥಾನಕ್ಕಿಂತ ಸಿದ್ದರಾಮಯ್ಯ ಸಿಎಂ ಆಗಿದ್ದು ಸಂತಸ ತಂದಿದೆ: ಶಾಸಕ ರಾಯರಡ್ಡಿ
ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಗೆ ರಾಷ್ಟ್ರ ಮಟ್ಟದಲ್ಲೂ ಕಾಂಗ್ರೆಸ್ ಪಕ್ಷವು ಉಚಿತ ಗ್ಯಾರಂಟಿಗಳಂತಹ ಘೋಷಣೆಗಳ ಮೊರೆ ಹೋಗಬಹುದು. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗ್ಯಾರಂಟಿಗಳ ವಿರುದ್ಧ ಸರಣಿ ರಾರಯಲಿ, ರೋಡ್ ಶೋಗಳ ಮೂಲಕ ಅಬ್ಬರಿಸಿದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹವಾ ಇಲ್ಲಿ ನಡೆಯಲಿಲ್ಲ. ಹೀಗಾಗಿ ಉಚಿತ ಗ್ಯಾರಂಟಿಗಳ ಬಗ್ಗೆ ಟೀಕಾಪ್ರಹಾರ ನಡೆಸುವ ಮೋದಿ ರಾಜಕೀಯ ಸಿದ್ಧಾಂತಕ್ಕೆ ಹಿನ್ನಡೆ ಉಂಟಾಗಲಿದೆ. ಕರ್ನಾಟಕ ಮಾದರಿ ಇದಕ್ಕೆ ಪ್ರತಿರೋಧ ಒಡ್ಡುವ ಶಕ್ತಿಯಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.