ಬಿಜೆಪಿ ಹಾಳು ಮಾಡಿದ್ದ ಶಿಕ್ಷಣ ವ್ಯವಸ್ಥೆ ನಮ್ಮಿಂದ ದುರಸ್ತಿ: ಸಚಿವ ಮಧು ಬಂಗಾರಪ್ಪ

By Kannadaprabha NewsFirst Published May 31, 2024, 6:54 PM IST
Highlights

ಬಿಜೆಪಿ ಅವಧಿಯಲ್ಲಿ ಶಿಕ್ಷಣ ವ್ಯವಸ್ಥೆ ಹಾಳಾಗಿತ್ತು. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಶಿಕ್ಷಣ ವ್ಯವಸ್ಥೆಯಲ್ಲಿದ್ದ ಅನಿಷ್ಟ ಪದ್ಧತಿಗಳನ್ನು ತೆಗೆದು ಹಾಕಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. 

ಶಿವಮೊಗ್ಗ (ಮೇ.31): ಬಿಜೆಪಿ ಅವಧಿಯಲ್ಲಿ ಶಿಕ್ಷಣ ವ್ಯವಸ್ಥೆ ಹಾಳಾಗಿತ್ತು. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಶಿಕ್ಷಣ ವ್ಯವಸ್ಥೆಯಲ್ಲಿದ್ದ ಅನಿಷ್ಟ ಪದ್ಧತಿಗಳನ್ನು ತೆಗೆದು ಹಾಕಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಇಂದಿನಿಂದ ಶಾಲೆ ಆರಂಭವಾಗುತ್ತಿದೆ. ಪೋಷಕರು ಸರ್ಕಾರ ಮೇಲೆ ವಿಶ್ವಾಸವಿಟ್ಟುಕೊಂಡು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿ. ನಾವು ಉತ್ತಮ ಶಿಕ್ಷಣ ನೀಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಾಲೆ ಆರಂಭಕ್ಕೆ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಶಿಕ್ಷಕರು ಮಕ್ಕಳನ್ನು ಸ್ವಾಗತಿಸಲು ಉತ್ಸುಕರಾಗಿದ್ದಾರೆ. 

ಈಗಾಗಲೇ ಶೇ.90 ರಷ್ಟು ಪಠ್ಯ ಪುಸ್ತಕ ಬಂದಿದೆ, ಸಮವಸ್ತ್ರವೂ ಲಭ್ಯವಿದೆ. ಮಕ್ಕಳು ಸರ್ಕಾರಿ ಶಾಲೆಗೆ ಬನ್ನಿ. ಇರುವ ವ್ಯವಸ್ಥೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದೆ. ಮುಂದೆ 600 ಕೆಪಿಎಸ್ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು. ಫಲಿತಾಂಶ ಕುಸಿದಿದೆ ಎಂದು ಬಿಜೆಪಿಯವರು ಟೀಕೆ ಮಾಡುತ್ತಾರೆ. ಆದರೆ, ನಾವು ಕಾಪಿ ಹೊಡೆಯುವುದನ್ನು ತಡೆಯಲು ಪರೀಕ್ಷೆಯನ್ನು ಪಾರದರ್ಶಕವಾಗಿ ಮಾಡಿದ್ದೇವೆ. ಗ್ರೇಸ್ ಅಂಕದ ಬಗ್ಗೆ ಸಾಕಷ್ಟು ಟೀಕೆಗಳನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಆದರೆ ನಾವು ಗ್ರೇಸ್ ಅಂಕ ಕೊಟ್ಟಿರುವುದು ಕೇವಲ ಶೇ.10 ರಷ್ಟು ಮಾತ್ರ. ಬಿಜೆಪಿಯವರೇ ಶೇ. 10 ರಷ್ಟನ್ನು ಗ್ರೇಸ್ ಅಂಕ ಕೊಟ್ಟಿದ್ದರು. ಅದು ಗೊತ್ತಿಲ್ಲದೆ ಈಗ ಗ್ರೇಸ್‌ ಅಂಕದ ಬಗ್ಗೆ ದೂರುತ್ತಿದ್ದಾರೆ. ಈ ಗ್ರೇಸ್ ಅಂಕದಿಂದ ಮಾಸ್‍ ಕಾಪಿ ಕಡಿಮೆಯಾಗಿದೆ ಎಂದು ಹೇಳಿದರು.

Latest Videos

ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ, ರೈತ ವಿರೋಧಿ ಸರ್ಕಾರ: ಮಾಜಿ ಸಚಿವ ರೇಣುಕಾಚಾರ್ಯ

ಶಿಕ್ಷಣ ಕ್ಷೇತ್ರದಲ್ಲಿ ಬಿಜೆಪಿ ಅವರು ಮಾಡಿದ ತಪ್ಪನ್ನು ನಾವು ಸರಿ ಮಾಡುತ್ತಿದ್ದೇವೆ. ಶಿಕ್ಷಕರ ನೇಮಕಾತಿ ಕಾಂಗ್ರೆಸ್‌ ಅವಧಿಯಲ್ಲಿ ಹೆಚ್ಚಾಗಿದೆ. 2017-2018ರ ಸಾಲಿನಲ್ಲಿ 1729, 2020-21 ಸುರೇಶ್ ಕುಮಾರ್ ಅವಧಿಯಲ್ಲಿ 1994, 2021-22ರಲ್ಲಿ 1385, ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ನನ್ನ ಅವಧಿಯಲಿ ಒಂದು ವರ್ಷದಲ್ಲಿ 13000 ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೇನೆ. ಈಗಾಗಲೇ 12 ಸಾವಿರ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಇನ್ನೂ 43,000 ಹುದ್ದೆ ಖಾಲಿ ಇವೆ ಅದನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ತಿಳಿಸಿದರು.

