
ಶಿವಮೊಗ್ಗ (ಮೇ.31): ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರಾಗಲಿ ಸ್ವಾತಂತ್ರದ ನಂತರ ಇಷ್ಟು ವರ್ಷಗಳಲ್ಲಿ ಎಂದೂ ಕೂಡ ಮೀಸಲಾತಿ ಪರವಾಗಿ ಇಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಧಾನಿ ಮೋದಿ ಅಕ್ಷರಶಃ ಈಗ ಹತಾಶರಾಗಿದ್ದಾರೆ. ಸುಳ್ಳು ಹೇಳಿಕೆಗಳನ್ನು ನೀಡತೊಡಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ತೆಗೆದುಬಿಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.
ಇದಕ್ಕೂ ಮಿಗಿಲಾಗಿ ಮಹಾತ್ಮ ಗಾಂಧೀಜಿಯವರನ್ನು ಸಿನಿಮಾ ನೋಡಿದ ಮೇಲೆ ಗೊತ್ತಾಯಿತು ಎಂದು ಹೇಳಿದ್ದಾರೆ. ಇಂತಹ ಪ್ರಧಾನಿ ನಮ್ಮ ದೇಶಕ್ಕೆ ಬೇಕಾ? ಎಂದು ಪ್ರಶ್ನೆ ಮಾಡಿದರು. ಮಹಾತ್ಮ ಗಾಂಧೀಜಿಯವರು ಇಡೀ ವಿಶ್ವಕ್ಕೆ ಗೊತ್ತಿದೆ. ಮಾರ್ಟಿನ್ ಲೂಥರ್, ನೆಲ್ಸನ್ ಮಂಡೆಲ, ಚರ್ಚಿಲ್, ಐನ್‍ಸ್ಟಿನ್, ಲಾರ್ಡ್‍ಮೌಂಟ್ ಬ್ಯಾಟೆನ್ ಸೇರಿದಂತೆ ವಿಶ್ವದ ಅನೇಕ ಮಹಾನೀಯರು ಗಾಂಧೀಜಿಯವರನ್ನು ಹಾಡಿ ಹೊಗಳಿದ್ದಾರೆ. ಗಾಂಧೀಜಿಯವರ ತತ್ವಗಳೇ ನಮಗೆ ಮಾರ್ಗದರ್ಶನ ಎಂದು ಹೇಳಿದ್ದಾರೆ.
ಸುಮಾರು 250 ದೇಶಗಳಲ್ಲಿ ಗಾಂಧೀಜಿಯವರ ಅಧ್ಯಯನ ಕೇಂದ್ರವಿದೆ. ಸುಮಾರು 35 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಗಾಂಧೀಜಿ ಕುರಿತು ಬಂದಿದೆ. 145ಕ್ಕೂ ಹೆಚ್ಚು ದೇಶಗಳಲ್ಲಿ ಗಾಂಧೀಜಿಯವರ ಪ್ರತಿಮೆಗಳಿವೆ. ಭವಿಷ್ಯ ಇವೆಲ್ಲವೂ ಮೋದಿಯವರಿಗೆ ಗೊತ್ತಿರಲಿಕ್ಕಿಲ್ಲ ಎಂದು ಕುಟುಕಿದರು. ನೈಋತ್ಯ ಪದವೀಧರ ಕ್ಷೇತ್ರದ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್ ಮತ್ತು ಡಾ.ಕೆ.ಕೆ.ಮಂಜುನಾಥ್ ಅವರು ಸಮರ್ಥ ಕೆಲಸ ಮಾಡಿದ್ದಾರೆ. ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್‌ಗೆ ರಾಜ್ಯ ಸರ್ಕಾರವೇ ಎಟಿಎಂ: ಬಿ.ವೈ.ವಿಜಯೇಂದ್ರ ಆರೋಪ
ಆಯನೂರು ಮಂಜುನಾಥ್ ಬಿಜೆಪಿ ಪಕ್ಷ ಆಡಳಿತದಲ್ಲಿದ್ದಾಗ, ಪಕ್ಷದ ವಿರುದ್ಧವೇ ಪದವೀಧರರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿದವರು. ಇಂತಹ ವ್ಯಕ್ತಿಗಳು ಗೆಲ್ಲಬೇಕು. ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗಳಿಗೆ ಇವರು ಗಟ್ಟಿಧ್ವನಿಯಾಗಿ ನಿಲ್ಲುತ್ತಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಲೀಂ ಪಾಶ, ರಮೇಶ್ ಹೆಗಡೆ, ಚೇತನ್, ವಿಜಯ್‍ಕುಮಾರ್, ರಾಜೇಂದ್ರ, ದೇವೀ ಕುಮಾರ್, ಹಷೇಂದ್ರಕುಮಾರ್, ಆದರ್ಶ್ ಸೇರಿದಂತೆ ಮೊದಲಾದವರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.