ಎಲ್ಲಾ ಶಾಲೆಗಳಿಗೂ ವಿದ್ಯುತ್ ಮತ್ತು ನೀರನ್ನು ಉಚಿತವಾಗಿ ನೀಡಿದ್ದೇವೆ. ಪರೀಕ್ಷೆಯ ಪಾವಿತ್ರ್ಯತೆಗೆ ಹೆಚ್ಚು ಒತ್ತು ನೀಡಿದ್ದೇವೆ. ಮಕ್ಕಳು ಶಾಲೆಯಿಂದ ದೂರವಿರಬಾರದು ಎಂಬ ಹಿನ್ನಲೆಯಲ್ಲಿ ವರ್ಷಕ್ಕೆ ಮೂರು ಬಾರಿ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಪರೀಕ್ಷೆಗಳು ಲೇಟಾಗುತ್ತವೆ ಎಂದು ದೂರುಗಳಿವೆ. ಮುಂದಿನ ವರ್ಷದಿಂದ ಅವೆಲ್ಲ ತೊಂದರೆಗಳು ಸರಿಯಾಗುತ್ತದೆ. ಮೂರನೇ ಬಾರಿಗೆ ಪರೀಕ್ಷೆಗೆ ಅವಕಾಶಕೊಟ್ಟಿದ್ದರಿಂದ ರಾಜ್ಯದಲ್ಲಿ ಸಾವಿರಾರು ಮಕ್ಕಳು ಉತ್ತೀರ್ಣರಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ಇದು ಒಳ್ಳೆಯ ಕೆಲಸವಲ್ಲವೇ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್‌ ಹಾಗೂ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ, ಮುಖಂಡರಾದ ಎಂ.ಶ್ರೀಕಾಂತ್‌, ಎಸ್.ಟಿ. ಚಂದ್ರಶೇಖರ್, ಕಲೀಂ ಪಾಷಾ, ರವಿಕುಮಾರ್, ದೇವಿಕುಮಾರ್, ಜಿಡಿ ಮಂಜುನಾಥ್, ಇಕ್ಕೇರಿ ರಮೇಶ್ ಮತ್ತಿತರರು ಇದ್ದರು.

ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ: ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಆಯನೂರು ಮಂಜುನಾಥ್ ಹಾಗೂ ಡಾ.ಕೆ.ಕೆ.ಮಂಜುನಾಥ್ ಅವರನ್ನು ಗೆಲ್ಲಿಸಲು ಸಂಘಟಿತ ಪ್ರಯತ್ನ ನಡೆಯುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು ಪಕ್ಷ ಅರ್ಥಪೂರ್ಣ ಹಾಗೂ ಒಳ್ಳೆಯ ಅಭ್ಯರ್ಥಿಗಳನ್ನೇ ನೀಡಿದೆ. ರಾಜ್ಯದಲ್ಲಿ ನಮ್ಮ ಪಕ್ಷದಿಂದ ಒಟ್ಟು 6 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮೇಲ್ಮನೆಯಲ್ಲಿ ನಮ್ಮ ಸಂಖ್ಯೆ ಹೆಚ್ಚಾದರೆ ಯಾವುದೇ ಬಿಲ್ಲುಗಳು ಪಾಸಾಗಲು ಅನುಕೂಲವಾಗುತ್ತದೆ. ಮತ್ತು ನನಗೆ ಅವರಿಂದ ಮಾರ್ಗದರ್ಶನ ಕೂಡ ಸಿಗುತ್ತದೆ ಎಂದ ಅವರು, ಕಾರ್ಯಕರ್ತರು ಫೀಲ್ಡಿಗಿಲಿದು ಎಲ್ಲರೂ ಕೆಲಸ ಮಾಡುತ್ತಿದ್ದಾರೆ.ನನ್ನ ಇಲಾಖೆಗೆ ಮಾರ್ಗದರ್ಶನ ಮಾಡಲು ಮೇಲ್ಮನೆ ಸದಸ್ಯರ ಅವಶ್ಯಕತೆ ಇದೆ.‌ ಎಂದ ಅವರು, ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾತ್ಮನ ಬಗ್ಗೆ ಗೊತ್ತಿರದ ಪ್ರಧಾನಿ ಮೋದಿ ನಮಗೆ ಬೇಕಾ?: ಕಿಮ್ಮನೆ ರತ್ನಾಕರ್

ಯತ್ನಾಳ್, ಈಶ್ವರಪ್ಪಗೆ ಉತ್ತರಿಸಲಿ: ನನ್ನ ಹೇರ್‌ ಕಟ್‌ ಬಗ್ಗೆ ಮಾತನಾಡುವುದನ್ನು ಬಿಟ್ಟು ಮೊದಲು ಯತ್ನಾಳ್ ಹಾಗೂ ಈಶ್ವರಪ್ಪನವರಿಗೆ ಉತ್ತರ ಕೊಡಲಿ. ಬಿಜೆಪಿ ರಾಜ್ಯಾಧ್ಯಕ್ಷರು ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾರೆ. ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಅವರಿಗಲ್ಲ. ಮೊದಲು ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಿ. ಕೇಂದ್ರ ಸರ್ಕಾರ ತನಗಿರುವ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಐಟಿ, ಇಡಿ ಸಂಸ್ಥೆಗಳನ್ನು ಖಾಸಗಿ ಸಂಸ್ಥೆಯಂತೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೆಂದ್ರ ಅವರ ಹೇಳಿಕೆಗೆ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದರು.

click me!